ಈ ಕಪ್ಪಿಂಗ್ ಥೆರಪಿಗೆ ಸೆಲೆಬ್ರಿಟಿಗಳು ಫುಲ್ ಫಿದಾ!
ಒತ್ತಡದ ಬದುಕಿನಿಂದ ಮುಕ್ತರಾಗಲು ಈಗ ಜನ ಎಲ್ಲ ರೀತಿಯ ರಿಲ್ಯಾಕ್ಸಿಂಗ್ ವಿಧಾನವನ್ನೂ ಟ್ರೈ ಮಾಡಿ ನೋಡುತ್ತಾರೆ. ಈ ಹಿನ್ನೆಲೆಯಲ್ಲಿ ಹಳೆಯವೆನಿಸಿಕೊಂಡು ಬದಿಗೆ ಸರಿದಿದ್ದ ಬಹಳಷ್ಟು ಚಿಕಿತ್ಸಾ ಪದ್ಧತಿಗಳೆಲ್ಲ ಮತ್ತೆ ಮುನ್ನಲೆಗೆ ಬಂದಿವೆ. ಅಂಥವುಗಳಲ್ಲಿ ಒಂದು ಕಪ್ಪಿಂಗ್ ಥೆರಪಿ.
ಕಪ್ಪಿಂಗ್ ಥೆರಪಿ ಎಂಬುದು ಈಜಿಪ್ಟ್ ಹಾಗೂ ಚೀನಾದ ಹಳೆಯ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಾಗಿದ್ದು, ಇದೀಗ ಮತ್ತೆ ಸೆಲೆಬ್ರಿಟಿಗಳ ನಡುವೆ ನವಚೈತನ್ಯ ಪಡೆದು ಚಿಗುರಿಕೊಳ್ಳುತ್ತಿದೆ. ಇದು ಎಷ್ಟು ಹಳೆಯ ಚಿಕಿತ್ಸಾ ಪದ್ಧತಿಯೆಂದರೆ ಜಗತ್ತಿನ ಅತಿ ಪುರಾತನ ಮೆಡಿಕಲ್ ಟೆಕ್ಸ್ಟ್‌ಬುಕ್ ಎನಿಸಿಕೊಂಡ 'ಎಬೆರಸ್ ಪಾಪಿರಸ್'ನಲ್ಲಿ 1550 ಬಿಸಿಯಲ್ಲಿ ಈಜಿಪ್ಟಿಯನ್ನರು ಕಪ್ಪಿಂಗ್ ಥೆರಪಿ ನಡೆಸುತ್ತಿದ್ದ ಕುರಿತ ವಿವರಣೆಯಿದೆ.
ಇಂದು ಒಲಿಂಪಿಕ್ ವಿಜೇತ ಮೈಕೇಲ್ ಫೆಲ್ಪ್ಸ್‌ನಿಂದ ಹಿಡಿದು ಹಾಲಿವುಡ್ ತಾರೆಗಳಾದ ಕಿಮ್ ಕದರ್ಶಿಯನ್, ಜೆನಿಫರ್ ಅನಿಸ್ಟನ್, ಬರಹಗಾರ್ತಿ ಪದ್ಮಾ ಲಕ್ಷ್ಮಿವರೆಗೆ ಕಪ್ಪಿಂಗ್ ಥೆರಪಿಯ ಲಾಭಗಳನ್ನು ಪಡೆದು ಮೆಚ್ಚಿದ್ದಾರೆ. ನೋವುಗಳಿಂದ ಮುಕ್ತರಾಗಿ ಯಂಗ್ ಆಗಿ ಕಾಣುವುದು, ರಿಲ್ಯಾಕ್ಸ್ ಆಗುವುದು ಉದ್ದೇಶ.
ಏನಿದರ ಉಪಯೋಗ?
