Asianet Suvarna News Asianet Suvarna News

ಯಾರೂ ಇಲ್ಲ ಅಂತ ಕೊರಗ್ತಿದ್ದೀರಾ? ಇದಕ್ಕೆ ಮೂಲ ಕಾರಣ ಎರಡೇ

ಸಮಾಜದಲ್ಲಿ ನೀವು ಯಾವ ಗುಂಪಿನಲ್ಲಿ, ಯಾವ ರೀತಿ ಗುರುತಿಸಿಕೊಂಡಿದ್ದೀರಿ ಎನ್ನುವುದು ನಿಮ್ಮ ಮಾನಸಿಕ ಆರೋಗ್ಯದ ಸ್ಥಿತಿಯನ್ನು ತಿಳಿಯಪಡಿಸುತ್ತದೆ. ನೀವು ಒಂಟಿತನದಿಂದ ತೊಳಲುತ್ತಿದ್ದೀರಿ ಎಂದಾದರೆ, ಭಾವನೆಗಳ ಮೇಲೆ ಅಸಮರ್ಪಕವಾಗಿ ನಿಯಂತ್ರಣ ಹೊಂದಿದ್ದೀರಿ ಅಥವಾ ಉತ್ತಮ ಸಾಮಾಜಿಕ ಒಡನಾಟ ಹೊಂದಿಲ್ಲ ಎಂದರ್ಥ. 
 

There are two reasons for loneliness know about this
Author
First Published Dec 28, 2022, 11:40 AM IST

ಸ್ನೇಹಿತರನ್ನು ನೋಡಿ ವ್ಯಕ್ತಿಯನ್ನು ತಿಳಿಯಬಹುದು ಎನ್ನುವ ಮಾತಿದೆ. ಅಂದರೆ, ಒಡನಾಟ ವ್ಯಕ್ತಿತ್ವವನ್ನು ತೋರ್ಪಡಿಸುವ ಪ್ರಮುಖ ಅಂಶ. ನಾವ್ಯಾರೂ ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ. ಜನರೊಂದಿಗಿನ ಒಡನಾಟ, ಸಾಮಾಜಿಕ ಬದುಕು ನಮ್ಮ ಜೀವನದ ಅವಿಭಾಜ್ಯ ಅಂಗ. ಸಮಾಜದಲ್ಲಿ ನಾವು ಎಂಥವರೊಂದಿಗೆ ಗುರುತಿಸಿಕೊಂಡಿದ್ದೇವೆ ಎನ್ನುವುದು ನಮ್ಮ ಮನೋಸ್ಥಿತಿಯನ್ನು ಬಿಂಬಿಸುತ್ತದೆ. ಇಂದಿನ ಆಧುನಿಕ ಜೀವನದಲ್ಲಿ ಹಲವು ಕಾರಣಗಳಿಂದ ಸಾಮಾಜಿಕ ಒಡನಾಟ ಬಹಳಷ್ಟು ಕಡಿಮೆಯಾಗಿದೆ. ಕೊರೋನಾ ಜಗತ್ತಿಗೆ ಕಾಲಿಟ್ಟ ಬಳಿಕವಂತೂ ಈ ಸಮಸ್ಯೆ ಇನ್ನಷ್ಟು ಅಗಾಧವಾಗಿದೆ. ಪರಿಣಾಮವಾಗಿ, ಜನರಲ್ಲಿ ಒಂಟಿತನದ ಸಮಸ್ಯೆಯೂ ಹೆಚ್ಚುತ್ತಿದೆ. ಒಂಟಿತನ ಕಾಡಲು ಹಲವು ಕಾರಣಗಳಿದ್ದರೂ, ಇತ್ತೀಚಿನ ಅಧ್ಯಯನದ ಪ್ರಕಾರ, ಪ್ರಮುಖವಾಗಿ ಎರಡು ಮೂಲ ಕಾರಣಗಳಿವೆ. ಬ್ರಿಟಿಷ್‌ ಜರ್ನಲ್‌ ಆಫ್‌ ಕ್ಲಿನಿಕಲ್‌ ಸೈಕಾಲಜಿಯಲ್ಲಿ ಪ್ರಕಟವಾಗಿರುವ ಅಧ್ಯಯನವೊಂದು, ಭಾವನೆಗಳನ್ನು ಹತ್ತಿಕ್ಕುವುದು ಹಾಗೂ ಸಮಾಜಿಕ ಒಡನಾಟ ಕಡಿಮೆಯಾಗಿರುವುದರಿಂದ ಮನುಷ್ಯರಲ್ಲಿ ಒಂಟಿತನ ಅಧಿಕವಾಗುತ್ತಿದೆ ಎಂದು ಹೇಳಿದೆ. ಒಂಟಿತನವೆಂದರೆ, ಎಲ್ಲವೂ ಇದ್ದೂ ಏನೂ ಇಲ್ಲದ ಭಾವನೆ. ಸಂಬಂಧಗಳಲ್ಲಿ ತೃಪ್ತಿ ಇಲ್ಲದಿರುವುದು, ಯಾರೂ ತಮ್ಮ ಬೆಂಬಲಕ್ಕೆ ಇಲ್ಲವೆಂಬ ಕೊರಗು ದಟ್ಟವಾಗಿರುವುದು. ಇತ್ತೀಚೆಗೆ ಸಂಬಂಧಗಳು ತೀರ ಶುಷ್ಕವಾಗಿರುವುದು, ಡಿಜಿಟಲ್‌ ಮೀಡಿಯಾಗಳ ಅಧಿಕ ಬಳಕೆ, ಕಳೆದುಕೊಳ್ಳುವ ಭಯ ಇತ್ಯಾದಿಗಳಿಂದ ಒಂಟಿತನದ ಸಮಸ್ಯೆ ತೀವ್ರವಾಗಿದೆ. 

