ಹಣ್ಣು ತಿಂದು ಬೀಜ ಎಸೀಬೇಡಿ. ಇದ್ರಲ್ಲೆಷ್ಟು ಔಷಧೀಯ ಗುಣವಿದೆ ತಿಳ್ಕೊಳ್ಳಿ
ಸಾಮಾನ್ಯವಾಗಿ ಹಣ್ಣು (Fruit) ತಿಂದು ಬೀಜ (Seed)ಎಸೆಯೋದು ಎಲ್ರ ಅಭ್ಯಾಸ. ನಾವೂ ಇದನ್ನು ಮಾಡ್ತೇವೆ, ಮಕ್ಕಳಿಗೂ ಇದನ್ನೇ ಹೇಳಿ ಕೊಡ್ತೇವೆ. ಆದ್ರೆ ಕೆಲ ಹಣ್ಣಿನ ಬೀಜದಲ್ಲೂ ಔಷಧೀಯ ಗುಣವಿದೆ ಅನ್ನೋದು ನಿಮ್ಗೆ ಗೊತ್ತಾ ? ಯಾವ ಹಣ್ಣಿನ ಬೀಜವನ್ನೆಲ್ಲಾ ತಿನ್ಬೋದು ತಿಳ್ಕೊಳ್ಳಿ.
ಹಣ್ಣು (Fruit) ಮತ್ತು ತರಕಾರಿ (Vegetable) ಪ್ರಕೃತಿಯ ಕೊಡುಗೆ. ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಣ್ಣುಗಳು ಮಾತ್ರವಲ್ಲ ಹಣ್ಣಿನ ಸಿಪ್ಪೆ (Peel ) ಹಾಗೂ ಬೀಜ (Seed) ಕೂಡಾ ಪ್ರಯೋಜನಕಾರಿ. ಹಣ್ಣಿನ ಬೀಜಗಳು ಚಿಕ್ಕದಾಗಿದ್ದರೂ ಸಾಕಷ್ಟು ಪೌಷ್ಟಿಕಾಂಶವನ್ನು ಹೊಂದಿರುತ್ತವೆ. ನಾರಿನಂಶ, ಕೊಬ್ಬು, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಬೀಜಗಳು ಆರೋಗ್ಯಕ್ಕೆ ಉತ್ತಮವಾಗಿವೆ. ಯಾವುದೇ ಭಕ್ಷ್ಯದಲ್ಲಿ ಯಾವುದೇ ರೀತಿಯಲ್ಲಿ ಇದನ್ನು ನೀವು ಸೇರಿಸಬಹುದು. ಹಣ್ಣಿನ ಬೀಜಗಳು ದೇಹಕ್ಕೆ ಶಕ್ತಿ ನೀಡುವ ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತವೆ.
ಬೀಜಗಳು ಆರೋಗ್ಯಕ್ಕೆ ಒಳ್ಳೆಯದು ಎಂಬ ಸಂಗತಿ ಗೊತ್ತಿದ್ದರೂ ಅನೇಕರು ತಿರುಳು ಹಾಗೂ ಬೀಜವನ್ನು ತೆಗೆದು ತಿನ್ನುತ್ತಾರೆ. ಬಹುತೇಕರ ಮನೆಯಲ್ಲಿ ಬೀಜಗಳು ಕಸದಬುಟ್ಟಿ ಸೇರುತ್ತವೆ. ಎಲ್ಲ ಹಣ್ಣಿನ ಬೀಜಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ರೆ ಕೆಲ ಹಣ್ಣುಗಳ ಬೀಜಗಳು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿರುತ್ತವೆ. ಅವುಗಳನ್ನು ಅವಶ್ಯವಾಗಿ ನಿಮ್ಮ ಆಹಾರದಲ್ಲಿ ಸೇರಿಸಬೇಕಾಗುತ್ತದೆ. ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಣ್ಣು ಹಾಗೂ ತರಕಾರಿ ಬೀಜಗಳು ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.
ಕುಂಬಳಕಾಯಿ ಬೀಜಗಳು: ಸಾಮಾನ್ಯವಾಗಿ ಕುಂಬಳಕಾಯಿ ಪದಾರ್ಥ ಮಾಡುವಾಗ ನಾವು ಅದ್ರ ಬೀಜವನ್ನು ತೆಗೆದು ಎಸೆಯುತ್ತೇವೆ. ಆದ್ರೆ ಕುಂಬಳಕಾಯಿ ಬೀಜ ರುಚಿಯ ಜೊತೆಗೆ ಆರೋಗ್ಯಕರ. ಕೊಬ್ಬು ಮತ್ತು ವಿಟಮಿನ್ ಗಳನ್ನು ಹೊಂದಿರುತ್ತದೆ. ಕುಂಬಳಕಾಯಿ ಬೀಜ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕುಂಬಳಕಾಯಿ ಬೀಜಗಳನ್ನು ಹಸಿಯಾಗಿಯೇ ತಿನ್ನಬಹುದು. ಆದ್ರೆ ಅದನ್ನು ಹುರಿದು ತಿಂದರೆ ರುಚಿ ಹೆಚ್ಚು.
