ನಮ್ಮ ವಿದ್ಯಾರ್ಥಿಗಳನ್ನು, ಯುವಮನಸ್ಸುಗಳನ್ನು ಅರ್ಥ ಮಾಡಿಕೊಳ್ಳುವ ತುರ್ತು ನಮ್ಮದಾಗಬೇಕಿದೆ. ಇಂದಿನ ಯುವಕರ ಒತ್ತಡಗಳು, ಸಮಸ್ಯೆಯ ರೂಪಗಳು, ಎಲ್ಲವೂ ಬದಲಾಗಿದೆ. ಅವರ ಮಾತುಗಳಿಗೆ ಕಿವಿಯಾಗಿ, ಸೋತಾಗ ಬೆನ್ನೆಲುಬಾಗಿ, ಆದಷ್ಟು ನೆರವಾಗಿ ಉಳಿವುದು ನಾವು ಮಾಡಬೇಕಿರುವ ದೊಡ್ಡ ಕೆಲಸ.
ವಿಭಾ ಡೋಂಗ್ರೆ
ಮೇಡಂ, ನಾನು ಹೊರಟೆ. ಬಾಯ್.
- ಹೀಗೆ ಹೇಳಿ ಅಂದು ನನ್ನ ಅತ್ಯುತ್ಸಾಹಿ ವಿದ್ಯಾರ್ಥಿ ಕಾಲೇಜಿನಿಂದ ಹೊರಟಿದ್ದ. ಬಹುಶಃ ಅವನಂದು ಬಾರದೂರಿಗೆ ಹೊರಟಿದ್ದೇನೆ ಅನ್ನೋ ಸನ್ನೆ ಕೊಟ್ಟಿದ್ದ. ಸಿಕ್ಕಾಪಟ್ಟೆಲವಲವಿಕೆಯ, ತರಲೆ, ಪುಟಿವ ಚೈತನ್ಯದ ಹುಡುಗ ಈ ಮೊದಲೂ, ಸುಮ್ಮಸುಮ್ಮನೆ ನಮ್ಮ ಕೆಲಸದ ನಡುವೆ ಬಂದು ಮಾತನಾಡಿಸಿ ನಮಗೆ ರೇಗುವಂತೆ ಮಾಡುತ್ತಿದ್ದ. ಇದೂ ಅವನ ಅಂತಹುದೇ ಅಟೆನ್ಷನ್ ಸೀಕಿಂಗ್‌ನ ಮಾಮೂಲಿ ಸ್ವಭಾವ ಎಂದು ನಾನು ಅಕ್ಷರಶಃ ಇಗ್ನೋರ್ ಮಾಡಿಬಿಟ್ಟೆ.
ಪ್ರತಿದಿನದ ‘ಹೋಗ್ ಬರ್ತೀನಿ ಮೇಡಂ’ ಬದಲಿಗೆ ಅವತ್ತು ‘ನಾನು ಹೊರಟೆ’ ಎಂದು ವಾಕ್ಯ ಬದಲಾದದ್ದು ನನ್ನ ತಲೆಗೆ ನಾಟಲೇ ಇಲ್ಲ. ಅಂದು ಇಷ್ಟಗಲ ನಗೆ ನಕ್ಕು ಹೊರಟ ಹುಡುಗನನ್ನ ಮತ್ತೆ ನಾನು ನೋಡಿದ್ದು, ಬಿಳಿಬಟ್ಟೆಯಲ್ಲಿ. ಆತ ಚಿತೆಯೇರುವ ಮುನ್ನ.
ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಲ್ಲಿ ವಿಭಿನ್ನ ಎನ್ನುವಂತಿದ್ದ, ಯಾವ ಕೆಲಸ ಕೊಟ್ಟರೂ ಶ್ರದ್ಧೆಯಿಂದ ಮಾಡುತ್ತಿದ್ದ, ಯಾವುದೇ ಸ್ಪರ್ಧೆಗಳಿಗೆ ಹೋದರೂ ಬಹುಮಾನಗಳೊಂದಿಗೆ ಹಿಂದಿರುಗುತ್ತಿದ್ದ, ಕಷ್ಟಎಂದಾಗ ಮೊದಲು ಓಡಿ ಬರುತ್ತಿದ್ದ, ಸಹಾಯಕ್ಕೆ ಕೈ ನೀಡುತ್ತಿದ್ದ, ಸಿಕ್ಕಾಪಟ್ಟೆಪ್ರಚಲಿತ ವಿದ್ಯಮಾನಗಳನ್ನು ತಿಳಿದಿದ್ದ, ಒಟ್ಟಾರೆ ಒಂದೊಳ್ಳೆ ಜೀವವಾಗಿದ್ದ, ನೆಚ್ಚಿನ ವಿದ್ಯಾರ್ಥಿ ಅಂದು ನಸುರಾತ್ರಿ ಕುಣಿಕೆಗೆ ಕೊರಳೊಡ್ಡಿದ್ದ.
