Asianet Suvarna News

ಅತಿಯಾದ ಒಂಟಿತನ ಮನುಷ್ಯನ ವಿಕಸನಕ್ಕೆ ಮಾರಿ!

‘ಏಯ್, ಅವನೇನು ಯಾರಲ್ಲಿಯೂ ಮಾತನಾಡುವುದೇ ಇಲ್ಲ. ಒಬ್ಬನೇ ಸುಮ್ಮನೆ ತನ್ನ ಪಾಡಿಗೆ ಕುಳಿತಿರ್ತಾನೆ. ಗುಮ್ಮನಗುಸುಕ ಅವನು. ಯಾರನ್ನು ಅವನ ಬಳಿ ಬಿಟ್ಟುಕೊಳ್ಳುವುದಿಲ್ಲ’ ಹೀಗೆ ಕೆಲವರನ್ನು ನೋಡಿದಾಗ ನಾವು ಹೇಳುತ್ತೇವೆ. 

how loneliness affects mental health vcs
Author
Bangalore, First Published Jul 5, 2021, 10:08 AM IST
  • Facebook
  • Twitter
  • Whatsapp

ಶುಭಾ ಗಿರಣಿಮನೆ

ನೂರರಲ್ಲಿ ಒಂದಿಬ್ಬರಾದರೂ ಈ ರೀತಿಯ ಏಕಾಂಗಿತನದಲ್ಲಿ ಜೀವಿಸುವವರನ್ನು ನಾವು ಕಾಣುತ್ತೇವೆ. ಅವರದೇ ಯಾವುದೋ ಲೋಕದಲ್ಲಿ ಇದ್ದುಬಿಡುವುದು ಒಂದು ಹವ್ಯಾಸ ಎನ್ನುವಂತೆ ಇರುತ್ತಾರೆ. ಒಂಟಿತನ ಅಥವಾ ಏಕಾಂಗಿತನ ಪ್ರತೀ ಮನುಷ್ಯನು ಒಂದಲ್ಲ ಒಂದು ಹಂತದಲ್ಲಿ ಬಯಸುತ್ತಾನೆ. ಅದು ಒಂದಷ್ಟು ಮನಸ್ಸಿಗೆ ರಿಲ್ಯಾಕ್ಸ್ ಕೊಡುತ್ತದೆ. ಆದರೆ ಸದಾ ಕಾಲ ಸುಮ್ಮನೆ ಇರುವುದು, ತನ್ನ ಕೆಲಸಕ್ಕೆ ಮಾತ್ರ ಮಾತನಾಡಿ ಎಲ್ಲಿಯಾದರೂ ಒಬ್ಬರೆ ಕುಳಿತಿರುವುದು, ಅವರ ಕೆಲಸದ ಹೊರತಾಗಿ ಬೇರೆಯವರೊಟ್ಟಿಗೆ ಬೆರೆಯದೇ ಇರುವುದು ಅಷ್ಟು ಒಳ್ಳೆಯದಲ್ಲ.

