Kodagu: ಅಪ್ಪಚೆಟ್ಟೋಳಂಡ ಹಾಕಿ ಕಪ್ 2023, ಕುಪ್ಪಂಡ ತಂಡ ಚಾಂಪಿಯನ್
ಕಳೆದ 21 ದಿನಗಳಿಂದ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಯಲ್ಲಿ ಕುಪ್ಪಂಡ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ವರದಿ: ರವಿ. ಎಸ್ ಹಳ್ಳಿ ಏಷ್ಯಾ ನೆಟ್ ಸುವರ್ಣ ನ್ಯೂಸ್
ಕೊಡಗು (ಏ.9): ಕಳೆದ 21 ದಿನಗಳಿಂದ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಯಲ್ಲಿ ಕುಪ್ಪಂಡ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. 23ನೇ ವರ್ಷದ ಕೊಡವ ಹಾಕಿ ನಮ್ಮೆಯನ್ನು ಈ ಬಾರಿ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿತ್ತು. ಇಂದು ನಡೆದ ಫೈನಲ್ ಪಂದ್ಯಾಟದಲ್ಲಿ ಕುಪ್ಪಂಡ ತಂಡ ಕುಲೇಟ್ಟಿರ ತಂಡವನ್ನು 4-2 ಗೋಲುಗಳಿಂದ ಪರಾಭವಗೊಳಿಸಿ ವಿಜಯಮಾಲೆಯನ್ನು ಧರಿಸಿತು.
ಕುಪ್ಪಂಡ ಮತ್ತು ಕುಲ್ಲೇಟಿರ ತಂಡಗಳ ನಡುವೆ ನಡೆದ ಅಂತಿಮ ಹಣಾಹಣಿಯಲ್ಲಿ ಕುಪ್ಪಂಡ ತಂಡ ಅಸಂಖ್ಯಾತ ಕ್ರೀಡಾ ಅಭಿಮಾನಿಗಳ ಜಯ ಘೋಷಗಳೊಂದಿಗೆ ಪ್ರಶಸ್ತಿಯನ್ನು ತನ್ನ ಮುಡುಗೇರಿಸಿಕೊಂಡಿತು. ಕುಲೇಟ್ಟಿರ ತಂಡವು ಆರಂಭಿಕ ಹಾಕಿ ಉತ್ಸವದಲ್ಲಿ ಕಳೆದ 3 ಬಾರಿ ಚಾಂಪಿಯನ್ ಆಗಿತ್ತು. ಆದರೆ ನಂತರ ಫೈನಲ್ ತಲುಪಿರಲಿಲ್ಲ. 16 ವರ್ಷದ ಬಳಿಕ ಇದೀಗ ಫೈನಲ್ ಗೆ ಪ್ರವೇಶಿಸಿತ್ತು.
ಕುಪ್ಪಂಡ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಚಾಂಪಿಯನ್ನಾಗಿ ಹೊರಹೊಮ್ಮಿದೆ. ಪಂದ್ಯಾಟದ ಕೊನೆಯವರೆಗೆ ಸಮಬಲ ಸಾಧಿಸಿ ನಂತರ ಶೂಟ್ ಔಟ್ ನಲ್ಲಿ ಕುಪ್ಪಂಡ ತಂಡ 4 ಗೋಲು ಗಳಿಸಿದರೆ, ಕುಲೇಟ್ಟಿರ 2 ಗೋಲುಗಳಿಸಿತು. ಕುಪ್ಪಂಡ ತಂಡಕ್ಕೆ 3 ಲಕ್ಷ ನಗದು ಹಾಗೂ ಟ್ರೋಫಿ ದೊರೆತಿದೆ. ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಕುಲೇಟ್ಟಿರ ತಂಡವು ಎರಡು ಲಕ್ಷ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.ಹಾಗೆ ವಿಜೇತರಿಗೆ ಕೊಡವ ಹಾಕಿ ಅಕಾಡೆಮಿ ಮೂಲಕ ನೀಡುವ ರೋಲಿಂಗ್ ಟ್ರೋಫಿ ಕೂಡ ದೊರಕಿದೆ.
