Asianet Suvarna News Asianet Suvarna News

IPL 2023: ವೆಂಕಟೇಶ್ ಅಯ್ಯರ್, ರಿಂಕು ಸಿಕ್ಸರ್ ಆರ್ಭಟಕ್ಕೆ ಶರಣಾದ ಹಾಲಿ ಚಾಂಪಿಯನ್‌ ಗುಜರಾತ್..!

ಕೆಕೆಆರ್ ತಂಡಕ್ಕೆ ರೋಚಕ ಜಯ

ರಿಂಕು ಸಿಂಗ್ ಕೆಕೆಆರ್ ಪಾಲಿಗೆ ಸೂಪರ್ ಹೀರೋ

 

Venkatesh Iyer Rinku Singh heroic batting helps KKR Thriller victory over Gujarat Titans kvn
Author
First Published Apr 9, 2023, 7:23 PM IST

ಅಹಮದಾಬಾದ್(ಏ.09): ವೆಂಕಟೇಶ್ ಅಯ್ಯರ್‌ ಸಿಡಿಲಬ್ಬರದ ಅರ್ಧಶತಕ ಹಾಗೂ ರಿಂಕು ಸಿಂಗ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್‌ ರೈಡರ್ಸ್ ತಂಡವು ಅವಿಸ್ಮರಣೀಯ ಗೆಲುವು ದಾಖಲಿಸಿದೆ. ಕೊನೆಯ ಓವರ್‌ನಲ್ಲಿ 5 ಸಿಕ್ಸರ್ ಸಿಡಿಸಿದ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ರೋಚಕ ಗೆಲುವು ತಂದಿತ್ತರು. ಕೊನೆಯ ಓವರ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್‌ ಗೆಲ್ಲಲು 29 ರನ್‌ಗಳ ಅಗತ್ಯವಿತ್ತು. ರಿಂಕು ಸಿಂಗ್ ಕೊನೆಯ ಓವರ್‌ನಲ್ಲಿ ತಾವೆದುರಿಸಿದ 5 ಎಸೆತಗಳಲ್ಲೂ ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ರಿಂಕು ಸಿಂಗ್ ಕೆಕೆಆರ್ ಪಾಲಿಗೆ ಹೀರೋ ಎನಿಸಿಕೊಂಡರೆ, ಎಡಗೈ ವೇಗಿ ಯಶ್ ದಯಾಳ್ ಗುಜರಾತ್ ಪಾಲಿಗೆ ವಿಲನ್ ಆಗಿ ಪರಿಣಮಿಸಿದರು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್‌ ನೀಡಿದ್ದ 205 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೂರನೇ ಓವರ್‌ನ ಮೂರನೇ ಎಸೆತದಲ್ಲೇ ರೆಹಮನುಲ್ಲಾ ಗುರ್ಬಾಜ್‌ 15 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮನ್ದೀಪ್ ಸಿಂಗ್ ಬದಲಿಗೆ ಸ್ಥಾನ ಪಡೆದಿದ್ದ ಎನ್ ಜಗದೀಶನ್ವ ಬ್ಯಾಟಿಂಗ್ ಕೇವಲ 6 ರನ್‌ಗೆ ಸೀಮಿತವಾಯಿತು.

