Paracetamol Side Effects: ಜ್ವರ, ತಲೆನೋವು ಅಂತ ಟ್ಯಾಬ್ಲೆಟ್ ತಿನ್ನೋ ಮುನ್ನ ತಿಳ್ಕೊಳ್ಳಿ
ಪ್ಯಾರಸಿಟಮಾಲ್ (Paracetamol) ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಟ್ಯಾಬ್ಲೆಟ್ (Tablet). ಜ್ವರ (Fever), ನೆಗಡಿ ಕಾಣಿಸಿಕೊಂಡಾಗ ಪ್ರಿಸ್ಕ್ರಿಪ್ಶನ್ ಇಲ್ಲದೆಯೇ ತೆಗೆದುಕೊಳ್ಳುವ ಮಾತ್ರೆ. ಆದ್ರೆ ಈ ಔಷಧಿಯಿಂದಲೂ ಹಲವು ಅಡ್ಡಪರಿಣಾಮಗಳಿವೆ ಅನ್ನೋದು ನಿಮಗೆ ಗೊತ್ತಾ ?
ಪ್ಯಾರಸಿಟಮಾಲ್ (Paracetamol) ಎಂದರೆ ಎಲ್ಲರಿಗೆ ಗೊತ್ತಿರುವ ಹಾಗೇ ಜ್ವರಕ್ಕೆ ತೆಗೆದುಕೊಳ್ಳುವ ಮಾತ್ರೆ. ಇದನ್ನು ಅಸಿಟಮಿನೋಫಿನ್ ಎಂದು ಸಹ ಕರೆಯಲಾಗುತ್ತದೆ. ಜ್ವರವನ್ನು ಗುಣಪಡಿಸಲು, ನೋವು ಕಡಿಮೆಯಾಗಲು ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಅನ್ನು ಬಳಸಲಾಗುತ್ತದೆ. ತಲೆನೋವು, ಹಲ್ಲುನೋವು, ನೆಗಡಿ ಜ್ವರಕ್ಕೂ ಈ ಮಾತ್ರೆಯ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೊರೋನಾ (Corona) ಸೋಂಕು ಆರಂಭವಾದಗಿನಿಂದಲೂ ಜ್ವರವನ್ನು ಕಡಿಮೆ ಮಾಡಲು ಪ್ಯಾರಸಿಟಮಾಲ್ ಬಳಕೆಯು ಇನ್ನೂ ಹೆಚ್ಚಾಗಿದೆ. ಜ್ವರ, ಶೀತ ಮೊದಲಾದ ಸಮಸ್ಯೆಗೆ ಪ್ಯಾರಸಿಟಮಾಲ್ ತ್ವರಿತವಾಗಿ ಚಿಕಿತ್ಸೆ ನೀಡಿದರೂ, ಇದರ ಮಿತಿ ಮೀರಿದ ಸೇವನೆ ಅಪಾಯಕಾರಿಯಾಗಿದೆ.
