Asianet Suvarna News Asianet Suvarna News

ಮಲಗೋ ಸಮಯದಲ್ಲಿ ಚುರುಗುಟ್ಟೋ ಹೊಟ್ಟೆ ಗುಟ್ಟೇನು ಗೊತ್ತಾ?

ಕೆಲವರಿಗೆ ರಾತ್ರಿ ಊಟ ಮಾಡಿದ್ರೂ ಮಲಗೋ ಸಮಯದಲ್ಲಿ ಅಥವಾ ನಡುರಾತ್ರಿ ಹೊಟ್ಟೆ ಚುರುಗುಟ್ಟಿ ನಿದ್ರೆ ಹರಣವಾಗುತ್ತದೆ. ಈ ರೀತಿ ರಾತ್ರಿ ಹಸಿವು ಕಾಡಲು ಒಂದಿಷ್ಟು ಕಾರಣಗಳಂತೂ ಇವೆ. ಅವನ್ನು ತಿಳಿದುಕೊಂಡ್ರೆ ರಾತ್ರಿ ಹಸಿವಿನ ಬಗ್ಗೆ ನಿಮಗಿರೋ ಆತಂಕ, ಸಂಶಯಗಳು ದೂರವಾಗಬಹುದು.

Why we feel hungry at night reason and solution
Author
Bangalore, First Published Dec 3, 2020, 4:37 PM IST

ಹಳ್ಳಿಗಳಲ್ಲಿ ಹಿಂದೆ ಮಕ್ಕಳು ರಾತ್ರಿ ಊಟ ಮಾಡದೆ ಮಲಗಲು ಹೋದ್ರೆ ಮನೆಯಲ್ಲಿರೋ ಅಜ್ಜಿ ಅಥವಾ ಅಜ್ಜಖಾಲಿ ಹೊಟ್ಟೆಯಲ್ಲಿ ಮಲಗಿದ್ರೆ ಏನೆಲ್ಲ ಆಗುತ್ತೆ ಎಂಬುದನ್ನು ಬಣ್ಣ ಬಣ್ಣದ ಕಥೆಗಳ ಮೂಲಕ ಹೇಳಿ ಭಯ ಹುಟ್ಟಿಸಿ ಮಕ್ಕಳೇ ಎದ್ದು ಬಂದು ತಟ್ಟೆ ಮುಂದೆ ಕೂರುವಂತೆ ಮಾಡುತ್ತಿದ್ದರು. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗೋದು ಆರೋಗ್ಯಕ್ಕೆ ಒಳ್ಲೆಯದ್ದಲ್ಲ ಎಂಬುದು ಹಿಂದಿನಿಂದಲೂ ನಂಬಿಕೊಂಡು ಬಂದ ಹಾಗೂ ವೈಜ್ಞಾನಿಕವಾಗಿಯೂ ಸಾಬೀತಾದ ಸಂಗತಿ. ಈಗಂತೂ ಬಹುತೇಕರು ಬೊಜ್ಜು ಕರಗಿಸಲು ನಾನಾ ವಿಧದ ಡಯಟ್‌ ಫಾಲೋ ಮಾಡೋದು ಕಾಮನ್‌. ಹೀಗಾಗಿ ಡಯಟ್‌ ಹೆಸರಿನಲ್ಲಿ ರಾತ್ರಿ ಊಟ ಸ್ಕಿಪ್‌ ಮಾಡೋದು ಕೂಡ ಇದೆ. ಈ ರೀತಿ ಡಯಟ್‌ ಫಾಲೋ ಮಾಡೋರು ರಾತ್ರಿ ಊಟ ಸ್ಕಿಪ್‌ ಮಾಡಿದ್ರೂ ಅದಕ್ಕೆ ಪರ್ಯಾಯವಾಗಿ ದೇಹಕ್ಕೆ ಅಗತ್ಯವಿರೋ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿದ್ರೆ ಯಾವುದೇ ತೊಂದ್ರೆಯಿಲ್ಲ. ಇನ್ನು ಮಲಗೋದಕ್ಕಿಂತ ಕನಿಷ್ಠ 2 ಗಂಟೆ ಮೊದಲು ಊಟ ಮಾಡೋದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬ ಅಭಿಪ್ರಾಯವೂ ಇದೆ. ಇದನ್ನು ಅನುಸರಿಸೋರಿಗೆ ಕೂಡ ಮಲಗೋ ಸಮಯದಲ್ಲಿ ಹಸಿವು ಕಾಡಬಹುದು. ಇಂಥ ಸಮಯದಲ್ಲಿ ಮತ್ತೆ ಆಹಾರ ತೆಗೆದುಕೊಳ್ಳಬೇಕಾ? ಅಥವಾ ಹಾಗೆಯೇ ಹಸಿದು ಮಲಗೋದಾ? ಎಂಬ ಪ್ರಶ್ನಯೂ ಕಾಡುತ್ತೆ.ಇನ್ನೂ ಕೆಲವರಿಗೆ ಮಧ್ಯರಾತ್ರಿ ನಿದ್ರೆಯಿಂದ ಎಚ್ಚರವಾದ ತಕ್ಷಣ ಹಸಿವು ಕಾಡುತ್ತೆ. ಎಷ್ಟೋ ಮಂದಿ ಈ ಸಮಯದಲ್ಲಿ ಫ್ರಿಜ್‌ ಬಾಗಿಲು ತೆಗೆದು ತಿನ್ನೋದಕ್ಕೆ ಏನಿದೆ ಎಂದು ತಡಕಾಡೋದೋ ಇದೆ. ಹೀಗೆ ರಾತ್ರಿ ಕಾಡೋ ಹಸಿವಿಗೆ ಸಂಬಂಧಿಸಿ ನಾನಾ ಪ್ರಶ್ನೆಗಳು, ಅನುಮಾನಗಳು ಅನೇಕರ ತಲೆಯಲ್ಲಿ ಓಡಾಡುತ್ತಿರುತ್ತವೆ. ಹಾಗಾದ್ರೆ ಈ ಹಸಿವಿಗೆ ಕಾರಣಗಳೇನು? 

