ಇತ್ತೀಚೆಗೆ ಖಿನ್ನತೆಗೊಳಗಾಗಿದ್ದ ಸ್ನೇಹಾ, ಹೀಗೇ ಮಾತನಾಡುವಾಗ ತನ್ನ ಸಮಸ್ಯೆಯನ್ನು ಬಾಸ್ ಬಳಿ ಹೇಳಿದಳು. ಇಷ್ಟೊಂದು ನಗುನಗುತ್ತಾ ಮಾತನಾಡುವ ನಿನಗೆಂಥ ಡಿಪ್ರೆಶನ್ ಎಂದು ಅವರು ವ್ಯಂಗ್ಯವಾಗಿ ನಕ್ಕರು. 'ನನಗೆ ಕೈಯೋ ಕಾಲೋ ಮುರಿದಿದ್ದರೆ ಕಾಣುತ್ತದೆ, ಆದರೆ, ಇರುವುದು ಡಿಪ್ರೆಶನ್, ಅದು ಕಾಣುವುದಿಲ್ಲ. ಡಿಪ್ರೆಶನ್ ಇರುವವರು ನಗುವುದೇ ಇಲ್ಲ ಎಂದು ನಿಮಗ್ಯಾರು ಹೇಳಿದ್ದು' ಎಂದು ಆಕೆ ಮರುಪ್ರಶ್ನಿಸಿದಳು.

ಸುಶಾಂತ್ ರಜಪೂತ್ ವಿಷಯದಲ್ಲೂ ಹಾಗೆ, ಆತ ಸಾಯುವ ಮುನ್ನದ ಒಂದೆರಡು ತಿಂಗಳಿನ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಜನ, ಹೀಗೆ ನಗುತ್ತಿರುವಾತನಿಗೆ ಡಿಪ್ರೆಶನ್ ಇರಲು ಸಾಧ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ. ಖಂಡಿತಾ ಇರಲು ಸಾಧ್ಯ ಅಂತಾರೆ ಮನೋವೈದ್ಯರು. 

ನಿಮ್ಮೆದುರು ನಗುತ್ತಿರುವ, ಎಲ್ಲ ಕೆಲಸಗಳನ್ನು ಫಟಾಪಟ್ ಮುಗಿಸುತ್ತಿರುವ ಚಿರಾಯು, ಒಳಗೊಳಗೇ ಖಿನ್ನತೆಯ ಕೊರೆತಕ್ಕೆ ಬೇಯುತ್ತಿರಬಹುದು. ಆತ ಮೊನ್ನೆ ರಾತ್ರಿಯಿಡೀ ನಿದ್ದೆ ಇಲ್ಲದೆ ಹೊರಳಿದ್ದನ್ನು ಯಾರೂ ನೋಡಿರುವುದಿಲ್ಲ, ಮತ್ತೆಲ್ಲೋ ಖಿನ್ನತೆಗೊಳಗಾದ ರಾಧೆ ಎರಡು ದಿನವಿಡೀ ಹಾಸಿಗೆಯಿಂದೇಳದೆ ಸುಮ್ಮನೆ ಮಲಗಿದ್ದು ಯಾರಿಗೂ ತಿಳಿಯುವುದಿಲ್ಲ. ಚಿನ್ಮಯಿ ದಿನವಿಡೀ ತಿನ್ನುವುದು ತನ್ನೊಳಗಿನ ಅಗಾಧ ಖಾಲಿತನ ತುಂಬಲು ಎಂಬುದು ಇತರರಿಗೇಕೆ, ಸ್ವತಃ ಆಕೆಗೇ ತಿಳಿದಿಲ್ಲ. 

ವಿಜಯ್ ಮಲ್ಯನ ಮೂರನೇ ಪ್ರೀತಿ ಪಿಂಕಿ ಲಾಲ್ವಾನಿ
 
ಖಿನ್ನತೆ ಕಾಣದಿರಬಹುದು
ಬಹುತೇಕರು ಕಲ್ಪಿಸಿಕೊಂಡಂತೆ ಖಿನ್ನತೆಗೊಳಗಾದವರು ಸದಾ ಬೇಜಾರಿನಲ್ಲಿಯೇ ಇರುತ್ತಾರೆಂಬುದು ಸುಳ್ಳು. ಖಿನ್ನತೆ ಇರುವವರು ಸೋಷ್ಯಲೈಸ್ ಆಗುವುದಿಲ್ಲ, ಸದಾ ದುಃಖದಲ್ಲೇ ಇರುತ್ತಾರೆ ಎಂಬ ನಂಬಿಕೆ ಅಪಾಯಕಾರಿ ಕೂಡಾ.

