Asianet Suvarna News Asianet Suvarna News

ಈ ಸಪ್ಲಿಮೆಂಟ್‌ ತಗೊಂಡ್ರೆ ಲ್ಯಾಬ್‌ ಟೆಸ್ಟ್‌ ರಿಸಲ್ಟೇ ತಲೆಕೆಳಗಾಗಿ ಹೋಗುತ್ತೆ ಹುಷಾರ್!

ವೈದ್ಯರ ಸಲಹೆ ಇಲ್ಲದೇ ವಿಟಮಿನ್‌ ಎ, ವಿಟಮಿನ್‌ ಇ, ಐರನ್‌ ಮತ್ತು ವಯೋಟಿನ್‌ ಈ ನಾಲ್ಕು ಸಪ್ಲಿಮೆಂಟ್‌ ಗಳನ್ನು ಸೇವಿಸುವ ಪರಿಪಾಠ ಸಮಾಜದಲ್ಲಿ ಹೆಚ್ಚುತ್ತಿದೆ. ದೇಹದ ಬೆಳವಣಿಗೆಗೆ, ಮಿದುಳಿಗೆ ಅನುಕೂಲ ಎಂದು ಯುವಜನರು ಹಲವು ರೀತಿಯ ಸಪ್ಲಿಮೆಂಟ್‌ ಗಳನ್ನು ಸೇವನೆ ಮಾಡುವುದು ಟ್ರೆಂಡ್‌ ಆಗುತ್ತಿದೆ. ಆದರೆ, ಇದು ಖಂಡಿತವಾಗಿ ಆರೋಗ್ಯದ ಮೇಲೆ ಬೇರೊಂದು ರೀತಿಯಲ್ಲಿ ಸಮಸ್ಯೆ ಉಂಟುಮಾಡಬಹುದು. 
 

This supplements dangerous to health sum
Author
First Published Jan 16, 2024, 5:38 PM IST

ಕೆಲವು ವಿಟಮಿನ್‌ ಮತ್ತು ಮಿನರಲ್‌ ಸಪ್ಲಿಮೆಂಟ್‌ ಗಳು ಆರೋಗ್ಯಕ್ಕೆ ಒಳ್ಳೆಯದೇ ಆಗಿದ್ದರೂ ಅವುಗಳನ್ನು ಮೇಲಿಂದ ಮೇಲೆ ಅಥವಾ ಯಾವುದೋ ನಿರ್ದಿಷ್ಟ ಒಂದು ಕಾರಣಕ್ಕೋಸ್ಕರ ತೆಗೆದುಕೊಳ್ಳಬಾರದು. ಕೂದಲಿನ, ಉಗುರಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಬಯೋಟಿನ್‌ ತೆಗೆದುಕೊಳ್ಳುವುದು, ಕಣ್ಣುಗಳ ದೃಷ್ಟಿ ಚೆನ್ನಾಗಿರಲೆಂದು ವಿಟಮಿನ್‌ ಎ ಸಪ್ಲಿಮೆಂಟ್‌ ಸೇವಿಸುವುದು, ಹಾಗೆಯೇ ಕಬ್ಬಿಣಾಂಶ, ಕ್ಯಾಲ್ಸಿಯಂ ಮಾತ್ರೆಗಳನ್ನು ವೈದ್ಯರ ಶಿಫಾರಸು ಇಲ್ಲದೇ ಸೇವನೆ ಮಾಡುವುದು ಅಪಾಯಕಾರಿಯಾಗಿ ಪರಿಣಮಿಸಬಹುದು. ಈ ಕುರಿತು ಆಗಾಗ ಹಲವರು ಎಚ್ಚರಿಕೆ ನೀಡುತ್ತಲೇ ಇದ್ದರೂ ವಿಟಮಿನ್‌ ಮತ್ತು ಮಿನರಲ್ಸ್‌ ದೇಹಕ್ಕೆ ಬೇಕು ಎಂದು ಸುಖಾಸುಮ್ಮನೆ ಸೇವನೆ ಮಾಡುವ ಅಭ್ಯಾಸ ಸಮಾಜದಲ್ಲಿ ಸಿಕ್ಕಾಪಟ್ಟೆ ಹೆಚ್ಚುತ್ತಿದೆ. ಇದೀಗ, ಟಿಕ್‌ ಟಾಕ್‌ ಮೀಡಿಯಾದಲ್ಲಿ ಡಾ.ಚಾರ್ಲೆಸ್‌ ಹೆಸರಿನ ವೈದ್ಯರೊಬ್ಬರು ಈ ಕುರಿತು ಎಚ್ಚರಿಕೆ ನೀಡಿದ್ದಾರೆ. ದೇಹದ ದೈನಂದಿನ ಅಗತ್ಯಗಳನ್ನು ಪೂರೈಸಲು ಸಪ್ಲಿಮೆಂಟ್‌ ತೆಗೆದುಕೊಳ್ಳುವ ಅಭ್ಯಾಸ ಆರೋಗ್ಯಕ್ಕೆ ದುಬಾರಿಯಾಗಿ ಪರಿಣಮಿಸಬಹುದು ಎಂದು ಅವರು ತಿಳಿಸಿದ್ದಾರೆ. ಈ ವೀಡಿಯೋ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಲು ಸಹಾಯವಾಗಬಲ್ಲದು. ವಿಟಮಿನ್‌ ಹಾಗೂ ಮಿನರಲ್ಸ್‌ ದೇಹಾರೋಗ್ಯಕ್ಕೆ ಅತ್ಯಗತ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅನಗತ್ಯವಾಗಿ ಸೇವನೆ ಮಾಡುವುದು ಅಥವಾ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು ಎರಡೂ ಅಪಾಯಕಾರಿ. ಇದರಿಂದ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಬಹುದು.

