ಜನಪ್ರಿಯ ಎನರ್ಜಿ ಡ್ರಿಂಕ್‌ಗಳಲ್ಲಿರುವ ಅಂಶವೊಂದು ರಕ್ತದ ಕ್ಯಾನ್ಸರ್‌ಗೆ ಉತ್ತೇಜನ ನೀಡುತ್ತಿರಬಹುದು ಎಂದು ಹೊಸ ಅಧ್ಯಯನವೊಂದು ಹೇಳಿದೆ. ಇದು ಎನರ್ಜಿ ಡ್ರಿಂಕ್‌ಗಳ ಸೇವನೆಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ.

ತಾಜಾ ಅಲ್ಲದ ಯಾವುದೇ ಆಹಾರವೂ ನಮ್ಮ ದೇಹದ ಮೇಲೆ ಸಣ್ಣ ಮಟ್ಟಿನ ವ್ಯತಿರಿಕ್ತ ಪರಿಣಾಮವನ್ನಾದರೂ ಬೀರಿಯೇ ಬೀರುತ್ತದೆ. ಆದರೂ ನಮ್ಮಲ್ಲಿ ಅನೇಕರು ಅಂಗಡಿಗಳಲ್ಲಿ ಸಿಗುವ ರೆಡಿಮೇಡ್‌ ತಂಪು ಪಾನೀಯಗಳನ್ನು ಸಾಕಷ್ಟು ಇಷ್ಟಪಟ್ಟು ಕುಡಿಯುತ್ತಾರೆ. ಈ ತಂಪು ಪಾನೀಯಗಳು ಅನೇಕರ ಇಷ್ಟದ ಪಾನೀಯವಾಗಿದೆ. ಹೀಗಿರುವಾಗ ಬ್ರಿಟನ್‌ನ ಆರೋಗ್ಯ ನಿಯತಕಾಲಿಕೆ ನೇಚರ್(Nature)ಯೊಂದು ಬೆಚ್ಚಿ ಬೀಳಿಸುವ ಅಧ್ಯಯನ ವರದಿಯೊಂದನ್ನು ಪ್ರಕಟ ಮಾಡಿದೆ. 

ರೆಡ್ ಬುಲ್ ಮತ್ತು ಸೆಲ್ಸಿಯಸ್‌ನಂತಹ ಜನಪ್ರಿಯ ಎನರ್ಜಿ ಡ್ರಿಂಕ್‌ಗಳಲ್ಲಿ ಇರುವ ಒಂದು ಗುಪ್ತ ಅಂಶವು ರಕ್ತದ ಕ್ಯಾನ್ಸರ್‌ಗೆ ಉತ್ತೇಜನ ನೀಡುತ್ತಿರಬಹುದು ಎಂದು ಅಧ್ಯಯನ ವರದಿ ಹೇಳಿದೆ. ಈ ಪಾನೀಯಗಳಲ್ಲಿ ಕ್ಯಾನ್ಸರ್‌ ಕಾರಕ ಟೌರಿನ್, ಲ್ಯುಕೇಮಿಯಾ ಕೋಶಗಳ ಬೆಳವಣಿಗೆಗೆ ಉತ್ತೇಜನ ನೀಡುವ ಅಂಶಗಳಿವೆ ಎಂದು ಈ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಲ್ಯುಕೇಮಿಯಾ ಕೋಶಗಳು ತಮ್ಮ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಲು ಮೂಳೆ ಮಜ್ಜೆಯಲ್ಲಿ ಉತ್ಪತ್ತಿಯಾಗುವ ಟೌರಿನ್ ಅನ್ನು ಬಳಸಿಕೊಳ್ಳುತ್ತವೆ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಅನೇಕ ಸಾಮಾನ್ಯ ಪಾನೀಯಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಬಹಳ ದೀರ್ಘಕಾಲದಿಂದಲೂ ಪ್ರಶಂಸಿಸಲ್ಪಡುತ್ತಿದ್ದ ಟೌರಿನ್, ಈಗ ಹೊಸ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಹೊಸ ಅಧ್ಯಯನವು ಇದು ರಕ್ತದ ಕ್ಯಾನ್ಸರ್‌ಗಳಿಗೆ, ವಿಶೇಷವಾಗಿ ಲ್ಯುಕೇಮಿಯಾಗೆ ಪೂರಕ ಅಂಶವನ್ನು ಹೊಂದಿದೆ ಎಂದು ತಿಳಿಸಿದೆ.

