ಮೊಬೈಲ್ ಕೈಯಲ್ಲಿದ್ರೆ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಎಂಬ ಪರಿವೇ ಇರುವುದಿಲ್ಲ. ಅದರಲ್ಲೂ ಯಾರೊಂದಿಗಾದರೂ ಚಾಟ್ ಮಾಡುತ್ತಿದ್ದರೆ,ಕಣ್ಣು ಮೊಬೈಲ್ ಸ್ಕ್ರೀನ್ ಬಿಟ್ಟು ಆ ಕಡೆ ಈ ಕಡೆ ಹರಿದಾಡುವುದೇ ಇಲ್ಲ. ಊಟ ಮಾಡುವಾಗ ಕೈ ಪ್ಲೇಟ್ ಮತ್ತು ಬಾಯಿ ಮಧ್ಯೆ ಯಾಂತ್ರಿಕವಾಗಿ ಸಾಗುತ್ತಿರುತ್ತದೆ, ಆದರೆ ಕಣ್ಣೆಲ್ಲ ಮೊಬೈಲ್ ಮೇಲೆಯೇ ಇರುತ್ತದೆ. ಇನ್ನು ರಸ್ತೆಯಲ್ಲಿ ನಡೆದು ಹೋಗುತ್ತಿರುವಾಗ ಪರಿಚಿತರು ಎದುರು ಹಾದು ಹೋದರೂ ತಿಳಿಯುವುದೇ ಇಲ್ಲ. ಹೀಗೆ ಜಗದ ಪರಿವೇ ಇಲ್ಲದೆ ಮೊಬೈಲ್‍ನಲ್ಲಿ ಮೆಸೇಜ್ ಟೈಪ್ ಮಾಡುತ್ತ ರಸ್ತೆಯಲ್ಲಿ ಸಾಗಿದ್ರೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುತ್ತಿದೆ ಹೊಸ ಅಧ್ಯಯನ. ಹೌದು, ಮ್ಯೂಸಿಕ್ ಕೇಳುತ್ತ ಇಲ್ಲವೆ ಮಾತನಾಡುತ್ತ ರಸ್ತೆಯಲ್ಲಿ ನಡೆಯುವುದಕ್ಕಿಂತ ಟೆಕ್ಸ್ಟ್ ಚಾಟ್ ಮಾಡುತ್ತ ಸಾಗುವುದರಿಂದ ಅಪಘಾತಕ್ಕೊಳಗಾಗುವ ಸಂಭವ ಅಧಿಕ ಎಂದು ಇಂಜ್ಯೂರಿ ಪ್ರೆವೆನ್ಷನ್ ಎಂಬ ಜರ್ನಲ್‍ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.

ಚಾಕೋಲೇಟ್ ತಿಂದು, ಹಂಚಿ ಆರೋಗ್ಯವರ್ಧಿಸಿಕೊಳ್ಳಿ!

ಸ್ಮಾರ್ಟ್‍ಫೋನ್ ಬಳಕೆಗೂ ಪಾದಚಾರಿಗಳ ಸುರಕ್ಷತೆಗೂ ಸಂಬಂಧವಿದೆ ಎಂದು ಕೆನಡಾದ ಕ್ಯಾಲ್ಗರೆ ಯುನಿವರ್ಸಿಟಿ ಸಂಶೋಧಕರು ನಡೆಸಿದ ಅಧ್ಯಯನ ತಿಳಿಸಿದೆ. ಮೊಬೈಲ್ ನೋಡುತ್ತ ರಸ್ತೆ ದಾಟುವಾಗ ಎಡ, ಬಲ ನೋಡದೇ ಮುನ್ನುಗ್ಗುವ ಕಾರಣ ಅಪಘಾತಗಳು ಸಂಭವಿಸುತ್ತವೆ ಎಂಬ ಅಭಿಪ್ರಾಯವನ್ನು ಅಧ್ಯಯನ ವ್ಯಕ್ತಪಡಿಸಿದೆ.

ವರ್ಷಕ್ಕೆ 2.7ಲಕ್ಷ ಪಾದಚಾರಿಗಳ ಸಾವು: ಜಗತ್ತಿನಾದ್ಯಂತ ಪ್ರತಿವರ್ಷ 2,70,000 ಪಾದಚಾರಿಗಳು ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.‘ಪಾದಚಾರಿಗಳ ಗಮನಭಂಗ’ ಇತ್ತೀಚಿನ ದಿನಗಳಲ್ಲಿ ರಸ್ತೆ ಸುರಕ್ಷತೆಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ರಸ್ತೆಯಲ್ಲಿ ನಡೆದು ಸಾಗುವಾಗ ಹಾಗೂ ರಸ್ತೆ ದಾಟುವಾಗ ಪಾದಚಾರಿಗಳಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಅಪಘಾತಕ್ಕೆ ಅಹ್ವಾನ ನೀಡುತ್ತಿದೆ ಎಂಬ ಕಳವಳವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ. 

