ಕೆಲವರಿಗೆ ದಿಂಬಿನ ಮೇಲೆ ತಲೆಯಿಟ್ಟರೆ ಮಾತ್ರ ಸುಖ ನಿದ್ರೆ ಪ್ರಾಪ್ತಿಯಾಗುವುದು. ಆದರೆ, ನಿದ್ರೆಯ ಸುಖಕ್ಕಾಗಿ ದಿಂಬನ್ನು ಆಶ್ರಯಿಸುವ ನಾವು,ಕೆಲವೊಮ್ಮೆ ಅದರಿಂದ ನಮ್ಮ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಎಷ್ಟು ಗಮನ ಹರಿಸುತ್ತೇವೆ? ಬೆಳಗ್ಗೆ ಎದ್ದೇಳುವಾಗ ಕಾಡುವ ಕುತ್ತಿಗೆ ನೋವು ದಿಂಬಿನ ಕಾರಣಕ್ಕೆ ಬಂದಿರಬಹುದು.ಆದರೆ, ನಾವು ಆಗ ದಿಂಬನ್ನು ಪರಿಶೀಲಿಸುವ ಗೋಜಿಗೆ ಹೋಗದೆ ಬೇರೇನೋ ಕಾರಣಕ್ಕೆ ಕುತ್ತಿಗೆ ನೋವು ಕಾಡುತ್ತಿರಬಹುದು ಎಂದು ಭಾವಿಸಿ ಸುಮ್ಮನಿರುತ್ತೇವೆ. ನಿಮ್ಮ ದಿಂಬು ರೋಗಗಳನ್ನು ಹರಡುವ ಬ್ಯಾಕ್ಟೀರಿಯಾಗಳ ಅಡಗುತಾಣವಾಗಿರಬಹುದು,ನಿಮಗೆ ಪದೇಪದೆ ಕಾಡುವ ಡಸ್ಟ್ ಅಲರ್ಜಿಗೆ ಮೂಲ ಇದೇ ದಿಂಬರಾಗಿರಬಹುದು. ಹಲವು ವರ್ಷಗಳಿಂದ ಆ ದಿಂಬನ್ನು ಬಳಸುತ್ತಿರಬಹುದು. ಆದರೆ, ಅದಕ್ಕೂ ಒಂದು ವ್ಯಾಲಿಡಿಟಿ ಇರುತ್ತದೆ ಎಂಬುದನ್ನು ಅರಿತು ಕಾಲಕಾಲಕ್ಕೆ ದಿಂಬನ್ನು ಬದಲಾಯಿಸುವ ಇಲ್ಲವೆ ರಿಪೇರಿ ಮಾಡುವ ಕಾರ್ಯವನ್ನು ಮಾಡುವುದು ಅಗತ್ಯ. ಹಾಗಾದ್ರೆ ದಿಂಬು ಸರಿಯಿಲ್ಲ ಎಂಬುದನ್ನು ನಿರ್ಧರಿಸುವುದು ಹೇಗೆ?

ಎಲ್ಲರೊಂದಿಗೂ ಬೆರೆತು ಬಾಳಲು ಕಣ್ತುಂಬಾ ನಿದ್ರಿಸಿ

ಎದ್ದೇಳುವಾಗ ಕುತ್ತಿಗೆ ಅಥವಾ ಬೆನ್ನುನೋವು: ರಾತ್ರಿ ಚೆನ್ನಾಗಿ ನಿದ್ರೆ ಮಾಡಿರುತ್ತೀರಿ. ಆದರೂ ಬೆಳಗ್ಗೆ ಎದ್ದೇಳುವಾಗ ಕುತ್ತಿಗೆ ಅಥವಾ ಬೆನ್ನುನೋವು ಕಾಣಿಸಿಕೊಂಡರೆ ಸೀದಾ ಹೋಗಿ ನಿಮ್ಮ ದಿಂಬನ್ನು ಪರಿಶೀಲಿಸಿ. ನಿಮ್ಮ ದಿಂಬು ಗಟ್ಟಿಯಾಗಿಲ್ಲದಿದ್ದರೆ ಅಥವಾ ಬೌನ್ಸ್ ಆಗುತ್ತಿಲ್ಲವೆಂದರೆ ಅದನ್ನು ಬದಲಾಯಿಸುವ ಸಮಯ ಬಂದಿದೆ ಎಂದೇ ಅರ್ಥ. ಗಟ್ಟಿಯಾಗಿರುವ, ತಲೆಯಿಟ್ಟ ತಕ್ಷಣ ಒಳಗೆ ಹೋದರೂ ತಲೆ ಎತ್ತಿದ ಬಳಿಕ ಮರಳಿ ಹಿಂದಿನ ರೂಪಕ್ಕೆ ಮರಳಬಲ್ಲ ದಿಂಬು ಮಲಗಿರುವಾಗ ನಿಮ್ಮ ತಲೆ, ಕತ್ತು ಮತ್ತು ಭುಜಗಳಿಗೆ ಉತ್ತಮ ಆರಾಮ ಒದಗಿಸುತ್ತದೆ. 