ಅಲ್ಲದೆ, ಕೆಲವೊಂದು ಪಾನೀಯಗಳ ಜತೆ, ಕೆಲವೊಂದು ಪಾನೀಯಗಳನ್ನು ಕುಡಿದ ನಂತರ ಪ್ಯಾರಸಿಟಮಾಲ್ ಅನ್ನು ಸೇವಿಸಲೇಬಾರದು. ಅಷ್ಟೇ ಅಲ್ಲ, ಪ್ಯಾರಸಿಟಮಾಲ್ ತಿಂದ ನಂತರವೂ ಕೆಲವು ಪಾನೀಯಗಳನ್ನು ಕುಡಿಯುವುದು ಒಳ್ಳೆಯದಲ್ಲ. ಪ್ಯಾರಸಿಟಮಾಲ್ ಮಿತಿಮೀರಿದ ಸೇವನೆ ಅಥವಾ ತಪ್ಪಾದ ಪಾನೀಯದೊಂದಿಗೆ ಔಷಧವನ್ನು ಮಿಶ್ರಣ ಮಾಡುವುದು ತೀವ್ರವಾದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಇದು ಜೀವಕ್ಕೆ ಸಹ ಅಪಾಯವನ್ನು ಉಂಟುಮಾಡಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಒಮೇಗಾ 3 ಹೆಚ್ಚಾಗಿರುವ ಸಾಲ್ಮನ್ ಮೀನು ಸೇವಿಸಿ ಖಾಯಿಲೆ ದೂರವಾಗಿಸಿ
ಪ್ರತಿಯೊಂದು ಔಷಧವು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಆರೋಗ್ಯ (Health)ದ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಹೀಗಾಗಿ ಯಾವತ್ತೂ ಡಾಕ್ಟರ್ ನೀಡಿದ ಪ್ರಿಸ್ಕ್ರಿಪ್ಷನ್ ಅನ್ನು ಸರಿಯಾಗಿ ನೋಡಿಕೊಂಡೇ ಮಾತ್ರೆಗಳನ್ನು ತೆಗೆದುಕೊಳ್ಳಿ. ಸಂಶಯಗಳಿದ್ದಾಗ ಅವರಲ್ಲಿ ಕೇಳಿ ಸರಿಯಾಗಿ ಮಾಹಿತಿ ಪಡೆಯಿರಿ. ಕೆಲವು ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು, ಕೆಲವೊಂದು ಮಾತ್ರೆಗಳು ಆಹಾರದ ಮೊದಲು, ಕೆಲವೊಂದು ಮಾತ್ರೆಗಳನ್ನು ಆಹಾರ ಸೇವನೆಯ ನಂತರ ತೆಗೆದುಕೊಳ್ಳಲು ವೈದ್ಯರು ಹೇಳುತ್ತಾರೆ. ಈ ಸೂಚನೆಯನ್ನು ಸರಿಯಾಗಿ ಪಾಲಿಸಬೇಕು.
ಪ್ಯಾರಸಿಟಮಾಲ್ ಮಾತ್ರೆಯ ಜತೆ ಮದ್ಯಪಾನ ಮಾಡಬಾರದು
ಪ್ಯಾರಸಿಟಮಾಲ್ ತೆಗೆದುಕೊಳ್ಳುವಾಗ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಈ ಮಾತ್ರೆಯನ್ನು ತೆಗೆದುಕೊಳ್ಳುವ ಮೊದಲು ಅಥವಾ ನಂತರ ಮದ್ಯಪಾನ (Alchohol) ಮಾಡಲೇಬಾರದು. ಅಲ್ಕೋಹಾಲ್ ಸೇವನೆಯು ದೇಹದ ಮೇಲೆ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಇದಲ್ಲದೆ, ಅಲ್ಕೋಹಾಲ್ ಎಥೆನಾಲ್ ಅಂಶವನ್ನು ಹೊಂದಿರುತ್ತದೆ. ಎಥೆನಾಲ್ ಜೊತೆಗೆ ಪ್ಯಾರಸಿಟಮಾಲ್ ಅನ್ನು ಮಿಶ್ರಣ ಮಾಡುವುದರಿಂದ ವಾಕರಿಕೆ, ವಾಂತಿ, ತಲೆನೋವು, ಮೂರ್ಛೆ ಹೋಗುವುದು ಮೊದಲಾದ ಸಮಸ್ಯೆಗಳಿಗೆ ಕಾರಣವಾಗಬಹುದು. ರಾತ್ರಿಯ ಅತಿಯಾದ ಮದ್ಯಪಾನದ ನಂತರ ಬೆಳಗ್ಗೆ ಹ್ಯಾಂಗೋವರ್ ತೊಡೆದುಹಾಕಲು ಪ್ಯಾರಸಿಟಮಾಲ್ ತೆಗೆದುಕೊಳ್ಳುವುದು ಗಂಭೀರ ಅಪಾಯ (Danger)ಕ್ಕೆ ಸಿಲುಕಿಸಬಹುದು.
ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಂಡರೆ ಹಾರ್ಟ್ ಅಟ್ಯಾಕ್ ಸಾಧ್ಯತೆ ಹೆಚ್ಚು!
ಮದ್ಯ ಹಾಗೂ ಪ್ಯಾರಸಿಟಮಾಲ್ ಸಂಯೋಜನೆಯು ಯಕೃತ್ತಿನ ಸಮಸ್ಯೆಗೂ ಕಾರಣವಾಗಬಹುದು, ಇದು ಜೀವಕ್ಕೂ ಮಾರಕವಾಗಬಹುದು. ಪ್ಯಾರಸಿಟಮಾಲ್ ಮಾತ್ರವಲ್ಲ, ಆಲ್ಕೋಹಾಲ್‌ನ್ನು ಬೇರೆ ಯಾವುದೇ ಔಷಧಿಗಳೊಂದಿಗೆ ಸಂಯೋಜಿಸುವುದು ಉತ್ತಮ ಆಯ್ಕೆಯಲ್ಲ.
ಸುರಕ್ಷಿತ ಮಿತಿಯಲ್ಲಿ ಔಷಧಿ ತೆಗೆದುಕೊಳ್ಳಬೇಕು
ಪ್ಯಾರಸಿಟಮಾಲ್ ಒಂದು ಸೌಮ್ಯವಾದ ಔಷಧವಾಗಿದ್ದರೂ ಸಹ, ಅದನ್ನು ಮಿತಿಯಾಗಿ ಸೇವಿಸಬೇಕು. ವಯಸ್ಕರಿಗೆ, ಪ್ರತಿ ಡೋಸ್‌ಗೆ 1 ಗ್ರಾಂ ಪ್ಯಾರಸಿಟಮಾಲ್ ಮತ್ತು ದಿನಕ್ಕೆ 4 ಗ್ರಾಂ (4000 ಮಿಗ್ರಾಂ) ಸೇವನೆಗೆ ಸುರಕ್ಷಿತವಾಗಿದೆ. ಈ ಮಿತಿಯನ್ನು ಮೀರಿ ಹೋಗುವುದು ಯಕೃತ್ತಿನ ತೊಂದರೆಗೆ ಕಾರಣವಾಗಬಹುದು. ಪ್ರತಿದಿನ ಅಲ್ಕೋಹಾಲ್ ಸೇವಿಸುವವರು, 2 ಗ್ರಾಂಗಿಂತ ಹೆಚ್ಚು ಪ್ಯಾರಸಿಟಮಾಲ್ ಸೇವಿಸಲೇಬಾರದು. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪ್ಯಾರಸಿಟಮಾಲ್ ಕೊಡುವಾಗ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು.
ಮಿತಿಮೀರಿದ ಬಳಕೆಯ ಅಡ್ಡ ಪರಿಣಾಮಗಳು
ಅನೇಕ ಜನರು ಪ್ಯಾರಸಿಟಮಾಲ್ ಅಲರ್ಜಿ (Allergy)ಯನ್ನು ಹೊಂದಿರುತ್ತಾರೆ, ಆದ್ದರಿಂದ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಅದು ನಿಮ್ಮ ದೇಹಕ್ಕೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂಬುದನ್ನು ವೈದ್ಯರ ಬಳಿ ತಿಳಿದು ಖಚಿತಪಡಿಸಿಕೊಳ್ಳಿ. ಔಷಧವನ್ನು ತೆಗೆದುಕೊಂಡ ನಂತರ, ಉಸಿರಾಟದ ತೊಂದರೆ, ಮುಖ, ತುಟಿಗಳು, ನಾಲಿಗೆ ಅಥವಾ ಗಂಟಲಿನ ಊತ ಕಂಡು ಬಂದರೆ, ತುರ್ತು ವೈದ್ಯಕೀಯ ಸಹಾಯವನ್ನು ಪಡೆಯಿರಿ.