ಮುಟ್ಟಿನ ಬಗ್ಗೆ ನಿಮಗೇನು ಗೊತ್ತು? ಇಂದು ಋತುಸ್ರಾವ ಶುಚಿತ್ವ ದಿನ
ಮುಟ್ಟಿನ ಸಂದರ್ಭದಲ್ಲಿ ಶುಚಿತ್ವದ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಈ ಕುರಿತು ಅರಿವು ಮೂಡಿಸುವ ದಿನ ಇಂದು- ಮೆನ್‌ಸ್ಟ್ರುವಲ್ ಹೈಜೀನ್ ಡೇ- ಋತುಸ್ರಾವ ಶುಚಿತ್ವ ದಿನ.
'ಅಮ್ಮನ್ನ ಕಾಗೆ ಮುಟ್ಟಿದೆ. ಅವಳತ್ರ ಹೋಗಬೇಡ.' ಇಂಥ ಮಾತನ್ನು ಕೆಲವು ವರ್ಷಗಳ ಹಿಂದೆ ಸಾಂಪ್ರದಾಯಿಕ ಮನೆಗಳಲ್ಲಿ ಕೇಳಬಹುದಾಗಿತ್ತು. ಕುಟುಂಬಗಳಲ್ಲಿ ಮಹಿಳೆಯರನ್ನು ಮುಟ್ಟಿನ ದಿನಗಳಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರುವಂತೆ ಮಾಡಲಾಗುತ್ತಿತ್ತು. ಆ ಕೋಣೆಗಳಿಗೋ ಸರಿಯಾದ ಗಾಳಿ ಬೆಳಕು ಇರುತ್ತಿರಲಿಲ್ಲ. ಕೆಲವು ಕಡೆ, ಹಳ್ಳಿಗಳಲ್ಲಿ, ಮನೆಯಾಚೆಗಿನ ಕೊಟ್ಟಿಗೆಯಲ್ಲೂ ಇರಬೇಕಾಗಿ ಬರುತ್ತಿತ್ತು. ಮುಟ್ಟಿನ ಬಳಲಿಕೆಯಿಂದ ಸುಸ್ತಾದ ಸ್ತ್ರೀ ಆ ಕೋಣೆಗಳ ಅನಾರೋಗ್ಯಕರ ವ್ಯವಸ್ಥೆಯಿಂದಲೇ ಬೇರೆ ಅನಾರೋಗ್ಯಗಳಿಗೆ ತುತ್ತಾದರೂ ಆಶ್ಚರ್ಯವಿರುತ್ತಿರಲಿಲ್ಲ.
ಅಂದಿಗೂ ಇಂದಿಗೂ ಪರಿಸ್ಥಿತಿ ತುಂಬಾ ಏನೂ ಬದಲಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹಾಗೇ ಇದೆ. ಹೆಣ್ಣುಮಕ್ಕಳಲ್ಲಿ ಶಿಕ್ಷಣ ಹೆಚ್ಚಿದಂತೆ ಮುಟ್ಟನ್ನು ನೋಡುವ ಪ್ರವೃತ್ತಿ ಆಧುನಿಕ ಕುಟುಂಬಗಳಲ್ಲಿ ಬದಲಾಗಿದೆಯಾದರೂ, ಗಂಡು ಮಕ್ಕಳಲ್ಲಿ ಆ ಬಗ್ಗೆ ಸೂಕ್ಷ್ಮತೆ ಇನ್ನೂ ಬೆಳೆದಿದೆ ಅನ್ನಿಸುವುದಿಲ್ಲ. ಈಗಲೂ ಮುಟ್ಟಿನ ಬಗ್ಗೆ ತಗ್ಗಿದ, ಸಣ್ಣ ದನಿಯಲ್ಲೇ ಮಾತನಾಡಿಕೊಳ್ಳಲಾಗುತ್ತದೆ. ಗಂಡು ಮಕ್ಕಳಿಗಂತೂ ಈ ಬಗ್ಗೆ ಏನೂ ತಿಳಿಯದಂತೆಯೇ ಬೆಳೆಸಲಾಗುತ್ತದೆ.