ಅಯ್ಯರ್-ರಾಣಾ ಶತಕದ ಜತೆಯಾಟ: ಬೃಹತ್ ಮೊತ್ತ ಬೆನ್ನತ್ತಿ ಕೇವಲ 28 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಕೆಕೆಆರ್ ತಂಡಕ್ಕೆ ಮೂರನೇ ವಿಕೆಟ್‌ಗೆ ಇಂಪ್ಯಾಕ್ಟ್‌ ಪ್ಲೇಯರ್ ವೆಂಕಟೇಶ್ ಅಯ್ಯರ್ ಹಾಗೂ ನಾಯಕ ನಿತೀಶ್ ರಾಣಾ ಸ್ಪೋಟಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಕೇವಲ 55 ಎಸೆತಗಳಲ್ಲಿ ಈ ಜೋಡಿ 100 ರನ್ ಜತೆಯಾಟವಾಡಿತು. ಸಮಯೋಚಿತ ಬ್ಯಾಟಿಂಗ್ ನಡೆಸಿದ ನಾಯಕ ನಿತೀಶ್ ರಾಣಾ 29 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಬಾರಿಸಿ ಅಲ್ಜೆರಿ ಜೋಸೆಫ್‌ಗೆ ವಿಕೆಟ್‌ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೆಂಕಟೇಶ್ ಅಯ್ಯರ್, ಕೆಕೆಆರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಅಯ್ಯರ್ ಕೇವಲ 40 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 83 ರನ್ ಬಾರಿಸಿ ಅಲ್ಜೆರಿ ಜೋಸೆಫ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕೆಕೆಆರ್ ತಂಡವು ನಾಟಕೀಯ ಕುಸಿತ ಕಂಡಿತು.

ರಶೀದ್ ಖಾನ್‌ ಹ್ಯಾಟ್ರಿಕ್ ಹೋರಾಟ ವ್ಯರ್ಥ: ವೆಂಕಟೇಶ್ ಅಯ್ಯರ್ ಅಬ್ಬರಿಸುತ್ತಿದ್ದಾಗ ಗುಜರಾತ್ ಗೆಲುವಿನ ಆಸೆ ಕಮರಿತ್ತು. ಆದರೆ 17ನೇ ಓವರ್‌ನ ವೇಳೆಗೆ ಕೆಕೆಆರ್ ಗೆಲ್ಲಲು ಕೊನೆಯ 4 ಓವರ್‌ಗಳಲ್ಲಿ 50 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ದಾಳಿಗಿಳಿದ ರಶೀದ್‌ ಖಾನ್ ಮೊದಲ ಮೂರು ಎಸೆತಗಳಲ್ಲಿ ಆಂಡ್ರೆ ರಸೆಲ್, ಸುನಿಲ್ ನರೈನ್ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಕಬಳಿಸಿ, ಪಂದ್ಯದ ದಿಕ್ಕನ್ನೇ ಬದಲಿಸುವಂತೆ ಮಾಡಿದರು. ಆದರೆ ಕೊನೆಯ ಓವರ್‌ನಲ್ಲಿ ರಿಂಕು ಸಿಂಗ್‌, ಕೆಕೆಆರ್ ಪರ ಸತತ 5 ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

IPL 2023 ಪಂಜಾಬ್ ಕಿಂಗ್ಸ್ ವಿರುದ್ಧ ಟಾಸ್ ಗೆದ್ದ ಸನ್‌ರೈಸರ್ಸ್, ತಂಡದಲ್ಲಿ ಮಹತ್ವದ 2 ಬದಲಾವಣೆ!

ರಿಂಕು ಸಿಂಗ್ ಕೇವಲ 21 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 48 ರನ್‌ ಬಾರಿಸುವ ಮೂಲಕ ಕೆಕೆಆರ್ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಮಿಳುನಾಡು ಮೂಲದ ಬ್ಯಾಟರ್‌ಗಳಾದ ಸಾಯಿ ಸುದರ್ಶನ್‌ ಹಾಗೂ ವಿಜಯ್ ಶಂಕರ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್‌ ತಂಡವು 4 ವಿಕೆಟ್ ಕಳೆದುಕೊಂಡು 204 ರನ್‌ ಬಾರಿಸಿತ್ತು. ಸಾಯಿ ಸುದರ್ಶನ್ 53 ರನ್ ಬಾರಿಸಿದರೆ, ವಿಜಯ್ ಶಂಕರ್ ಕೇವಲ 24 ಎಸೆತಗಳಲ್ಲಿ ಅಜೇಯ 63 ರನ್ ಚಚ್ಚಿದರು.

Follow Us:
Download App:
  • android
  • ios