ಸುಲಭ ಎಂದು ಫ್ರಿಜ್‌ನಲ್ಲಿ ಇಟ್ಟ ಹಿಟ್ಟಿನಿಂದ ಚಪಾತಿ ತಿಂತೀರಾ..?

ಆರೋಗ್ಯಯುತ ತಿನ್ನೋ ವೇಳಾಪಟ್ಟಿ ಅನುಸರಿಸೋದು
ತಿನ್ನೋದಕ್ಕೆ ಹೊತ್ತುಗೊತ್ತು ನಿಗದಿಪಡಿಸಿಕೊಂಡು ಅದನ್ನು ಪಾಲಿಸಿದ್ರೆ ಮಾತ್ರ ಆರೋಗ್ಯ ಭಾಗ್ಯ ದೊರೆಯುತ್ತೆ. ಮಧುಮೇಹ,ಕೊಲೆಸ್ಟ್ರಾಲ್‌ ಸೇರಿದಂತೆ ಅನೇಕ ಕಾಯಿಲೆಗಳಿಗೆ ಹೊತ್ತಿಗೆ ಸರಿಯಾಗಿ ಆಹಾರ ಸೇವಿಸದಿರೋದೆ ಕಾರಣ ಎಂಬುದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿರೋ ಸತ್ಯ. ದಿನಕ್ಕೆ ಮೂರು ಊಟದ ಜೊತೆ ಚಿಕ್ಕ ಸ್ನಾಕ್ಸ್‌ ತಿನ್ನೋದು ಆರೋಗ್ಯಯುತ ಆಹಾರ ಕ್ರಮ. ಇದನ್ನು ಪಾಲಿಸೋರು ರಾತ್ರಿ ಊಟವನ್ನು ಕೂಡ ಸರಿಯಾದ ಸಮಯಕ್ಕೆ ಅಂದ್ರೆ ಮಲಗೋಕ್ಕಿಂತ ಒಂದು ಅಥವಾ ಎರಡು ಗಂಟೆ ಮೊದಲು ಸೇವಿಸೋ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಈ ಅಭ್ಯಾಸವಿದ್ರೆ ಮಲಗೋ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಹಸಿವಿನ ಅನುಭವವಾಗೋದು ಸಾಮಾನ್ಯ. 