ಋತುಸ್ರಾವದ ಬಗ್ಗೆ ಮೊದಲ ಬಾರಿಗೆ ಋತುಸ್ರಾವ ಚಕ್ರ ಪ್ರವೇಶಿಸುತ್ತಿರುವವರಿಂದ ಆರಂಭಿಸಿ ಎಲ್ಲರೂ ತಿಳಿದುಕೊಳ್ಳಬೇಕಾದ ಒಂದು ಒಂದು ಅಂಶಗಳು ಇದ್ದೇ ಇರುತ್ತವೆ. ಸಾಂಪ್ರದಾಯಿಕ ಕುಟುಂಬಗಳಲ್ಲಿ ಈ ಬಗ್ಗೆ ಚರ್ಚಿಸಲಾಗುವುದಿಲ್ಲ; ಹೀಗಾಗಿ ಅದು ಒಂದು ಗುಟ್ಟಿನ ವಿಷಯವಾಗಿಯೇ ಉಳಿದುಹೋಗುತ್ತದೆ. ಹೆಚ್ಚಿನ ಬಾರಿ ಮೊದಲ ಬಾರಿ ಮುಟ್ಟಾಗುವ ಹದಿಹರೆಯದವರಿಗೆ ಈ ಬಗ್ಗೆ ಏನೂ ತಿಳಿದಿರುವುದಿಲ್ಲ- ಅಥವಾ ತಂದೆ ತಾಯಿ ಈ ಬಗ್ಗೆ ಕನಿಷ್ಠ ಅರಿವನ್ನೂ ಮಕ್ಕಳಲ್ಲಿ ಮೂಡಿಸಿರುವುದಿಲ್ಲ. ಮಕ್ಕಳು ಎಂಟು- ಹತ್ತು ವರ್ಷ ಆದೊಡನೆಯೇ ಅವರಿಗೆ ಋತುಸ್ರಾವದ ಬಗ್ಗೆ ಸರಿಯಾದ ಕಲ್ಪನೆ ಮೂಡಿಸಿ, ಹೆಣ್ಣು ಮಕ್ಕಳನ್ನು ಸಜ್ಜುಗೊಳಿಸುವುದು ಅಗತ್ಯ. ಗಂಡು ಮಕ್ಕಳಲ್ಲೂ ಈ ಕುರಿತಂತೆ ಅರಿವು ಮೂಡಿಸಿ, ಅವರು ಋತುಸ್ರಾವವನ್ನು ಅಸ್ಪೃಶ್ಯ ರೀತಿಯಲ್ಲಿ ನೋಡದಂತೆ ಪ್ರಜ್ಞೆ ಬೆಳೆಸುವುದು ಅಗತ್ಯ. ಋತುಸ್ರಾವದ ಸಂದರ್ಭದಲ್ಲಿ ಕಾಪಾಡಿಕೊಳ್ಳಬೇಕಾದ ಸ್ವಚ್ಛತೆಯ ಬಗ್ಗೆ ಎಲ್ಲರಿಗೂ ಅರಿವು ಇದ್ದಾಗ ಬೇರೆ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.
ಇಂದು ಋತುಸ್ರಾವ ಶುಚಿತ್ವ ದಿನ. ಋತುಸ್ರಾವ, ಅದರ ಸಂದರ್ಭದಲ್ಲಿ ಸ್ವಚ್ಛತೆ, ಆರೋಗ್ಯ ಕಾಪಾಡಿಕೊಳ್ಳುವಿಕೆಯ ಬಗ್ಗೆ ಅರಿವು ಹೆಚ್ಚಿಸಲು ಈ ದಿನ ಉಪಯೋಗಿಸಿಕೊಳ್ಳಲಾಗುತ್ತೆ.
