ಕುಂಭ ಸ್ನಾನದಿಂದ ಅನಾರೋಗ್ಯ? ಕಲುಷಿತವಾಯ್ತು ತ್ರಿವೇಣಿ ಸಂಗಮ!
ಪುಣ್ಯ ಪ್ರಾಪ್ತಿಗಾಗಿ ಜನರು ಮಹಾಕುಂಭ ಮೇಳಕ್ಕೆ ಹೋಗ್ತಿದ್ದಾರೆ. ಆದ್ರೆ ಶುದ್ಧ ನೀರಿನ ಬಗ್ಗೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ತ್ರಿವೇಣಿ ಸಂಗಮದ ನೀರಿನಲ್ಲಿ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ.

ಮಹಾಕುಂಭ ಮೇಳ (Mahakumbh Mela )ಕ್ಕೆ ಶೀಘ್ರವೇ ಅದ್ಧೂರಿ ತೆರೆ ಬೀಳಲಿದೆ. ಫೆಬ್ರವರಿ 26ರಂದು ಮಹಾ ಶಿವರಾತ್ರಿ (Maha Shivaratri) ದಿನ ಮಹಾಕುಂಭ ಮೇಳ ಮುಕ್ತಾಯಗೊಳ್ಳಲಿದೆ. ಈಗಾಗಲೇ ಕೋಟಿ ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಒಂದು ಅಂದಾಜಿನ ಪ್ರಕಾರ, 50 ಕೋಟಿಗಿಂತಲೂ ಹೆಚ್ಚು ಜನರು ಈಗಾಗಲ್ಲೇ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ (holy bath) ಮಾಡಿದ್ದಾರೆ.
144 ವರ್ಷಗಳಿಗೊಮ್ಮೆ ಬರುವ ಈ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳುವುದೇ ಒಂದು ಪುಣ್ಯದ ಕೆಲಸ ಎಂದು ಜನ ಭಾವಿಸಿದ್ದಾರೆ. ಪ್ರಯಾಗರಾಜ್ಗೆ ತಂಡೋಪತಂಡವಾಗಿ ಭಕ್ತರು ಹರಿದು ಬರ್ತಿದ್ದಾರೆ. ಈ ಮಧ್ಯೆ ವಿಜ್ಞಾನಿಗಳು ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ನಾವೆಲ್ಲ ಶುದ್ಧ ನೀರು ಅಂದ್ಕೊಂಡಿದ್ದ ತ್ರಿವೇಣಿ ಸಂಗಮದ ನೀರು ಕಲುಶಿತ ನೀರು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಮಾಡಿದೆ.
ಮಹಾಕುಂಭ ಮೇಳದಿಂದ ಯುಪಿಗೆ ಆರ್ಥಿಕ ಉತ್ತೇಜನ: ಸಿಎಂ ಯೋಗಿ ಆದಿತ್ಯನಾಥ್
ಗಂಗಾ ಸ್ನಾನವನ್ನು ಪುಣ್ಯ ಸ್ನಾನವೆಂದು ನಂಬಲಾಗಿದೆ. ಎಲ್ಲ ಪಾಪಗಳನ್ನು ತೊಳೆಯುವ ಹಾಗೆಯೇ ಆರೋಗ್ಯ ವೃದ್ಧಿಗಾಗಿ ಜನರು ಗಂಗೆಯಲ್ಲಿ ಮಿಂದೆದ್ದು ಬರ್ತಾರೆ. ಅದ್ರಲ್ಲೂ ಮಹಾ ಕುಂಭ ಮೇಳದ ಸಮಯದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಪುಣ್ಯದ ಕೆಲಸ ಎಂದೇ ನಂಬಲಾಗಿದೆ. ಗಂಗೆ ನೀರನ್ನು ಅತ್ಯಂತ ಶುದ್ಧ ನೀರು ಎಂದು ವಿಜ್ಞಾನಿಗಳು ನಂಬುತ್ತಾರೆ. ಅದನ್ನು ಬಾಟಲಿಯಲ್ಲಿ ಹಾಕಿ ಎಷ್ಟು ವರ್ಷವಿಟ್ರೂ ಹಾಳಾಗುವುದಿಲ್ಲ, ಬ್ಯಾಕ್ಟೀರಿಯಾ, ವೈರಲ್ ಈ ನೀರಿನಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ಈ ಹಿಂದೆ ವಿಜ್ಞಾನಿಗಳು ತಿಳಿಸಿದ್ದರು. ಆದ್ರೀಗ ಪ್ರಯಾಗರಾಜ್ ನ ನೀರು ಕಲುಶಿತಗೊಂಡಿದೆ ಎಂಬ ವರದಿ ಬಂದಿದೆ.