‘ಯೌವನಾವಸ್ಥೆ’- ನಾವೊಂದು ವ್ಯಕ್ತಿತ್ವವಾಗಿ ರೂಪುಗೊಳ್ಳುವ ಈ ವಯಸ್ಸಲ್ಲಿ ನಮ್ಮ ಮನಸ್ಸು ಗೊಂದಲದ ಗೂಡಾಗಿರುತ್ತದೆ. ಭೂತ-ವರ್ತಮಾನ-ಭವಿಷ್ಯಗಳ, ಮೆಲುಕು-ಯೋಚನೆ-ಜವಾಬ್ದಾರಿಯ ನಡುವೆ, ನಮ್ಮ ಮಾನಸಿಕ ಸ್ಥಿತಿಯ ಬಗೆಗಿನ ಕಾಳಜಿ ಮೂಲೆಗುಂಪಾಗುತ್ತದೆ.
ಈ ಯೋಚನೆಗಳು ನಮ್ಮೊಳಗೆ ಒತ್ತಡಗಳಾಗಿ ಪರಿವರ್ತನೆಯಾಗುತ್ತಿರುವುದಾಗಲಿ, ನಮ್ಮ ಚೈತನ್ಯವನ್ನು ಅವು ಕುಗ್ಗಿಸುತ್ತಿರುವುದಾಗಲಿ ತಿಳಿಯದೆ ಹೋಗಿ, ಮುಂದೊಂದು ದಿನ ಅದು ಅನುಭವಿಸಲಾಗದ ಯಾತನೆಯಾಗಿಯೂ, ಖಿನ್ನತೆಯಾಗಿಯೂ ಬದಲಾಗಿ, ಆತ್ಮಹತ್ಯೆಯಂಥ ಅತಿರೇಕಗಳಿಗೆ ನಮ್ಮನ್ನು ಕೊಂಡೊಯ್ಯಬಹುದು.
2019ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಕಚೇರಿ(ಎನ್‌ಸಿಆರ್‌ಬಿ) ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ ಗಂಟೆಗೆ ಒಬ್ಬರಂತೆ, ದಿನಕ್ಕೆ ಸರಾಸರಿ 28 ವಿದ್ಯಾರ್ಥಿಗಳು ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ ಎನ್ನುವ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.
ಕಾರಣಗಳು ಏನಿರಬಹುದು?
ಮೊದಲನೆಯದಾಗಿ ಒತ್ತಡಗಳಿಗೆ ಒಂದಷ್ಟುಸಾಮಾಜಿಕ-ವೈಯಕ್ತಿಕ ನಿರೀಕ್ಷೆಗಳು ಮುಖ್ಯವಾಗಬಹುದು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಶ್ರೇಣಿ ವಿಷಯದಲ್ಲಿ ಒತ್ತಡಗಳು. ಸಾಮಾಜಿಕವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವಿಕೆ, ಸಂಬಂಧ-ಸಂಪರ್ಕಗಳ ವಿಷಯದಲ್ಲಿ ಒತ್ತಡ. ವೈಯಕ್ತಿಕವಾಗಿ ತನ್ನ ಮೇಲೆ ತನಗೆ ಇರುವ ನಂಬಿಕೆ-ಅಪನಂಬಿಕೆಗಳು ಇವೆಲ್ಲವೂ ನಮ್ಮ ಯುವಕರನ್ನು ಗೊತ್ತಿಲ್ಲದ ರೀತಿಯಲ್ಲಿ ಬಾಧಿಸುತ್ತಾ ಹೋಗುತ್ತದೆ.