Why we feel hungry at night reason and solution

ಕ್ಯಾಲೋರಿ ಕಡಿತ
ನೀವು ತೂಕ ಇಳಿಸಿಕೊಳ್ಳಲು ಡಯಟ್‌ ಫಾಲೋ ಮಾಡುತ್ತಿದ್ರೆ, ರಾತ್ರಿ ಊಟದಲ್ಲಿ ಒಂದಿಷ್ಟು ಕ್ಯಾಲೋರಿ ಕಡಿತ ಮಾಡಿರುತ್ತೀರಿ. ಇದು ಕೂಡ ರಾತ್ರಿ ಹೊತ್ತು ಹಸಿವಾಗಲು ಕಾರಣವಾಗುತ್ತೆ. ನೀವು ಕೆಟೋ ಅಥವಾ ವೇಗನ್‌ನಂತಹ ಕಠಿಣ ಡಯಟ್‌ ಫಾಲೋ ಮಾಡುತ್ತಿದ್ರೆ ಸಮತೋಲಿತ ಆಹಾರ ಸೇವಿಸುತ್ತಿರೋದನ್ನು ಖಚಿತಪಡಿಸಿಕೊಳ್ಳಿ. ಇದ್ರಿಂದ ರಾತ್ರಿ ಹೊತ್ತು ಹಸಿವು ಕಾಡಿದ್ರೂ ಆ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. 

ನಿದ್ರೆ ಕೊರತೆ
ರಾತ್ರಿ ಸರಿಯಾಗಿ ನಿದ್ರೆ ಬಾರದಿದ್ದರೂ ಹಸಿವಿನ ಅನುಭವವಾಗುತ್ತದೆ. ತುಂಬಾ ಸುಸ್ತಾಗಿದ್ರೆ ದೇಹದಲ್ಲಿ ಗೆರ್ಲಿನ್‌ ಎಂಬ ಹಾರ್ಮೋನ್‌ ಸ್ರವಿಕೆ ಹೆಚ್ಚುತ್ತದೆ. ಈ ಹಾರ್ಮೋನ್‌ ತಿನ್ನೋ ಬಯಕೆಯನ್ನು ಹೆಚ್ಚಿಸೋ ಮೂಲಕ ಹಸಿವಿನ ಅನುಭವಕ್ಕೆ ಕಾರಣವಾಗುತ್ತೆ. ಅದೇರೀತಿ ಸಮರ್ಪಕ ನಿದ್ರೆಯಾಗದಿದ್ರೆ ಲೆಪ್ಟಿನ್‌ ಎಂಬ ಹಾರ್ಮೋನ್‌ ಸ್ರವಿಕೆ ಹೆಚ್ಚುತ್ತದೆ, ಇದು ಊಟ ಮಾಡಿದ ಬಳಿಕವೂ ಹಸಿವಿನ ಅನುಭವವುಂಟಾಗಲು ಕಾರಣವಾಗುತ್ತೆ. ಆದಕಾರಣ ಪ್ರತಿ ರಾತ್ರಿ ದೇಹಕ್ಕೆ ಅಗತ್ಯವಾಗಿರೋ ನಿದ್ರೆ ಸಿಗದಿದ್ದರೆ ಕೂಡ ಹಸಿವು ಕಾಡುತ್ತೆ.

ಡಯಾಬಿಟೀಸ್‌ನಿಂದ ಸೆಕ್ಸ್‌ ಲೈಫ್ ಮೇಲೆ ಪರಿಣಾಮ..!

