ನಮ್ಮ ದೇಹಕ್ಕೆ ಎಲ್ಲ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ಬೇಕು. ಯಾವ್ದೆ ಹೆಚ್ಚಾದ್ರೂ ಯಾವ್ದು ಕಡಿಮೆ ಆದ್ರೂ ಅದು ಸಹಿಸೋದಿಲ್ಲ. ನೀವು ಕಾರ್ಬೋಹೈಡ್ರೇಟ್ ಸೇವನೆಯನ್ನೇ ಬಿಟ್ರೆ ದೇಹಕ್ಕೆ ಏನಾದ್ರೂ ನಷ್ಟವಾಗುತ್ತಾ?
ಕಾರ್ಬೋಹೈಡ್ರೇಟ್ (Carbohydrate) ಮತ್ತೆ ಕ್ಯಾಲೋರಿಯನ್ನು ಹೆಚ್ಚಾಗಿ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುತ್ತೆ ಎನ್ನುವ ನಂಬಿಕೆ ಇದೆ. ಇದೇ ಕಾರಣಕ್ಕೆ ಅನೇಕರು ಕಾರ್ಬೋಹೈಡ್ರೇಟ್ ಇಲ್ಲದ ಡಯಟ್ (diet) ಶುರು ಮಾಡ್ತಿದ್ದಾರೆ. ಕಾರ್ಬೋಹೈಡ್ರೇಟ್ ಇಲ್ಲದ ಡಯಟ್ ನಿಜವಾಗ್ಲೂ ಪ್ರಯೋಜನಕಾರಿಯೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳೋದು ಸಹಜ. ಕಾರ್ಬೋಹೈಡ್ರೇಟ್ ನಮ್ಮ ದೇಹಕ್ಕೆ ಪ್ರಾಥಮಿಕ ಶಕ್ತಿ ನೀಡುತ್ತೆ. ಜೀವಕೋಶಗಳು ಮತ್ತು ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಶಕ್ತಿ ಒದಗಿಸುತ್ತವೆ. ಹಾಗಿರುವಾಗ ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಸಿಕ್ಕೇ ಇಲ್ಲ ಅಂದ್ರೆ ಏನಾಗ್ಬಹುದು?
ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡೋದು ಆರೋಗ್ಯಕ್ಕೆ ಹಾನಿಕಾರಕವಲ್ಲ. ಆದ್ರೆ ಕಾರ್ಬೋಹೈಡ್ರೇಟ್ಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಸೂಕ್ತವಲ್ಲ. ನಮ್ಮ ದೇಹದಲ್ಲಿ, ಕಾರ್ಬೋಹೈಡ್ರೇಟ್ಗಳು ಗ್ಲೂಕೋಸ್ ಆಗಿ ವಿಭಜನೆಯಾಗುತ್ತವೆ. ಈ ಗ್ಲೂಕೋಸ್ ನಮ್ಮ ಜೀವಕೋಶಗಳು ಅಡೆನೊಸಿನ್ ಟ್ರೈಫಾಸ್ಫೇಟ್ (ATP) ತಯಾರಿಸಲು ಬಳಸುತ್ತವೆ. ಇವು ನಮ್ಮ ಚಯಾಪಚಯ ಕ್ರಿಯೆಗೆ ಶಕ್ತಿ ನೀಡುತ್ತವೆ. ATPಯನ್ನು ಕಾರ್ಬೋಹೈಡ್ರೇಟ್ ಜೊತೆ ಕೊಬ್ಬು ಕೂಡ ತಯಾರಿಸುತ್ತದೆ. ಆದ್ರೆ ಕೊಬ್ಬಿಗಿಂತ ಕಾರ್ಬೋಹೈಡ್ರೇಟ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ದೇಹಕ್ಕೆ ಶಕ್ತಿಯ ಅಗತ್ಯವಿದ್ದಾರೆ ದೇಹ ಕಾರ್ಬೋಹೈಡ್ರೇಟ್ಗಳನ್ನು ಗ್ಲೈಕೊಜೆನ್ ಆಗಿ ಸಂಗ್ರಹಿಸುತ್ತದೆ. ಇದು ಪ್ರಾಥಮಿಕವಾಗಿ ಯಕೃತ್ತು ಮತ್ತು ಸ್ನಾಯುಗಳಲ್ಲಿ ಸಂಗ್ರಹವಾಗುತ್ತದೆ.