ನಿಮಗೆ ಅತಿಯಾದ ಸ್ನಾಯು ಸೆಳೆತ, ರಕ್ತ ಸಂಚಲನ ಸಮಸ್ಯೆ ಮುಂತಾದ ತೊಂದರೆಗಳಿದ್ದಾಗ ಕಪ್ಪಿಂಗ್ ಥೆರಪಿ ಮ್ಯಾಜಿಕ್‌ನಂತೆ ಕೆಲಸ ಮಾಡಬಲ್ಲದು. ಇದು ದುಗ್ಧರಸ ಗ್ರಂಥಿಗಳ ಸುತ್ತ ರಕ್ತ ಸಂಚಾರ ಹೆಚ್ಚಿಸಿ, ನೋಯುತ್ತಿರುವ ಮಸಲ್ಸ್ ಹಾಗೂ ಟಿಶ್ಯೂಗಳನ್ನು ಸ್ಟ್ರೆಚ್ ಮಾಡಲು ಸಹಕರಿಸುತ್ತದೆ. ಆ ಮೂಲಕ ನೋವನ್ನು ನಿವಾರಿಸಿ ಹಾಯೆನಿಸುವಂತೆ ಮಾಡುವ ಜೊತೆಗೆ ತ್ವಚೆಗೂ ಉತ್ತಮ ಹೊಳಪು ನೀಡುತ್ತದೆ. ಕೇವಲ ಕೆಲವು ನಿಮಿಷಗಳ ಈ ಚಿಕಿತ್ಸೆಯ ಲಾಭ ಮಾತ್ರ ಬಹು ಕಾಲ ಇರುತ್ತದೆ.
ಫೈಬ್ರೋಮಿಯಾಲ್ಜಿಯಾ, ಖಿನ್ನತೆ, ಆತಂಕ, ಆರ್ತ್ರೈಟಿಸ್ ಹಾಗೂ ಅನೀಮಿಯಾಂಥ ಸಮಸ್ಯೆಗಳಿಗೆ ಕೂಡಾ ಕಪ್ಪಿಂಗ್ ಥೆರಪಿ ಉಪಯುಕ್ತವೆಂಬುದು ಸಾಬೀತಾಗಿದೆ. ಬಂಜೆತನ ಸಮಸ್ಯೆ ಹಾಗೂ ಉಸಿರಾಟದ ಸಮಸ್ಯೆಗಳು ಕೂಡಾ ಕಪ್ಪಿಂಗ್ ಥೆರಪಿಯ ಸಹಾಯದಿಂದ ಗುಣಮುಖವಾದ ಉದಾಹರಣೆಗಳಿವೆ. ಡಿಟಾಕ್ಸಿಫಿಕೇಶನ್ ಹಾಗೂ ರಕ್ತ ಶುದ್ಧೀಕರಣದ ಆಧಾರದ ಮೇಲೆ ಇದು ಕೆಲಸಮ ಮಾಡುತ್ತದೆ.
ಥೆರಪಿ ಹೇಗೆ ನಡೆಸುತ್ತಾರೆ?
ಬಿದಿರು ಅಥವಾ ಗಾಜಿನ ಕಪ್‌ಗಳನ್ನು ಚರ್ಮದ ಮೇಲೆ ಅಲ್ಲಲ್ಲಿ ಇಡಲಾಗುತ್ತದೆ. ಅದಕ್ಕೂ ಮುನ್ನ ಚಿಕಿತ್ಸಾಕಾರರು ಕಪ್‌ಗಳ ಒಳಗೆ ಆಲ್ಕೋಹಾಲ್, ಹರ್ಬ್ಸ್ ಅಥವಾ ಪೇಪರ್ ಹಾಕಿ ಬೆಂಕಿ ಹಾಕುತ್ತಾರೆ. ಬೆಂಕಿ ಎಲ್ಲ ಹೊರಹೋಗುತ್ತಲೇ ಅವರು ಆ ಕಪ್ಪನ್ನು ತಕ್ಷಣ ತಲೆ ಕೆಳಗಾಗಿ ನಿಮ್ಮ ಚರ್ಮದ ಮೇಲಿಡುತ್ತಾರೆ. ಕಪ್ ಒಳಗಿನ ಗಾಳಿ ತಣ್ಣಗಾಗುತ್ತಲೇ ಅದು ಅಲ್ಲಿ ವಾಕ್ಯೂಮ್ ಹುಟ್ಟುಹಾಕುತ್ತದೆ. ಇದರಿಂದ ನಿಮ್ಮ ಚರ್ಮ ಎತ್ತರಕ್ಕೆ ಉಬ್ಬಿ ಕೆಂಪಾಗುತ್ತದೆ. ರಕ್ತನಾಳಗಳು ಅಗಲವಾಗುತ್ತವೆ. ಸುಮಾರು 3 ನಿಮಿಷಗಳ ಕಾಲ ಈ ಕಪ್‌ಗಳನ್ನು ಅಲ್ಲಿಯೇ ಇಡಲಾಗುತ್ತದೆ. ಈ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚು ನೋವಾಗುವುದಿಲ್ಲ.