ಮಸಾಲೆ ಪದಾರ್ಥ ತಿಂದು ತೂಕ ಇಳಿಸಿಕೊಳ್ಳಬಹುದಾ? ಈ ಐದು ಐಟಂ ವೈಟ್‌ಲಾಸ್‌ಗೆ ಬೆಸ್ಟ್
ಪಪ್ಪಾಯಿ ಬೀಜಗಳು: ಅನೇಕರು ಬೀಜವಿಲ್ಲದ ಪಪ್ಪಾಯಿ ಹಣ್ಣನ್ನು ಖರೀದಿ ಮಾಡಲು ಇಷ್ಟಪಡ್ತಾರೆ. ಒಂದು ವೇಳೆ ಬೀಜ ರಹಿತ ಪಪ್ಪಾಯಿ ಮನೆಗೆ ತಂದ್ರೂ ಬೀಜ ತೆಗೆದು, ಕಸಕ್ಕೆ ಹಾಕಿ ಹಣ್ಣನ್ನು ಮಾತ್ರ ತಿನ್ನುತ್ತಾರೆ. ನಿಷ್ಪ್ರಯೋಜಕವೆಂದು ಎಸೆದ ಪಪ್ಪಾಯಿಯ ಕಪ್ಪು ಬೀಜಗಳು ಅನೇಕ ರೋಗಗಳಿಗೆ ಉತ್ತಮ ಮದ್ದಾಗಿದೆ. ಆಕ್ಸಿಡೇಟಿವ್ ಒತ್ತಡದ ಅಪಾಯವನ್ನು ತಡೆಯಲು ಇದು ಸಹಕಾರಿ. ಪಪ್ಪಾಯಿ ಬೀಜಗಳಲ್ಲಿ ಫ್ಲವೊನೈಡ್ ಗಳು ಮತ್ತು ಪಾಲಿಫಿನಾಲ್‌ಗಳು ಸಮೃದ್ಧವಾಗಿವೆ.
ಪಪ್ಪಾಯಿ ಬೀಜದ ರುಚಿ ನೋಡದವರೇ ಅನೇಕ ಮಂದಿ. ಅದು ತಿನ್ನಲು ತುಂಬಾ ರುಚಿಯಾಗಿರುತ್ತದೆ. ಅದನ್ನು ಹಸಿಯಾಗಿಯೇ ತಿನ್ನಬಹುದು. ಆದರೆ ಅವುಗಳನ್ನು ತಿನ್ನುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಒಂದು ಬಾರಿ ಒಂದು ಚಮಚ ಬೀಜಗಳನ್ನು ಮಾತ್ರ ತಿನ್ನಬೇಕು. ಜೀರ್ಣಕ್ರಿಯೆಯನ್ನು ಸರಾಗಗೊಳಿಸುವಲ್ಲಿ ಪಪ್ಪಾಯ ಬೀಜಗಳು ನೆರವಾಗುತ್ತವೆ.
ಹುಣಸೆ ಹಣ್ಣಿನ ಬೀಜ: ಹುಣಸೆಹಣ್ಣನ್ನು ಹುಳಿಯ ರೂಪದಲ್ಲಿ ಅಡುಗೆಗೆ ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಬರೀ ಅಡುಗೆಗೆ ಮಾತ್ರವಲ್ಲ ಅದನ್ನು ಹಾಗೆಯೇ ಸೇವಿಸುವವರಿದ್ದಾರೆ. ಆದ್ರೆ ಹುಣಸೆ ಹಣ್ಣಿನೊಳಗಿರುವ ಬೀಜವನ್ನು ನಾವು ಬಳಸುವುದಿಲ್ಲ. ಅದು ಸ್ವಲ್ಪ ಗಟ್ಟಿಯಿರುವ ಕಾರಣ ಅದನ್ನು ಎಲ್ಲರೂ ಎಸೆಯುತ್ತಾರೆ. ಆದ್ರೆ ಹುಣಸೆ ಬೀಜಗಳನ್ನು ಸಹ ತಿನ್ನಬಹುದು. ಈ ಬೀಜಗಳು ಹೃದಯದ ಆರೋಗ್ಯ ಮಾತ್ರವಲ್ಲದೆ ಹಲ್ಲುಗಳಿಗೂ ಪ್ರಯೋಜನಕಾರಿ. ಸೋಂಕು ದೂರವಾಗಲು ನೆರವಾಗುತ್ತದೆ. ಆಗಾಗ್ಗೆ ಹೊಟ್ಟೆನೋವು ಕಾಡುತ್ತೆ ಎನ್ನುವವರು ಕೂಡ ಇದನ್ನು ಸೇವಿಸಬಹುದು. ಬೀಜವನ್ನು ರಾತ್ರಿಯಿಡಿ ನೆನೆಹಾಕಿ. ಬೆಳಿಗ್ಗೆ ಸಿಪ್ಪೆ ತೆಗೆದು ಅದನ್ನು ನೀರಿನ ಜೊತೆ ಸೇವಿಸಬಹುದು.
ವಿಟಮಿನ್ ಡಿ ಕೊರತೆ ಯಾರಿಗೆ ಕಾಡುತ್ತೆ ಗೊತ್ತೇ? ಯಾಕೆ ಕಾಡುತ್ತೆ ತಿಳಿಯಿರಿ
ಕಲ್ಲಂಗಡಿ ಹಣ್ಣಿನ ಬೀಜ: ಕಲ್ಲಂಗಡಿ ಹಣ್ಣಿನ ಬೀಜಗಳು ಆರೋಗ್ಯಕ್ಕೆ ಅತ್ಯುತ್ತಮ. ಇದ್ರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಈ ಬೀಜದಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶವಿದೆ. ಈ ಬೀಜವನ್ನು ಹುರಿದು ಕೂಡ ನೀವು ತಿನ್ನಬಹುದು. ಕಲ್ಲಂಗಡಿ ಹಣ್ಣಿನ ಬೀಜವನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಬ್ಯಾಕ್ಟೀರಿಯಾದ ಸೋಂಕನ್ನು ತೆಗೆಯಬಹುದು.