•    ವಿಟಮಿನ್‌ ಎ (Vitamin A)
ದೇಹಕ್ಕೆ ವಿಟಮಿನ್‌ ಎ ಅಗತ್ಯ ಸಾಕಷ್ಟಿದೆ. ಇದು ದೃಷ್ಟಿಯನ್ನು (Vision) ಆರೋಗ್ಯಪೂರ್ಣವಾಗಿರಿಸಲು ಸಹಕಾರಿ. ಹಾಗೆಯೇ, ರೋಗನಿರೋಧಕ ಶಕ್ತಿಯನ್ನು ಸಹ ಉತ್ತೇಜಿಸುತ್ತದೆ. ಆಂಟಿಆಕ್ಸಿಡಂಟ್‌ ಗಳಿಂದ ಕೂಡಿರುವ ವಿಟಮಿನ್‌ ಎ ಹೃದಯವನ್ನೂ (Heart) ಚೆನ್ನಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಡಾ. ಚಾರ್ಲಸ್‌ ಪ್ರಕಾರ, ವಿಟಮಿನ್‌ ಎ ಸಪ್ಲಿಮೆಂಟ್‌  (Supplement) ತೆಗೆದುಕೊಳ್ಳುವುದರಿಂದ ಚರ್ಮ (Skin) ಮತ್ತು ಕಣ್ಣುಗಳಿಗೆ (Eye) ಅನುಕೂಲವೆಂದು ಭಾವಿಸಿದರೂ ಅದರ ಪ್ರಮಾಣ ಹೆಚ್ಚಾದರೆ ಲಿವರ್‌ (Liver) ಅಥವಾ ಯಕೃತ್ತನ್ನು ತೀವ್ರವಾಗಿ ಪ್ರಭಾವಿಸುತ್ತದೆ. ತಲೆ ಸುತ್ತುವ ಸಮಸ್ಯೆ ಶುರುವಾಗಬಹುದು, ದೃಷ್ಟಿ ಮಂಜಾಗಬಹುದು, ಮೂಳೆಗಳು ಸವೆಯಬಹುದು ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಾಗಬಹುದು. 

ಮಧ್ಯರಾತ್ರಿ ಸ್ನ್ಯಾಕ್ಸ್ ತಿನ್ನೋ ಕ್ರೇವಿಂಗ್ ಹಲವರಿಗೆ, ಹಸಿವು ಅಂತ ತಿಂದ್ರೆ ತೂಕ ಹೆಚ್ಚೋದು ಗ್ಯಾರಂಟಿ!

•    ವಿಟಮಿನ್‌ ಇ (Vitamin E)
ವಿಟಮಿನ್‌ ಇ ಸಪ್ಲಿಮೆಂಟ್‌ ಅನ್ನು ಬಹಳಷ್ಟು ಜನ ಸೇವನೆ ಮಾಡುತ್ತಾರೆ. ಇದರಲ್ಲಿರುವ ಆಂಟಿಆಕ್ಸಿಡಂಟ್‌ ಗಳಿಂದ ಸಾಕಷ್ಟು ಪ್ರಯೋಜನವಿದೆಯಾದರೂ, ವಿಟಮಿನ್‌ ಇ ಪ್ರಮಾಣ ಅಧಿಕವಾದರೆ ಕ್ಯಾನ್ಸರ್‌ (Cancer) ಅಪಾಯ ಹೆಚ್ಚು ಎನ್ನುತ್ತಾರೆ ಡಾ.ಚಾರ್ಲಸ್.‌ ಇದಂತೂ ಎಚ್ಚೆತ್ತುಕೊಳ್ಳಬೇಕಾದ ಸಂಗತಿ. ಹಲವು ಅಧ್ಯಯನಗಳು ವಿಟಮಿನ್‌ ಇ ಮತ್ತು ಕ್ಯಾನ್ಸರ್‌ ಗೆ ಇರುವ ಸಂಬಂಧವನ್ನು ತಿಳಿಸಿವೆ. ಪುರುಷರಲ್ಲಿ ಪ್ರೊಸ್ಟೇಟ್‌ ಕ್ಯಾನ್ಸರ್‌ ಉಂಟುಮಾಡುವಲ್ಲಿ ಪಾತ್ರ ವಹಿಸುತ್ತದೆ.

