ನೀವು ಉಸಿರಾಡಿದಾಗ ಒಳ ಸೇರುವ ಮೈಕ್ರೋಪ್ಲಾಸ್ಟಿಕ್ ಸಂಗ್ರಹವಾಗೋದೆಲ್ಲಿ?
ಪ್ಲಾಸ್ಟಿಕ್ ನಮ್ಮ ಆರೋಗ್ಯದ ಮೇಲೆ ಅಳಿಸಲಾಗದ ಬರೆ ಎಳೆದಿದೆ. ಒಂದಲ್ಲ ಒಂದು ರೀತಿಯಲ್ಲಿ ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹ ಸೇರುತ್ತಿದೆ. ನಾವು ಶುದ್ಧವೆಂದು ಉಸಿರಾಡುವ ಗಾಳಿಯಲ್ಲೂ ಮೈಕ್ರೋಪ್ಲಾಸ್ಟಿಕ್ ಇದ್ದು, ಅದು ಅನೇಕ ಅಪಾಯವನ್ನುಂಟು ಮಾಡ್ತಿದೆ.
ಪ್ಲಾಸ್ಟಿಕ್ ಭೂಮಿಗೆ ಹಾನಿಯನ್ನುಂಟು ಮಾಡುವುದಲ್ಲದೆ ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಪ್ಲಾಸ್ಟಿಕ್ ವಸ್ತುಗಳಲ್ಲಿ ಆಹಾರ ಸೇವನೆ ಮಾಡೋದ್ರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ರೋಗ ನಮ್ಮನ್ನು ಕಾಡುತ್ತದೆ ಎಂಬುದು ನಮಗೆ ಗೊತ್ತು. ಇದೇ ಕಾರಣಕ್ಕೆ ಅನೇಕರು ಪ್ಲಾಸ್ಟಿಕ್ ತ್ಯಜಿಸುವ ಪ್ರಯತ್ನ ನಡೆಸುತ್ತಿದ್ದಾರೆ. ನೀವು ಪ್ಲಾಸ್ಟಿಕ್ ಪಾತ್ರೆ, ಕವರ್ ಬಳಕೆ ಮಾಡದೆ ಇದ್ರೂ ನಿಮ್ಮ ಆರೋಗ್ಯ ಸದ್ದಿಲ್ಲದೆ ಹಾಳಾಗ್ತಿದೆ ಎಂಬುದು ನಿಮಗೆ ಗೊತ್ತಾ?.
ಹೊಸ ಅಧ್ಯಯನ (Study) ವೊಂದು ಆಘಾತಕಾರಿ ಸಂಗತಿಯನ್ನು ಹೊರ ಹಾಕಿದೆ. ನೀವು ಪ್ಲಾಸ್ಟಿಕ್ ಬಳಸಿ, ಬಿಡಿ, ಈಗಾಗಲೇ ನೀವು ಬಳಸಿಬಿಟ್ಟ ಪ್ಲಾಸ್ಟಿಕ್ (Plastic) ನಿಮ್ಮ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡ್ತಿದೆ. ಪ್ರತಿ ಗಂಟೆಗೆ ಸುಮಾರು 16.2 ಬಿಟ್ ಮೈಕ್ರೋಪ್ಲಾಸ್ಟಿಕ್ ಅನ್ನು ನಾವು ಉಸಿರಾಡುತ್ತಿದ್ದೇವೆ. ಮೈಕ್ರೋಪ್ಲಾಸ್ಟಿಕ್ (Microplastic) ಅಂದ್ರೆ ಪ್ಲಾಸ್ಟಿಕ್ ಉತ್ಪನ್ನಗಳ ಅವನತಿಯಿಂದ ಉಂಟಾಗುವ ಪರಿಸರದಲ್ಲಿನ ಸಣ್ಣ ಶಿಲಾಖಂಡರಾಶಿಗಳು. ಇವು ಸಾಮಾನ್ಯವಾಗಿ ವಿಷಕಾರಿ ಮಾಲಿನ್ಯಕಾರಕಗಳು ಮತ್ತು ರಾಸಾಯನಿಕಗಳನ್ನು ಹೊಂದಿರುತ್ತವೆ.
