Asianet Suvarna News Asianet Suvarna News

Corona Virus ಎಂದರೆ ಬರೀ ಜ್ವರ, ಉಸಿರಾಟದ ಸಮಸ್ಯೆಯಲ್ಲ, ಇನ್ನೂ ಹಲ ಲಕ್ಷಣಗಳಿವೆ..

ಯಾವುದೇ ಒಂದು ರೋಗದ ಲಕ್ಷಣ ತಿಳಿದುಕೊಂಡಾಗ ಅದರಿಂದ ಉಂಟಾಗಬಹುದಾದ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಕೋವಿಡ್‌ 19ನ ಈ ಕೆಲವು ಲಕ್ಷಣಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇರುವುದಿಲ್ಲ.

Unknown corona virus symptoms you should be aware of
Author
Bangalore, First Published Jan 5, 2022, 10:19 AM IST

ಕೋವಿಡ್ 19(covid) ಸಾಂಕ್ರಾಮಿಕ ರೋಗ ಆಯ್ತು ಹೋಯ್ತು ಎನ್ನದೇ ಇನ್ನೂ ಸುದ್ದಿಯಲ್ಲಿದೆ. ಇದರ ಮುಖ್ಯ ರೋಗ ಲಕ್ಷಣಗಳ(symptoms)ಂತೂ ಎಲ್ಲರಿಗೂ ಚಿರ ಪರಿಚಿತವಾಗಿವೆ. ಸಾಮಾನ್ಯ ಜ್ವರ, ಒಣಕೆಮ್ಮು ಮತ್ತು ಸುಸ್ತು ಇದನ್ನು ಹೊರತುಪಡಿಸಿ ಉಸಿರಾಟದ ತೊಂದರೆ, ಸ್ನಾಯು ನೋವು, ಶೀತ, ಗಂಟಲು ನೋವು, ತಲೆನೋವು, ಎದೆ ನೋವು ಇದಿಷ್ಟು ರೋಗಲಕ್ಷಣಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇರುತ್ತದೆ. ಆದರೆ, ಇನ್ನೂ ಕೆಲ ಅಪರೂಪದ ಲಕ್ಷಣಗಳು ಕೂಡಾ ಕರೋನಾ ವೈರಸ್ ಕಾರಣದಿಂದ ಕಾಣಿಸಿಕೊಳ್ಳುತ್ತವೆ ಮತ್ತು ಕೆಲವೊಮ್ಮೆ ಅವೇ ಪ್ರಮುಖ ಲಕ್ಷಣವಾಗಿಯೂ ಇರುತ್ತವೆ. ಅಂಥ ಲಕ್ಷಣಗಳು ಯಾವೆಲ್ಲ ನೋಡೋಣ..

ಜಠರಗರುಳಿನ ಲಕ್ಷಣಗಳು(gastrointestinal symptoms)
ಕೊರೋನಾ ಇದ್ದಾಗ ಕೆಲ ಪ್ರಕರಣಗಳಲ್ಲಿ ವಾಂತಿ, ಬೇಧಿಯೂ ಉಂಟಾಗಬಹುದು.  ಇದು ಕೆಲವೊಮ್ಮೆ ಜ್ವರ ಹಾಗೂ ಉಸಿರಾಟದ ತೊಂದರೆಯ ಲಕ್ಷಣಗಳಿಗೂ ಮುನ್ನವೇ ಕಂಡುಬರಬಹುದು. ಇದಲ್ಲದೆ, ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಹೊಟ್ಟೆಯಲ್ಲಿ ಸಂಕಟ ಮುಂತಾದ ಲಕ್ಷಣಗಳು ಕೂಡಾ ಕೋವಿಡ್‌ನಲ್ಲಿ ಕಂಡು ಬರಬಹುದು. 

ವಾಸನೆ ಹಾಗೂ ರುಚಿ ಅನುಭವಕ್ಕೆ ಬಾರದೆ ಇರುವುದು
ಕೋವಿಡ್ 19 ರೋಗವನ್ನು ಮೊದಲು ಗುರುತಿಸಿಕೊಳ್ಳಬಹುದಾದದ್ದೇ ವಾಸನೆ ಕಳೆದುಕೊಂಡ ಅನುಭವದ ಮೂಲಕ. ಅದಷ್ಟೇ ಅಲ್ಲ, ನಾಲಿಗೆ ಕೂಡಾ ರುಚಿ ಕಳೆದುಕೊಂಡು ಯಾವೊಂದು ಆಹಾರವೂ ಚೆನ್ನಾಗಿಲ್ಲ ಎನಿಸಬಹುದು. ಮನೆಯ ಇತರೆಲ್ಲ ಸದಸ್ಯರಿಗೂ ಚೆನ್ನಾಗಿರುವ ಊಟದ ಬಗ್ಗೆ ಒಬ್ಬರು ಮಾತ್ರ  ಪದೇ ಪದೇ ದೂರಲು ಆರಂಭಿಸಿದರೆ ಅವರಿಗೆ ಕೋವಿಡ್ ಟೆಸ್ಟ್ ಮಾಡಿಸುವುದೊಳಿತು. ವಾಸನೆ ಅಥವಾ ರುಚಿಯ ನಷ್ಟವು ಸಾಮಾನ್ಯವಾಗಿ 30 ದಿನಗಳಲ್ಲಿ ಪರಿಹಾರವಾಗುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸುತ್ತವೆ. ಆದರೆ ಅಪರೂಪದ ಪ್ರಕರಣಗಳಲ್ಲಿ ವಾಸನೆ ಗ್ರಹಣ ಶಕ್ತಿ ವಾಪಸ್ ಬರದೇ ಉಳಿದಿರುವುದೂ ಉಂಟು.