ಇದರ ಮಾಡರ್ನ್ ವರ್ಶನ್‌ನಲ್ಲಿ ಬೆಂಕಿಯ ಬದಲಿಗೆ ರಬ್ಬರ್ ಪಂಪ್ ಬಳಸಿ ಕಪ್‌ನೊಳಗೆ ವ್ಯಾಕ್ಯೂಮ್ ಹುಟ್ಟುಹಾಕಲಾಗುತ್ತದೆ. ಇಂದು ಸಿಲಿಕಾನ್ ಕಪ್‌ಗಳನ್ನು ಕೂಡಾ ಬಳಸಲಾಗುತ್ತಿದೆ. ಅವನ್ನು ಮಸಾಜ್ ಮಾಡುವಂತೆ ಒಂದೆಡೆಯಿಂದ ಮತ್ತೊಂದೆಡೆಗೆ ಥೆರಪಿಸ್ಟ್ ವರ್ಗಾಯಿಸುತ್ತಾರೆ.
ಇದು ಸ್ಟೆರೈಲ್ ಉರಿಯೂತಕ್ಕೆ ಕಾರಣವಾಗಿ ಮಾಂಸಖಂಡದೊಳಗಿನ ವಿಷಕಾರಿ ವಸ್ತುಗಳನ್ನೆಲ್ಲ ಹೊರತಳ್ಳುತ್ತದೆ. ಈ ಕಪ್‌ಗಳ ಮೂಲಕ ವ್ಯಾಕ್ಯೂಮ್ ಬಳಸಿ ಎಳೆದದ್ದರಿಂದ ತಾತ್ಕಾಲಿಕವಾಗಿ ಬಿಳಿ ರಕ್ತ ಕಣಗಳು(ಪ್ಲೇಟ್ಲೆಟ್ಸ್) ಬರ್ಸ್ಟ್ ಆಗುತ್ತವೆ. ಕಪ್ ಅಡಿಗಿನ ಚರ್ಮದ ಸುತ್ತಲಿನ ರಕ್ತವನ್ನೆಲ್ಲ ಹತ್ತಿರ ಎಳೆದಿದ್ದರಿಂದ ಸುತ್ತಲಿನ ಟಿಶ್ಯೂಗಳಿಗೆ ಫ್ರೆಶ್ ಬ್ಲಡ್ ಹರಿದುಬರುತ್ತದೆ. ಇದು ಹೊಸ ರಕ್ತನಾಳಗಳ ಹುಟ್ಟನ್ನೂ ಪ್ರೋತ್ಸಾಹಿಸುತ್ತದೆ.
ಥೆರಪಿ ಬಳಿಕ ಕಪ್ ಇಟ್ಟಲೆಲ್ಲ ಕೆಂಪು ಬಣ್ಣದ ಮಾರ್ಕ್ ತಾತ್ಕಾಲಿಕವಾಗಿ ಉಳಿದಿರುತ್ತದೆ. ಹೀಲರ್‌ಗಳ ಪ್ರಕಾರ, ಈ ಕಪ್ ಮಾರ್ಕ್‌ಗಳು ತಮ್ಮ ಗಾತ್ರ, ಆಕಾರ ಹಾಗೂ ಬಣ್ಣಗಳ ಮೂಲಕ ದೇಹದೊಳಗೆ ಎಷ್ಟೊಂದು ಒಣಕೋಶಗಳನ್ನು ಹಿಡಿದಿಟ್ಟುಕೊಂಡಿತ್ತೆಂದು ತೋರಿಸುತ್ತದೆ. ಥೆರಪಿಯು ಈ ಕೋಶಗಳನ್ನು ವೇಸ್ಟ್ ಎಂದು ತೆಗೆದುಹಾಕುತ್ತದೆ. ಈ ಮಾರ್ಕ್‌ಗಳು ಹೋಗುವವರೆಗೆ ಇನ್ಫೆಕ್ಷನ್ ತಡೆಗಟ್ಟಲು ಆ್ಯಂಟಿಬಯೋಟಿಕ್ ಆಯಿಂಟ್‌ಮೆಂಟ್ ಹಚ್ಚಲು ನೀಡಲಾಗುತ್ತದೆ. ಬ್ಯಾಂಡೇಜ್ ಮಾಡಲಾಗುತ್ತದೆ.