•    ಐರನ್‌ (Iron)
ಕಬ್ಬಿಣಾಂಶದ ಮಾತ್ರೆಗಳನ್ನು ವೈದ್ಯರ (Doctor) ಸಲಹೆ ಇರಲಿ, ಇಲ್ಲದಿರಲಿ, ಹಲವರು ಸೇವನೆ ಮಾಡುತ್ತಾರೆ. ಮುಖ್ಯವಾಗಿ, ಮಹಿಳೆಯರು ತಮಗೆ ಕಬ್ಬಿಣಾಂಶ ಬೇಕು ಎಂದು ತಾವೇ ನಿರ್ಧರಿಸುವುದು ಹೆಚ್ಚು. ಕಬ್ಬಿಣಾಂಶದ ಕೊರತೆಯಿಂದ ಅನೀಮಿಯಾ ಉಂಟಾಗುತ್ತದೆ. ಆದರೆ, ಇದರ ಅಂಶ ಹೆಚ್ಚಾದರೆ ಹೃದಯಕ್ಕೆ ತೊಂದರೆಯಾಗುತ್ತದೆ. ವೈದ್ಯರ ಪ್ರಕಾರ, ಐರನ್‌ ಸಪ್ಲಿಮೆಂಟ್‌ ಗೂ ಹೃದಯ ಸ್ತಂಭನಕ್ಕೂ (Heart Failure) ಸಂಬಂಧವಿರುವುದನ್ನು ಅಧ್ಯಯನವೊಂದು ಹೇಳಿದೆ. ಐರನ್‌ ಅಂಶ ಹೆಚ್ಚಾದರೆ ಆಮ್ಲಜನಕದ ಮಟ್ಟ ಸ್ಥಿರವಾಗಿರುವುದಿಲ್ಲ. ಹೃದಯ ಕೋಶಗಳ ಸಾವು ಉಂಟಾಗಬಹುದು, ಅಂತಿಮವಾಗಿ ಹೃದಯ ಸ್ತಂಭನವಾಗಬಹುದು.

ಬಾಳೆಹಣ್ಣು ಕಪ್ಪಾಗಿದೆ ಅಂತ ಎಸಿಬೇಡಿ, ಅದನ್ನು ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ಲಾಭವಿದೆ ತಿಳ್ಕೊಳ್ಳಿ

•    ಬಯೋಟಿನ್‌ (Biotin)
ಕೂದಲು ಮತ್ತು ಉಗುರುಗಳ ಆರೋಗ್ಯಕ್ಕೆ ಅನುಕೂಲವೆಂದು  ಬಯೋಟಿನ್‌ ಸೇವನೆ ಮಾಡುವ ಅಭ್ಯಾಸ ಯುವತಿಯರಲ್ಲಿ ಹೆಚ್ಚು ಕಂಡುಬರುತ್ತದೆ. ಆದರೆ, ಇದರ ಪ್ರಮಾಣ ದೇಹದಲ್ಲಿ ವ್ಯತ್ಯಾಸವಾದರೆ ವಿಚಿತ್ರ ವಿದ್ಯಮಾನ ಜರುಗುತ್ತದೆ. ಅದೆಂದರೆ, ನೀವು ಯಾವುದೋ ಕಾರಣಕ್ಕಾಗಿ ಲ್ಯಾಬ್‌ ಟೆಸ್ಟ್‌ (Lab Test) ಮಾಡಿಸಿಕೊಂಡರೆ ಯಾವ ಫಲಿತಾಂಶ ಕೂಡ ನಿಖರವಾಗಿ ಬರುವುದಿಲ್ಲ. ಇದು ಸಹ ಭಾರೀ ಅಪಾಯಕಾರಿಯಾಗಿ ಪರಿಣಮಿಸಬಲ್ಲದು. 

Follow Us:
Download App:
  • android
  • ios