Asianet Suvarna News Asianet Suvarna News

ಖಾಲಿ ಹೊಟ್ಟೆಯಲ್ಲಿ ನಿರ್ಧಾರ ಕೈಗೊಂಡ್ರೆ ಎಡವಟ್ಟಾಗಬಹುದು, ಎಚ್ಚರ!

ನಾವು ಕೈಗೊಳ್ಳುವ ಒಂದು ನಿರ್ಧಾರ ನಮ್ಮ ಬದುಕನ್ನೇ ಬದಲಿಸಿಬಿಡಬಲ್ಲದು. ಹೀಗಾಗಿ ನಿರ್ಧಾರ ಕೈಗೊಳ್ಳುವಾಗ ಎಚ್ಚರಿಕೆ ಅಗತ್ಯ. ಅದರಲ್ಲೂ ಹೊಟ್ಟೆ ಖಾಲಿ ಇರುವಾಗ ಮಹತ್ವದ ನಿರ್ಧಾರ ಕೈಗೊಳ್ಳುವ ಕೆಲಸಕ್ಕೆ ಕೈ ಹಾಕಲೇಬಾರದು. ಏಕೆಂದರೆ ಹೊಟ್ಟೆ ಖಾಲಿಯಿರುವಾಗ ಮಿದುಳಿನ ಯೋಚನಾಶಕ್ತಿ ಕೂಡ ತಗ್ಗಿರುತ್ತದೆ.

Why you should not take decision when you are hungry
Author
Bangalore, First Published Jan 30, 2020, 4:28 PM IST

ಹೊಟ್ಟೆ ಹಸಿದಿರುವಾಗ ಶಾಪಿಂಗ್ ಮಾಡುವುದು ಒಳ್ಳೆಯ ಅಭ್ಯಾಸವಲ್ಲ ಎನ್ನಲಾಗುತ್ತದೆ. ಇದಕ್ಕೆ ಕಾರಣ ಹೊಟ್ಟೆ ಹಸಿದಿರುವಾಗ ನಿಮಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ ಅನಗತ್ಯ ವಸ್ತುಗಳನ್ನು ಖರೀದಿಸುವ ಸಾಧ್ಯತೆಯಿದೆ. ಇದರಿಂದ ನಿಮ್ಮ ಜೇಬಿಗೆ ಅನಗತ್ಯ ಹೊರೆ ಬೀಳುತ್ತದೆ. ಇದನ್ನು ಒಪ್ಪಿಕೊಳ್ಳುವ, ಹೊಟ್ಟೆ ಖಾಲಿಯಿರುವಾಗ ಶಾಪಿಂಗ್ ಮಾಡಲು ಹೋದರೆ ಮೊದಲು ಕಣ್ಣು ಬೀಳುವುದು ತಿಂಡಿ-ತಿನಿಸುಗಳ ಮೇಲೆ. ಅಬ್ಬಾಬ್ಬ ಅಂದ್ರೆ ಒಂದೋ-ಎರಡೋ ಬಿಸ್ಕೆಟ್ ಅಥವಾ ಚಾಕೋಲೇಟ್ ಪ್ಯಾಕ್ ಅನ್ನು ನೀವು ಕೈಗೆತ್ತಿಕೊಳ್ಳಬಹುದು ಅಷ್ಟೆ. ಇದರಿಂದ ಜೇಬಿನ ಮೇಲೆ ಸ್ವಲ್ಪ ಹೊರೆ ಬೀಳುತ್ತದೆ ಅನ್ನುವುದನ್ನು ಬಿಟ್ಟರೆ ಬೇರೇನೂ ನಷ್ಟವಾಗುವುದಿಲ್ಲ. ಆದರೆ, ವೃತ್ತಿ ಅಥವಾ ವೈಯಕ್ತಿಕ ಬದುಕಿಗೆ ಸಂಬಂಧಿಸಿ ಮಹತ್ವದ ನಿರ್ಣಯ ಕೈಗೊಳ್ಳುವಾಗ ಚುರುಗುಟ್ಟುತ್ತಿರುವ ಹೊಟ್ಟೆ ಮಿದುಳಿಗೆ ಅವಸರದ ಸಂದೇಶ ರವಾನಿಸಿದ್ರೆ ಎಡವಟ್ಟಾಗುವುದು ಗ್ಯಾರಂಟಿ. ಹೊಟ್ಟೆ ತುಂಬಿರುವಾಗ ಮಿದುಳು ಪ್ರಶಾಂತವಾಗಿರುವುದರಿಂದ ಸರಿಯಾಗಿ ಯೋಚಿಸಿ, ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.