ಅಧ್ಯಾತ್ಮದಿಂದ ಕ್ಯಾನ್ಸರ್‌ ಗೆಲ್ಲಬಹುದಾ!

ಟೆಕ್ಸ್ಟ್ ಮಾಡುತ್ತ ನಡೆದರೆ ಹೆಚ್ಚು ಅಪಾಯ: ಕೈಯಲ್ಲಿ ಏನೂ ಸಾಧನವಿಲ್ಲದೆ ಹಾಗೂ ಕೈಯಲ್ಲಿ ಏನಾದರೂ ಸಾಧನ ಹಿಡಿದು ರಸ್ತೆ ದಾಟುವುದಕ್ಕೂ ರಸ್ತೆ ಸುರಕ್ಷತೆಗೂ ಸಂಬಂಧವಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಸಂಶೋಧಕರು ರಸ್ತೆ ಅಪಘಾತಕ್ಕೆ ಸಂಬಂಧಿಸಿ ಪ್ರಕಟವಾದ ಅಧ್ಯಯನಗಳನ್ನು ಸಾಕ್ಷ್ಯವಾಗಿ ಪರಿಗಣಿಸಿದ್ದರು.ಇದರಲ್ಲಿ ಫೋನ್‍ನಲ್ಲಿ ಮಾತನಾಡುತ್ತ,ಟೆಕ್ಸ್ಟ್ ಮೆಸೇಜ್ ಮಾಡುತ್ತ, ಬ್ರೌಸಿಂಗ್ ಹಾಗೂ ಮ್ಯೂಸಿಕ್ ಕೇಳುತ್ತ ಸಾಗುವ ಚಟುವಟಿಕೆಯಿಂದ ರಸ್ತೆ ಅಪಘಾತವಾಗುವ ಕುರಿತು ನಡೆದ ಅಧ್ಯಯನಗಳು ಸೇರಿವೆ. ಈ ರೀತಿ ಸುಮಾರು 33 ಅಧ್ಯಯನಗಳ ಪೈಕಿ 14ರ ಮಾಹಿತಿಗಳನ್ನು ಪರಿಗಣಿಸುವ ಜೊತೆಗೆ 872 ಜನರ ಸಮೀಕ್ಷೆಯನ್ನು ಕೂಡ ನಡೆಸಿದರು. ಆ ಬಳಿಕ 8 ಅಧ್ಯಯನಗಳ ವರದಿಯನ್ನು ಕ್ರಮಬದ್ಧವಾಗಿ ಪರಿಶೀಲನೆಗೊಳಪಡಿಸಿದಾಗ ಮ್ಯೂಸಿಕ್ ಕೇಳುತ್ತ ಸಾಗುವುದರಿಂದ ಪಾದಚಾರಿಗಳ ಸುರಕ್ಷತೆಗೆ ಹೆಚ್ಚಿನ ಅಪಾಯವಿಲ್ಲ ಎಂಬುದು ಕಂಡುಬಂತು. ಇನ್ನು ಫೋನ್‍ನಲ್ಲಿ ಮಾತನಾಡುವುದರಿಂದ ರಸ್ತೆ ದಾಟುವಾಗ ಸಮಯವನ್ನು ಅಂದಾಜಿಸುವಲ್ಲಿ ಸ್ವಲ್ಪ ಎಡವುವ ಸಾಧ್ಯತೆಯಿದ್ದು,ಇದರಿಂದ ಸುರಕ್ಷಿತವಾಗಿ ದಾಟಲು ಸಾಧ್ಯವಾಗದಿರಬಹುದು. ಅಂದರೆ ವಾಹನ ದೂರದಲ್ಲಿದೆ ಎಂದು ತಪ್ಪು ಅಂದಾಜಿಸಿ ಅಥವಾ ಬೇಗ ದಾಟಬೇಕೆಂಬ ಅವಸರದಲ್ಲಿ ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುವುದು ಪತ್ತೆಯಾಗಿದೆ. ಆದರೆ, ಇವೆರಡಕ್ಕಿಂತಲೂ ಅಪಾಯಕಾರಿಯಾದದ್ದು ಮೊಬೈಲ್‍ನಲ್ಲಿ ಟೆಕ್ಸ್ಟ್ ಮೆಸೇಜ್ ಮಾಡುತ್ತ ನಡೆಯುವುದು ಎಂಬುದನ್ನು ಸಂಶೋಧಕರು ದೃಢಪಡಿಸಿದ್ದಾರೆ.