ಅಪೌಷ್ಟಿಕತೆ  
ರಾತ್ರಿ ಮಲಗೋ ಸಮಯದಲ್ಲಿ ಕಾಡೋ ಹಸಿವಿಗೂ ಅಪೌಷ್ಟಿಕತೆಗೂ ಹತ್ತಿರದ ಸಂಬಂಧವಿದೆ. ಅಪೌಷ್ಟಿಕತೆ ಸಮಸ್ಯೆಯಿದ್ರೆ ರಾತ್ರಿ ಹಸಿವು ಕಾಡೋದು ಕಾಮನ್. ದಿನಕ್ಕೆ 1800 ಕ್ಯಾಲೋರಿಗಿಂತ ಕಡಿಮೆ ಆಹಾರ ಸೇವನೆ, ವಿಟಮಿನ್ಸ್‌, ಮಿನರಲ್ಸ್‌ ಸೇರಿದಂತೆ ಅಗತ್ಯ ಪೌಷ್ಟಿಕಾಂಶಯುಕ್ತ ಸಮತೋಲಿತ ಆಹಾರದ ಕೊರತೆಯಿಂದ ಅಪೌಷ್ಟಿಕತೆ ಕಾಡುತ್ತದೆ. 

ಮಲಗೋ ಹೊತ್ತಲ್ಲಿ ತಿಂದ್ರೆ ತೊಂದ್ರೆ ಜಾಸ್ತಿ
ಹಸಿದ ಹೊಟ್ಟೆಯಲ್ಲಿ ಮಲಗಲು ಹೋದ್ರೆ ಮನಸ್ಸಿಗೆ ಕಿರಿಕಿರಿ ಅನುಭವವಾಗೋದು ಸಾಮಾನ್ಯ. ಆದ್ರೆ ಈ ಮೊದಲೇ ಊಟ ಮಾಡಿದ್ದು,ಮಲಗೋ ಸಮಯದಲ್ಲಿ ಹಸಿವಾಗುತ್ತಿದ್ರೆ ಏನಾದ್ರು ತಿನ್ನೋದಕ್ಕಿಂತ ಹಾಗೆಯೇ ಮಲಗೋದು ಸೂಕ್ತ. ಆಹಾರ ಸೇವಿಸಿದ ತಕ್ಷಣ ಮಲಗೋದ್ರಿಂದ ಆರೋಗ್ಯದ ಮೇಲೆ ಅನೇಕ ಅಡ್ಡಪರಿಣಾಮಗಳುಂಟಾಗುತ್ತವೆ. ಊಟದ ಬಳಿಕ ತಿನ್ನೋದು ಅಥವಾ ರಾತ್ರಿ ತಡವಾಗಿ ಊಟ ಮಾಡೋದ್ರಿಂದ ತೂಕದ ಜೊತೆ ಬಾಡಿ ಮಾಸ್‌ ಇಂಡೆಕ್ಸ್‌ (ಬಿಎಂಐ) ಕೂಡ ಹೆಚ್ಚಾಗುತ್ತದೆ. ಅಜೀರ್ಣ ಅಥವಾ ಸಮರ್ಪಕ ನಿದ್ರೆ ಬಾರದಿರೋ ಸಮಸ್ಯೆ ಕೂಡ ಕಾಡುತ್ತೆ. ಅಷ್ಟೇ ಅಲ್ಲ, ತಿಂದ ತಕ್ಷಣ ಮಲಗೋದ್ರಿಂದ ಪಚನ ಕ್ರಿಯೆ ಮಂದವಾಗುತ್ತೆ. 