Health Tips : ಹಾಸಿಗೆಗೆ ಹೋಗ್ತಿದ್ದಂತೆ ನಿದ್ರೆ ಆವರಿಸ್ಬೇಕೆಂದ್ರೆ ಅಮೆರಿಕದ ಈ ಟ್ರಿಕ್ ಫಾಲೋ ಮಾಡಿ
ಆಸ್ಟ್ರೇಲಿಯನ್ ಸಂಶೋಧಕರ ತಂಡ ಈ ಬಗ್ಗೆ ಸಂಶೋಧನೆ ನಡೆಸಿದೆ. ಸಂಶೋಧಕರ ತಂಡ, ಉಸಿರಾಟದ ಮೂಲಕ ಮೈಕ್ರೋಪ್ಲಾಸ್ಟಿಕ್ ಸಂಚಾರ ಮತ್ತು ಶೇಖರಣೆಯನ್ನು ವಿಶ್ಲೇಷಿಸಲು ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ಮಾದರಿಯನ್ನು ಅಭಿವೃದ್ಧಿಪಡಿಸಿತು. ಇದ್ರ ಆಕಾರ ಮತ್ತು ಗಾತ್ರಗಳನ್ನು ಬದಲಿಸಿ ನಿಧಾನ ಮತ್ತು ವೇಗದ ಉಸಿರಾಟ ಸಂದರ್ಭದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಚಲನೆಯನ್ನು ಅವರು ಪರಿಶೋಧಿಸಿದರು. ಈ ಸಂಶೋಧನಾ ವರದಿಯನ್ನು ಫಿಸಿಕ್ಸ್ ಆಫ್ ಫ್ಲೂಯಿಡ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ನಾವು ಉಸಿರಾಡಿದಾಗ ನಮ್ಮ ಮೂಗಿನ ಮೂಲಕ ದೇಹ ಸೇರುವ ಮೈಕ್ರೊಪ್ಲಾಸ್ಟಿಕ್‌ಗಳು ಮೂಗಿನ ಕುಹರ ಮತ್ತು ಓರೊಫಾರ್ನೆಕ್ಸ್ ಅಥವಾ ಗಂಟಲಿನ ಹಿಂಭಾಗ ಸೇರಿದಂತೆ ಬಿಸಿಯಿರುವ ಜಾಗದಲ್ಲಿ ಸಂಗ್ರಹಗೊಳ್ಳುತ್ತವೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಮೈಕ್ರೋಪ್ಲಾಸ್ಟಿಕ್ ಹರಿವಿನ ವೇಗ, ಕಣ ಜಡತ್ವ ಮತ್ತು ಅಸಮಪಾರ್ಶ್ವದ ಅಂಗರಚನಾಶಾಸ್ತ್ರವು ಒಟ್ಟಾರೆ ಶೇಖರಣೆಯ ಮೇಲೆ ಪರಿಣಾಮ ಬೀರುತ್ತದೆ. ಮೂಗಿನ ಕುಳಿಗಳು ಮತ್ತು ಓರೊಫಾರ್ನೆಕ್ಸ್ ಪ್ರದೇಶ, ಮೈಕ್ರೋಪ್ಲಾಸ್ಟಿಕ್ ಶೇಖರಣೆಯ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಎಂದು ಸಿಡ್ನಿಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಮೊಹಮ್ಮದ್ ಎಸ್ ಹೇಳಿದ್ದಾರೆ.
ಬೆಳಗ್ಗೆದ್ದು ಏನೇನೋ ತಿನ್ಬೇಡಿ, ಆರೋಗ್ಯಕ್ಕೆ ಈ ಉಪಾಹಾರ ಬೆಸ್ಟ್
ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಿರುವ ಹಾಗೂ ಕೈಕಾರಿಕಾ ಪ್ರದೇಶಗಳಲ್ಲಿ ಮೈಕ್ರೋಪ್ಲಾಸ್ಟಿಕ್ ನಮ್ಮ ದೇಹ ಸೇರುವುದು ಹೆಚ್ಚಿರುತ್ತದೆ. ಇದು ಮನುಷ್ಯನಿಗೆ ನಾನಾ ರೋಗವನ್ನು ಹರಡುತ್ತದೆ. ಈ ಅಧ್ಯಯನವು ನಾವು ಉಸಿರಾಡುವ ಗಾಳಿಯಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳ ಉಪಸ್ಥಿತಿ ಮತ್ತು ಸಂಭಾವ್ಯ ಆರೋಗ್ಯದ ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವಿನ ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ಬ್ರಿಸ್ಬೇನ್‌ನ ಕ್ವೀನ್ಸ್‌ಲ್ಯಾಂಡ್ ಟೆಕ್ನಾಲಜಿ ವಿಶ್ವವಿದ್ಯಾಲಯದ ಯುವಾನ್‌ಟಾಂಗ್ ಗು ಹೇಳಿದ್ದಾರೆ.