ಖಿನ್ನತೆ ಇರುವವರು ಈ ಕ್ಷಣ ಹಾಸಿಗೆಯ ಮೇಲೆ ಕುಳಿತು ಮನಸೋ ಇಚ್ಛೆ ಅತ್ತಿರಬಹುದು, ಅಷ್ಟಕ್ಕೇ ನಿಲ್ಲದೆ, ನಂತರದಲ್ಲೊಂದು ಖಾಲಿತನ ಆವರಿಸಿರಬಹುದು. ಮತ್ತೊಮ್ಮೆ ಸುಖಾಸುಮ್ಮನೆ ಸಿಕ್ಕಾಪಟ್ಟೆ ಕೋಪ ಬರುವುದು, ಗೊಂದಲ, ಸಡನ್ ಆಗಿ ಮೂಡ್ ಔಟ್ ಆಗುವುದು, ಇದ್ದಕ್ಕಿದ್ದಂತೆ ಏಕಾಂಗಿ ಎನಿಸುವುದು, ಸುಸ್ತಾಗುವುದು, ಏನೂ ಮಾಡಲು ಮನಸ್ಸಿಲ್ಲದಂತಾಗುವುದು, ಇಡೀ ಜಗತ್ತಿನ ಭಾರವೆಲ್ಲ ತನ್ನ ಹೆಗಲ ಮೇಲೆ ಇದೆ ಎನಿಸುವುದು ಎಲ್ಲವೂ ಆಗಬಹುದು- ಇಷ್ಟಾಗಿಯೂ ಇವರು ಜನ ಸೇರಿದಾಗ ನಗುವುದು, ಮಾತನಾಡುವುದು, ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುವುದು ಎಲ್ಲವನ್ನೂ ಮಾಡಬಲ್ಲರು. 

ಹಲವು ಬಾರಿ ಖಿನ್ನತೆಯಲ್ಲಿರುವವರು ಜನರೊಂದಿಗೆ ಬೆರೆಯುವುದೇ ಅವರು ಸಮಸ್ಯೆಯಿಂದ ದೂರ ಓಡಲು. ಒಬ್ಬರೇ ಇದ್ದರೆ ಹುಚ್ಚೇ ಹಿಡಿಯುತ್ತದೆ ಎನಿಸಿಯೇ ಖಾಲಿ ವೀಕೆಂಡ್‌ಗಳೆಲ್ಲ ಬುಕ್ ಆಗಿರುವಂತೆ ನೋಡಿಕೊಳ್ಳುವವರು ಹಲವರು. ಮತ್ತೆ ಕೆಲವರು ಜೋರಾಗಿ ನಗುವುದೇ ಇನ್ನೊಬ್ಬರ ಗಮನ ತಮ್ಮೆಡೆ ಸೆಳೆಯಲು. ಖಿನ್ನತೆಯನ್ನು ಹಾಗಾದರೂ ಓಡಿಸಬಹುದೇನೋ ಎಂದವರ ಭಾವನೆ. 

ದಿಟ್ಟ ಹೆಜ್ಜೆ, ಜೋಮ್ಯಾಟೊದಿಂದ ಮಹಿಳೆಯರಿಗೆ ವರ್ಷಕ್ಕೆ 10 ದಿನ ಮುಟ್ಟಿ ...

ವೈರುಧ್ಯ
ಡಿಪ್ರೆಶನ್ ಇರುವವರಿಗೆ ಎರಡು ರೀತಿಯ ತದ್ವಿರುದ್ಧ ಸೋಷ್ಯಲ್ ಪ್ರೆಶರ್ ಇರುತ್ತದೆ. ಅವರಲ್ಲಿ ಸಮಸ್ಯೆಯಿಂದೆ ಎಂದು ಗಂಭೀರವಾಗಿ ಪರಿಗಣಿಸಲು ಅವರು ಒಂದು ರೀತಿ ಇರಬೇಕು. ಮತ್ತೊಂದೆಡೆ, ಸಮಾಜ ಮಾನಸಿಕ ಕಾಯಿಲೆ ಎಂದು ವಿಚಿತ್ರವಾಗಿ ನೋಡದಂತಿರಲು ಎಲ್ಲವೂ ನಾರ್ಮಲ್ ಎಂಬಂತೆ ನಟಿಸಬೇಕು. ಈ ಎರಡೂ ಒತ್ತಡಗಳಲ್ಲಿ ಸಿಲುಕುವವರು ಕ್ಷಣಕ್ಕೊಂದು ರೀತಿ ವರ್ತಿಸಬಹುದು. 