ಬಹುತೇಕ ಎಲ್ಲಾ ಆಹಾರ (food)ಗಳಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್ ಇರೋದ್ರಿಂದ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಕಾರ್ಬೋಹೈಡ್ರೇಟ್ ತಿನ್ನೋದನ್ನು ನಿಲ್ಲಿಸಲು ಸಾಧ್ಯವಿಲ್ಲ. ಒಂದ್ವೇಳೆ ನಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್ಗಳ ಕೊರತೆಯಿದ್ದಾಗ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಶಕ್ತಿಯ (energy) ಕೊರತೆ : ಕಾರ್ಬೋಹೈಡ್ರೇಟ್ಗಳು ದೇಹಕ್ಕೆ ಶಕ್ತಿಯ ಪ್ರಮುಖ ಮೂಲವಾಗಿದೆ. ನೀವು ಸಾಕಷ್ಟು ಕಾರ್ಬೋಹೈಡ್ರೇಟ್ಗಳನ್ನು ಸೇವಿಸದಿದ್ದರೆ, ಇದು ನಿಮ್ಮನ್ನು ದುರ್ಬಲಗೊಳಿಸುತ್ತದೆ. ನಿಮ್ಮ ದೇಹದ ಶಕ್ತಿ ಸಂಪೂರ್ಣ ಕಡಿಮೆ ಆಗುತ್ತದೆ. ನೀವು ಸೋಮಾರಿಯಾಗ್ತೀರಿ.
ಪೋಷಕಾಂಶಗಳ ಕೊರತೆ : ನಾರು, ಜೀವಸತ್ವಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ನಂತಹ ಖನಿಜಗಳನ್ನು ಒಳಗೊಂಡಿರುವ ಅನೇಕ ಕಾರ್ಬೋಹೈಡ್ರೇಟ್ ಆಧಾರಿತ ಆಹಾರಗಳಿವೆ. ನೀವು ಕಾರ್ಬೋಹೈಡ್ರೇಟ್ಗಳನ್ನು ತ್ಯಜಿಸುತ್ತಿದ್ದರೆ, ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶದಿಂದ ನೀವು ದೂರವಿರುತ್ತೀರಿ. ಇದ್ರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗಬಹುದು.
ಕರುಳಿನ ಆರೋಗ್ಯದಲ್ಲಿ ಸಮಸ್ಯೆ : ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ನಾರಿನಂಶವಿರುವ ಕಾರ್ಬೋಹೈಡ್ರೇಟ್ಗಳು ಕರುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವುಗಳನ್ನು ಸೇವಿಸುವುದರಿಂದ ಕರುಳಿನ ಚಲನೆ ಸುಗಮವಾಗುತ್ತದೆ. ಮಲಬದ್ಧತೆಯಂತಹ ಸಮಸ್ಯೆ ಕಡಿಮೆ ಆಗುತ್ತದೆ. ಅದೇ ನಾರಿನ ಕೊರತೆಯಿರುವ ಆಹಾರವು ಜೀರ್ಣಕಾರಿ ಸಮಸ್ಯೆಗೆ ಕಾರಣವಾಗುತ್ತದೆ.
ಮೆದುಳಿನ ಕಾರ್ಯದಲ್ಲಿ ವ್ಯತ್ಯಯ : ಮೆದುಳು ಗ್ಲೂಕೋಸ್ (ಕಾರ್ಬೋಹೈಡ್ರೇಟ್ಗಳಿಂದ ಪಡೆದ ಒಂದು ರೀತಿಯ ಸಕ್ಕರೆ)ಯಅನ್ನು ಅದರ ಪ್ರಾಥಮಿಕ ಇಂಧನವಾಗಿ ಅವಲಂಬಿಸಿದೆ. ನೀವು ಸಾಕಷ್ಟು ಕಾರ್ಬೋಹೈಡ್ರೇಟ್ಗಳನ್ನು ಸೇವಿಸದಿದ್ದರೆ, ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ತೊಂದರೆಗೊಳಗಾಗಬಹುದು. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ : ದೇಹಕ್ಕೆ ಎಲ್ಲ ಪೋಷಕಾಂಶ ಸೇರ್ತಿದೆ, ಕಾರ್ಬೋಹೈಡ್ರೇಟ್ ಸೇರ್ತಿಲ್ಲ ಎಂದಾಗ ನಿಮ್ಮ ದೇಹದ ಒಟ್ಟಾರೆ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ದೇಹದಲ್ಲಿನ ಪೋಷಕಾಂಶಗಳ ಸಮತೋಲನವನ್ನು ಹದಗೆಡಿಸುತ್ತದೆ.
ಕಾರ್ಬೋಹೈಡ್ರೇಟ್ ಮಾನವನ ಆರೋಗ್ಯಕ್ಕೆ ಬಹಳ ಮುಖ್ಯ. ಕಾರ್ಬೋಹೈಡ್ರೇಟ್ ಸೇವನೆಯನ್ನು ವೈದ್ಯರ ಸಲಹೆ ಇಲ್ಲದೆ ನಿಲ್ಲಿಸಬೇಡಿ. ವೈದ್ಯರ ಸಲಹೆಯಂತೆ ನೀವು ಕಾರ್ಬೋಹೈಡ್ರೇಟ್ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿ. ಇದನ್ನು ಸಂಪೂರ್ಣ ನಿಲ್ಲಿಸೋದ್ರಿಂದ ಪ್ರಯೋಜನಕ್ಕಿಂತ ಹಾನಿಯುಂಟಾಗೋದೇ ಹೆಚ್ಚು.
