Asianet Suvarna News Asianet Suvarna News

ಕರ್ನಾಟಕದಲ್ಲೇ ಮೊದಲು, ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ಗರ್ಭಿಣಿಯಲ್ಲಿ ಗರ್ಭಕೋಶದ ಬಾಯಿಗೆ ಮಗುವಿನ ಕಸ ಅಡ್ಡಲಾಗಿರುವ, ಹಾಗೂ ಹೆರಿಗೆಯ ಬಳಿಕ ಸಹಜವಾಗಿ ಕಸ ಬೇರ್ಪಡದ  ಸ್ಥಿತಿಯ ಅಪರೂಪದ ಪ್ರಕರಣವನ್ನು ಕೆಎಂಸಿ ಆಸ್ಪತ್ರೆ ಯಶಸ್ವಿಯಾಗಿ ನಿಭಾಯಿಸಿದೆ.

Successful complex placenta accreta spectrum procedure surgery at KMC Hospital first time in karnataka gow
Author
First Published Aug 11, 2023, 2:55 PM IST

ಉಡುಪಿ (ಆ.11): ಗರ್ಭಿಣಿಯಲ್ಲಿ ಗರ್ಭಕೋಶದ ಬಾಯಿಗೆ ಮಗುವಿನ ಕಸ  (placenta) ಅಡ್ಡಲಾಗಿರುವ, ಹಾಗೂ ಹೆರಿಗೆಯ ಬಳಿಕ ಸಹಜವಾಗಿ ಕಸ ಬೇರ್ಪಡದ  ಸ್ಥಿತಿ (placenta accreta spectrum)   ಇರುವ ಅಪರೂಪದ ಪ್ರಕರಣದಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆ ಯನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ಯಶಸ್ವಿಯಾಗಿ ನಿಭಾಯಿಸಿದೆ.

ಇದು ಕರ್ನಾಟಕದಲ್ಲೇ ಮೊದಲ ಬಾರಿಗೆ:
ಎರಡನೆ ಬಾರಿ ಗರ್ಭ ಧರಿಸಿದ್ದ, 31 ವರ್ಷ ವಯಸ್ಸಿನ ಮಹಿಳೆ 34ನೇ ವಾರದ  ಗರ್ಭಾವಸ್ಥೆಯಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಮಗುವಿನ ಕಸ (Placenta) ಗರ್ಭಕೋಶದ ಬಾಯಿಗೆ ಅಡ್ಡಲಾಗಿರುವ ವಿಶೇಷ ಸ್ಥಿತಿ ಬೆಳಕಿಗೆ ಬಂದಿತ್ತು. ಅಲ್ಟ್ರಾಸೌಂಡ್ ಪರೀಕ್ಶೆ ಮಾಡಿದ ನಂತರ ಪ್ಲಾಸೆಂಟಾ ಪ್ರೀವಿಯಾ ಮತ್ತು ಪ್ಲಾಸೆಂಟಾ ಅಕ್ರಿಟಾ ಇರುವ ಸಾಧ್ಯತೆ ಕಂಡು ಬಂದಿತು. ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ರೋಗಿಗಿರುವ ತೊಂದರೆಯನ್ನು  ದೃಢಪಡಿಸಿತು. ಪರಿಸ್ಥಿತಿಯನ್ನು ಅರಿತ ಹೆರಿಗೆ ಮತ್ತು ಸ್ತ್ರೀ  ರೋಗ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಪಾದ ಹೆಬ್ಬಾರ್ ಅವರ ನೇತೃತ್ವದ ತಂಡ ವಿಶೇಷ ಶಸ್ತ್ರಚಿಕಿತ್ಸೆ ಯನ್ನು ನಡೆಸಿತು.

ತ್ರಿವಳಿ ಹೃದಯ ಬೈಪಾಸ್ ಸರ್ಜರಿ ನಂತರವೂ ಸುದೀರ್ಘಕಾಲ ಬದುಕಿರುವ ಏಕೈಕ ವ್ಯಕ್ತಿ ಇವರು

ಇಂಟೆರ್ವೆನ್ಷನಲ್  ರೇಡಿಯಾಲಜಿ ತಜ್ಞರು, ಶಿಶುರೋಗ ತಜ್ಞರು, ಅರಿವಳಿಕೆತಜ್ಞರು  ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಯಲ್ಲಿ ಪಾಲ್ಗೊಂಡಿದ್ದರು. ಸಾಕಷ್ಟು ಪೂರ್ವಭಾವಿ ಸಮಾಲೋಚನೆಯ ನಂತರ, ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ  ನಡೆಸಲಾಯಿತು. ಶಸ್ತ್ರಚಿಕಿತ್ಸೆ ಯ ಆರಂಭದಲ್ಲಿ, ಗರ್ಭಕೋಶದ ಪ್ರದೇಶಕ್ಕೆ ರಕ್ತ ಸರಬರಾಜು ಮಾಡುವ ಎರಡೂ  ಕಡೆಯ ಅಂತರಿಕ ಇಲಿಯಾಕ್ ರಕ್ತನಾಳಗಳಲ್ಲಿ (bilateral internal iliac arteries) 6*40MM ಕೋಬ್ರಾ ಕ್ಯಾಥೆಟರ್ ಬಳಸಿ ರಕ್ತ ಚಲನೆಯ ನಿಯಂತ್ರಣ ವ್ಯವಸ್ಥೆ ರೂಪಿಸಲಾಯಿತು. 