ಹೇಗೆ ಕಸದ ಬುಟ್ಟಿಯನ್ನು ಆಗಿಂದಾಗ್ಗೆ ಖಾಲಿ ಮಾಡದಿದ್ದರೆ ಅದು ಉಕ್ಕಿ ಹರಿಯುತ್ತದೆಯೋ, ಅಂತೆಯೇ ಒತ್ತಡಗಳನ್ನು ಆಗಿಂದಾಗ್ಗೆ ಬಗೆಹರಿಸಿಕೊಳ್ಳುತ್ತಾ ಹೋಗದಿದ್ದರೆ ಮುಂದೊಂದು ದಿನ ಅವು ಬುದ್ಧಿಯ ದಿಕ್ಕುತಪ್ಪಿಸಿ ಅತಿರೇಕದ ನಿರ್ಧಾರಗಳಿಗೆ ಕಾರಣವಾಗುತ್ತಾ ಹೋಗುತ್ತವೆ.
ಎಷ್ಟೋ ಬಾರಿ ನೀನಿನ್ನೂ ಓದ್ತಾ ಇದೀಯಾ. ನಿನಗೆಲ್ಲಿಂದ ಅರ್ಥವಾಗಬೇಕು ಒತ್ತಡಗಳ ಬಗ್ಗೆ ಎಂದು ನಮ್ಮ ಮನೆಯ ಮಕ್ಕಳನ್ನೇ ನಾವು ಪ್ರಶ್ನಿಸುವುದುಂಟು. ಆದರೆ, ಅವರವರ ಮನಸ್ಸಿನ ಶಕ್ತಿಗೆ, ಅವರವರ ಮಟ್ಟದ ಒತ್ತಡಗಳು ಹೆಚ್ಚಿರಬಹುದು ಎನ್ನುವುದನ್ನು ಎಲ್ಲರೂ ಅರಿತುಕೊಳ್ಳುವ ಅನಿವಾರ್ಯತೆ ಇದೆ.
ಕೆಲವು ವಾರ್ನಿಂಗ್ ಸನ್ನೆಗಳು
ಸಾಮಾನ್ಯವಾಗಿ ಆತ್ಮಹತ್ಯೆಯ ಯೋಚನೆಗಳನ್ನು ಹೊಂದಿರುವವರು ಅಥವಾ ಇದಕ್ಕಾಗಿ ಉಪಾಯವನ್ನು ಹೂಡುತ್ತಿರುವವರು, ಕೆಲವೊಂದಷ್ಟುಸನ್ನೆಗಳನ್ನು ಕೊಡಬಹುದು.
- ಮುಂದಾಗಬೇಕಿರುವ ಅಥವಾ ಅರ್ಧಕ್ಕೆ ನಿಂತಿರುವ ಕೆಲಸಗಳನ್ನು ಬೇಗ ಬೇಗ ಮುಗಿಸುವುದು.
- ನೆಚ್ಚಿನ ವಿಷಯಗಳನ್ನು ಅನುಭವಿಸುವುದು, ವ್ಯಕ್ತಿಗಳನ್ನು ಭೇಟಿಯಾಗುವುದು.
- ಅತಿಯಾದ ಭಾವನೆಗಳನ್ನು ಹೊರಹಾಕುವುದು. ಉದಾಹರಣೆಗೆ: ಯಾರಿಗೂ ಸಂದೇಹ ಬರಬಾರದೆಂಬ ಉದ್ದೇಶದಿಂದ ತುಂಬಾ ಖುಷಿಯಿಂದ ಇರುವುದು, ಚಟುವಟಿಕೆಯಿಂದ ಇರುವುದು.
- ತಾನಿದ್ದಿದ್ದರೆ ಇದು ನನ್ನ ಕೆಲಸ ಎಂದು ರೂಪಿಸಿಕೊಂಡಿರುವ ಜವಾಬ್ದಾರಿಗಳನ್ನು ನಿಕಟವರ್ತಿಗಳಿಗೆ ಒಪ್ಪಿಸುವುದು.
- ಯಾವುದಾದರೂ ಒಂದು ರೀತಿಯಲ್ಲಿ ಹತ್ತಿರದವರಿಗೆ, ಪರಿಚಯದವರಿಗೆ ಒಗಟುಗಳ ರೂಪದಲ್ಲಿ ಸಾವಿನ ಸುಳಿವು ನೀಡುವುದು. ಉದಾಹರಣೆಗೆ: ನಾನು ಹೊರಟೆ.