ಒಂದಿಷ್ಟು ದಿನ ಯಾರೊಂದಿಗೂ ಮಾತುಕತೆ ನಗು  ಏನೂ ಬೇಡವಾಗಿದ್ದರೆ ಮತ್ತೆ ಕೆಲ ದಿನ ಸುಖಾಸುಮ್ಮನೆ ಎಲ್ಲದಕ್ಕೂ ನಗು ಬರಬಹುದು. ಕೆಲವೊಮ್ಮೆ ಸುಳ್ಳೇ ನಗಬಹುದು. ಕೆಲವೊಮ್ಮೆ ಸುತ್ತಲಿನವರನ್ನು ಬೇಕೆಂದೇ ಕಡೆಗಣಿಸಬಹುದು, ಮತ್ತೆ ಕೆಲವೊಮ್ಮೆ ಅವರೆಲ್ಲ ನಮಗಾಗಿ ಇದ್ದಾರೆಂದು ಮತ್ತೆ ಮತ್ತೆ ಕೇಳಿ ಸಮಾಧಾನ ಪಟ್ಟುಕೊಳ್ಳಬಹುದು. ಕೆಲವು ದಿನಗಳು ಸ್ನಾನ ಮಾಡಲು ಬೇಡ ಎನಿಸಬಹುದು. ಮತ್ತೆ ಕೆಲ ದಿನ ಗಂಟೆಗಟ್ಟಲೆ ಶವರ್ ಕೆಳಗೆ ನಿಲ್ಲುವಂತಾಗಬಹುದು. ಕೆಲ ದಿನ ಎಲ್ಲ ಸರಿಯೆನಿಸಬಹುದು. ಮತ್ತಷ್ಟು ದಿನಗಳು ಕಳೆಯುವುದೇ ದುಸ್ತರ ಎನಿಸಿ ಆತ್ಮಹತ್ಯೆಯ ಯೋಚನೆಗಳೂ ತಡಕಬಹುದು. 

ಖುಷಿಯಾಗಿರುತ್ತಲೇ ಖಿನ್ನತೆಯನ್ನೂ ಹೊಂದುವುದು ಸಾಧ್ಯವಿದೆ. ಈ ದಿನ ಖುಷಿಯಾಗಿರುವ ಮಾತ್ರಕ್ಕೆ, ಫೋಟೋಗೆ ನಗುತ್ತಿದ್ದಾರೆಂದ ಮಾತ್ರಕ್ಕೆ ಅವರಿಗೆ ಖಿನ್ನತೆ ಇಲ್ಲ ಎಂದು ನಿರ್ಧರಿಸುವುದು ಮೂರ್ಖತನವಾದೀತು. ಏಕೆಂದರೆ ಖಿನ್ನತೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ವ್ಯಕ್ತವಾಗಬಹುದು. ಅದನ್ನು ವ್ಯಕ್ತಪಡಿಸುವುದು ಬಿಡುವುದು ಅವರವರ ವೈಯಕ್ತಿಕ ನಿರ್ಧಾರವಾಗಿರುತ್ತದೆ. ಏಕಾಂತದಲ್ಲಿ ಖಿನ್ನರಾಗಿರುತ್ತಲೇ ಎಲ್ಲರೆದುರು ಎಲ್ಲ ನಾರ್ಮಲ್ ಇರುವಂತೆ ವರ್ತಿಸುವವರೇ ಹೆಚ್ಚು. 

ಖಿನ್ನತೆಗೆೊಂದು ನಿರ್ದಿಷ್ಟ ರೂಪ ಕೊಡಬೇಡಿ. ಬದಲಾಗಿ ಅದನ್ನು ಅರಿಯಲು ಪ್ರಯತ್ನಿಸಿ. ಅಗತ್ಯವಿರುವವರ ಸಹಾಯಕ್ಕೆ ಕೈ ಚಾಚಿ. ಅದೊಂದು ವಿಚಿತ್ರ ಕಾಯಿಲೆ ಎಂಬಂತೆ ನೋಡಬೇಡಿ. ಸಮಾಜದ ದೃಷ್ಟಿ ಬದಲಾದಷ್ಟೂ ಮಾನಸಿಕ ಕಾಯಿಲೆಗಳಿಗೆ ವೇಗವಾಗಿಯೂ, ಹೆಚ್ಚಾಗಿಯೂ ಪರಿಹಾರ ಒದಗುತ್ತದೆ.