ರೋಚೆಸ್ಟರ್ ವಿಶ್ವವಿದ್ಯಾಲಯದ ವಿಲ್ಮಾಟ್ ಕ್ಯಾನ್ಸರ್ ಸಂಸ್ಥೆಯ ಸಂಶೋಧಕರು, ಲ್ಯುಕೇಮಿಯಾ ಕೋಶಗಳು ಮನುಷ್ಯನ ಮೂಳೆ ಮಜ್ಜೆಯಲ್ಲಿ ಬೆಳೆಯುವ ಟೌರಿನ್ ಅನ್ನು ಗ್ಲೈಕೋಲಿಸಿಸ್ ಎಂಬ ಪ್ರಕ್ರಿಯೆಯ ಮೂಲಕ ತಮ್ಮ ಬೆಳವಣಿಗೆಗೆ ಇಂಧನವಾಗಿ ಬಳಸಿಕೊಳ್ಳಬಹುದು ಎಂದು ವಿವರಿಸಿದ್ದಾರೆ. ಈ ಪ್ರಕ್ರಿಯೆಯು ಜೀವಕೋಶಗಳು ಗ್ಲೂಕೋಸ್ ಅನ್ನು ಒಡೆಯಲು ಶಕ್ತಿಯನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ, ಇದು ಕ್ಯಾನ್ಸರ್ ಕೋಶಗಳು ದೇಹದಲ್ಲಿ ಬೆಳೆಯಲು ಸಹಾಯ ಮಾಡುತ್ತವೆ. ಈ ಹೊಸ ಸಂಶೋಧನೆಯುಈಗ ಪಾನೀಯಗಳ ಮೂಲಕ ಅತಿಯಾದ ಟೌರಿನ್ ಸೇವನೆಯಿಂದ ದೇಹದ ಮೇಲೆ ಬೀರುವ ಅಡ್ಡಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ.

ಟೌರಿನ್ ಸಾಮಾನ್ಯವಾಗಿ ಪ್ರಾಣಿಗಳ ದೇಹದಲ್ಲಿ, ನಿರ್ದಿಷ್ಟವಾಗಿ ಮಾಂಸ, ಸಮುದ್ರಾಹಾರ ಮತ್ತು ಡೈರಿ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಆದರೆ ಎನರ್ಜಿ ಡ್ರಿಂಕ್‌ಗಳಲ್ಲಿ ಇದನ್ನು ಮಾನಸಿಕ ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ನೋವನ್ನು ಕಡಿಮೆ ಮಾಡಲು ಸೇರಿಸಲಾಗುತ್ತದೆ. ಲ್ಯುಕೇಮಿಯಾ ರೋಗಿಗಳಲ್ಲಿ ಕಿಮೊಥೆರಪಿಯಿಂದಾಗುವ ಅಡ್ಡಪರಿಣಾಮಗಳನ್ನು ನಿವಾರಿಸಲು ಸಹ ಇದನ್ನು ಬಳಸಲಾಗುತ್ತದೆ. ಜರ್ನಲ್ ಆಫ್ ಕ್ಯಾನ್ಸರ್ ರಿಸರ್ಚ್ ಅಂಡ್ ಥೆರಪ್ಯೂಟಿಕ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಟೌರಿನ್ ಪೂರಕವು ಅದರ ರೋಗ ನಿರೋಧಕ ಸಾಮರ್ಥ್ಯದಿಂದ ಕಿಮೊಥೆರಪಿ ಪ್ರೇರಿತ ವಿಷದ ವಿರುದ್ಧ ರಕ್ಷಣೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಸ್ವಲ್ಪ ಉಪಯುಕ್ತವೆನಿಸಿದರೂ ಎನರ್ಜಿ ಡ್ರಿಂಕ್‌ಗಳ ಮೂಲಕ ಇದರ ಅತಿಯಾದ ಸೇವನೆಯು ಕ್ಯಾನ್ಸರ್ ಕೋಶಗಳನ್ನು ಉತ್ತೇಜಿಸುವ ಮೂಲಕ ಲ್ಯುಕೇಮಿಯಾ ಅಪಾಯವನ್ನು ಹೆಚ್ಚಿಸುತ್ತದೆ.

