ಯೋಗ ಉತ್ಸವ ಆಚರಿಸಿದ ಸೌದಿ ಅರೇಬಿಯಾ ಯೋಗ ಹಬ್ಬದಲ್ಲಿ ಭಾಗಿಯಾದ ಸಾವಿರಾರು ಮಂದಿ ಸೌದಿಯ ಜುಮಾನ್ ಪಾರ್ಕ್‌ನಲ್ಲಿ ಆಯೋಜನೆ
ಜೆಡ್ಡಾ(ಜ.31): ದೇಶದ ಮೊದಲ ಯೋಗ ದಿನವನ್ನು ಸೌದಿ ಅರೇಬಿಯಾ (Saudi Arabia) ಆಚರಿಸಿದ್ದು, ಸಾವಿರಕ್ಕೂ ಹೆಚ್ಚು ಜನ ಈ ಯೋಗ ಹಬ್ಬದಲ್ಲಿ ಭಾಗವಹಿಸಿ ಜೀವಕ್ಕೆ ಚೈತನ್ಯ ತುಂಬಿಸಿಕೊಂಡರು. ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ (King Abdullah) ಅವರ ಎಕನಾಮಿಕ್ ಸಿಟಿಯಾಗಿರುವ ಜುಮಾನ್ ಪಾರ್ಕ್‌ನಲ್ಲಿ(Juman Park) ಶನಿವಾರ ಸಾವಿರಾರು ಜನ ಸೇರಿ ಯೋಗ ಹಬ್ಬವನ್ನು ಯಶಸ್ವಿಗೊಳಿಸಿದರು.
ಸೌದಿಯ ಯೋಗ ಸಮಿತಿಯು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, 10 ರಿಂದ 60 ವರ್ಷದೊಳಗಿನ ಜನರು ವಿವಿಧ ಚಟುವಟಿಕೆಗಳ ಜೊತೆ, ಯೋಗ, ಧ್ಯಾನದ ಈ ಮನಸ್ಸಿಗೆ ಹಿತ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹುಲ್ಲುಹಾಸಿನ ಮೇಲೆ ಯೋಗ ಮಾಡುವುದರೊಂದಿಗೆ ಈ ಯೋಗ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮುರಳಿ ಕೃಷ್ಣನ್ (Murali Krishnan) ಎಂಬುವರು ಹಿರಿಯರ ನೇತೃತ್ವ ವಹಿಸಿದರೆ, ಸಾರಾ ಅಲಮೂಡಿ (Sara Alamoudi) ಎಂಬವರು ಮಕ್ಕಳ ನೇತೃತ್ವ ವಹಿಸಿದ್ದರು.
ಈ ಯೋಗ ಉತ್ಸವದಲ್ಲಿ ಭಾಗವಹಿಸಿದವರಿಗೆ ಯೋಗವನ್ನು ಅಭ್ಯಾಸ ಮಾಡಲು, ವಿಭಿನ್ನ ಪ್ರದರ್ಶನಗಳನ್ನು ವೀಕ್ಷಿಸಲು ಮತ್ತು ಯೋಗ ಸ್ಟುಡಿಯೋಗಳಿಂದ ಪ್ರದರ್ಶನಗಳನ್ನು ಆನಂದಿಸಲು ಮತ್ತು ಅವರು ಒದಗಿಸಿದ ಸೇವೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡಲಾಗಿತ್ತು. ಸೌದಿ ಮತ್ತು ಅಂತಾರಾಷ್ಟ್ರೀಯ ಯೋಗ ಪಟುಗಳು ಮತ್ತು ಉಪನ್ಯಾಸಕರು ಒಂದು ದಿನದ ಈ ಯೋಗ ಉತ್ಸವದಲ್ಲಿ ಎಂಟು ಗಂಟೆಗಳಿಗೂ ಹೆಚ್ಚು ಯೋಗ ತರಗತಿಗಳನ್ನು ನೀಡಿದ್ದರು. ಆ ದಿನವು ಸಕಾರಾತ್ಮಕ ಶಕ್ತಿ ( positive energy)ಯ ಸ್ವೀಕಾರ ಮಾಡುವ ದಿನವಾಗಿತ್ತು. ಅನೇಕ ಜನರು ಚಾಪೆಗಳು, ದಿಂಬುಗಳು ಮತ್ತು ರಗ್ಗುಗಳೊಂದಿಗೆ ನೆರಳಿನಲ್ಲಿ ಕುಳಿತು ಯೋಗ ಮಾಡಿದರು, ವಿಶ್ರಾಂತಿ ಪಡೆದರು.
mYoga App: ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಯೋಗ ಪ್ರ್ಯಾಕ್ಟೀಸ್ ಮಾಡ್ಬಹುದು!
