ನಿಮ್ಮ ಮಗು 5 ವರ್ಷ ದಾಟಿದ್ರೂ ಹಾಸಿಗೆ ಒದ್ದೆ ಮಾಡುತ್ತಾ? ನೀವೇನು ಮಾಡಬೇಕು?
ಮಕ್ಕಳು ಹಾಸಿಗೆ ಒದ್ದೆ ಮಾಡೋದು ಸಾಮಾನ್ಯ ಸಂಗತಿ. ಆದ್ರೆ ಐದು ವರ್ಷ ದಾಟಿದ್ರೂ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡ್ತಿದ್ದರೆ ಪಾಲಕರ ಟೆನ್ಷನ್ ಹೆಚ್ಚಾಗುತ್ತದೆ. ಇದ್ರಿಂದ ವಿಚಲಿತವಾಗುವ ಪಾಲಕರು ಹೊಡೆದು,ಬಡಿದು ಮಾಡ್ತಾರೆ. ಇದಕ್ಕೆ ಪರಿಹಾರ ಕೈ ಎತ್ತೋದಲ್ಲ.
ಬಾಲ್ಯದಲ್ಲಿ ಮಕ್ಕಳು (Children) ಹಾಸಿಗೆ (Bed) ಒದ್ದೆ ಮಾಡುವುದು ಸಾಮಾನ್ಯ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಹಾಸಿಗೆ ಒದ್ದೆ ಮಾಡ್ತಾರೆ ಎನ್ನುವ ಕಾರಣಕ್ಕೆ ಪಾಲಕರು (Parents) ಡೈಪರ್ (Diaper) ಹಾಕಿ ಮಲಗಿಸ್ತಾರೆ. ಮಕ್ಕಳು ದೊಡ್ಡವರಾಗ್ತಿದ್ದಂತೆ ಡೈಪರ್ ತೆಗೆದು ಮಲಗಿಸ್ತಾರೆ. ಆದ್ರೆ ಐದು ವರ್ಷದ ನಂತ್ರವೂ ಮಕ್ಕಳು ಹಾಸಿಗೆ ಒದ್ದೆ ಮಾಡಿದ್ರೆ ಪಾಲಕರ ಚಿಂತೆ ಹೆಚ್ಚಾಗುತ್ತದೆ. ಮಕ್ಕಳು ಉದ್ದೇಶ ಪೂರ್ವಕವಾಗಿ ಹೀಗೆ ಮಾಡ್ತಾರೆಂದು ಕೆಲ ಪಾಲಕರು ಭಾವಿಸ್ತಾರೆ. ಇದೇ ಕಾರಣಕ್ಕೆ ಮಕ್ಕಳಿಗೆ ಹೊಡೆಯುತ್ತಾರೆ. ಮಕ್ಕಳಿಗೆ ಬೈತಾರೆ. ಆದ್ರೆ ಮಕ್ಕಳು ಉದ್ದೇಶಪೂರ್ವಕವಾಗಿ ಹಾಸಿಗೆ ಒದ್ದೆ ಮಾಡುವುದಿಲ್ಲ. ಐದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಯಾಕೆ ಹಾಸಿಗೆ ಒದ್ದೆ ಮಾಡ್ತಾರೆ ಎನ್ನುವ ಬಗ್ಗೆ ನಾವಿಂದು ಹೇಳ್ತೇವೆ.
ಯಾವ ವಯಸ್ಸಿನಲ್ಲಿ ಹಾಸಿಗೆ ಒದ್ದೆ ಮಾಡುವುದು ಸಮಸ್ಯೆ?