ಅದು ಸರಿ, ಮೇ 28ನ್ನೇ ಯಾಕೆ ಈ ದಿನವಾಗಿ ಆರಿಸಿಕೊಳ್ಳಲಾಗಿದೆ? 28 ಎಂಬುದು ಸಾಂಕೇತಿಕ. ಸಾಮಾನ್ಯವಾಗಿ ಸ್ತ್ರೀಯರು ಋತುಚಕ್ರದ ಅವಧಿ ಸರಾಸರಿ 28 ದಿನಗಳು. ಹಾಗೇ ಋತುಸ್ರಾವದ ದಿನಗಳು ಸಾಮಾನ್ಯವಾಗಿ ಸರಾಸರಿ 5 ದಿನ. ಇದನ್ನು ಸಂಕೇತಿಸಲು ಮೇ ತಿಂಗಳು.
#Feelfree: ಪೀರಿಯೆಡ್ಸ್ ಟೈಮ್‌ನಲ್ಲಿ ಸೆಕ್ಸ್ ಬಗ್ಗೆ ಒಂದಿಷ್ಟು ಮಾಹಿತಿ ...
ಋತುಸ್ರಾವದ ಸಂದರ್ಭದಲ್ಲಿ ಮುರಿಯಬೇಕಾದ ಕೆಲವು ಮಿಥ್ಯೆಗಳು
- ಮಸಾಲೆ ಆಹಾರ ಪದಾರ್ಥ ಸೇವಿಸಬಾರದು:
ಹಾಗೇನೂ ಇಲ್ಲ. ಕೆಲವರಿಗೆ ಋತುಸ್ರಾವದ ಸಂದರ್ಭದಲ್ಲಿ ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಅಂಥವರು ಅದನ್ನು ಅವಾಯ್ಡ್ ಮಾಡಬೇಕು. ಉಳಿದವರು ಸೇವಿಸಬಹುದು.
- ಋತುಸ್ರಾವದ ರಕ್ತ ಅಶುದ್ಧ:
ಈ ರಕ್ತ ಅಶುದ್ಧವಲ್ಲ. ಅದೂ ಬೇರೆ ರಕ್ತದಂತೆಯೇ.
- ಧಾರ್ಮಿಕ ಸ್ಥಳಗಳಿಗೆ ಹೋಗಬಾರದು:
ಧಾಮಿಕ ಸ್ಥಳಗಳಿಗೂ ಋತುಸ್ರಾವಕ್ಕೂ ಸಂಬಂಧವೇ ಇಲ್ಲ. ಹೆಣ್ಣಿನ ಗರ್ಭಕೋಶ ತಿಂಗಳಿಡೀ ಮಗುವಿನ ಆಗಮನಕ್ಕೆ ತಕ್ಕ ಪದರವನ್ನು ನಿರ್ಮಿಸುತ್ತಿರುತ್ತದೆ. ಸರಿಯಾದ ಸಮಯದಲ್ಲಿ ವೀರ್ಯ ಪ್ರವೇಶಿಸಿ ಗರ್ಭ ಕಟ್ಟದಿದ್ದರೆ, ಆ ಪದರ ರಕ್ತದೊಂದಿಗೆ ಸೇರಿ ಹೊರ ಹರಿಯುತ್ತದೆ. ಇದೇ ಋತುಸ್ರಾವ.
- ಉಪ್ಪಿನಕಾಯಿ ಭರಣಿ ಮುಟ್ಟಬಾರದು:
ಅಡುಗೆ ಮನೆ ಪ್ರವೇಶಿಸಬಾರದು, ಉಪ್ಪಿನಕಾಯಿ ಭರಣಿ ಮುಟ್ಟಬಾರದು ಎಂಬುದರಲ್ಲಿ ಅರ್ಥವಿಲ್ಲ. ಈ ಸಂದರ್ಭದಲ್ಲಿ ಅಡುಗೆ ಮಾಡಿ ದಣಿಯಬಾರದು ಎಂಬ ದೃಷ್ಟಿಯಿಂದ ಈ ರೂಡಿ ಬಂದಿರಬಹುದು.