ಮುಂಬೈ ಮಣಿಸಿದ ಧೋನಿ ಪಡೆಗೆ ಶಾಕ್, ಕೆಲ ಪಂದ್ಯಗಳಿಗೆ ಸ್ಟಾರ್ ಆಟಗಾರರು ಅಲಭ್ಯ..!
ಅಂತಿಮ ಪಂದ್ಯಾಟಕ್ಕೂ ಮೊದಲು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮೈದಾನದ ಮಧ್ಯದಲ್ಲಿ ಜರುಗಿದ ಕೊಡವ ಸಾಂಪ್ರದಾಯಿಕ ನೃತ್ಯಗಳ ಪ್ರದರ್ಶನ ನೋಡುಗರ ಮನಸೂರೆಗೊಳಿಸಿತು. ಬಿಸಿಲಿನ ಬೇಗೆಯ ನಡುವೆ ನಾಪೋಕ್ಲುವಿನಲ್ಲಿ ಜಿಲ್ಲೆಯ ಹಾಗೂ ಜಿಲ್ಲೆಯ ಹೊರ ಭಾಗದ ಅನೇಕ ಹಾಕಿ ಕ್ರೀಡಾಭಿಮಾನಿಗಳು, ಕೊಡವ ಕುಟುಂಬ ಸದಸ್ಯರು ಈ ರೋಚಕ ಪಂದ್ಯಾಟವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಕಾರ್ಯಕ್ರಮಕ್ಕೆ ಅನೇಕ ಗಣ್ಯರು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಪಟುಗಳು, ಹಾಕಿಯಲ್ಲಿ ಸಾಧನೆ ಮಾಡಿದ ಕೊಡಗಿನ ಹಾಗೂ ದೇಶದ ಗಣ್ಯರು ಸಮಾರಂಭದಲ್ಲಿ ಇದ್ದಿದ್ದು ವಿಶೇಷವಾಗಿತ್ತು.
IPL 2023: ವೆಂಕಟೇಶ್ ಅಯ್ಯರ್, ರಿಂಕು ಸಿಕ್ಸರ್ ಆರ್ಭಟಕ್ಕೆ ಶರಣಾದ ಹಾಲಿ ಚಾಂಪಿಯನ್ ಗುಜರಾತ್..!
23 ವರ್ಷಗಳ ಹಿಂದೆ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರ ಚಿಂತನೆಯ ಫಲವಾಗಿ ನಿರಂತರವಾಗಿ ಕೊಡಗಿನಲ್ಲಿ ಪ್ರತಿ ವರ್ಷ ನಡೆದುಕೊಂಡು ಬರುತ್ತಿದ್ದ ಕೊಡವ ಕೌಟುಂಬಿಕ ಹಾಕಿ ನಮ್ಮೆ (ಉತ್ಸವ ) ಕಳೆದ ನಾಲ್ಕು ವರ್ಷಗಳಿಂದ ಪ್ರವಾಹ, ಭೂಕುಸಿತ ಮತ್ತು ಕೋವಿಡ್ ಸಾಂಕ್ರಾಮಿಕದ ಕಾರಣಗಳಿಂದ ಕಳೆದ ನಾಲ್ಕು ವರ್ಷಗಳಿಂದ ಪಂದ್ಯಾಟ ಸ್ಥಗಿತಗೊಂಡಿತ್ತು. ಈ ಬಾರಿ ನಪೋಕ್ಲುವಿನಲ್ಲಿ ಅಪ್ಪಚೆಟ್ಟೋಳoಡ ಕುಟುಂಬಸ್ಥರ ಸಾರಥ್ಯದಲ್ಲಿ ಅಚ್ಚುಕಟ್ಟಾಗಿ ಪಂದ್ಯಾಟವನ್ನು ಸಜ್ಜುಗೊಳಿಸಿ ಮತ್ತೆ ಗತವೈಭವವನ್ನು ಸಾರಿತು.