2019ರ ಅಂತ್ಯಕ್ಕೆ ಚೀನಾದ ವುಹಾನ್‌ನಲ್ಲಿ ಮೊದಲು ಕೊರೋನಾ ಕಾಣಿಸಿತ್ತು. ಮೂರುವರೆ ವರ್ಷಗಳ ಕಾಲದಲ್ಲಿ ಕೋವಿಡ್‌ ಸಾಂಕ್ರಾಮಿಕ ವಿಶ್ವಾದ್ಯಂತ ಸುಮಾರು 76.6 ಕೋಟಿ ಜನರನ್ನು ಬಾಧಿಸಿದೆ.

ಜಿನೇವಾ (ಮೇ 6, 2023): ‘ಕೋವಿಡ್‌ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತು ಅಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಘೋಷಿಸಿದೆ. ಈ ಮೂಲಕ 70 ಲಕ್ಷ ಜನರನ್ನು ಬಲಿ ತೆಗೆದುಕೊಳ್ಳುವ ಮೂಲಕ ಜಗತ್ತನ್ನು ಆತಂಕಕ್ಕೆ ದೂಡಿದ್ದ ಸಾಂಕ್ರಾಮಿಕವೊಂದು ಅಂತ್ಯಗೊಳ್ಳುವ ಸುಳುಹು ನೀಡಿದೆ.

2020ರ ಜನವರಿ 30ರಂದು ಕೋವಿಡ್‌ ಅನ್ನು ಡಬ್ಲ್ಯುಎಚ್‌ಒ ಜಾಗತಿಕ ತುರ್ತು ಎಂದು ಘೋಷಿಸಿತ್ತು. ಏಕೆಂದರೆ ಭಾರಿ ಸಂಖ್ಯೆಯ ಜನರು ಸೋಂಕಿಗೆ ತುತ್ತಾಗುವ ಮುನ್ಸೂಚನೆ ಆಗ ಸಿಕ್ಕಿತ್ತು. ಹೀಗೆ ಘೋಷಿಸಿದ ಕಾರಣ ಸರ್ಕಾರಗಳು ತಮ್ಮೆಲ್ಲ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ಆದ್ಯತೆ ನೀಡಿದ್ದವು ಹಾಗೂ ಕೋವಿಡ್‌ ವಿರುದ್ಧ ಸಮರ ಸಾರಿದ್ದವು.
ಆದರೆ ಈಗ ಕೊರೋನಾ ಆರೋಗ್ಯ ತುರ್ತುಸ್ಥಿತಿ ಅಲ್ಲ ಎಂಬ ಘೋಷಣೆ ಹೊರಬಿದ್ದಿರುವ ಕಾರಣ, ‘ಸೋಂಕು ಮೊದಲಿನಷ್ಟು ತೀವ್ರವಾಗಿ ಇನ್ನು ಕಾಡುವುದಿಲ್ಲ. ಮೊದಲಿನ ಬಲವನ್ನು ಸೋಂಕು ಕಳೆದುಕೊಳ್ಳಬಹುದು’ ಎಂದು ವಿಶ್ಲೇಷಿಸಲಾಗಿದೆ.

ಇದನ್ನು ಓದಿ: ಕೋವಿಡ್‌ ಸನ್ನದ್ಧತೆ ಪರೀಕ್ಷೆಗೆ ಇಂದು, ನಾಳೆ ಅಣಕು ಕಾರ್ಯಾಚರಣೆ: ದೇಶದಲ್ಲಿ 5357 ಹೊಸ ಕೋವಿಡ್‌ ಕೇಸ್‌, 11 ಸಾವು