ಹೆಚ್ಚಿನ ಮೈಕ್ರೋಪ್ಲಾಸ್ಟಿಕ್ ಎಲ್ಲಿ ಕಂಡು ಬರುತ್ತದೆ ? : ಹೆಚ್ಚಿನ ಮೈಕ್ರೋಪ್ಲಾಸ್ಟಿಕ್‌ಗಳು ಭೂಮಿಯಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸುತ್ತವೆ. ನದಿಗಳು ಮತ್ತು ಗಾಳಿಯಿಂದ ಸಾಗರಕ್ಕೆ ಸಾಗಿಸಲ್ಪಡುತ್ತವೆ. ಮೈಕ್ರೋಪ್ಲಾಸ್ಟಿಕ್‌ಗಳು ಪ್ರಪಂಚದಾದ್ಯಂತದ ಕಡಲತೀರಗಳಲ್ಲಿ ಹಾಗೂ ನಮ್ಮ ಸಂರಕ್ಷಿತ ಪ್ರದೇಶಗಳಲ್ಲಿಯೂ ಕಂಡುಬಂದಿವೆ.
ಹಿಂದೆ ನಡೆದ ಅಧ್ಯಯನ ಏನು ಹೇಳಿತ್ತು : ಹಿಂದೆ ನಡೆದ ಅಧ್ಯಯನದ ಪ್ರಕಾರ, ಮೈಕ್ರೋಪ್ಲಾಸ್ಟಿಕ್, ಹುಟ್ಟಲಿರುವ ಶಿಶುಗಳ ಹೊಕ್ಕುಳಬಳ್ಳಿಯಲ್ಲಿ ಇರುವುದು ಪತ್ತೆಯಾಗಿತ್ತು. ಇದಲ್ಲದೆ 22 ಆರೋಗ್ಯವಂತ ರಕ್ತದಾನಿಗಳ ಪೈಕಿ 17 ಜನರ ರಕ್ತದಲ್ಲಿ ಪ್ಲಾಸ್ಟಿಕ್ ಇರುವುದು ಪತ್ತೆಯಾಗಿತ್ತು. ಶ್ವಾಸಕೋಶದ ಅಧ್ಯಯನದಲ್ಲಿ ಪಾಲ್ಗೊಂಡ 13 ರೋಗಿಗಳ ಪೈಕಿ 11 ಮಂದಿ ಶ್ವಾಸಕೋಶದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿತ್ತು.
ಮೈಕ್ರೋಪ್ಲಾಸ್ಟಿಕ್ ಯಾವ ಯಾವ ರೂಪದಲ್ಲಿ ದೇಹ ಸೇರುತ್ತದೆ : ಸಮುದ್ರಲ್ಲಿ ಇದ್ರ ಪ್ರಮಾಣ ಹೆಚ್ಚಿರುವ ಕಾರ, ಮೈಕ್ರೋಪ್ಲಾಸ್ಟಿಕ್‌ಗಳನ್ನು ಸಮುದ್ರದ ಜೀವಿಗಳು ಸೇವಿಸುತ್ತಿವೆ. ಅದೇ ಜೀವಿಗಳನ್ನು ಸಮುದ್ರಾಹಾರದ ರೂಪದಲ್ಲಿ ಮಾನವ ಸೇವಿಸುತ್ತಾನೆ. ಇದಲ್ಲದೆ ಕುಡಿಯುವ ನೀರಿನ ಮೂಲಕ ಕೂಡ ದೇಹಕ್ಕೆ ಮೈಕ್ರೋಪ್ಲಾಸ್ಟಿಕ್ ಸೇರುತ್ತದೆ. ಕಾರುಗಳು ಮತ್ತು ಟ್ರಕ್‌ಗಳು ಚಾಲನೆ ಮಾಡುವಾಗ ಅವುಗಳ ಟೈರ್‌ಗಳಿಂದ ಹೊರಸೂಸುವ ಧೂಳಿನಲ್ಲಿ ಮೈಕ್ರೋಪ್ಲಾಸ್ಟಿಕ್ ಇರುತ್ತದೆ. ಉಸಿರಾಟದ ಮೂಲಕ ಅದು ದೇಹ ಸೇರುತ್ತದೆ. ಮೈಕ್ರೋಪ್ಲಾಸ್ಟಿಕ್ ನರಮಂಡಗಳ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಯಕೃತ್ತು ಮತ್ತು ಮೂತ್ರಪಿಂಡದ ಹಾನಿಗೆ ಕಾರಣವಾಗಬಹುದು.