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸೌದಿ ಯೋಗ ಸಮಿತಿಯ ಅಧ್ಯಕ್ಷ ನೌಫ್ ಬಿಂತ್ ಮುಹಮ್ಮದ್ ಅಲ್-ಮರೂಯಿ (Nouf bint Muhammad Al-Maroui) ಯೋಗ ಮಾಡುವ ಉತ್ಸಾಹಿಗಳ ಸಂಖ್ಯೆ ಮತ್ತು ಶಕ್ತಿಯುತ, ಸಕಾರಾತ್ಮಕ ಪ್ರತಿಕ್ರಿಯೆಯಿಂದ ಮನಸ್ಸು ತುಂಬಿ ಬಂದಿದೆ ಎಂದು ಹೇಳಿದರು. ಯೋಗವು ನಮ್ಮ ಆರೋಗ್ಯ ಕ್ಷೇಮವನ್ನು ಕಾಪಾಡಿಕೊಳ್ಳಲು ಮತ್ತು ಹಲವಾರು ಆರೋಗ್ಯ ಸಮಸ್ಯೆಗಳು ಮತ್ತು ಕಾಯಿಲೆಗಳನ್ನು ನಿವಾರಿಸಲು ರೂಪಿಸಲ್ಪಟ್ಟಿರುವ ಚಿಕಿತ್ಸೆಯಾಗಿದೆ ಎಂದು ಅವರು ಹೇಳಿದರು. ಸೌದಿ ಅರೇಬಿಯಾ ಸರ್ಕಾರದ ಉತ್ತಮ ಬೆಂಬಲದಿಂದಾಗಿ ಸೌದಿ ಅರೇಬಿಯಾ ಎಲ್ಲಾ ಕ್ಷೇತ್ರಗಳಲ್ಲಿ ಹಾಗೂ ಇಲ್ಲಿನ ಜನರ ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತಿದೆ ಎಂದು ಹೇಳಿದರು.
ಕೊಲ್ಲಿ ರಾಷ್ಟ್ರದಲ್ಲಿ ಯೋಗ ಪಸರಿಸುತ್ತಿರುವ ಕನ್ನಡತಿ..!
ಉತ್ಸವವು ಅತ್ಯುತ್ತಮವಾಗಿ ಯಶಸ್ಸು ಕಂಡಿದೆ ಮತ್ತು ಸೌದಿಗಳು ಮಾತ್ರವಲ್ಲದೆ ಎಲ್ಲರೂ ಈ ಕಾರ್ಯಕ್ರಮದ ಏಕೈಕ ಉದ್ದೇಶವಾದ ಯೋಗದ ಕುರಿತು ನಮ್ಮ ಆಲೋಚನೆಗಳನ್ನು ಸ್ವೀಕರಿಸಿದ್ದು, ಇದರಿಂದ ನನಗೆ ಸಂತೋಷವಾಗಿದೆ. ನಾವು ಕುಟುಂಬಗಳಿಗೆ ಯೋಗವನ್ನು ಉತ್ತೇಜಿಸಲು ಮತ್ತು ದೇಶದಲ್ಲಿ ಅದನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ಸೌದಿಗಳು ತಮ್ಮ ದಿನವನ್ನು ಯೋಗದೊಂದಿಗೆ ಪ್ರಾರಂಭಿಸಬೇಕೆಂದು ನಾವು ಬಯಸುತ್ತೇವೆ, ಇದಕ್ಕೆ ದಿನದ 20 ನಿಮಿಷ ವ್ಯಯಿಸಿದರೆ ಸಾಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮಕ್ಕೆ ಸೌದಿ ಜನರ ಪ್ರತಿಕ್ರಿಯೆಯೂ ಸಕಾರಾತ್ಮಕವಾಗಿತ್ತು.