ಎಚ್ಚರದಿಂದ ಇರಿ - ಡಬ್ಲ್ಯುಎಚ್‌ಒ:
‘ಕೋವಿಡ್‌ ಸಾಂಕ್ರಾಮಿಕವನ್ನು ಜಾಗತಿಕ ತುರ್ತು ಅಲ್ಲ ಎಂದು ಘೋಷಿಸಲು ಸಂತೋಷವಾಗುತ್ತಿದೆ. ಆದರೆ ಇದರ ಅರ್ಥ ಆರೋಗ್ಯ ಕ್ಷೇತ್ರಕ್ಕೆ ಈ ಸೋಂಕಿನಿಂದ ಯಾವುದೇ ಅಪಾಯವಿಲ್ಲ ಎಂಬುದಲ್ಲ. ಹೊಸ ತಳಿಗಳು ಸೃಷ್ಟಿ ಆಗಬಹುದು. ಹೀಗಾಗಿ ಎಚ್ಚರಿಕೆ ವಹಿಸುವುದು ಅಗತ್ಯ’ ಎಂದು ಡಬ್ಲ್ಯುಎಚ್‌ಒನ ಮುಖ್ಯಸ್ಥ ಟೆಡ್ರೋಸ್‌ ಅದಾನೋಮ್‌ ಘೇಬ್ರಿಯೇಸಿಸ್‌ ಸ್ಪಷ್ಟಪಡಿಸಿದರು.

ಸೋಂಕು ಇಳಿಕೆ:
ಸೋಂಕು ಇಳಿಕೆ ಆಗುತ್ತಿರುವ ಕಾರಣ ಅಮೆರಿಕದಲ್ಲಿ ಘೋಷಿಸಲಾಗಿರುವ ಕೋವಿಡ್‌ ತುರ್ತು ಪರಿಸ್ಥಿತಿ ಮೇ 11ಕ್ಕೆ ಮುಕ್ತಾಯವಾಗಲಿದ್ದು, ಜರ್ಮನಿ, ಫ್ರಾನ್ಸ್‌ ಮತ್ತು ಬ್ರಿಟನ್‌ಗಳು ಕಳೆದ ವರ್ಷವೇ ಬಹುತೇಕ ಕೋವಿಡ್‌ ನೀತಿಗಳ ಪಾಲನೆಯನ್ನು ಕೈಬಿಟ್ಟಿವೆ. 3 ಅಲೆ ಕಂಡ ಭಾರತದಲ್ಲಿ ಇತ್ತೀಚೆಗೆ ಹೆಚ್ಚು ಕೇಸು ದಾಖಲಾದರೂ ಮಾಮೂಲಿ ಕೆಮ್ಮು - ನೆಗಡಿಯಂತೆ ಸೋಂಕು ಇತ್ತು. ಆಸ್ಪತ್ರೆ ದಾಖಲೀಕರಣ ತುಂಬಾ ಕಮ್ಮಿ ಇತ್ತು.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಲಸಿಕೆ ಪ್ರಶ್ನಿಸಿದವರಿಗೆ ಉತ್ತರ ಸಿಕ್ಕಿದೆ, ಕೋವಿಡ್ ಸಂಕಷ್ಟ ಸಮಯ ನೆನೆದ ಮೋದಿ!

2019ರ ಅಂತ್ಯಕ್ಕೆ ಚೀನಾದ ವುಹಾನ್‌ನಲ್ಲಿ ಮೊದಲು ಕೊರೋನಾ ಕಾಣಿಸಿತ್ತು. ಮೂರುವರೆ ವರ್ಷಗಳ ಕಾಲದಲ್ಲಿ ಕೋವಿಡ್‌ ಸಾಂಕ್ರಾಮಿಕ ವಿಶ್ವಾದ್ಯಂತ ಸುಮಾರು 76.6 ಕೋಟಿ ಜನರನ್ನು ಬಾಧಿಸಿದೆ. ಸುಮಾರು 500 ಕೋಟಿ ಜನರು ಕನಿಷ್ಠ ಪಕ್ಷ ಒಂದು ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

  • 76.6 ಕೋಟಿ: ಕೋವಿಡ್‌ನಿಂದಾಗಿ ಜಾಗತಿಕವಾಗಿ ಬಾಧಿತರಾದ ಜನರ ಸಂಖ್ಯೆ
  • 70 ಲಕ್ಷ: ವಿಶ್ವದಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದವರ ಸಂಖ್ಯೆ
  • 4 ವರ್ಷ: ಸುದೀರ್ಘ ಕಾಲ ಜಗತ್ತನ್ನು ಕಾಡಿದ್ದ ‘ಶತಮಾನದ ಸಾಂಕ್ರಾಮಿಕ

ಇದನ್ನೂ ಓದಿ: Covid : ಬೆಂಬಿಡದ ಭೂತ ಕೊರೊನಾದಿಂದ ಕಾಡ್ತಿದೆ ಈ ಸಮಸ್ಯೆ