ಹಿರಿಯ ಮನುಷ್ಯರೊಬ್ಬರು ತೀರ ಇತ್ತಿಚಿಗೆ ಕುಶಲ ವಿಚಾರಿಸಲು ಪೋನ್ ಮಾಡಿದ್ದರು. ಸಾಕಷ್ಟು ವಿಚಾರಗಳನ್ನು ನಾವು ಮಾತನಾಡುತ್ತ ಅವರ ಮಗಳ ಮಗನ ಬಗ್ಗೆ ವಿಚಾರಿಸಿದೆ. ತನ್ನ ಮೊಮ್ಮಗ ಈಗ ಸ್ವಲ್ಪ ಸುಧಾರಿಸಿದ್ದಾನೆ. ಮೊದಲಿಗಿಂತ ಪರವಾಗಿಲ್ಲ ಎನ್ನುವ ಉತ್ತರ ಕೊಟ್ಟರು. ಅವರ ಮೊಮ್ಮಗ ಹದಿನಾಲ್ಕು ವರ್ಷದ ಹುಡುಗ. ಮೊದಲೆಲ್ಲ ಚುರುಕಾಗಿಯೇ ಇದ್ದ. ವಿದ್ಯೆಯಲ್ಲಿ ಒಂದಷ್ಟು ಹಿಂದೆ ಬಿದ್ದಿದ್ದ. ಮಗ ಚೆನ್ನಾಗಿ ಓದಬೇಕು ಎನ್ನುವದು ತಾಯಿಯ ಆಸೆ. ಅದಕ್ಕಾಗಿ ನಿತ್ಯ ಓದಲು ಹೇಳುವುದು, ತಾವೇ ಕುಳಿತು ಒಂದಷ್ಟು ಅಭ್ಯಾಸವನ್ನು ಮಾಡಿಸುವುದು ಮಾಡಿದರು. ಹಾಗಂತ ತಾಯಿ ಬಯ್ಯುವುದೋ ಹೊಡೆಯುವುದೋ ಮಾಡಿರಲಿಲ್ಲ. ಆದರೂ ಆ ಹುಡುಗನಿಗೆ ಈ ಓದು ಎನ್ನುವುದೇ ಒಂದು ದೊಡ್ಡ ತಲೆ ನೋವು ಎನ್ನಿಸಿಬಿಟ್ಟಿತು. ಏಳನೇ ತರಗತಿ ಮುಗಿಸುವಷ್ಟರಲ್ಲೆ ಹುಡುಗ ಒಂಟಿತನ ಬಯಸತೊಡಗಿದ್ದ. ಒಬ್ಬನೇ ರೂಮಲ್ಲಿ ಕುರುವುದು. ಊಟ ಮುಗಿಯಿತೆಂದರೆ ಎಲ್ಲೋ ಬೆಟ್ಟದಲ್ಲಿ ನಡೆಯುವುದು. ಮೊಬೈಲ್ ಬಳಕೆಯೂ ಇಲ್ಲ, ಸ್ನೇಹಿತರೂ ಬೇಡ. ಮನೆಗೆ ನೆಂಟರಿಷ್ಟರು ಬಂದರೆ ಅವರ ಜೊತೆ ಒಂದು ಮಾತನ್ನು ಆಡದೇ ಮೌನವಾಗಿರುತ್ತಿದ್ದ.

ಈ ಬದಲಾವಣೆ ಮನೆಯವರಿಗೆ ಚಿಂತೆಗೀಡುಮಾಡಿತು. ಹತ್ತನೇ ತರಗತಿಗೆ ಬರುವಷ್ಟರಲ್ಲಿ ತಾಯಿ ಓದು ಎನ್ನುವುದನ್ನು ನಿಲ್ಲಿಸಿದರು. ಹೇಗಾದರೂ ಇರಲಿ, ಓದುವುದೇ ಜೀವನ ಅಲ್ಲ ಎನ್ನುವುದನ್ನು ಅರಿತವರೇ ಆಗಿದ್ದರಿಂದ ಮಗನಿಗೆ ಯಾವುದೇ ಒತ್ತಡ ತಂದೆ ತಾಯಿ ಹಾಕಲಿಲ್ಲ. ಆದರೂ ಮತ್ತಷ್ಟು ಆತ ಒಂಟಿತನ ಬಯಸುತ್ತ ಹೆತ್ತವರಿಂದ ದೂರ ಸರಿದ. ವೈದ್ಯರಿಗೆ ತೋರಿಸಿದಾಗ ಇದು ಯಾವುದೇ ಖಾಯಿಲೆಗೆ ಸಂಬಂಧಿಸಿದ್ದಲ್ಲ. ತಾನು ಒಂಟಿಯಾಗಿರಬೇಕು ಎಂದು ಬಯಸಿದ್ದಾನೆ. ಅದಕ್ಕೆ ಅವನೇ ಕಾರಣ. ನಾಲ್ಕಾರು ಜನ ಇರುವಲ್ಲಿಯೇ ಅವನನ್ನು ಇಟ್ಟುಕೊಂಡು ಆಗಾಗ ಮಾತನಾಡಿಸಬೇಕು ಅಂತೇನೋ ಉತ್ತರ ಬಂದಿತ್ತು.