ಒಂಟಿತನದ (Loneliness) ಭಾವ ಹೆಚ್ಚಾದಾಗ ನಮ್ಮಲ್ಲಿ ರೋಗ ನಿರೋಧಕ (Resistance power) ಶಕ್ತಿ ಕಡಿಮೆಯಾಗುತ್ತದೆ. ಹಲವಾರು ರೀತಿಯ ದೈಹಿಕ ನೋವುಗಳು (Pain) ಬಾಧಿಸುತ್ತವೆ. ಶೀತ, ನೆಗಡಿ (Cold) ಪದೇ ಪದೆ ಕಾಡಿಸುತ್ತವೆ ಹಾಗೂ ಹಲವು ರೋಗಗಳೂ ಉಂಟಾಗಬಹುದು. ಹಾಗಿದ್ದರೆ, ಮನುಷ್ಯನ ಜೀವನ (Life) ಸಫಲವಾಗದಿರಲು ಒಂಟಿತನದ ಭಾವನೆಯೊಂದೇ ಸಾಕು ಎಂದಾಯಿತು. 

"Sorry ! ನನಗೆ ರಿಪ್ಲೈ ಮಾಡಲು ಮನಸಿಲ್ಲ: ಇದು ಖಿನ್ನತೆಯ ಹೊಸ ಲಕ್ಷಣ!

•    ಭಾವನೆಗಳ ಮೇಲೆ ನಿಯಂತ್ರಣವೇಕೆ?
ವರ್ತನೆ (Behaviour) ಹಾಗೂ ಭಾವನೆಗಳ ಮೇಲೆ ಒಂದಿಷ್ಟು ನಿಯಂತ್ರಣ (Control) ಅಗತ್ಯವಾದರೂ ಅದು ಮನಸ್ಸನ್ನು ಕಲ್ಲು ಮಾಡುವಷ್ಟು ಇರಬಾರದು. ಸಂಬಂಧದಲ್ಲಿ (Relation), ಅದರಲ್ಲೂ ಸಮೀಪದ ಬಂಧುಗಳಲ್ಲಿ ಮನಸ್ಸನ್ನು ತೆರೆದಿಡುವುದು ಅತ್ಯಂತ ಅಗತ್ಯ. ಭಾವನೆಗಳನ್ನು (Feelings) ಮುಚ್ಚಿಡುವುದು, ಕೆಲವು ಭಾವನೆಗಳನ್ನು ಅವಾಯ್ಡ್‌ ಮಾಡುವುದು (ಭಯ (Fear), ನಿರಾಶೆ (Disgust) ಇತ್ಯಾದಿ), ಹಳೆಯ ನೋವನ್ನು ಮೆಲುಕು ಹಾಕುತ್ತಿರುವುದು, ಇಂಥ ಅಸಮರ್ಪಕ ಪದ್ಧತಿಗಳನ್ನು ಯಾವ ವ್ಯಕ್ತಿ ಅನುಸರಿಸುತ್ತಾನೋ ಆತನಲ್ಲಿ ಒಂಟಿತನ ಕಾಡುವುದು ಹೆಚ್ಚು. ಇವು ಕ್ರಮೇಣ ಮನಸ್ಸಿಗೆ ಹಿತ ನೀಡದ ಭಾವನೆಗಳಾಗಿ ಬದಲಾಗುತ್ತವೆ. ಅರ್ಥಾತ್‌, ಭಯ ಹೆಚ್ಚಾಗಬಹುದು, ದ್ವೇಷ, ತೀವ್ರ ಹತಾಶೆ ಉಂಟಾಗಬಹುದು. ದೀರ್ಘಕಾಲ ಈ ಹಂತದಲ್ಲಿದ್ದು, ಬೇರೆ ವಿಚಾರಗಳಿಂದ ವಿಮುಖರಾದರೆ ಮನೋವೈಕಲ್ಯ (Mental Illness) ಉಂಟಾಗುತ್ತದೆ.

