ಮಾನಸಿಕ ಆರೋಗ್ಯಕ್ಕೆ ಒಳ್ಳೆ ಮದ್ದು ಪುಸ್ತಕ ಓದೋ ಅಭ್ಯಾಸ
ಈಗ ಮೊಬೈಲ್ ಯುಗ. ಪುಸ್ತಕವೆಲ್ಲ ಮೂಲೆ ಸೇರುತ್ತಿದೆ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಪುಸ್ತಕ ಓದುತ್ತಿದ್ದಾರೆ. ಕಥೆಗಳನ್ನು ಓದಿ ಖುಷಿಯಾಗ್ತಿದ್ದ ಮಕ್ಕಳಿಗೆ ಈಗ ಮೊಬೈಲ್ ಜೀವವಾಗಿದೆ. ಆದ್ರೆ ಈಗಿನಿಂದ್ಲೇ ಮಕ್ಕಳಿಗೆ ಓದಿನ ಹವ್ಯಾಸ ಕಲಿಸಿ, ಪಾಲಕರು ಪುಸ್ತಕ ಕೈನಲ್ಲಿ ಹಿಡಿದ್ರೆ ಅದ್ರಿಂದಾಗುವ ಪ್ರಯೋಜನ ಅಪಾರ.
ದೇಶ ಸುತ್ತು ಕೋಶ ಓದು ಎಂಬ ಮಾತಿದೆ. ಇವೆರಡರಿಂದಲೂ ಜ್ಞಾನ ಹೆಚ್ಚು ವೃದ್ಧಿಯಾಗುತ್ತದೆ. ಪುಸ್ತಕ ನಮ್ಮನ್ನು ಸಮಾಜದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ. ನಮ್ಮನ್ನು ನೈಜ ಜಗತ್ತಿನಿಂದ ಕಾಲ್ಪನಿಕ ಜಗತ್ತಿಗೆ ಕೊಂಡೊಯ್ಯುವ ಶಕ್ತಿ ಇರುವುದು ಪುಸ್ತಕಕ್ಕೆ ಮಾತ್ರ. ಸುತ್ತಲಿನ ವಾತಾವರಣ, ಸಮಾಜದಿಂದ ನಿಮಗೆ ಕಿರಿಕಿರಿ ಉಂಟಾಗುತ್ತಿದ್ದಲ್ಲಿ ಅದರಿಂದ ಈಚೆಗೆ ಬರಲು ಪುಸ್ತಕ ಒಂದು ಅತ್ಯುತ್ತಮ ಮಾರ್ಗವಾಗಿದೆ.
ಈಗ ಪುಸ್ತಕ (Book) ದ ಜಾಗವನ್ನು ಮೊಬೈಲ್ (Mobile) ಕಸಿದುಕೊಂಡಿದೆ. ಸಣ್ಣವರಿರಲಿ, ದೊಡ್ಡವರಿರಲಿ ಪುಸ್ತಕದ ಬದಲು ಮೊಬೈಲ್ ಹಿಡಿದು ಗಂಟೆಗಟ್ಟಲೆ ಕುಳಿತುಕೊಳ್ತಾರೆ. ಮೊಬೈಲ್ ಗಿಂತ ಪುಸ್ತಕದಿಂದ ಹೆಚ್ಚು ಜ್ಞಾನ ವೃದ್ಧಿ ಸಾಧ್ಯ. ಬರೀ ಜ್ಞಾನವೊಂದೇ ಅಲ್ಲ ಪುಸ್ತಕ ಓದುವ ಹವ್ಯಾಸ (Hobby) ಆರೋಗ್ಯವನ್ನೂ ವೃದ್ಧಿಸುತ್ತದೆ. ಪ್ರತಿ ದಿನ ಅರ್ಧ ಗಂಟೆಯಾದ್ರೂ ಪುಸ್ತಕ ಓದ್ಬೇಕು. ಪುಸ್ತಕ ಓದುವುದರಿಂದ ನಮ್ಮ ದೇಹದ ಮೇಲೆ ಉಂಟಾಗುವ ಪ್ರಯೋಜನಗಳು ಯಾವುವು ಎಂಬುದನ್ನು ನಾವು ಹೇಳ್ತೇವೆ.