ದಯಮಾಡಿ ವಯಸ್ಸಾಗದಂತೆ ವರ ನೀಡಿ!

ಹಸಿವು ತಲೆಕೆಡಿಸುತ್ತೆ: ಡೂಂಡೆ ವಿಶ್ವವಿದ್ಯಾಲಯದ ಸೈಕಾಲಜಿ ವಿಭಾಗ ನಡೆಸಿದ ಅಧ್ಯಯನವೊಂದರ ಪ್ರಕಾರ ಹಸಿದಿರುವಾಗ ಜನರು ಕಡಿಮೆ ಹಣಕ್ಕೆ ಕೆಲಸ ಒಪ್ಪಿಕೊಳ್ಳುತ್ತಾರೆ.50 ಜನರನ್ನು ಎರಡು ಬಾರಿ ಈ ಅಧ್ಯಯನಕ್ಕೊಳಪಡಿಸಲಾಯಿತು. ಮೊದಲನೇ ಬಾರಿ ಅವರು ಊಟ ಮಾಡಿದ ಬಳಿಕ ಹಾಗೂ ಎರಡನೇ ಬಾರಿ ಅವರು ಖಾಲಿ ಹೊಟ್ಟೆಯಲ್ಲಿರುವಾಗ ಅವರ ವರ್ತನೆಯನ್ನು ಗಮನಿಸಲಾಯಿತು.ಈ ಎರಡೂ ಸಂದರ್ಭಗಳಲ್ಲಿ ಅವರಿಗೆ ಆಹಾರ,ಹಣ ಹಾಗೂ ಗೀತೆಗಳ ಡೌನ್‍ಲೋಡ್ ಸೇರಿದಂತೆ ವಿವಿಧ ಸಂಭಾವನೆಗಳನ್ನು ಆಫರ್ ಮಾಡಲಾಯಿತು.ಹಸಿದಿರುವಾಗ ಇವರೆಲ್ಲರೂ ಚಿಕ್ಕ ಸಂಭಾವನೆಗೆ ಕೆಲಸ ಮಾಡಲು ಒಪ್ಪಿಕೊಂಡಿರುವುದು ಕಂಡುಬಂತು.ಇದು ವ್ಯಕ್ತಿ ಹಸಿದಿರುವಾಗ ಸಮರ್ಪಕ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದಕ್ಕೆ ಪುರಾವೆ ಒದಗಿಸಿದೆ ಎಂದು ಅಧ್ಯಯನ ಹೇಳಿದೆ.

ನೀವು ಮಿಸ್ಟರ್ ಪರ್ಫೆಕ್ಟಾ? 