ಒಂದು ಸಂಶೋಧನೆಯ ಪ್ರಕಾರ, ಅಮೆರಿಕಾದಲ್ಲಿ ಸುಮಾರು 15 ಪ್ರತಿಶತದಷ್ಟು ಮಕ್ಕಳು ಐದು ವರ್ಷದ ನಂತ್ರವೂ ಹಾಸಿಗೆ ಒದ್ದೆ ಮಾಡ್ತಾರಂತೆ. ಸುಮಾರು ಮೂರು ವರ್ಷದವರೆಗೆ ಮಕ್ಕಳು ಹಾಸಿಗೆ ಒದ್ದೆ ಮಾಡ್ತಾರೆ. ಇದಕ್ಕಿಂತ ಕಡಿಮೆ ವಯಸ್ಸಿನಲ್ಲೇ ಕೆಲ ಮಕ್ಕಳು ಸುಧಾರಿಸಿರುತ್ತಾರೆ. ಪಾಲಕರು ಮಕ್ಕಳಿಗೆ ಹಾಸಿಗೆ ಒದ್ದೆ ಮಾಡದಂತೆ, ರಾತ್ರಿ ಮಕ್ಕಳಿಗೆ ಎಚ್ಚರವಾದಾಗ ಶೌಚಾಲಯಕ್ಕೆ ಕರೆದುಕೊಂಡು ಹೋಗುವ ಅಭ್ಯಾಸ ಮಾಡಿದ್ರೆ ಮಕ್ಕಳು ಬೇಗ ಕಲಿಯುತ್ತಾರೆ. ಆದ್ರೆ ಕೆಲ ಮಕ್ಕಳು ಎಷ್ಟೇ ಅಭ್ಯಾಸ ಮಾಡಿದ್ರೂ ಮಕ್ಕಳು ಹಾಸಿಗೆ ಒದ್ದೆ ಮಾಡುವುದನ್ನು ಬಿಡುವುದಿಲ್ಲ. ಐದು ವರ್ಷದ ನಂತ್ರ ಸುಮಾರು 7 ವರ್ಷದವರೆಗೆ ಆಗಾಗ ಮಕ್ಕಳು ಹಾಸಿಗೆ ಒದ್ದೆ ಮಾಡ್ತಾರೆ. ಒಂದು ವೇಳೆ 7 ವರ್ಷದವರೆಗೂ ಮಕ್ಕಳು ಹಾಸಿಗೆ ಒದ್ದೆ ಮಾಡಿದ್ರೆ ಮೂತ್ರಪಿಂಡಶಾಸ್ತ್ರಜ್ಞ ಅಥವಾ ಮೂತ್ರಕೋಶ ತಜ್ಞರಿಗೆ ತೋರಿಸಿ.
ಹಾಸಿಗೆ ಒದ್ದೆಯಾಗುವುದು ಗಂಭೀರವೇ? : ಮಕ್ಕಳು ಚಿಕ್ಕ ವಯಸ್ಸಿನಲ್ಲಿದಾಗ ಹಾಸಿಗೆ ಒದ್ದೆ ಮಾಡುವುದು ಸಾಮಾನ್ಯ. ವಯಸ್ಸು ಹೆಚ್ಚಾದಂತೆ ಹಾಸಿಗೆ ಒದ್ದೆಯಾಗುವುದು ಮಾಮೂಲಿಯಲ್ಲ. ಐದರಿಂದ ಏಳು ವರ್ಷದ ಮಕ್ಕಳು ಹಾಸಿಗೆ ಒದ್ದೆ ಮಾಡ್ತಿದ್ದರೆ ಇದು ಹಾರ್ಮೋನ್ ಅಸಮತೋಲನ, ಮಲಬದ್ಧತೆ ಇತ್ಯಾದಿಗಳ ಸಂಕೇತವಾಗಿದೆ.
ಹೆಚ್ಚಿನ ಒತ್ತಡ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ಮಧುಮೇಹ, ಯುಟಿಐ, ನಿದ್ರಾಹೀನತೆ, ಕುಟುಂಬದ ಹಿನ್ನೆಲೆ, ಎಡಿಎಚ್‌ಡಿ ಕಾರಣದಿಂದಾಗಿ ಕೂಡ ಮಕ್ಕಳು ಹಾಸಿಗೆ ಒದ್ದೆ ಮಾಡುತ್ತಾರೆ.
Health ಹಾಳು ಮಾಡುತ್ತೆ ಬೆಡ್ ರೂಮ್ ನ ಬಣ್ಣ ಬಣ್ಣದ ಲೈಟ್
ಪೋಷಕರು ಏನು ಮಾಡುತ್ತಾರೆ? : ಅನೇಕ ಪೋಷಕರು ಹಾಸಿಗೆ ಒದ್ದೆ ಮಾಡಲು ಮಕ್ಕಳನ್ನು ಬೈಯುತ್ತಾರೆ ಮತ್ತು ಕೆಲವರು ತಮ್ಮ ಮಕ್ಕಳಿಗೆ ಹೊಡೆಯುತ್ತಾರೆ. ಮಕ್ಕಳಿಗೆ ಬೈದು ಅಥವಾ ಹೊಡೆದು ಅವರ ಅಭ್ಯಾಸವನ್ನು ಬಿಡಿಸಲು ಸಾಧ್ಯವಿಲ್ಲ. ಇದ್ರಿಂದ ಮಕ್ಕಳ ಆತ್ಮವಿಶ್ವಾಸ ದುರ್ಬಲಗೊಳ್ಳುತ್ತದೆ. ಮಕ್ಕಳಲ್ಲಿ ಭಯ ಹೆಚ್ಚಾಗುತ್ತದೆ. ಹಾಸಿಗೆ ಒದ್ದೆಯಾದ್ರೆ ಪೋಷಕರು