ಯೊರೊಟ್ಟಿಗೂ ಮಿಂಗಲ್ ಆಗೋಲ್ಲ ಅನ್ನೋರನ್ನು ಕಾಡುತ್ತೆ ಖಿನ್ನತೆ!

ಹುಡುಗ ದಿನದಿನವೂ ಮತ್ತಷ್ಟು ಏಕಾಂಗಿಯಾದ. ಕಾರಣ ಅವನ ದೃಷ್ಟಿಯಲ್ಲಿ ಮನುಷ್ಯ ಒಂದು ಜೀವಿ. ಅವನಿಗೆ ಊಟಕ್ಕೆ, ತೊಡಲಿಕ್ಕೆ ಇದ್ದ ಮೇಲೆ ಮತ್ಯಾಕೆ ದುಡಿಯಬೇಕು. ಯಾರಲ್ಲಿಯೋ ಮಾತನಾಡಿಕೊಂಡು ನಂತರ ಅವನು ಹೀಗೆ ಮಾತನಾಡಿದ, ಹಾಗೆ ಹೇಳಿದ ಎಂದು ಹೀಯಾಳಿಸಿಕೊಳ್ಳುವುದು ಯಾಕೆ? ತನ್ನೊಟ್ಟಿಗಿನ ಭ್ರಮಾಲೋಕದಲ್ಲಿ ಯಾರೂ ಬಂದು ತೊಂದರೆ ಕೊಡುವುದಿಲ್ಲ ಹೀಗೆ ಗ್ರಹಿಸಿ ಬಿಟ್ಟಿದ್ದ. ಈ ಮನಸ್ಥಿತಿಯಿಂದ ಹೊರಗೆ ತರುವುದು ಸುಲಭವಾಗಿರಲಿಲ್ಲ. ಹಾಗಾಗಿ ಅವನ ಪಾಲಕರು ಉಪಾಯವನ್ನು ಮಾಡಿದರು. ತಿಳುವಳಿಕೆಯೇ ಇಲ್ಲದ ಹುಡುಗನೇನು ಅಲ್ಲ. ಅವನಿಗೆ ತಿಳಿಸಿ ಹೇಳುವುದಕ್ಕಿಂತ ಒಂದು ಕೆಲಸವನ್ನು ಹಚ್ಚಿದರೆ ಕೊನೆಯ ಪಕ್ಷ ಆ ಕೆಲಸದಲ್ಲಿಯಾದರೂ ತನ್ನನ್ನು ತೊಡಗಿಸಿಕೊಳ್ಳಬಹುದು ಅಂತ. ಹಾಗಾಗಿ ಮನೆಯ ಪಕ್ಕದಲ್ಲಿರುವ ಅನಾಥಾಶ್ರಮದಲ್ಲಿ ಪುಟ್ಟ ಗಂಡು ಮಕ್ಕಳನ್ನು ಆಟ ಆಡಿಸುವ ಕೆಲಸ. ಅದನ್ನು ಈ ಪಾಲಕರೆ ಆಡಳಿತ ಮಂಡಳಿಯಲ್ಲಿ ಕೇಳಿಕೊಂಡು ಸೃಷ್ಟಿಸಿದ ಕೆಲಸ.

ಮೊದಲೆರಡು ದಿನ ಆ ಮಕ್ಕಳಿಂದ ದೂರ ಓಡಿದ ಹುಡುಗ. ಆದರೆ ಪುಟ್ಟ ಹುಡುಗರು ಅಣ್ಣ ಅಣ್ಣ ಎಂದು ಹಿಂಬಾಲಿಸಿದರು. ಆಟವಾಡಿಸು ಎಂದರು. ಕಥೆ ಹೇಳು ಎಂದು ದುಂಬಾಲು ಬಿದ್ದರು. ಪುಟ್ಟ ಮಕ್ಕಳ ಕೋರಿಕೆ ಈಡೇರಿಸದೇ ಇರಲಾಗದೇ ಅವರೊಟ್ಟಿಗೆ ನಿಧಾನವಾಗಿ ಬೆರೆಯತೊಡಗಿದ. ಕಥೆ ಹೇಳಿದ. ಊಟ ಮಾಡಿದ. ಮಕ್ಕಳ ಜೊತೆ ಮಗುವಾಗಿ ಬೆರೆಯುತ್ತ ಈಗ ಸಹಜಸ್ಥಿತಿಗೆ ಮರಳುತ್ತಿರುವುದು ಸಂತಸದ ವಿಚಾರ.