ದಿಂಬಿನಲ್ಲಿ ಗಂಟುಗಳಾದರೆ: ದಿಂಬನ್ನು ಕೈಯಲ್ಲಿ ಹಿಡಿದು ಮುಟ್ಟಿ ನೋಡಿ. ನಿಮಗೆ ಗಂಟುಗಳು ಸಿಕ್ಕಿದರೆ ಕೂಡಲೇ ಆ ದಿಂಬನ್ನು ಬದಲಾಯಿಸಿ. ಗಂಟುಗಳನ್ನು ಹೊಂದಿರುವ ದಿಂಬು ನಿಮ್ಮ ತಲೆ ಹಾಗೂ ಕತ್ತಿನ ಭಾಗಕ್ಕೆ ಆಸರೆ ಒದಗಿಸುವುದಿಲ್ಲ. ಇದರಿಂದಾಗಿಯೇ ತಲೆ, ಕತ್ತು ಹಾಗೂ ಬೆನ್ನುನೋವು ಕಾಣಿಸಿಕೊಳ್ಳುವುದು. ಗುಣಮಟ್ಟದ ಸ್ಪ್ರಿಂಗ್ ಆಕ್ಷನ್ ಇರುವ ದಿಂಬುಗಳನ್ನೇ ಆಯ್ಕೆ ಮಾಡಿ. ಇದು ತಲೆಯ ಭಾಗಕ್ಕೆ ಅಗತ್ಯ ಆಧಾರ ನೀಡುತ್ತದೆ. ಗುಣಮಟ್ಟ ಹೊಂದಿರದ ಕಡಿಮೆ ಬೆಲೆಯ ಪಾಲಿಸ್ಟರ್ ದಿಂಬುಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ. ಇವುಗಳಲ್ಲಿ ಬೇಗ ಗಂಟುಗಳು ಕಾಣಿಸಿಕೊಳ್ಳುತ್ತವೆ. 

ಖಾಲಿ ಹೊಟ್ಟೆಯಲ್ಲಿ ನಿರ್ಧಾರ ಕೈಗೊಂಡ್ರೆ ಎಡವಟ್ಟಾಗಬಹುದು

ಬಣ್ಣದಲ್ಲಿ ಬದಲಾವಣೆ ಅಥವಾ ಕಲೆಗಳು: ನಿಮ್ಮ ದಿಂಬು ಬಣ್ಣ ಮಾಸಲು ಪ್ರಾರಂಭಿಸಿದರೆ ಅದರ ಆಯಸ್ಸು ಮುಗಿದಿದೆ ಎಂದೇ ಅರ್ಥ. ಅದರಲ್ಲೂ ಹಳದಿ ಬಣ್ಣದ ಕಲೆಗಳು ಕಾಣಿಸಿಕೊಂಡರೆ ತಡ ಮಾಡದೆ ಹೊಸ ದಿಂಬನ್ನು ಖರೀದಿಸಿ ತನ್ನಿ. ಹಳದಿ ಬಣ್ಣದ ಕಲೆಗಳು ನಿಮ್ಮ ದಿಂಬಿನಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸಿವೆ ಎಂಬುದರ ಸೂಚನೆಯಾಗಿದೆ. ಇಂಥ ದಿಂಬನ್ನು ನೀವು ಬಳಸಿದರೆ ಅನಾರೋಗ್ಯ ಕಾಡುವುದು ಪಕ್ಕಾ. ಅಸ್ತಮಾ ಆಂಡ್ ಅಲರ್ಜಿ ಫೌಂಡೇಷನ್ ಆಫ್ ಅಮೆರಿಕದ ಪ್ರಕಾರ ಅಲರ್ಜಿ ಉಂಟು ಮಾಡುವ ಕೀಟಾಣುಗಳಿಗೆ ದಿಂಬು ಆವಾಸ ಸ್ಥಾನವಾಗಿರುತ್ತದೆ. ಹೀಗಾಗಿ ದಿಂಬನ್ನು ಆಗಾಗ ಬದಲಾಯಿಸುವುದು ಅಗತ್ಯ. 