ಹೊಡೆಯುತ್ತಾರೆಂಬ ಭಯ ಮಕ್ಕಳಲ್ಲಿ ಶುರುವಾಗುತ್ತದೆ. ಮಕ್ಕಳು ಈ ಭಯಕ್ಕೆ ಮತ್ತೆ ಮತ್ತೆ ಹಾಸಿಗೆ ಒದ್ದೆ ಮಾಡಿಕೊಳ್ತಾರೆ. ಇದ್ರ ಬದಲು ಪೋಷಕರು ಇದಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕು. ನಂತರ ಪ್ರೀತಿಯಿಂದ ಮಕ್ಕಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
ಮಕ್ಕಳು ಹಾಸಿಗೆ ಒದ್ದೆಯಾಗುವುದನ್ನು ಹೀಗೆ ನಿಲ್ಲಿಸಿ : ಮಕ್ಕಳು ನೀರು ಕುಡಿಯುವ ಸಮಯವನ್ನು ಬದಲಿಸಿ. ಸಂಜೆ ನಂತ್ರ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ನೀರು ಕೊಡಿ. ದಿನದಲ್ಲಿ ದ್ರವ ಸೇವನೆಯನ್ನು ಹೆಚ್ಚಿಸಿ ಮತ್ತು ರಾತ್ರಿ ಸಮಯದಲ್ಲಿ ಅದನ್ನು ಕಡಿಮೆ ಮಾಡಿ. ಮಲಗುವ ಮುನ್ನ ಪ್ರತಿ ದಿನ ಮಗುವನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ. ರಾತ್ರಿ ಮೂತ್ರವಿಸರ್ಜನೆ ಮಾಡಿದ ನಂತ್ರವೇ ಮಕ್ಕಳನ್ನು ಮಲಗಿಸಿ. ಮಕ್ಕಳನ್ನು ಎಂದೂ ಒತ್ತಡದಲ್ಲಿಡಬೇಡಿ. ಮಕ್ಕಳ ಒತ್ತಡ ಕಡಿಮೆ ಮಾಡಿ. ಮಕ್ಕಳಿಗೆ ಗದರಿಸಬೇಡಿ. ಮಕ್ಕಳ ಮೇಲೆ ಕೈ ಎತ್ತಬೇಡಿ. ಪ್ರೀತಿಯಿಂದ ಅವರನ್ನು ಮಾತನಾಡಿಸಿ. ಅತಿಯಾದ ಸಿಹಿ, ಮಾಂಸ, ಕೃತಕ ಆಹಾರವನ್ನು ಮಕ್ಕಳಿಗೆ ನೀಡಬೇಡಿ. ಮೂತ್ರಕೋಶದ ಸುತ್ತ ಮಸಾಜ್ ಮಾಡುವಂತೆ ಕೆಲ ತಜ್ಞರು ಸಲಹೆ ನೀಡ್ತಾರೆ. ಮಸಾಜ್ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯಿರಿ.
ಗಂಟೆಗಟ್ಟಲೆ ಕೂತಲ್ಲೇ ಕೂತು ಕೆಲ್ಸ ಮಾಡಿ ಬೆನ್ನು ನೋವಾ ? ಹತ್ತೇ ನಿಮಿಷ ಎಕ್ಸರ್‌ಸೈಸ್ ಮಾಡಿ ಸಾಕು
ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಗುವಿನ ಅಭ್ಯಾಸವನ್ನು ತಡೆಯಬಹುದು.
1. ಮಲಗುವ ಮುನ್ನ ಮಗುವಿಗೆ ವಾಲ್ ನಟ್ಸ್ ಮತ್ತು 1 ಚಮಚ ಒಣದ್ರಾಕ್ಷಿ ತಿನ್ನಿಸಿ.
2. ಮಲಗುವ ಮುನ್ನ ಮಗುವಿಗೆ 1 ಬಾಳೆಹಣ್ಣು ತಿನ್ನಿಸಿ.
3. ಒಂದು ದಾಲ್ಚಿನಿಯನ್ನು ತಿಂದು ಮಲಗುವಂತೆ ಸಲಹೆ ನೀಡಿ
4. 1 ಕಪ್ ಹಾಲಿಗೆ ಸಾಸಿವೆ ಪುಡಿಯನ್ನು ಬೆರೆಸಿ ಮಗುವಿಗೆ ನೀಡಿ.
5. ಮಗುವಿಗೆ ಮಲಗುವ ಕನಿಷ್ಠ 1 ಗಂಟೆ ಮೊದಲು ಪಾಶ್ಚರೀಕರಿಸದ ಹಾಲನ್ನು ನೀಡಿ.