ಅದನ್ನು ಇಂಟೆರ್ವೆನ್ಷನಲ್  ರೇಡಿಯಾಲಜಿ ವಿಭಾಗದ ಡಾ. ಮಿಥುನ್ ಶೇಖರ್ ಮತ್ತು  ಡಾ ಹರ್ಷಿತ್ ಕ್ರಮಧಾರಿ ಅವರು  ನಿರ್ವಹಿಸಿದರು. ಆ ಬಳಿಕ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆ(classical caesarean section) ನಡೆಸಿ ಮಗುವನ್ನು ಹೊರತೆಗೆಯಲಾಯಿತು. ಮಗು ಹೊರತೆಗೆದ ಬಳಿಕ ರಕ್ತನಾಳಗಳಿಗೆ ತೊಡಿಸಲಾಗಿದ್ದ ಬಲೂನುಗಳನ್ನು ಹಿಗ್ಗಿಸಿ, ರಕ್ತಸ್ರಾವ ಸಂಭವಿಸದಂತೆ ಸೂಕ್ತವ್ಯವಸ್ಥೆಗಳನ್ನು ಮಾಡಲಾಯಿತು. ಗರ್ಭಕೋಶಕ್ಕೆ ಅಂಟಿಕೊಂಡಿದ್ದ ಪ್ಲಾಸೆಂಟಾವನ್ನು ಬೆರಳುಗಳಿಂದ ಜಾಗರೂಕವಾಗಿ ಬಿಡಿಸಿ ತೆಗೆಯಲಾಯಿತು. ಬಳಿಕ ಮೇಲಿನ ಎರಡೂ  ರಕ್ತನಾಳಗಳಲ್ಲಿ ಜೆಲ್ ಫೋಮ್ ನಿಂದ  ಎಂಬೋಲೈಸೇಶನ್‌ ಮಾಡಲಾಯಿತು.

ಮಹಿಳೆ ನೆತ್ತಿ ಮೇಲೆ ಬೆಳೆದ ಗೋಲಿಗಳ ಚೀಲ, ಅಚ್ಚರಿ ಪ್ರಕರಣಕ್ಕೆ ಬೆಂಗಳೂರು ವೈದ್ಯರ ಯಶಸ್ವಿ ಸರ್ಜರಿ!

ಜೆಲ್ ಫೋಮ್ ಎಂಬೋಲೈಸೇಶನ್‌ನ ಪ್ರಯೋಜನವೆಂದರೆ ಅದು ಗರ್ಭಾಶಯ ಮತ್ತು ಮೂತ್ರಕೋಶಕ್ಕೆ ಎಲ್ಲಾ ರಕ್ತನಾಳಗಳನ್ನು ಮುಚ್ಚುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಅಂತರಿಕ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವವು ಸಮಾನ್ಯವಾಗಿತ್ತು ಮತ್ತು ರಕ್ತದ ನಷ್ಟವನ್ನು ಸರಿದೂಗಿಸಲು ಕೇವಲ 2 ಪಿಂಟ್ ರಕ್ತವನ್ನು ನೀಡಲಾಗಿತು. ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಸಾಮಾನ್ಯ ಸ್ಥಿತಿಯು ಸ್ಥಿರವಾಗಿತ್ತು  ಮತ್ತು ಶಸ್ತ್ರಚಿಕಿತ್ಸೆಯ ನಂತರ  ಅವಳನ್ನು ಐಸಿಯುಗೆ (ICU) ಸ್ಥಳಾಂತರಿಸಲಾಯಿತು. ತದನಂತರ ತಾಯಿ ಮತ್ತು ಮಗು ಆರಾಮವಾಗಿ ಹೆರಿಗೆಯ ಅವಧಿಯನ್ನು ಪೂರೈಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಡಾ. ಶ್ರೀಪಾದ ಹೆಬ್ಬಾರ್ ತಿಳಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆಪರೇಶನ್ ಥಿಯೇಟರ್‌ (ಕ್ಯಾಥ್ ಲ್ಯಾಬ್) ನಲ್ಲಿ ಈ ವಿಶೇಷ ಪ್ರಕ್ರಿಯೆಯನ್ನು ನಡೆಸಿದೆವು, ಈ ಲ್ಯಾಬ್‌ನಲ್ಲಿ ರಕ್ತನಾಳಗಳೊಳಗೆ ಬಲೂನ್ ಅಳವಡಿಕೆ ಮತ್ತು ರಕ್ತನಾಳಗಳಲ್ಲಿ ರಕ್ತಪ್ರವಹಿಸುವುದನ್ನು ತಡೆಯಲು (ಎಂಬೊಲೈಜೇಷನ್), ಸಿ ಆರ್ಮ್ (C-Arm) ಮತ್ತು ಇತರ ಉಪಕರಣಗಳ ಸೌಲಭ್ಯವಿದೆ. ಈ ಶಸ್ತ್ರಚಿಕಿತ್ಸೆ ಗೆ ಸರಾಸರಿ ಒಂದೂವರೆ ಗಂಟೆ ಸಮಯ ತಗುಲಿತು. ಈ ಪ್ರಕರಣದಲ್ಲಿ ತಾಯಿಯನ್ನು ತೀವ್ರ ಅಪಾಯದ ಘಟನೆಗಳಿಂದ ತಪ್ಪಿಸಿದ್ದು ಅಲ್ಲದೆ, ಅವರ ಗರ್ಭಕೋಶವನ್ನು ಕೂಡ ಉಳಿಸಿದೆವು ಎಂಬುದಾಗಿ ಇಂಟರ್ವೆನ್ಷನಲ್ ರೇಡಿಯಾಲಜಿ ಕನ್ಸಲ್ಟಂಟ್ ಆಗಿರುವ ಡಾ. ಮಿಥುನ್ ಶೇಖರ್ ತಿಳಿಸಿದರು.  