ವಾಸನೆ ಬರಲು ಪ್ರಾರಂಭಿಸಿದರೆ: ಇಂದು ತಪ್ಪದೇ ನಿಮ್ಮ ದಿಂಬನ್ನು ಮೂಗಿನ ಬಳಿ ತೆಗೆದುಕೊಂಡು ಹೋಗಿ, ವಾಸನೆ ಬಂದರೆ ದಿಂಬಿನ ಆಯಸ್ಸು ಮುಗಿದಿದೆ ಎಂದರ್ಥ. ಬೆವರು, ಎಣ್ಣೆ, ತಲೆಕೂದಲಿನಲ್ಲಿರುವ ಕೊಳೆಗಳೆಲ್ಲವೂ ನಿರಂತರವಾಗಿ ದಿಂಬನ್ನು ಸೇರುವ ಕಾರಣ ವಾಸನೆ ಹುಟ್ಟಿಕೊಳ್ಳುತ್ತದೆ. ಇಂಥ ದಿಂಬು ಆರೋಗ್ಯಕ್ಕೆ ಹಾನಿ ಮಾಡುವ ಎಲ್ಲ ಸಾಧ್ಯತೆಗಳಿವೆ. 

ಖುಷ್ ಖುಷಿಯಾಗಿ ಪರೀಕ್ಷೆ ಅಟೆಂಡ್ ಮಾಡೋದು ಹೇಗೆ?

ಬೆಂಡ್ ಟೆಸ್ಟ್ ಮಾಡಿ ನೋಡಿ: ನಿಮ್ಮ ದಿಂಬನ್ನು ಎರಡು ಕೈಯಲ್ಲಿ ಹಿಡಿದುಕೊಂಡು ‘ಯು’ ಶೇಪ್ ಬರುವಂತೆ ಬೆಂಡ್ ಮಾಡಿ ನಂತರ ಬಿಡಿ. ಈಗ ದಿಂಬು ಮೊದಲಿನ ಆಕಾರಕ್ಕೆ ಬಂದರೆ ಅದು ಉತ್ತಮ ಸ್ಥಿತಿಯಲ್ಲಿದೆ ಎಂದರ್ಥ. ಇಲ್ಲವಾದರೆ ಈ ದಿಂಬು ನಿಮ್ಮ ತಲೆ ಹಾಗೂ ಕುತ್ತಿಗೆಗೆ ಆಧಾರ ಒದಗಿಸುವುದಿಲ್ಲ ಎಂದಾಯಿತು. ನ್ಯಾಷನಲ್ ಸ್ಲೀಪ್ ಫೌಂಡೇಷನ್ ಸೂಚಿಸಿರುವ ಈ ಬೆಂಡ್ ಟೆಸ್ಟ್ ದಿಂಬನ್ನು ಬದಲಾಯಿಸಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲು ಸರಳ ಹಾಗೂ ಸೂಕ್ತವಾದ ಮಾರ್ಗೋಪಾಯವಾಗಿದೆ.

ದಿಂಬನ್ನು ಎಷ್ಟು ವರ್ಷಕ್ಕೊಮ್ಮೆ ಬದಲಾಯಿಸಬೇಕು: ದಿಂಬನ್ನು ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಬೇಕು ಎಂಬ ವಿಷಯ ಸಾಕಷ್ಟು ಚರ್ಚೆಗೊಳಗಾಗಿದೆ. ಈ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳು ಕೂಡ ಇವೆ. ಕೆಲವರ ಪ್ರಕಾರ ಮೂರು ವರ್ಷಕ್ಕೊಮ್ಮೆ ಬದಲಾಯಿಸಿದರೆ ಸಾಕು. ಇನ್ನೂ ಕೆಲವು ತಜ್ಞರು ವರ್ಷಕ್ಕೊಮ್ಮೆ ದಿಂಬನ್ನು ಬದಲಾಯಿಸುವುದು ಅಗತ್ಯ ಎನ್ನುತ್ತಾರೆ.