ಅಜ್ಜಿ ಬಿಟ್ಹೋದ ಮೇಲೆ ಒಂಟಿ ಅನಿಸ್ತಿದೆ..ಬಾಂಧವ್ಯದ ಬೇನೆಗೆ ಮದ್ದು 

ಮನುಷ್ಯ ಯಾವುದು ತನಗೆ ಬೇಡ ಎಂದು ಗಟ್ಟಿ ನಿರ್ಧಾರ ಮಾಡುತ್ತಾನೋ ಅದರತ್ತ ತಿರುಗಿಯು ನೋಡುವುದಿಲ್ಲ. ಅಷ್ಟು ಶಕ್ತಿ ಮನುಷ್ಯನಿಗಿದೆ. ಆದರೆ ಕೆಲವು ಬಾರಿ ಇಂಥಾ ಗಟ್ಟಿ ನಿರ್ಧಾರ ಸಹಜತೆಯಿಂದ ವಿಭಿನ್ನ ನಡುವಳಿಕೆಯತ್ತ ಮನುಷ್ಯ ಸಾಗುತ್ತಾನೆ. ತಾನು ಸುಖವಾಗಿದ್ದೇನೆ ಎನ್ನುವ ಭ್ರಮೆಯಲ್ಲಿ ಇರುತ್ತಾನೆ. ಆದರೆ ಈ ಭ್ರಮಾಲೋಕದಿಂದ ಹೆತ್ತವರು, ತನ್ನ ಸುತ್ತಲಿನವರಿಗೆ ಬೇಸರವಾಗುತ್ತದೆ ಎನ್ನುವುದು ತಿಳಿಯುವುದಿಲ್ಲ.

ಎಷ್ಟೋ ಕಡೆ ಮಕ್ಕಳು ಅಥವಾ ವಯಸ್ಸಾದವರಿಗೆ ಈ ಲೋಕದ ಜಂಜಾಟವೇ ದೊಡ್ಡದು, ತಾವು ಏಕಾಂಗಿಯಾಗಬೇಕು ಎನ್ನುವ ಹಠಕ್ಕೆ ಬಿದ್ದು, ಒಂಟಿತನದಲ್ಲೇ ಹಗಲು ರಾತ್ರಿ ಕಳೆದು ಮೆಂಟಲಿ ತೊಂದರೆಗೆ ಒಳಗಾಗುವುದು ಇದೆ. ನಂತರದಲ್ಲಿ ಅಧಿಕ ಸಿಟ್ಟು ಮಾಡುವುದು, ಹುಚ್ಚರಂತೆ ಹಲುಬುವುದು, ಎದುರಿಗಿದ್ದವರಿಗೆ ಸುಮ್ಮಸುಮ್ಮನೆ ಹೊಡೆದುಬಿಡುವುದು ಹೀಗೆಲ್ಲ ಮಾಡುವುದು ಇದೆ. ಬಾಲ್ಯದಿಂದಲೇ ಮಕ್ಕಳನ್ನು ಆದಷ್ಟು ಜನರೊಟ್ಟಿಗೆ ಬೆರೆಯಲು ಬಿಡಬೇಕು. ಒಂಟಿಯಾಗಿ ಇರುವುದು ಸಹಜಸ್ಥಿತಿಯಲ್ಲಿದ್ದರೆ ಸರಿ ಅದರಲ್ಲಿ ಬದಲಾವಣೆಯ ಸಣ್ಣ ಸಂಶಯ ಬಂದರೂ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

Follow Us:
Download App:
  • android
  • ios