ಪ್ಲಾಸೆಂಟಾ ಅಕ್ರಿಟಾ ಸ್ಥಿತಿಯಲ್ಲಿ, ಪ್ಲಾಸೆಂಟಾವು ಗರ್ಭಾಶಯದ ಗೋಡೆಯೊಳಗೆ ಆಳದಲ್ಲಿ ಹೂತುಹೋಗಿರುತ್ತದೆ ಮತ್ತು ಪ್ರಸವದ ಬಳಿಕ ಇದು ಗರ್ಭಕೋಶದಿಂದ ಬೇರ್ಪಡುವುದಿಲ್ಲ, ಈ ಕಾರಣದಿಂದ ಅಪಾಯಕಾರಿ ಮಟ್ಟದಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಇದು 7% ರಷ್ಟು ಅಧಿಕ ಮರಣ ದರವನ್ನು ಹೊಂದಿರುವ ಗಂಭೀರ ಸ್ಥಿತಿಯಾಗಿದ್ದು, ಸಿಸೇರಿಯನ್ ಹೆರಿಗೆಯ ಸಮಯದಲ್ಲಿ ಸಂಭವಿಸುವ ಅತೀವ ರಕ್ತಸ್ರಾವದಿಂದ ಸಾವು ಸಂಭವಿಸುತ್ತದೆ. ಜೀವಕ್ಕೆ ಬೆದರಿಕೆಯೊಡ್ಡುವ ಇತರ ಸ್ಥಿತಿಗಳೆಂದರೆ ಮೂತ್ರಕೋಶಕ್ಕೆ ಹಾನಿ, ರಕ್ತನಾಳಗಳಲ್ಲಿ ವ್ಯಾಪಕ ರಕ್ತಹೆಪ್ಪುಗಟ್ಟುವಿಕೆ (ಡಿಸ್ಸೆಮಿನೇಟೆಡ್ ಇಂಟ್ರಾವ್ಯಾಸ್ಕುಲಾರ್ ಕೋಗುಲೇಷನ್ - DIC), ಬಹು ಪ್ರಮಾಣದಲ್ಲಿ ರಕ್ತನೀಡುವುದರಿಂದ ಉಂಟಾಗುವ ಶ್ವಾಸಕೋಶದ ಹಾನಿ, ತೀವ್ರ ಸೋಂಕು (ಸೆಪ್ಸಿಸ್), ಮೂತ್ರಪಿಂಡದ ವೈಫಲ್ಯದಿಂದಾಗಿ ಬಹುಅಂಗಗಳ ಕಾರ್ಯವೈಫಲ್ಯ ಮತ್ತು ಅಂತಿಮವಾಗಿ ಸಾವು ಕೂಡ ಸಂಭವಿಸಬಹುದು. 

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ ಅವಿನಾಶ್ ಶೆಟ್ಟಿಯವರು ಈ ಸಂಕೀರ್ಣ ವೈದ್ಯಕೀಯ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಇಂತಹ ಸಂಕೀರ್ಣ ಸಂಧರ್ಭಗಳಲ್ಲಿ ತಾಯಿ ಹಾಗೂ ನವಜಾತ ಶಿಶುಗಳನ್ನು ಉಳಿಸುವುದಕ್ಕಾಗಿ ಈ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೌಕರ್ಯದ ಉಪಯೋಗ ಪಡೆದುಕೊಳ್ಳುಬಹುದು ಎಂದು ಅವರು  ತಿಳಿಸಿದರು.   ಈ ಸಂಕೀರ್ಣ ಶಸ್ತ್ರಚಿಕಿತ್ಸೆ ಯನ್ನು ವಿಶೇಷ ತಂತ್ರಕೌಶಲ ದೊಂದಿಗೆ  ಕರ್ನಾಟಕದಲ್ಲಿ ಮೊದಲ ಬಾರಿಗೆ ನಡೆಸಲಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದರು.

Follow Us:
Download App:
  • android
  • ios