Winter Blues: ಇದು ಆರೋಗ್ಯ ಸಮಸ್ಯೆ ಅಲ್ವೇ ಅಲ್ಲ, ಬರೀ ಚಳಿಗಾಲದ ಕಿರಿಕಿರಿ

•    ಸಾಮಾಜಿಕ ಒಡನಾಟ (Social Identity) ಮತ್ತು ಒಂಟಿತನ
ಪ್ರತಿಯೋರ್ವ ವ್ಯಕ್ತಿಗೆ ಸಾಮಾಜಿಕ ಒಡನಾಟ ಭಾರೀ ಅಗತ್ಯ. ಸಮಾಜದಲ್ಲಿ (Society) ಗುರುತಿಸಿಕೊಳ್ಳುವುದೂ ಮಾನಸಿಕ ಆರೋಗ್ಯಕ್ಕೆ ಅತಿ ಮುಖ್ಯ. ಜನಪ್ರಿಯತೆ ಹೊಂದಿರಬೇಕು ಎಂದಲ್ಲ. ತಮ್ಮದೇ ಸೀಮಿತ ಸಮಾಜದಲ್ಲಾದರೂ ಸರಿ, ಉತ್ತಮ ಗುಂಪುಗಳ ಒಡನಾಟ ಅತ್ಯಗತ್ಯ. ಹಿಂದೆಲ್ಲ, ಮಕ್ಕಳು (Children) ತಮ್ಮ ವಾರಗೆಯ ಮಕ್ಕಳೊಂದಿಗೆ ಬೆರೆಯುವುದು, ಆಡುವುದು, ಮಾತನಾಡುವುದು, ತಮ್ಮದೇ ರೀತಿಯಲ್ಲಿ ಭಾವನೆಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿತ್ತು. ಆಟವಾಡುತ್ತಲೇ ವರ್ತನೆಗೆ ಸಂಬಂಧಿಸಿದ ಬಹುತೇಕ ಪಾಠಗಳು ನಡೆದುಹೋಗುತ್ತಿದ್ದವು. ಹಿರಿಯರ ಪಾತ್ರದ ಅಗತ್ಯವೇ ಅಲ್ಲಿರುತ್ತಿರಲಿಲ್ಲ. ಆದರೆ, ಇಂದು ಮಕ್ಕಳ ಕೈಲಿ ಮೊಬೈಲ್‌ ಬಂದಿದೆ. ಸ್ನೇಹಿತರ (Friends) ಜತೆ ಅವರು ಹೊರಗೆ ಹೋಗುತ್ತೇನೆಂದರೆ ಭಯಪಡುವ ಸ್ಥಿತಿ ಒದಗಿದೆ. ಒಡನಾಟ ಕಡಿಮೆಯಾದ ಪರಿಣಾಮವಾಗಿ ಜೀವನಪಾಠದ ಕೊರತೆಯಾಗಿದೆ, ಜತೆಗೆ, ಅವರು ಏಕಾಂಗಿಯಾಗಿ ಬೆಳೆಯುತ್ತಿದ್ದಾರೆ. ಸಾಮಾಜಿಕ ಒಡನಾಟದಿಂದ ವ್ಯಕ್ತಿಯಲ್ಲಿ ಬಾಂಧವ್ಯದ, ಸಾಂಗತ್ಯದ, ಬೆಂಬಲದ ಭಾವನೆ ಭದ್ರವಾಗಿರುತ್ತದೆ. ಅದು ನಮ್ಮ ವರ್ತನೆ (Behavior), ಚಿಂತನೆಗಳ ಮೇಲೆ ಧನಾತ್ಮಕವಾದ ಪರಿಣಾಮ ಬೀರಿ, ಉತ್ತಮ ಆರೋಗ್ಯ (Health) ಮತ್ತು ಖುಷಿ (Happiness)ಗೆ ಕಾರಣವಾಗುತ್ತದೆ. ನೀವು ಸಾಮಾಜಿಕ ಒಡನಾಟ ಹೊಂದಿಲ್ಲವೆಂದರೆ, ನಿಮ್ಮಲ್ಲಿ ಆ ಸಂಪನ್ಮೂಲ (Resource) ಇಲ್ಲವೆಂದರ್ಥ. ಆಗ ಆತ್ಮವಿಶ್ವಾಸದ (Self Esteem) ಕೊರತೆ ಇರುತ್ತದೆ. ಹೀಗಾಗಿ, ಒಂಟಿತನದ ಭಾವನೆಗಳನ್ನು ಮೀರಬೇಕು ಎಂದಾದರೆ ಭಾವನೆಗಳನ್ನು ವ್ಯಕ್ತಪಡಿಸುವುದು ಹಾಗೂ ಸಾಮಾಜಿಕ ಒಡನಾಟ ಹೊಂದುವುದು ಅಗತ್ಯ.  

Follow Us:
Download App:
  • android
  • ios