ನಾನ್ಸ್ಟಿಕ್ ಪ್ಯಾನ್ನಲ್ಲಿ ಅತ್ಯಂತ ಸುಲಭದಲ್ಲಿ ದೋಸೆ, ಚಪಾತಿ ಮಾಡಬಹುದು. ಅಡುಗೆ ಮನೆಯಲ್ಲಿ ಈ ಪಾತ್ರೆಗಳನ್ನು ಇಟ್ಟರೆ ಅದಕ್ಕೊಂದು ಅಂದವೇ ಬರುತ್ತದೆ. ಆದರೆ ಇದು ನಿಮ್ಮ ಮನೆಯಲ್ಲಿರೋ ಮಹಾಮಾರಿ ಎನ್ನುವುದು ಅರಿವಿದೆಯೆ? ಡಾ.ಖಾದರ್ ಅವರ ಮಾತು ಕೇಳಿ...
ಕಾಲಚಕ್ರ ಉರುಳುತ್ತಿದ್ದಂತೆಯೇ, ಬಹಳಷ್ಟು ವಿಷಯಗಳಲ್ಲಿ ನಮ್ಮ ಪೂರ್ವಜರು ಮಾಡುತ್ತಿದ್ದದ್ದೇ ಸರಿ ಎನ್ನುವ ಮಟ್ಟಿಗೆ ಇಂದು ಬಂದು ಮುಟ್ಟಿದ್ದೇವೆ. ಬಡವರ ಮನೆಯ ವಸ್ತುಗಳು ಎಂದೇ ಬಿಂಬಿತವಾಗಿದ್ದೆಲ್ಲವೂ ಈಗ ಆಗರ್ಭ ಶ್ರೀಮಂತರ ಮನೆ ಸೇರುತ್ತಿವೆ. ಅದಕ್ಕೆ ದೊಡ್ಡ ಉದಾಹರಣೆ ಕಬ್ಬಿಣ ಮತ್ತು ಮಣ್ಣಿನ ಪಾತ್ರೆಗಳು. ಇವುಗಳಿಗೆ ಈಗ ಮತ್ತೆ ಸಕತ್ ಡಿಮಾಂಡ್ ಬರುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ಆರೋಗ್ಯ. ಆಧುನಿಕತೆ ಹೆಸರಿನಲ್ಲಿ, ಅತ್ಯಂತ ಸುಲಭದಲ್ಲಿ ಕೆಲಸ ಮಾಡಬಹುದು ಎನ್ನುವ ಕಾರಣದಿಂದ ಏನೆಲ್ಲಾ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಶುಗರ್ನಂಥ ಸಮಸ್ಯೆ, ಕ್ಯಾನ್ಸರ್ನಂಥ ಮಾರಣಾಂತಿಕ ಕಾಯಿಲೆಗಳನ್ನು ತಂದುಕೊಳ್ಳುತ್ತಿರುವುದು ಇಂದು ಸರ್ವೇ ಸಾಮಾನ್ಯ ಆಗಿಬಿಟ್ಟಿದೆ. ಇಂದು ಎಲ್ಲಿ ನೋಡಿದರೂ ಕ್ಯಾನ್ಸರ್ ಕ್ಯಾನ್ಸರ್. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟವಾದರೂ ಅವುಗಳಿಗೆ ಹಲವನ್ನು ನಾವು ದಿನನಿತ್ಯವೂ ಮಾಡುತ್ತಿರುವ ತಪ್ಪುಗಳಿಂದಲೇ ತಂದುಕೊಳ್ಳುತ್ತಿದ್ದೇವೆ.