HEALTH TIPS : ಪ್ಯಾಂಟ್ ಹಿಂದಿನ ಕಿಸೆಯಲ್ಲಿ ಪರ್ಸ್ ಇಡ್ತೀರಾ? ಎಚ್ಚರ…
ಪುಸ್ತಕ ಓದೋದ್ರಿಂದ ಇದೆ ಈವೆಲ್ಲ ಪ್ರಯೋಜನ :
ಕ್ರಿಯಾಶೀಲಗೊಳ್ಳುವ ಮೆದುಳು : ಪುಸ್ತಕಗಳನ್ನು ಓದುವುದರಿಂದ ನಮ್ಮ ಮೆದುಳು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಪ್ರತಿದಿನವೂ ಮೆದುಳು ಕ್ರಿಯಾಶೀಲವಾಗಿದ್ದಾಗ ಅದು ಇನ್ನಷ್ಟು ಬಲಗೊಳ್ಳುತ್ತದೆ. ಪುಸ್ತಕವನ್ನು ಓದುತ್ತಾ ಹೋದಂತೆ ಅದರಲ್ಲಿನ ಕೆಲವು ಸನ್ನಿವೇಶಗಳು ನಮಗೆ ಗೊತ್ತಿಲ್ಲದಂತೇ ನಮ್ಮಲ್ಲಿ ಅನೇಕ ರೀತಿಯ ಭಾವನೆಗಳನ್ನು ಹುಟ್ಟುಹಾಕುತ್ತದೆ. ಇದರಿಂದ ಶರೀರಕ್ಕೂ ನಮ್ಮ ಮೆದುಳಿಗೂ ಸಂಪರ್ಕ ಹೆಚ್ಚಿ ಭಾವನೆಗಳು ಮೆದುಳನ್ನು ಹೆಚ್ಚು ಜಾಗೃತಗೊಳಿಸುತ್ತೆ ಎಂದು ಅಧ್ಯಯನಗಳು ಹೇಳುತ್ತವೆ.
ಶ್ರೀಮಂತವಾಗುತ್ತೆ ಶಬ್ದಕೋಶ: ನಮ್ಮ ಎದುರಿರುವವರನ್ನು ಸೋಲಿಸಬೇಕೆಂದ್ರೆ ಅವರಿಗೆ ತಿಳಿಯದ ವಿಷ್ಯ ಹೇಳ್ಬೇಕು. ಅವರಿಗೆ ತಿಳಿಯದ ವಿಷ್ಯ ನಮಗೆ ಗೊತ್ತಿರಬೇಕೆಂದ್ರೆ ನಮಗೆ ಹೆಚ್ಚಿನ ಜ್ಞಾನವಿರಬೇಕು. ಶಬ್ಧಗಳು ತಿಳಿದಿರಬೇಕು. ಓದುವುದರಿಂದ ನಮ್ಮ ಶಬ್ದಬಂಡಾರ ಹೆಚ್ಚಾಗುತ್ತೆ. ನಾವು ಕಷ್ಟಪಟ್ಟು ಡಿಕ್ಷನರಿಗಳನ್ನು ಓದಿ ಬಾಯಿಪಾಠ ಮಾಡುವ ಶಬ್ದಗಳು ನಮಗೆ ನೆನಪಿನಲ್ಲಿ ಉಳಿಯುವುದು ಕಷ್ಟ. ಚಿಕ್ಕಂದಿನಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ನಿಮಗೆ ಶಬ್ದಗಳನ್ನು ಬಾಯಿಪಾಠ ಮಾಡುವ ಗೋಜೇ ಇರುವುದಿಲ್ಲ. ನಿಮ್ಮ ಜ್ಞಾನವು ಹೆಚ್ಚಿದಂತೆ ನಿಮಗೆ ಅವಕಾಶಗಳು ಹೆಚ್ಚು ಸಿಗುತ್ತೆ ಮತ್ತು ಹೊರಗಿನ ಜನರೊಂದಿಗೆ ಸಂಪರ್ಕ ಬೆಳೆಸೋದು ಸುಲಭವಾಗುತ್ತದೆ.