ನೀವು ಸೈನಟಿಸ್‌ನಿಂದ ಬಳಲುತ್ತಿದ್ದರೆ, ಈ ಆಹಾರ ತಿನ್ನಲೇ ಬೇಡಿ

 ಮಲಗೋ ಹೊತ್ತಲ್ಲಿ ಹಸಿವು ತಡೆಯೋದು ಹೇಗೆ?
-ಪ್ರತಿದಿನ ಎಷ್ಟು ಕ್ಯಾಲೋರಿ ಆಹಾರ ಸೇವಿಸಬೇಕು ಅನ್ನೋದನ್ನು ನಿರ್ಧರಿಸಿ. ಆ ಬಳಿಕ ಅದನ್ನು ಇಡೀ ದಿನದಲ್ಲಿ ಯಾವ ಹೊತ್ತಿನಲ್ಲಿ ಸೇವಿಸಬೇಕು ಎಂಬ ವೇಳಾಪಟ್ಟಿ ಸಿದ್ಧಪಡಿಸಿ. ಮಲಗೋ ಸಮಯಕ್ಕಿಂತ ಸ್ವಲ್ಪ ಮೊದಲೇ ಆಹಾರ ಸೇವನೆ ಮುಗಿದಿರಲಿ. ವಯಸ್ಕರಿಗೆ ದಿನಕ್ಕೆ ೨ ಸಾವಿರ ಕ್ಯಾಲೋರಿ ಆಹಾರ ಬೇಕಾಗುತ್ತದೆ. 
-ಪ್ರತಿದಿನ ಮೂರು ಹೊತ್ತಿನ ಊಟದ ಜೊತೆ ಆರೋಗ್ಯಕಾರಿ ಸ್ನಾಕ್ಸ್‌ಗಳನ್ನು ಸೇವಿಸಲು ಮರೆಯಬೇಡಿ.
-ನಿಮ್ಮ ಡಯಟ್‌ನಲ್ಲಿ ಹಣ್ಣು, ತರಕಾರಿ, ಡೈರಿ ಪ್ರೊಡಕ್ಟ್ಸ್‌,ಧಾನ್ಯಗಳು ಸೇರಿದಂತೆ ದೇಹಕ್ಕೆ ಅಗತ್ಯವಿರೋ ಎಲ್ಲ ಪೌಷ್ಟಿಕಾಂಶಗಳನ್ನು ಹೊಂದಿರೋ ಆಹಾರಗಳಿರಲಿ.
-ರಾತ್ರಿ ಊಟದಲ್ಲಿ ಪ್ರೋಟೀನ್‌ ಹಾಗೂ ನಾರಿನಾಂಶ ಹೆಚ್ಚಿರೋ ಆಹಾರಗಳಿರಲಿ.
-ಸಕ್ಕರೆ, ಉಪ್ಪು, ಕೊಬ್ಬು ಹೆಚ್ಚಿರೋ  ಹಾಗೂ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಆದಷ್ಟು ತ್ಯಜಿಸಿ.
-ರಾತ್ರಿ ಹಸಿವಾದ್ರೆ ಟ್ರೈಪ್ಟೋಫಾನ್‌ ಅಮಿನೋ ಆಸಿಡ್‌ ಹೊಂದಿರೋ ಆಹಾರ ಪದಾರ್ಥ (ಮೀನು, ಕೋಳಿ, ಮೊಟ್ಟೆ, ಒಣಹಣ್ಣುಗಳು) ತಿನ್ನಿ. ಇವು ದೇಹದಲ್ಲಿನ ಸೆರೊಟೋನಿನ್‌ ಹಾರ್ಮೋನ್‌ ಅನ್ನು ಕ್ರಿಯಾಶೀಲಗೊಳಿಸೋ ಮೂಲಕ ಉತ್ತಮ ನಿದ್ರೆಗೆ ಸಹಕರಿಸುತ್ತವೆ.
-ಕಾಫಿ, ಟೀ, ಮದ್ಯಪಾನವನ್ನು ಮಲಗೋ ಮುನ್ನ ಸೇವಿಸಬೇಡಿ. ಇವು ನಿದ್ರೆಗೆ ಭಂಗವುಂಟು ಮಾಡುತ್ತವೆ. 
 

Follow Us:
Download App:
  • android
  • ios