ಕಾಕ್ರೋಚ್ ಜನತಾ ಪಾರ್ಟಿ ಬೆಂಬಲಿಸಿದ ಅಣ್ಣಾಮಲೈ ವಿರುದ್ದ ಬಿಜೆಪಿ ಸತತವಾಗಿ ವಾಗ್ದಾಳಿ ನಡೆಸುತ್ತಿದೆ. ಇದರ ಬೆನ್ನಲ್ಲೇ ಅಣ್ಣಾಮಲೈ ಕೆರಳಿದ್ದಾರೆ. ಯಾರು ದೇಶ ವಿರೋಧಿ, ತಮಿಳುನಾಡಿನಿಂದ ಕರ್ನಾಟಕ, ಇತಿಹಾಸ ಗೊತ್ತಿದೆಯಾ ಎಂದು ಅಣ್ಣಾಮಲೈ ಪ್ರಶ್ನಿಸಿದ್ದಾರೆ.

ಚೆನ್ನೈ (ಅ.23) ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ಬಂದ ಬಳಿಕ ಅಣ್ಣಾಮಲೈ ನಾಪತ್ತೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿತ್ತು. ಆದರೆ ಕಾಕ್ರೋಚ್ ಜನತಾ ಪಾರ್ಟಿ ಕುರಿತು ಹೇಳಿಕೆ ನೀಡಿ ಇದೀಗ ಅಣ್ಣಾಮಲೈ ದೇಶಾದ್ಯಂತ ಸದ್ದು ಮಾಡುತ್ತಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಯ ಪ್ರತಿಭಟನೆ, ಬೇಡಿಕೆಗಳನ್ನು ಅಣ್ಣಾಮಲೈ ಬೆಂಬಲಿಸಿದ್ದಾರೆ. ಇಷ್ಟೇ ಅಲ್ಲ ಸಿಜೆಪಿ ನಾಯಕ ಬಂಧನವನ್ನು ಅಣ್ಣಾಮಲೈ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಮಾಜಿ ಬಿಜೆಪಿ ನಾಯಕ ಅಣ್ಣಾಮಲೈ ಬಿಜೆಪಿ ಟೀಕೆಗಳಿಂದ ಕೆರಳಿದ್ದಾರೆ. ನಾನು ದೇಶ ವಿರೋಧಿನಾ ಎಂದು ಬಿಜೆಪಿ ನಾಯಕರ ಪ್ರಶ್ನಿಸಿ ಹಲವು ಘಟನೆ ನೆನಪಿಸಿದ್ದಾರೆ.

ತಮಿಳುನಾಡು ಟು ಕರ್ನಾಟಕ

ತಮಿಳುನಾಡು ಬಿಜೆಪಿ ಲೀಡರ್ ವನತಿ ಗಂಭೀರ ಆರೋಪ ಮಾಡಿದ್ದರು. ಸಿಜೆಪಿ ಬೆಂಬಲಿಸುವ ನಾಯಕರು ದೇಶ ವಿರೋಧಿ ಎಂದು ಅಣ್ಣಾಮಲೈ ಹೆಸರು ಹೇಳದೆ ಟೀಕಿಸಿದ್ದರು. ರಾಷ್ಟ್ರೀಯತೆ ಹಾಗೂ ಹಿಂದುತ್ವ ತೊರೆದ ಕೆಲ ನಾಯಕರು ಇದೀಗ ದೇಶ ವಿರೋಧಿಗಳಾಗಿ ದೇಶ ವಿರೋಧಿ ನಡೆಯನ್ನು ಬೆಂಬಲಿಸುತ್ತಾದ್ದಾರೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ನಾನು ದೇಶ ವಿರೋಧಿನಾ? ಎಂದು ಪ್ರಶ್ನಿಸಿದ್ದಾರೆ. ನನಗಿಂತ ರಾಷ್ಟ್ರೀಯತೆ ಹೊಂದಿದೆ ವ್ಯಕ್ತಿಯನ್ನು ತೋರಿಸಿ ಎಂದು ಅಣ್ಣಾಮಲೈ ಸವಾಲು ಹಾಕಿದ್ದಾರೆ.

ತಮಿಳುನಾಡಿನ ಹಳ್ಳಿಯಲ್ಲಿ ಹುಟ್ಟಿದ ನಾನು, ಲಖನೌದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದೇನೆ. ಬಳಿಕ ಆಂಧ್ರ ಪ್ರದೇಶ ಹಾಗೂ ದೆಹಲಿಯಲ್ಲಿ ಐಪಿಎಸ್ ತರಬೇತಿ ಪಡೆದು ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ 12 ವರ್ಷ ಹಲವು ರಾಜ್ಯಗಳಲ್ಲಿದ್ದು ಸೇವೆ ಸಲ್ಲಿಸಿದ ಮತ್ತೊಬ್ಬ ತಮಿಳುನಾಡಿನ ವ್ಯಕ್ತಿಯನ್ನು ತೋರಿಸಿ. ನನ್ನ ದೇಶ ಸೇವೆ, ದೇಶ ಬಗ್ಗೆ, ರಾಷ್ಟ್ರೀಯತೆ ಬಗ್ಗೆ ಸವಾಲು ಹಾಕುವ ಮುನ್ನ ಇತಿಹಾಸ ನೋಡಿಕೊಳ್ಳಲಿ ಎಂದು ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