ಫೇಶಿಯಲ್ ಕಪ್ಪಿಂಗ್
ಸಾಮಾನ್ಯವಾಗಿ ಈ ಕಪ್ಪಿಂಗ್ ಥೆರಪಿಯನ್ನು ಕ್ರೀಡಾಳುಗಳು ಮೈಕೈ ನೋವಿನಿಂದ ಮುಕ್ತರಾಗಲು ಬಳಸುತ್ತಾರೆ. ಆದರೆ ಫೇಶಿಯಲ್ ಕಪ್ಪಿಂಗನ್ನು ಬಹುವಾಗಿ ನಟನಟಿಯರು ಬಳಸುತ್ತಾರೆ. ಇದರಲ್ಲಿ ಮುಖದ ಮೇಲೆ ಚಿಕ್ಕ ಚಿಕ್ಕ ವ್ಯಾಕ್ಯೂಮ್ ಕಪ್‌ಗಳನ್ನಿರಿಸಲಾಗುತ್ತದೆ. ಇದು ಮುಖಕ್ಕೆ ಒಳ್ಳೆಯ ರಕ್ತ ನುಗ್ಗಿ ಬರುವಂತೆ ಮಾಡುವ ಜೊತೆಗೆ ಜೋತು ಬಿದ್ದ ಚರ್ಮವನ್ನು ಬಿಗಿಗೊಳಿಸಿ ಹೊಳಪು ನೀಡುತ್ತದೆ. ಜೊತೆಗೆ, ರಕ್ತದ ಪೂರೈಕೆ ಹೆಚ್ಚುವುದರಿಂದ ಕೊಲ್ಯಾಜನ್ ಉತ್ಪತ್ತಿ ಹೆಚ್ಚಿ ಮುಖದಲ್ಲಿ ಹೊಸ ಕೋಶಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ. ಇದರಿಂದ ವ್ಯಕ್ತಿಯು ಹೆಚ್ಚು ಯಂಗ್ ಆಗಿ ಕಾಣಿಸಬಹುದು.
ಇನ್ನು ನೀಡಲ್ ಕಪ್ಪಿಂಗ್ ವಿಧಾನದಲ್ಲಿ ಆಕ್ಯುಪಂಕ್ಚರ್‌ಗಾಗಿ ಮೊದಲು ಸೂಜಿಗಳನ್ನು ಚುಚ್ಚಲಾಗುತ್ತದೆ. ಬಳಿಕ ಮೇಲಿನಿಂದ ಕಪ್ ಮುಚ್ಚಲಾಗುತ್ತದೆ.
ಸಂಶೋಧನೆಗಳು ಏನೆನ್ನುತ್ತವೆ?
ಕಪ್ಪಿಂಗ್ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆದಿಲ್ಲ. ಆದರೆ ನಡೆದ ಕೆಲ ಅಧ್ಯಯನಗಳು ಇದು ನೋವು ನಿವಾರಕವಾಗಿ, ಸರ್ಪಸುತ್ತು ಹೋಗಿಸಲು ಸಹಾಯವಾಗುತ್ತವೆ ಎಂದು ತಿಳಿಸಿದ್ದರೆ, ಮತ್ತೆ ಕೆಲವು, ಬೇರೆ ಚಿಕಿತ್ಸೆಯೊಂದಿಗೆ ಇದನ್ನೂ ಬಳಸಿದರೆ ಪರಿಣಾಮಕಾರಿಯಾಗಬಹುದು ಎಂದಿವೆ.