ಕೊರೊನಾ ಕಾಲದಲ್ಲಿ ಬೇಗ ಋತುಮತಿಯರಾಗುತ್ತಿದ್ದಾರೆ ಹೆಣ್ಮಕ್ಕಳು! ...
ಈ ಸಂದರ್ಭದಲ್ಲಿ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು?
- ಸರಿಯಾದ ಸ್ಯಾನಿಟರ್ ಪ್ಯಾಡ್ ಬಳಸಿ:
ಸ್ಯಾನಿಟರಿ ಪ್ಯಾಡ್, ಟ್ಯಾಂಪೂನ್, ಶಿ-ಕಪ್ ಹೀಗೆ ಯಾವುದಾದರೂ ಒಂದು ವಿಧಾನ, ನಿಮಗೆ ಅನುಕೂಲಕರ ಎನಿಸಿದ್ದನ್ನು ಬಳಸಿ. ಅದು ನಿಮಗೆ ಹಿತವಾಗಿರಲಿ. ಬಳಸಲು ಹಾಗೂ ಶುಚಿಗೊಳಿಸಲು ಸುಲಭವಾಗಿರಲಿ. ಅದರಿಂದ ತೊಡೆಸಂದಿಯಲ್ಲಿ ಕಿರಿಕಿರಿ, ತುರಿಕೆ, ಹುಣ್ಣು ಆಗದಂತಿರಲಿ.
- ಸಾಕಷ್ಟು ವಿಶ್ರಾಂತಿ ಸಿಗಲಿ:
ಋತುಸ್ರಾವದ ಸಮಯದಲ್ಲಿ ಅನಗತ್ಯ ಕೆಲಸಗಳನ್ನು ಹಚ್ಚಿಕೊಂಡು ದಣಿಯಬೇಡಿ. ಈ ಸಂದರ್ಭದಲ್ಲಿ ದೇಹಕ್ಕೆ ಸಾಕಷ್ಟು ವಿರಾಮ ಹಾಗೂ ಒಳ್ಳೆಯ ಆಹಾರ ಮುಖ್ಯ. ಚುರುಕಾಗಿರಿ, ನಿತ್ಯದಷ್ಟಲ್ಲದಿದ್ದರೂ ವ್ಯಾಯಾಮ ಮಾಡಿ.
- ನಿತ್ಯ ಸ್ನಾನ, ಸ್ವಚ್ಛತೆ
ಮುಟ್ಟಿನ ದಿನಗಳಲ್ಲಿ ಪ್ರತಿನಿತ್ಯ ಚೆನ್ನಾಗಿ ಸ್ನಾನ ಮಾಡುವುದು ಅಗತ್ಯ, ಇದು ಅನಗತ್ಯ ಸೋಂಕುಗಳನ್ನು ತಪ್ಪಿಸಲು ನೆರವಾಗುತ್ತದೆ. ಬಿಸಿನೀರಿನ ಸ್ನಾನದಿಂದ ಮೈಕೈ ನೋವು ಕೂಡ ಮಾಯವಾಗುತ್ತದೆ.
- ಮುಟ್ಟಿನ ಕಿಟ್ ನಿಮ್ಮೊಂದಿಗಿರಲಿ
ನೀವೆಲ್ಲೇ ಹೋದರೂ, ಋತುಸ್ರಾವದ ದಿನ ಸಮೀಪಿಸುತ್ತಿದೆ ಎಂದು ಗೊತ್ತಿದ್ದರೆ ನೀವು ಬಳಸುವ ಪ್ಯಾಡ್ ಅಥವಾ ಕಪ್ ಹೊಂದಿರಿ. ಅದರ ಜೊತೆಗೆ ನೀವು ಬಳಸುವ ನೋವಿನ ಎಣ್ಣೆ ಮತ್ತಿತರ ವಸ್ತುಗಳು ಇರಲಿ.
ಮೂತ್ರ ಹಿಡಿದಿಟ್ಟುಕೊಂಡ್ರೆ ಏನೆಲ್ಲ ಸಮಸ್ಯೆಗಳು ಕಾಡುತ್ತವೆ ಗೊತ್ತಾ? ...