ಡಿಪ್ರೆಶನ್‌ಗೆ ಹೋದರೂ ಚೇತರಿಸಿಕೊಂಡ ಸೆಲೆಬ್ರಿಟಿಗಳು
ನಮ್ಮ ವಿದ್ಯಾರ್ಥಿಯು ಇಲ್ಲವಾದ ನಂತರ ಆತನು ಇಂತಹ ಸನ್ನೆಗಳನ್ನು ಕೊಟ್ಟಿದ್ದಾನೆ ಎಂದು ನಮ್ಮ ನಡುವೆಯೇ ಚರ್ಚೆಗಳು ಶುರುವಾಯಿತು. ಇದು ನಮ್ಮ ಪರಾಮರ್ಶೆ. ಆದರೂ, ನಮ್ಮ ಮುಂದಿರುವ ಯುವ ಸಮೂಹವನ್ನು ಕಾಪಾಡಿಕೊಳ್ಳುವ ದೊಡ್ಡ ಸವಾಲು ನಮ್ಮೆದುರಿಗಿದೆ ಎನ್ನುವ ಗಂಭೀರ ಸತ್ಯವೊಂದು ನಮಗರಿವಾಯಿತು.
ಆದಷ್ಟುನಮ್ಮ ವಿದ್ಯಾರ್ಥಿಗಳನ್ನು, ಯುವಮನಸ್ಸುಗಳನ್ನು ಅರ್ಥಮಾಡಿಕೊಳ್ಳುವ ತುರ್ತು ನಮ್ಮದಾಗಬೇಕಿದೆ. ಇಂದಿನ ಯುವಕರ ಒತ್ತಡಗಳು, ಸಮಸ್ಯೆಯ ರೂಪಗಳು, ಎಲ್ಲವೂ ಬದಲಾಗಿದೆ. ಅವರ ಮಾತುಗಳಿಗೆ ಕಿವಿಯಾಗಿ, ಸೋತಾಗ ಬೆನ್ನೆಲುಬಾಗಿ, ಆದಷ್ಟುನೆರವಾಗಿ ಉಳಿವುದು ನಾವು ಮಾಡಬೇಕಿರುವ ದೊಡ್ಡ ಕೆಲಸ.
ಅತಿಯಾದ ಒಂಟಿತನ ಮನುಷ್ಯನ ವಿಕಸನಕ್ಕೆ ಮಾರಿ!
ಈತನ್ನೊಬ್ಬನ ದುರಂತ ನಿರ್ಗಮನವನ್ನು ನಮ್ಮ ಕಾಲೇಜಿನ ಆವರಣ, ಒಂದು ವರ್ಷ ಕಳೆದರೂ, ಇನ್ನೂ ಚೇತರಿಸಿಕೊಂಡಿಲ್ಲ. ಇವತ್ತಿಗೂ ಒಂದಿಲ್ಲೊಂದು ಚರ್ಚೆಗಳೊಳಗೆ ಆತ ನೆನಪಿನೊಂದಿಗೆ ಒಳನುಗ್ಗಿ ಬಿಡುತ್ತಾನೆ. ಮತ್ತು ಕೊನೆಗೊಂದಿಷ್ಟುಮೌನ ಉಳಿಸಿ ಹೊರಡುತ್ತಾನೆ.
ತರಗತಿಯಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ಸ್ಫುಟವಾಗಿ ಉತ್ತರಿಸುತ್ತಿದ್ದ ಹುಡುಗ, ಹೋಗುವಾಗ ಉತ್ತರ ಸಿಗದ ಹಲವು ಪ್ರಶ್ನೆಗಳನ್ನು ನಮ್ಮೆದುರಿಗಿತ್ತು ಹೊರಟುಬಿಟ್ಟ. ಕಾಲೇಜಿನಲ್ಲಿ ಅವನ ನೆನಪಿನ ಚಿತ್ರಗಳಿಗೇನೂ ಕೊರತೆಯಿಲ್ಲ. ಅವನು ತಂದ ಬಹುಮಾನಗಳು, ಅವನ ಲೇಖನಗಳು, ಆತನ ಪ್ರಾಜೆಕ್ಟ್ ವರ್ಕ್ಗಳು... ಆದರೂ, ಅವನ ಇಲ್ಲದಿರುವಿಕೆಯ ಅಲ್ಲಗಳೆವುದೆಂತು.