ಅಪಾಯಕ್ಕೆ ಆಹ್ವಾನ: ಮೊಬೈಲ್‍ನಲ್ಲಿ ಚಾಟ್ ಮಾಡುತ್ತ ರಸ್ತೆ ದಾಟಲು ಮುಂದಾಗುವವರು ಆ ಕಡೆ ಈ ಕಡೆ ನೋಟ ಹರಿಸುವುದು ಕಡಿಮೆ.ಇದರಿಂದಾಗಿ ಅಪಘಾತಗಳುಂಟಾಗುವ ಸಾಧ್ಯತೆ ಹೆಚ್ಚು.ಇನ್ನೊಬ್ಬ ಪಾದಚಾರಿಗೆ ಅಥವಾ ವಾಹನಗಳಿಗೆ ಡಿಕ್ಕಿ ಹೊಡೆದು ಏಟು ಮಾಡಿಕೊಳ್ಳುವ ಇಲ್ಲವೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳಿದೆ. ಇನ್ನು ಟೆಕ್ಸ್ಟ್ ಮಾಡುತ್ತ ರಸ್ತೆ ದಾಟಲು ಹೆಚ್ಚಿನ ಸಮಯ ಹಿಡಿಯುವುದರಿಂದ ಸುರಕ್ಷಿತವಾಗಿ ರಸ್ತೆ ದಾಟುವುದು ತುಸು ಕಷ್ಟದ ಕೆಲಸವೇ ಸರಿ. ಮೊಬೈಲ್‍ನಲ್ಲಿ ಟೆಕ್ಸ್ಟ್ ಮಾಡುತ್ತ ರಸ್ತೆ ದಾಟುವ ವರ್ತನೆ ಮೇಲೆ ಲಿಂಗ, ಸಮಯ, ಗುಂಪು ಅಥವಾ ಏಕಾಂಗಿಯಾಗಿ ರಸ್ತೆ ದಾಟುವುದು ಹಾಗೂ ನಡೆಯುವ ವೇಗ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನ ಪತ್ತೆ ಹಚ್ಚಿದೆ. 

ಕೊರೋನಾಗೆ ಭಾರತೀಯ ಮೂಲದ ವೈದ್ಯನಿಂದ ಲಸಿಕೆ

ಇಂದು ಮೊಬೈಲೇ ಜಗತ್ತಾಗಿ ಬಿಟ್ಟಿದೆ. ಸೋಷಿಯಲ್ ಮೀಡಿಯಾ, ನಾನಾ ವಿಧದ ಆಪ್‍ಗಳು, ಡಿಜಿಟಲ್ ವಿಡಿಯೋಗಳು, ಮ್ಯೂಸಿಕ್‍ಗಳು ನಮ್ಮ ಬದುಕನ್ನು ಆವರಿಸಿ ಬಿಟ್ಟಿವೆ. ಎರಡು ನಿಮಿಷ ಮೊಬೈಲ್ ಸ್ಕ್ರೀನ್ ನೋಡದೆ ಇರಲಾರದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದರೆ, ಅತಿಯಾದ ಮೊಬೈಲ್ ಗೀಳು ಪ್ರಾಣಕ್ಕೆ ಸಂಚಕಾರ ತಂದ ಅನೇಕ ನಿದರ್ಶನಗಳನ್ನು ನಿತ್ಯ ಮಾಧ್ಯಮಗಳಲ್ಲಿ ಓದುತ್ತ, ನೋಡುತ್ತ ಇರುತ್ತೇವೆ.ಆದರೂ ರಸ್ತೆಯಲ್ಲಿ ನಡೆಯುವಾಗ, ಕ್ರಾಸ್ ಮಾಡುವಾಗ, ಡ್ರೈವ್ ಮಾಡುವಾಗ,ಮೊಬೈಲ್‍ನಲ್ಲಿ ಮಾತನಾಡಬಾರದು,ಮೇಸೇಜ್ ಮಾಡಬಾರದು ಎಂಬುದನ್ನು ಬೇಕಂತಲೇ ಮರೆತಂತೆ ನಟಿಸುವ ಜಾಣರು ನಾವು.ಅದೆಷ್ಟೇ ತಲೆಹೋಗುವಂತಹ ಅರ್ಜೆಂಟ್ ಇದ್ದರೂ ರಸ್ತೆ ದಾಟುವಾಗ ಮೊಬೈಲ್ ನೋಡಲ್ಲ ಎಂಬ ಶಪಥವನ್ನು ಈಗಲೇ ಕೈಗೊಳ್ಳಿ. ಬಂಡೆ ಗಟ್ಟಿಯಿದೆ ಎಂದು ತಲೆ ಚಚ್ಚಿಕೊಳ್ಳಲು ಹೋದ್ರೆ ಹೋಗುವುದು ನಮ್ಮ ತಲೆನೇ ಎಂಬುದು ನೆನಪಿರಲಿ.