ತ್ರಿವೇಣಿ ಸಂಗಮದ ನೀರಿನಲ್ಲಿರುವ ಬ್ಯಾಕ್ಟೀರಿಯಾ ಯಾವುದು? : ಕೋಟಿ ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು, ಈಗ ಆ ನೀರಿನಲ್ಲಿ ಫೆಕಲ್ ಕೋಲಿಫಾರ್ಮ್ ಹೆಸರಿನ ಬ್ಯಾಕ್ಟೀರಿಯಾ ಬೆಳೆದಿದೆ. ಈ ಬ್ಯಾಕ್ಟೀರಿಯಾ ಮನುಷ್ಯನ ಮತ್ತು ಪ್ರಾಣಿಯ ಮಲದಲ್ಲಿ ಮತ್ತು ಒಳಚರಂಡಿ ನೀರಿನಲ್ಲಿ ಕಂಡು ಬರುತ್ತದೆ. 100 ಮಿಲಿ ಸ್ನಾನದ ನೀರಿನಲ್ಲಿ ಗರಿಷ್ಠ ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ 2500 ಯೂನಿಟ್ ಇರುತ್ತದೆ. ಆದ್ರೆ ತ್ರಿವೇಣಿ ಸಂಗಮದಲ್ಲಿ ಇದ್ರ ಸಂಖ್ಯೆ ಮತ್ತೂ ಹೆಚ್ಚಿದೆ ಎಂದು ವರದಿ ಮಾಡಲಾಗಿದೆ.
ಫೆಕಲ್ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಎಂದರೇನು? : ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳು ಅನೇಕ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವ ಒಂದು ಗುಂಪು. ಮನುಷ್ಯ ಹಾಗೂ ಪ್ರಾಣಿ ಕರುಳು ಮತ್ತು ಮಲದಲ್ಲಿ ಕಂಡು ಬರುವ ಈ ಬ್ಯಾಕ್ಟೀರಿಯಾ ಇದಾಗಿದ್ದು, ಯಾವುದೇ ಅಪಾಯಕಾರಿ ರೋಗವನ್ನು ಇದು ಉಂಟು ಮಾಡೋದಿಲ್ಲವಾದ್ರೂ ಇದು ನೀರಿನ ಗುಣಮಟ್ಟ ಹಾಳು ಮಾಡುವ ಕಾರಣ, ದೀರ್ಘ ಸಮಯದಲ್ಲಿ ಸಾಕಷ್ಟು ಸಮಸ್ಯೆ ಕಾಡುವ ಅಪಾಯವಿದೆ.
ಇದ್ರಿಂದ ಕಾಡುವ ಸಮಸ್ಯೆಗಳು ಏನು? : ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯರು ಕುಂಭಮೇಳದಿಂದ ವಾಪಸ್ ಆದ ಜನರಿಗೆ ಯಾವೆಲ್ಲ ಸಮಸ್ಯೆ ಕಾಡ್ತಿದೆ ಎಂಬುದನ್ನು ಹೇಳಿದ್ದಾರೆ. ಆರಂಭದಲ್ಲಿ ಈ ಸಮಸ್ಯೆ ಜನಸಂದಣಿಯಿಂದ ಬರ್ತಿದೆ ಎಂದು ಭಾವಿಸಲಾಗಿತ್ತು. ನಂತ್ರ ನೀರಿನಿಂದ ಎಂಬುದು ಪತ್ತೆಯಾಗ್ತಿದೆ.
ಕುಂಭಮೇಳಕ್ಕೆ ಹೋಗುವ ಪ್ರಯಾಣಿಕರೇ ಗಮನಿಸಿ, ರೈಲ್ವೆ ಇಲಾಖೆಯಿಂದ ಈ ರೈಲುಗಳನ್ನು ರದ್ದು!
ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಕೆಲ ಜನರು ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆ ಎದುರಿಸ್ತಿದ್ದಾರೆ. ಅವರಿಗೆ ಅತಿಸಾರ, ವಾಂತಿ ಕಾಣಿಸಿಕೊಳ್ತಿದೆ. ಜಠರಗರುಳಿನ ಸೋಂಕು, ಚರ್ಮದ ದದ್ದು, ಕಣ್ಣಿನಲ್ಲಿ ಕಿರಿಕಿರಿ ಮತ್ತು ಟೈಫಾಯಿಡ್ ಮತ್ತು ಹೆಪಟೈಟಿಸ್ ಎ ನಂತಹ ಗಂಭೀರ ಸಮಸ್ಯೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ತಿದೆ. ಕಲುಷಿತ ನೀರಿನ ಹನಿ ಉಸಿರಾಟದ ಸೋಂಕುಂಟು ಮಾಡ್ತಿದೆ. ವಿಶೇಷವಾಗಿ ವೃದ್ಧರು ಮತ್ತು ಚಿಕ್ಕ ಮಕ್ಕಳಿಗೆ ಇದ್ರಿಂದ ಹೆಚ್ಚಿನ ಸಮಸ್ಯೆಯಾಗ್ತಿದೆ. ಮಾಲಿನ್ಯಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಮೂತ್ರಕೋಶ ಮತ್ತು ಕೊಲೊನ್ ಕ್ಯಾನ್ಸರ್ ಸೇರಿದಂತೆ ಕೆಲವು ರೀತಿಯ ಕ್ಯಾನ್ಸರ್‌ಗಳ ಹೆಚ್ಚಿನ ಅಪಾಯ ಕಾಡುವ ಸಾಧ್ಯತೆ ಇದೆ.