Body Shaming ಅಂದರೇನು? ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳೋದು ಹೇಗೆ?
ಸುಂದರವಾಗಿರಬೇಕೆಂದು ಪ್ರತಿಯೊಬ್ಬ ಬಯಸ್ತಾನೆ. ಅದಕ್ಕೆ ಸಾಕಷ್ಟು ಪ್ರಯತ್ನ ನಡೆಸ್ತಾನೆ. ಆದ್ರೆ ಕೆಲವೊಂದನ್ನು ನಮ್ಮಿಂದ ಬದಲಿಸಲು ಸಾಧ್ಯವಿಲ್ಲ. ಹುಟ್ಟಿದಾಗ್ಲೇ ಬಂದ ದೇಹದ ಆಕಾರ, ಬಣ್ಣ ನಮ್ಮನ್ನು ಕುಗ್ಗಿಸಬಾರದು. ವಾಸ್ತವವನ್ನು ಸ್ವೀಕರಿಸಿ ಮುನ್ನಡೆಯಬೇಕಷ್ಟೆ.
ಪ್ರತಿಯೊಬ್ಬ ವ್ಯಕ್ತಿಯ ದೇಹ ರಚನೆ ಭಿನ್ನವಾಗಿರುತ್ತದೆ. ಒಬ್ಬರು ಕಪ್ಪಾಗಿರಬಹುದು. ಮತ್ತೊಬ್ಬರು ಅತಿ ಬೆಳ್ಳಗಿರಬಹುದು. ಒಬ್ಬರ ಕಣ್ಣು ಹೊಳೆಯುತ್ತಿದ್ದರೆ ಇನ್ನೊಬ್ಬರ ತಲೆಯ ಮೇಲೆ ಕೂದಲಿರದೆ ಇರಬಹುದು. ಅದೆಲ್ಲವೂ ಸಾಮಾನ್ಯ ಸಂಗತಿ. ಆದ್ರೆ ಈ ದೇಹದ ಭಾಗಗಳು, ಅದರ ಸೌಂದರ್ಯವೇ ನಮ್ಮ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಕೆಲ ದಿನಗಳ ಹಿಂದೆ ನೀವು ಬಾಡಿ ಶೇಮಿಂಗ್ ಬಗ್ಗೆ ದೊಡ್ಡ ಚರ್ಚೆಯಾಗ್ತಿದ್ದಿದ್ದನ್ನು ಕೇಳಿರಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ಟ್ಯಾಗ್ ಬಾಡಿ ಶೇಮಿಂಗ್ ಕೂಡ ಹೆಚ್ಚು ಚರ್ಚೆಗೆ ಬಂದಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ಈ ಬಾಡಿ ಶೇಮಿಂಗ್ ಬಗ್ಗೆ ಧ್ವನಿ ಎತ್ತಿದ್ದರು. ಕೆಲವರಿಗೆ ಈ ಬಾಡಿ ಶೇಮಿಂಗ್ ಬಗ್ಗೆ ತಿಳಿದಿಲ್ಲ. ಹಾಗೆ ಅದ್ರಿಂದ ಯಾವೆಲ್ಲ ಅಡ್ಡ ಪರಿಣಾಮವಾಗುತ್ತದೆ ಎಂಬುದು ಗೊತ್ತಿಲ್ಲ. ನಾವಿಂದು ಬಾಡಿ ಶೇಮಿಂಗ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
ಬಾಡಿ (Body) ಶೇಮಿಂಗ್ (Shaming) ಅಂದ್ರೇನು? : ಬಾಡಿ ಶೇಮಿಂಗ್ ಎಂದರೆ ನಿಮ್ಮ ದೇಹದ ಬಗ್ಗೆ ಬೇರೊಬ್ಬ ವ್ಯಕ್ತಿ ನಕಾರಾತ್ಮಕವಾಗಿ ಕಾಮೆಂಟ್ ಮಾಡುವುದು. ನಿಮ್ಮ ದೇಹದ ಆಕಾರ, ನಿಮ್ಮ ಕೂದಲು, ನಿಮ್ಮ ಚರ್ಮದ ಬಣ್ಣ, ನಿಮ್ಮ ಮುಖದ ಮೇಲಿರುವ ಕಲೆ, ನಿಮ್ಮ ವಯಸ್ಸು, ನಿಮ್ಮ ಬಟ್ಟೆ ಹೀಗೆ ಎಲ್ಲವೂ ಈ ಬಾಡಿ ಶೇಮಿಂಗ್ ನಲ್ಲಿ ಬರುತ್ತದೆ. ಒಬ್ಬ ವ್ಯಕ್ತಿಯ ಸೌಂದರ್ಯದ ಬಗ್ಗೆ ನಾವು ಸುಲಭವಾಗಿ ಕಮೆಂಟ್ ಮಾಡ್ಬಹುದು. ಆದ್ರೆ ಅದು ಆತನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಈ ಬಾಡಿ ಶೇಮಿಂಗ್ ಅನೇಕ ಬಾರಿ ವ್ಯಕ್ತಿಯನ್ನು ಮಾನಸಿಕ ಖಿನ್ನತೆ (Depression) ಗೆ ನೂಕುತ್ತದೆ.