ಸಹಾನುಭೂತಿ ಬೆಳೆಯುತ್ತದೆ : ಪುಸ್ತಕ ಓದುತ್ತಾ ಹೋದಂತೆ ಅದರಲ್ಲಿರುವ ಪಾತ್ರಗಳ ಜೊತೆ ನೀವು ಪಯಣ ಆರಂಭಿಸುತ್ತೀರಿ. ಈ ಪಯಣ ನಿಮ್ಮನ್ನು ಬೇರೆಯದೆ ಲೋಕಕ್ಕೆ ಕರೆದೊಯ್ಯುತ್ತದೆ. ಪುಸ್ತಕದ ಕತೆಗಳಲ್ಲಿ ಇರುವ ಒಳ್ಳೆಯ ಅಥವಾ ಕೆಟ್ಟ ಸ್ವಭಾವದವರ ಜೊತೆ ನೀವು ಇರುತ್ತೀರಿ. ಕತೆಯಲ್ಲಿರುವ ಒಳ್ಳೆಯ ಪಾತ್ರದ ಬಗ್ಗೆ ಸಹಾನುಭೂತಿ ತೋರಿಸುತ್ತೀರಿ. ನೀವು ನಿಜ ಜೀವನದಲ್ಲಿ ನೋಡಿರದ ಎಷ್ಟೋ ಜನರ ಬದುಕು, ಬಡತನ, ಕಷ್ಟಗಳನ್ನು ಒಂದು ಪುಸ್ತಕ ನಿಮಗೆ ತಿಳಿಸುತ್ತದೆ.
ದೂರವಾಗುತ್ತೆ ಒತ್ತಡ (Stress) : ನಿಮಗೆ ಇಷ್ಟವಾಗುವ ಯಾವುದಾದರೂ ಒಂದು ಪುಸ್ತಕವನ್ನು ಪ್ರತಿದಿನ ಓದಿ. ಇದರಿಂದ ನಿಮ್ಮ ಮಾನಸಿಕ ಒತ್ತಡಗಳು ಹಾಗೂ ಶಾರೀರಿಕ ಸಮಸ್ಯೆಗಳು ಕೂಡ ದೂರವಾಗುತ್ತದೆ. ಕೇವಲ ಆರು ನಿಮಿಷಗಳ ಓದು ನಿಮ್ಮ ಹೃದಯಬಡಿತವನ್ನು ಹತೋಟಿಯಲ್ಲಿಡುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ.
ಪುಸ್ತಕ ಅರಿವನ್ನು ಹೆಚ್ಚಿಸುತ್ತದೆ : ಅರಿವಿನ ಕೊರತೆಯನ್ನು ದೂರಮಾಡುವ ಶಕ್ತಿ ಪುಸ್ತಕಕ್ಕೆ ಮಾತ್ರ ಇದೆ. ವಯಸ್ಸಾದಂತೆ ಅರಿವು ಕಡಿಮೆಯಾಗುತ್ತ ಬರುತ್ತದೆ. ಇದು ಒಂದು ರೀತಿಯ ವಯೋಸಹಜ ಖಾಯಿಲೆ. ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದೇ ಇದ್ದರೂ ಪುಸ್ತಕ ಓದುವ ಮೂಲಕ ಅರಿವನ್ನು ಹೆಚ್ಚಿಸಬಹುದು. ಓದುವುದರಿಂದ ಅಲ್ಜೈಮರ್, ಆತಂಕ, ಖಿನ್ನತೆಗಳಿಂದ ದೂರವಿರಬಹುದು.
ಗರ್ಭಿಣಿಯರು ಇಷ್ಟನೇ ತಿಂಗಳಿಂದ ಗಾಜಿನ ಬಳೆಗಳನ್ನು ಧರಿಸಿದ್ರೆ ಮಗು ಮೆದುಳು ಚುರುಕಾಗುತ್ತೆ!
ಸಂತೋಷಕ್ಕೆ ಪುಸ್ತಕ ಮದ್ದು : ಪುಸ್ತಕ ನಿಮ್ಮ ಒಂಟಿತನವನ್ನು ಹೋಗಲಾಡಿಸುತ್ತದೆ. ಹಾಗೆಯೇ ಪುಸ್ತಕ ಓದುವಾಗ ಮೂಡುವ ಕುತೂಹಲ, ತಲೆಯಲ್ಲಿ ಓಡುವ ನಾನಾ ಪ್ರಶ್ನೆಗಳು ಕೆಲ ಹಾರ್ಮೋನ್ ಗಳನ್ನು ಬಿಡುಗಡೆ ಮಾಡುತ್ತವೆ. ಅಲ್ಲಿ ಒಳ್ಳೆಯ ಸನ್ನಿವೇಶವಿದ್ದಾಗ ಖುಷಿಯ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ನಿಮ್ಮ ಆರೋಗ್ಯ ಕಾಪಾಡಲು ನೆರವಾಗುತ್ತದೆ.