ಅದಕ್ಕೆ ದೊಡ್ಡ ಉದಾಹರಣೆಯಾಗಿದೆ ನಾನ್ಸ್ಟಿಕ್ ಪ್ಯಾನ್. ನೋಡಲು ಅಂದ, ಅಡುಗೆ ವಿಡಿಯೋಗಳಲ್ಲಿಯೂ ಇದರದ್ದೇ ಕಾರುಬಾರು. ಅದಕ್ಕಿಂತಲೂ ಹೆಚ್ಚಾಗಿ ಎಣ್ಣೆಯೂ ಇಲ್ಲದೇ ಅತ್ಯಂತ ಸುಲಭದಲ್ಲಿ ದೋಸೆಗಳು ಏಳುತ್ತವೆ, ಚಪಾತಿಗಳು ಚೆನ್ನಾಗಿ ಬರುತ್ತವೆ... ಇತ್ಯಾದಿ ಇತ್ಯಾದಿ... ಆದರೆ ಕಾಲ ಕ್ರಮೇಣ ಆ ನಾನ್ಸ್ಟಿಕ್ ಪ್ಯಾನ್ನಲ್ಲಿ ಗೀಚುಗಳು ಬರುವುದನ್ನಂತೂ ನೋಡಿಯೇ ಇರುತ್ತೀರಿ ಅಲ್ಲವೇ. ಹಾಗಿದ್ದರೆ ಆ ಅಂಶಗಳೆಲ್ಲಾ ಎಲ್ಲಿಗೆ ಹೋದವು? ದೋಸೆ, ಚಪಾತಿ, ರೊಟ್ಟಿಯ ಮೂಲಕ ಹೊಟ್ಟೆಯನ್ನು ಸೇರಿರುವ ಆ ವಿಷಕಾರಿ ಅಂಶ ಸದ್ದಿಲ್ಲದೇ ಕ್ಯಾನ್ಸರ್ ಅಂಶವನ್ನು ಏಳುವಂತೆ ಮಾಡುತ್ತಿವೆ ಎನ್ನುವುದು ಗೊತ್ತೆ?
ಈ ಬಗ್ಗೆ ಇದಾಗಲೇ ಹಲವು ವೈದ್ಯರು ಮಾತನಾಡಿದ್ದಾರೆ. ಹಲವರಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಆದರೂ ಕಬ್ಬಿಣ, ಮಣ್ಣಿನ ಪಾತ್ರೆಗಳು ಕಿರಿಕಿರಿ ಎನ್ನುವ ಕಾರಣಕ್ಕೆ ಧಾವಂತದ ಈ ಯುಗದಲ್ಲಿ ಹಲವರ ಮನೆಗಳಲ್ಲಿ ನಾನ್ಸ್ಟಿಕ್ ಪಾತ್ರೆಗಳು ತುಂಬಿಹೋಗಿವೆ. ಜೊತೆಗೆ ಟಿವಿಯಲ್ಲಿ ಬರುವ ಜಾಹೀರಾತುಗಳು, ಅವುಗಳಲ್ಲಿ ಕಾಣಿಸಿಕೊಳ್ಳುವ ಸುಂದರ ತರುಣಿಯರು, ನಟಿಯರು... ಇನ್ನೇನು ಬೇಕು, ಜನರು ಮರುಳಾಗಲು ಹೇಳಿ? ಆ ಜಾಹೀರಾತುಗಳಲ್ಲಿ ಬರುವ ನಟಿಯರು ತಮ್ಮ ಮನೆಯಲ್ಲಿ ಏನು ಬಳಸುತ್ತಾರೆ ಎನ್ನುವುದು ವೀಕ್ಷಕರಿಗೆ ತಿಳಿದಿಲ್ಲವಲ್ಲ? ಹಾಗೆಂದು ಸಾಮಾನ್ಯ ಜನರು ಮರುಳಾದರೆ, ಕ್ಯಾನ್ಸರ್ನಂಥ ಭಯಾನಕ ಕಾಯಿಲೆಗೆ ಕಟ್ಟಿಟ್ಟದ್ದೇ ಎನ್ನುವ ಮಾಹಿತಿಯನ್ನು ನೀಡಿದ್ದಾರೆ ಖ್ಯಾತ ವೈದ್ಯರಾಗಿರುವ ಡಾ.ಖಾದರ್.
ಇಲ್ಲಿ ಕೆಳಗೆ ಶೇರ್ ಮಾಡಲಾಗಿರುವ ವಿಡಿಯೋದಲ್ಲಿ ಡಾ.ಖಾದರ್ ಅವರು ಹೇಗೆ ನಾನ್ಸ್ಟಿಕ್ ಪ್ಯಾನ್ ನಮ್ಮ ಶರೀರದ ಮೇಲೆ ಪರಿಣಾಮ ಬೀರುತ್ತದೆ, ಕ್ಯಾನ್ಸರ್ನಂಥ ಮಹಾಮಾರಿಯನ್ನು ತಿಳಿದೂ ತಿಳಿದೂ ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ ಎನ್ನುವ ಬಗ್ಗೆ ಮಾತನಾಡಿದ್ದಾರೆ ನೋಡಿ...