ಸಿಜೆಪಿ ಬೆಂಬಲಿಸಿ ಸ್ಪಷ್ಟನೆ ಕೊಟ್ಟ ಅಣ್ಣಾಮಲೈ

ಸಿಜೆಪಿ ಹೋರಾಟ , ಅವರ ಬೇಡಿಕೆಗಳನ್ನು ಬೆಂಬಲಿಸಿದ್ದೇನೆ. ಆದರೆ ಸಿಜೆಪಿ, ಸಿಜೆಪಿಯ ರಾಜಕೀಯ ಉದ್ದೇಶಗಳನ್ನು ಬೆಂಬಲಿಸಿಲ್ಲ. ಸಿಜೆಪಿ ಚುನಾವಣೆ ಅಕ್ರಮ, ಗ್ಯಾನೇಶ್ ಕುಮಾರ್ ರಾಜೀನಾಮೆ ಕುರಿತು ಬೇಡಿಕೆ ಮುಂದಿಟ್ಟಿದ್ದಾರೆ. ಇದಕ್ಕೆ ಸರ್ಕಾರ ಹಾಗೂ ಚುನಾವಣಾ ಆಯೋಗ ಉತ್ತರ ನೀಡಲಿ ಎಂದು ಅಣ್ಣಾಮಲೈ ಸ್ಪಷ್ಟನೆ ನೀಡಿದ್ದಾರೆ. ಇನ್ನು ಸಿಜೆಪಿ ನಾಯಕರ ಬಂಧನ ವಿರುದ್ದವೂ ಅಣ್ಣಾಮಲೈ ಕಿಡಿಕಾರಿದ್ದಾರೆ. ಸಿಜೆಪಿ ನಾಯಕರನ್ನು ನ್ಯಾಯಾಂಗ ಬಂಧನದಲ್ಲಿರಿಸುವುದು ಸರಿಯಲ್ಲ. ಇದರಿಂದ ಸಿಜೆಪಿ ನಾಯಕರು ಮತ್ತಷ್ಟು ಬಲಿಷ್ಠರಾಗುತ್ತಾರೆ. ದೆಹಲಿ ಪೊಲೀಸರು ನಡೆ ಸರಿಯಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.

ಜಂತರ್ ಮಂತರ್ ಸ್ಥಳನ್ನು ಡಿನೋಟಿಫೈ ಮಾಡಿ ಪ್ರತಿಭಟನೆ ಹಕ್ಕು ನಿರ್ಬಂಧಿಸಲಾಗಿದೆ. ದೆಹಲಿ ಪೊಲೀಸರ ಈ ನಡೆಯನ್ನು ಅಣ್ಣಾಮಲೈ ಖಂಡಿಸಿದ್ದಾರೆ. ಜಂತರ್ ಮಂತರ್ ನಿಷೇಧಿತ ಪ್ರದೇಶ ಮಾಡಿ ಬಳಿಕ ಸಿಜೆಪಿ ನಾಯಕರನ್ನು ಬಂಧಿಸಲಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.

ಐಪಿಎಸ್ ಸೇವೆಯಿಂದ ಸ್ವಯಂ ನಿವೃತ್ತಿ ಘೋಷಿಸಿದ ಬಳಿಕ ಅಣ್ಣಾಮಲೈ ತಮಿಳುನಾಡು ಬಿಜೆಪಿ ಸೇರಿಕೊಂಡು ರಾಜಕೀಯ ಸಂಚಲನ ಸೃಷ್ಟಿಸಿದ್ದರು. ಅಷ್ಟೇ ವೇಗದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿ ಬಡ್ತಿ ಪೆಡಿದ್ದರು. ತಮಿಳುನಾಡಿನಲ್ಲಿ ಬಿಜೆಪಿ ಬಲಪಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಿದ್ದರು. ಆದರೆ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿನ ಬಿಜೆಪಿಯ ಹೀನಾಯ ಸೋಲು, ಹೈಕಮಾಂಡ್ ಸೂಚನೆಯಂತೆ ತಮಿಳುನಾಡಿನಲ್ಲಿ ಎಐಎಡಿಂಕೆ ಜೊತೆ ಮೈತ್ರಿಗೂ ಅಣ್ಣಾಮಲೈ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ದಿಢೀರ್ ಬಿಜೆಪಿಗೆ ರಾಜೀನಾಮೆ ನೀಡಿ ಹೊರಬಂದಿದ್ದರು. ಇದೀಗ ವಿ ದಿ ಲೀಡರ್ಸ್ ಅನ್ನೋ ಆಂದೋಲನ ಹುಟ್ಟು ಹಾಕಿರುವ ಅಣ್ಣಾಮಲೈ, ಸ್ಥಳೀಯ ಚುನಾವಣೆಗೂ ಧುಮುಕುವುದಾಗಿ ಹೇಳಿದ್ದಾರೆ.