ಅಧ್ಯಯನ ನಡೆಸಿದ್ದು ಹೇಗೆ?
ಇದನ್ನು ಮೊದಲಿಗೆ ಶರೀರದಾದ್ಯಂತ ಟೌರಿನ್ ಅನ್ನು ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ SLC6A6 ಎಂಬ ನಿರ್ದಿಷ್ಟ ಜೀನ್ ಹೊಂದಿರುವ ಇಲಿಗಳ ಮೇಲೆ ಪ್ರಯೋಗಿಸಲಾಯ್ತು. ಇದಕ್ಕೆ ಇಲಿಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಗಮನಿಸಲು ಸಂಶೋಧಕರು ಮಾನವ ಲ್ಯುಕೇಮಿಯಾ ಕೋಶಗಳನ್ನು ಈ ಇಲಿಗಳ ಮೇಲೆ ಪ್ರಯೋಗ ಮಾಡಿದರು. ಇದರಿಂದ ಆರೋಗ್ಯಕರ ಮೂಳೆ ಮಜ್ಜೆಯ ಕೋಶಗಳು ನೈಸರ್ಗಿಕವಾಗಿ ಟೌರಿನ್ ಅನ್ನು ಉತ್ಪಾದಿಸುತ್ತವೆ ಮತ್ತು SLC6A6 ಜೀನ್ ಈ ಟೌರಿನ್ ಅನ್ನು ಲ್ಯುಕೇಮಿಯಾ ಕೋಶಗಳಿಗೆ ಸಾಗಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳ ಬೆಳವಣಿಗೆಗೆ ಸಂಭಾವ್ಯವಾಗಿ ಸಹಾಯ ಮಾಡುತ್ತದೆ ಎಂಬುದನ್ನು ಇದರಿಂದ ವಿಜ್ಞಾನಿಗಳು ಕಂಡುಕೊಂಡರು.

ಹೀಗಾಗಿ ಈ ಎನರ್ಜಿ ಡ್ರಿಂಕ್‌ಗಳ ಮೂಲಕ ಟೌರಿನ್ ಅನ್ನು ಜನ ಎಷ್ಟು ಸಾಮಾನ್ಯ ಎಂಬಂತೆ ಸೇವಿಸುತ್ತಾರೆ ಎಂಬುದನ್ನು ಪರಿಗಣಿಸಿ ಸಂಭಾವ್ಯ ಅಪಾಯಗಳು ಹಾಗೂ ಪ್ರಯೋಜನ ಎರಡನ್ನೂ ಸರಿಯಾಗಿ ಸಮದೂಗಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ. ವಿಶೇಷವಾಗಿ ಲ್ಯುಕೇಮಿಯಾ ರೋಗಿಗಳು ಹಾಗೂ ನಿಯಮಿತವಾಗಿ ಈ ಎನರ್ಜಿ ಡ್ರಿಂಕ್‌ ಬಳಸುವವರಿಗೆ ಅವರು ಈ ರೀತಿ ಮನವಿ ಮಾಡಿದ್ದಾರೆ. ಅಲ್ಲದೇ ಲ್ಯುಕೇಮಿಯಾ ಕೋಶಗಳಲ್ಲಿ ಟೌರಿನ್ ಅನ್ನು ನಿರ್ಬಂಧಿಸುವುದರಿಂದ ಹೊಸ ಚಿಕಿತ್ಸಾ ಆಯ್ಕೆಗಳ ಅಭಿವೃದ್ಧಿಗೆ ಇದು ಕಾರಣವಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದರ ಜೊತೆಗೆ ಕೊಲೊರೆಕ್ಟಲ್ ಕ್ಯಾನ್ಸರ್‌ನಂತಹ ಇತರ ಕ್ಯಾನ್ಸರ್‌ಗಳ ಹೆಚ್ಚಳಕ್ಕೆ ಟೌರಿನ್ ಸಹ ಕೊಡುಗೆ ನೀಡಬಹುದೇ ಎಂದು ಸಂಶೋಧಕರು ಅಂತಿಮವಾಗಿ ಕಂಡುಹಿಡಿಯಲು ಬಯಸುತ್ತಿದ್ದಾರೆ. 

ಟೌರಿನ್ ಎನರ್ಜಿ ಡ್ರಿಂಕ್‌ನಲ್ಲಿ ಸಾಮಾನ್ಯವಾಗಿರುವ ಅಂಶವಾಗಿರುವುದರಿಂದ ಕೀಮೋಥೆರಪಿಯ ಅಡ್ಡಪರಿಣಾಮಗಳನ್ನು ತಗ್ಗಿಸಲು ಪೂರಕವಾಗಿ ಹೆಚ್ಚಾಗಿ ಒದಗಿಸಲಾಗುವುದರಿಂದ, ಲ್ಯುಕೇಮಿಯಾ ರೋಗಿಗಳಲ್ಲಿ ಪೂರಕ ಟೌರಿನ್‌ನ ಪ್ರಯೋಜನಗಳನ್ನು ಎಚ್ಚರಿಕೆಯಿಂದ ಪರಿಗಣಿಸುವುದು ಅಗತ್ಯವಾಗಿದೆ ಎಂದು ಸಂಶೋಧಕರು ನೇಚರ್‌ನಲ್ಲಿ ಪ್ರಕಟವಾದ ವರದಿಯಲ್ಲಿ ತಿಳಿಸಿದ್ದಾರೆ.