ಚರ್ಮದಲ್ಲಿ ಬದಲಾವಣೆ (Skin changes)
ಕೋವಿಡ್ 19 ಇದ್ದಾಗ ಚರ್ಮಕ್ಕೆ ಸಂಬಂಧ ಪಟ್ಟ ಕೆಲವು ಲಕ್ಷಣಗಳು ಕೂಡಾ ಕಾಣಬಹುದು. ಚರ್ಮ ಚಪ್ಪಟೆಯಾಗುವುದು(flat), ಕೆಂಪಗಿನ  ರಾಷಸ್ (red rashes) ಏಳುವುದು, ಸಣ್ಣ ಗುಳ್ಳೆಗಳು ಕೈ ಬೆರಳು ಹಾಗೂ ಕಾಲ್ಬೆರಳುಗಳ(finger toes) ನಡುವಿನಲ್ಲಿ ಕಾಣಿಸಿಕೊಳ್ಳಬಹುದು. ಇಂಥ ಲಕ್ಷಣಗಳು ಹೆಚ್ಚಾಗಿ ಸಣ್ಣ ಮಕ್ಕಳು ಹಾಗೂ ಯುವಕರಲ್ಲಿ(youth) ಕಂಡುಬರುತ್ತದೆ. ಕಾಲು ಬೆರಳುಗಳಲ್ಲಿ ಊತ(swelling) ಕಂಡು ಬರುವುದು, ಗುಳ್ಳೆಗಳಾಗುವುದು, ಚರ್ಮ ಒರಟಾಗುವುದು(rough skin), ನೋವು ಕೂಡ ಕಾಣಿಸಿಕೊಳ್ಳಬಹುದು. ಇದಿಷ್ಟೇ ಅಲ್ಲದೆ ಚರ್ಮದ ಕೆಳಭಾಗದಲ್ಲಿ ಕೀವು ಉಂಟಾಗಬಹುದು. ಸಾಮಾನ್ಯವಾಗಿ ಈ ರೋಗಲಕ್ಷಣವು  ಹತ್ತರಿಂದ 14 ದಿನದಿಂದ ತಿಂಗಳುಗಳವರೆಗೆ ಇರುತ್ತದೆ. 

ಗೊಂದಲದ (confusion) ಮನಸ್ಥಿತಿ ಹಾಗೂ ಕಣ್ಣಿನ ತೊಂದರೆಗಳು
ಗೊಂದಲಗೊಂಡ ಮನಸ್ಥಿತಿ ಹೆಚ್ಚಿನದಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದೆ. ತೀವ್ರವಾದ ಗೊಂದಲ ಕೋವಿಡ್ 19ನ ಮುಖ್ಯ ಅಥವಾ ಏಕೈಕ ಲಕ್ಷಣವೂ ಆಗಿರಬಹುದು. 
ಇನ್ನು ಕೆಲ ಪ್ರಕರಣಗಳಲ್ಲಿ ಕಣ್ಣಿನ ತೊಂದರೆ ಕೂಡಾ ಕಾಣಿಸಿಕೊಳ್ಳುತ್ತದೆ. ಬೆಳಕನ್ನು ನೋಡಲು ಕಷ್ಟವಾಗುವುದು, ಕಣ್ಣುಗಳು ನೋಯುವುದು, ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಳ್ಳುವುದು ಮುಂತಾದ ಸಮಸ್ಯೆ ಎದುರಿಸಬೇಕಾಗಬಹುದು. 

ಈ ಯಾವುದೇ ಲಕ್ಷಣಗಳು ಕಂಡುಬರುತ್ತಿದ್ದರೂ ಗಾಬರಿಯಾಗದೆ ನಿಮಗೆ ತಿಳಿದಿರುವ ವೈದ್ಯರನ್ನು ಕೂಡಲೇ ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ. ಧೈರ್ಯದಿಂದ ಎದುರಿಸುವ ಮನಸ್ಥಿತಿಯಿದ್ದರೆ ಕೊರೋನಾ ಮಾತ್ರವಲ್ಲ, ಯಾವ ಕಾಯಿಲೆಯಾದರೂ ವಾಸಿಯಾದೀತು. ಎಲ್ಲಕ್ಕಿಂತ ಮುಖ್ಯವಾಗಿ ಕಾಯಿಲೆ ಹತ್ತಿರ ಸುಳಿಯದಂತೆ ನೋಡಿಕೊಳ್ಳಲು ಎಚ್ಚರ ವಹಿಸಬೇಕು. ಹೊರಗೆ ಹೋಗುವಾಗ ಮಾಸ್ಕ್‌ (mask) ಧರಿಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಇಮ್ಯೂನಿಟಿ ಹೆಚ್ಚಿಸುವ ಆಹಾರವನ್ನೇ ಸೇವಿಸಿ. ಮನಸ್ಥಿತಿ ಪಾಸಿಟಿವ್ ಆಗಿದ್ದರೆ ಕೋವಿಡ್ ನೆಗೆಟಿವ್ ಆಗಲೇಬೇಕು.

Follow Us:
Download App:
  • android
  • ios