ಹಸಿದಿರುವಾಗ ಸೂಕ್ತ ನಿರ್ಧಾರ ಅಸಾಧ್ಯವೇಕೆ?: ಇಂಗ್ಲೆಂಡ್‍ನ ಕೇಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ನಡೆಸಿದ ಇನ್ನೊಂದು ಅಧ್ಯಯನದಲ್ಲಿ ಸೆರೊಟೊನಿನ್ ಎಂಬ ಹಾರ್ಮೋನ್ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದು ಪತ್ತೆಯಾಗಿದೆ. ಸೆರೆಟೊನಿನ್ ಮೂಡ್ ಅನ್ನು ಸ್ಥಿರವಾಗಿಡಲು ನೆರವು ನೀಡುವ ಜೊತೆಗೆ ಎಲ್ಲವೂ ಚೆನ್ನಾಗಿದೆ ಎಂಬ ಭಾವನೆಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ನರಕೋಶಗಳ ನಡುವೆ ಸಂಜ್ಞೆ ರವಾನಿಸುತ್ತದೆ. ಅಲ್ಲದೆ, ಇದು ಟ್ರೈಪ್ಟೋಫನ್ ಎಂಬ ಅಮೈನೋ ಆಸಿಡ್‍ನಿಂದ ಮಾಡಲ್ಪಟ್ಟಿದೆ.ನೀವು ಹಸಿದಿರುವಾಗ ಟ್ರೈಪ್ಟೋಫನ್ ಮಟ್ಟ ಕುಸಿಯುತ್ತದೆ.ಇದು ಆ ವ್ಯಕ್ತಿಯಲ್ಲಿ ಆಕ್ರಮಣಾಕಾರಿ ಹಾಗೂ ಅಸಹನೆಯ ಭಾವನೆಗಳನ್ನು ಹೆಚ್ಚಿಸುತ್ತದೆ.ಇದೇ ಕಾರಣಕ್ಕೆ ಮಿದುಳು ಸರಿಯಾಗಿ ಯೋಚಿಸದೆ ಯಾವುದೋ ಒಂದು ನಿರ್ಧಾರ ಕೈಗೊಳ್ಳುತ್ತದೆ.ಇನ್ನು ಇಂಥ ಸಮಯದಲ್ಲೇ ಆತ್ಮೀಯರ ಮೇಲೆ ವಿನಾಕಾರಣ ಸಿಡುಕುವುದು, ರೇಗುವುದು ಮಾಡುತ್ತೇವೆ.ಹೀಗಾಗಿ ಅವರು ನೀಡುವ ಸಲಹೆಗಳನ್ನು ಕೂಡ ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಒಟ್ಟಾರೆ ಅವಸರದ ಕೈಗೆ ಬುದ್ಧಿ ಕೊಟ್ಟು ಏನೋ ಒಂದು ನಿರ್ಧಾರ ಕೈಗೊಂಡು, ಆ ಕ್ಷಣಕ್ಕೆ ದೊಡ್ಡ ಹೊರೆಯೊಂದನ್ನು ತಲೆ ಮೇಲಿನಿಂದ ಇಳಿಸಿದಂತೆ ವರ್ತಿಸುತ್ತೇವೆ. ಆದರೆ,ನಂತರ ಪಶ್ಚತ್ತಾಪ ಕಾಡುವುದು ಗ್ಯಾರಂಟಿ. 

ಭಂಗಿಯಲ್ಲಿದೆ ಮಾನಸಿಕ ಆರೋಗ್ಯ

ರೈಟ್ ಫುಡ್ ಆಯ್ಕೆ ಮಾಡಿ: ಯಾವುದೇ ಮಹತ್ವದ ನಿರ್ಧಾರ ಕೈಗೊಳ್ಳುವ ಮುನ್ನ ಹೊಟ್ಟೆ ತುಂಬಿರುವುದರ ಜೊತೆಗೆ ನೀವು ಎಂಥ ಆಹಾರ ಸೇವಿಸಿದ್ದೀರಿ ಎಂಬುದು ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ.ಟ್ರೈಪ್ಟೋಫನ್ ಎಂಬ ಅಮೈನೋ ಆಸಿಡ್ ಮಟ್ಟ ಹೆಚ್ಚಿದ್ದರೆ ಮಾತ್ರ ನಿಮ್ಮ ಮನಸ್ಸು ಸ್ಥಿರವಾಗಿರುತ್ತದೆ.ಇದರಿಂದ ನಿಮಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.ಆದಕಾರಣ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಅಮೈನೋ ಆಸಿಡ್ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಉತ್ತಮ. ರೆಡ್ ಮೀಟ್, ಚಿಕನ್, ಒಣಹಣ್ಣುಗಳು, ಬಾಳೆಹಣ್ಣು ಸೇರಿದಂತೆ ಕೆಲವು ಆಹಾರ ಪದಾರ್ಥಗಳಲ್ಲಿ ಅಮೈನೋ ಆಸಿಡ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸೋ ಮೇಜರ್ ಡಿಸಿಷನ್ ಮೇಕಿಂಗ್‍ಗೆ ಮುನ್ನ ಹೊಟ್ಟೆ ತುಂಬಿಸಿಕೊಳ್ಳಲು ಮರೆಯಬೇಡಿ. 

Follow Us:
Download App:
  • android
  • ios