ಬಾಡಿ ಶೇಮಿಂಗ್ ನಿಂದ ಕಾಡುತ್ತೆ ಖಿನ್ನತೆ : ನಮ್ಮ ದೇಹದ ಬಗ್ಗೆ ಬೇರೆಯವರು ಕಮೆಂಟ್ ಮಾಡಿದಾಗ ನಮ್ಮ ದೇಹದ ಮೇಲಿರುವ ಪ್ರೀತಿ (love) ಕಡಿಮೆಯಾಗುತ್ತದೆ. ನಮ್ಮ ದೇಹವನ್ನು ಅಥವಾ ನಮ್ಮನ್ನು ನಾವು ದ್ವೇಷಿಸಲು ಶುರು ಮಾಡ್ತೇವೆ. ಇದ್ರಿಂದ ಆತಂಕ, ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ನಮ್ಮ ಮನಸ್ಸಿನ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುವ ಜೊತೆಗೆ ನಮ್ಮನ್ನು ಅನಾರೋಗ್ಯಕ್ಕೆ ನೂಕುತ್ತದೆ.
ಯಾರು ನೋಡಲಿ ಒಂದೆಡೆ ಕುಳಿತೇ ಕೆಲಸ ಮಾಡುತ್ತಾರೆ, ಅನಾರೋಗ್ಯಕ್ಕಿದು ಹಾಡುತ್ತೆ ನಾಂದಿ!
ಬಾಡಿ ಶೇಮಿಂಗ್ ನಿಂದ ರಕ್ಷಣೆ ಹೇಗೆ? :
ನಿರ್ಲಕ್ಷ್ಯ ಮುಖ್ಯ : ನಮ್ಮ ದೇಹದ ಬಗ್ಗೆ ಬೇರೆಯವರು ನಿಂದಿಸಿದ್ರೆ ಅದನ್ನು ನಿರ್ಲಕ್ಷ್ಯಿಸುವುದನ್ನು ನೀವು ಕಲಿಯಬೇಕು. ಬೇರೆಯವರ ಮಾತಿಗೆ ಬೆಲೆಕೊಡುವ ಬದಲು ನಿಮ್ಮ ದೇಹವನ್ನು ನೀವು ಅರಿತಿದ್ರೆ ಸಾಕು.
ನಿಮ್ಮನ್ನು ನೀವು ಪ್ರೀತಿಸಿ : ನಿಮ್ಮ ದೇಹದ ಆಕಾರ ಅಥವಾ ತಲೆ ಕೂದಲು ನಿಮ್ಮ ಸಂತೋಷ ಹೆಚ್ಚಿಸಲು ಸಾಧ್ಯವಿಲ್ಲ. ನಿಮ್ಮ ಸಂತೋಷ ನಿಮ್ಮ ಮನಸ್ಸಿನಲ್ಲಿರುತ್ತದೆ. ನಿಮ್ಮನ್ನು ಬೇರೆಯವರ ಜೊತೆ ಹೋಲಿಕೆ ಮಾಡುವುದನ್ನು ಬಿಡಿ. ನಿಮ್ಮ ಎತ್ತರ, ಬಣ್ಣ, ನೋಟ ಎಲ್ಲವನ್ನು ನೀವು ಪ್ರೀತಿಸಲು ಶುರು ಮಾಡಿ. ಸದಾ ಸಂತೋಷವಾಗಿರುವ ವ್ಯಕ್ತಿ ಹೇಗಿದ್ದರೂ ಸುಂದರವಾಗಿ ಕಾಣ್ತಾನೆ ಎಂಬುದು ನೆನಪಿನಲ್ಲಿರಲಿ.
ದೇಹಕ್ಕೆ ಕೃತಜ್ಞರಾಗಿರಿ : ನಿಮ್ಮ ದೇಹ ನಿಮಗೆ ಸಾಕಷ್ಟನ್ನು ನೀಡಿರುತ್ತದೆ. ಹಾಗಿರುವಾಗ ಅದಕ್ಕೆ ನೀವು ಕೃತಜ್ಞರಾಗಿರಬೇಕು. ಅದು ಏನು ನೀಡುತ್ತದೆ ಅದನ್ನು ನೀವು ಪ್ರೀತಿಯಿಂದ ಸ್ವೀಕರಿಸುವುದನ್ನು ಕಲಿಯಬೇಕು. ದೇಹವನ್ನು ದ್ವೇಷಿಸಿದ್ರೆ ನಿಮ್ಮ ಆರೋಗ್ಯ ಹದಗೆಡುತ್ತದೆಯೇ ವಿನಃ ಬಾಡಿ ಶೇಮಿಂಗ್ ಮಾಡಿದವರದ್ದಲ್ಲ ಎಂಬುದನ್ನು ನೆನಪಿನಲ್ಲಿಡಿ.
ನೀವು ತೆಳ್ಳಗಿದ್ದೀರಾ? ತೂಕ ಹೆಚ್ಚಿಸಲು ಹಾಲನ್ನು ಈ ರೀತಿ ಕುಡಿಯಿರಿ
ಪ್ರತಿಭೆ, ಹವ್ಯಾಸಕ್ಕೆ ಬೆಲೆ ನೀಡಿ : ನಿಮ್ಮ ಪ್ರತಿಭೆ, ಹವ್ಯಾಸಕ್ಕೆ ಗಮನ ನೀಡಿ. ನಿಮ್ಮನ್ನು ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಿ. ಅನವಶ್ಯಕ ಚಿಂತೆಯಿಂದ ದೂರವಿರಿ. ಹಾಗೆಯೇ ನಕಾರಾತ್ಮಕ ಪ್ರಭಾವ ಬೀರುವ ವ್ಯಕ್ತಿಯಿಂದ ದೂರವಿರಿ. ನಿಮ್ಮನ್ನು ನೀವಿರುವಂತೆ ಸ್ವೀಕರಿಸುವ ವ್ಯಕ್ತಿಯ ಸ್ನೇಹ ಬೆಳೆಸಿ.