ಬೆಂಗಳೂರು (ಮಾ.07):  ಕೆಮ್ಮಿದಾಗ ಕೊರೋನಾ ವೈರಾಣು ಗಾಳಿಗೆ ಸೇರುವುದನ್ನು ತಡೆಯಲು ಬಹು ಪರದೆ (ಮಲ್ಟಿಲೇಯರ್‌) ಮಾಸ್ಕ್‌ ಹೆಚ್ಚು ಉಪಯುಕ್ತ. ಏಕ ಪರದೆಯ ಮಾಸ್ಕ್‌ ಬಳಸಿದರೆ ಶೇ.70ರಷ್ಟುಜಿಹ್ವಾರಸ ವಾತಾವರಣ ಸೇರುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಏಕ ಪರದೆ, ದ್ವಿ ಪರದೆ ಮತ್ತು ಬಹು ಪರದೆಯ ಮಾಸ್ಕ್‌ಗಳ ಮೂಲಕ ಎಂಜಲು ಹನಿಗಳು ಗಾಳಿಗೆ ಸೇರುವುದರ ಬಗ್ಗೆ ಹೈಸ್ಪೀಡ್‌ ಕ್ಯಾಮೆರಾ ಬಳಸಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿಭಾಗದ ಪ್ರೊಫೆಸರ್‌ ಸಪ್ತರ್ಷಿ ಬಸು ನೇತೃತ್ವದ ತಂಡ ಸಂಶೋಧನೆ ನಡೆಸಿ ವರದಿ ಪ್ರಕಟಿಸಿದೆ. ಬಟ್ಟೆಯ ಬಹು ಪರದೆಯ ಮಾಸ್ಕ್‌ ಮತ್ತು ಎನ್‌-95 ಮಾಸ್ಕ್‌ ಎಂಜಲ ಹಾನಿ ವಾತಾವರಣ ಸೇರುವುದನ್ನು ತಡೆದು ಕೋವಿಡ್‌ನಿಂದ ರಕ್ಷಣೆ ನೀಡುತ್ತದೆ. ಈ ಮಾಸ್ಕ್‌ ಧರಿಸಿದವರು ಕೆಮ್ಮಿದಾಗ ಎಂಜಲಿನ ಹನಿಗಳು ವಾತಾವರಣ ಸೇರುವ ಸಾಧ್ಯತೆಗಳಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೆಲಸಗಾರರ ಮತ್ತು ಕುಟುಂಬಗಳ ವ್ಯಾಕ್ಸೀನ್ ಖರ್ಚು ವಹಿಸಿಕೊಂಡ ರಿಲಯನ್ಸ್ ...

ವ್ಯಕ್ತಿ ಕೆಮ್ಮಿದಾಗ 200 ಮೈಕ್ರಾನ್‌ಗಿಂತ ದೊಡ್ಡ ಎಂಜಲ ಹನಿಗಳು ಮಾಸ್ಕ್‌ನ ಪರದೆಗೆ ವೇಗವಾಗಿ ಅಪ್ಪಳಿಸುತ್ತವೆ. ಏಕ ಅಥವಾ ದ್ವಿ ಪರದೆಯ ಮಾಸ್ಕ್‌ ಬಳಸಿದಾಗ ಎಂಜಲ ಹನಿಗಳು ವಿಭಜನೆಗೊಂಡು ಮತ್ತಷ್ಟುಸಣ್ಣ ಹನಿಗಳಾಗಿ ವಾತಾವರಣ ಸೇರುತ್ತವೆ. ಈ ಹನಿಗಳು ನೂರು ಮೈಕ್ರಾನ್‌ಗಳಿಗಿಂತ ಸಣ್ಣದಾಗಿದ್ದು, ತಮ್ಮಲ್ಲಿ ಕೊರೋನಾ ವೈರಾಣುವನ್ನು ಅಡಗಿಸಿಟ್ಟುಕೊಂಡಿರುತ್ತವೆ. ಈ ಹನಿಗಳು ವಾತಾವರಣದಲ್ಲಿ ದೀರ್ಘಕಾಲದವರೆಗೆ ಇದ್ದು ಸೋಂಕು ಹಬ್ಬಿಸುವ ಸಾಮರ್ಥ್ಯ ಹೊಂದಿರುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಏಕ ಪರದೆಯ ಮಾಸ್ಕ್‌ ಶೇ.30ರಷ್ಟುಎಂಜಲ ಹನಿಯನ್ನು ತಡೆಯುತ್ತದೆ. ದ್ವಿ ಪರದೆಯ ಮಾಸ್ಕ್‌ ಶೇ.91ರಷ್ಟುಎಂಜಲ ಹನಿಯನ್ನು ತಡೆಯುತ್ತದೆ ಎಂದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಡೆಸಲಾಗಿರುವ ಸಂಶೋಧನೆಯಲ್ಲಿ ತಿಳಿದುಬಂದಿದೆ.

ಮಾಸ್ಕ್‌ ಬಳಕೆಯು ವೈರಾಣು ಹರಡುವುದನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ. ಆದರೆ ಮಾಸ್ಕ್‌ನ ದಕ್ಷತೆ ಬಳಸಿರುವ ಬಟ್ಟೆಯ ಗುಣಮಟ್ಟ, ಇರುವ ಪರದೆ, ಬಟ್ಟೆಯ ನೂಲುಗಳ ನಡುವೆ ಇರುವ ಅಂತರವನ್ನು ಆಧರಿಸಿರುತ್ತದೆ. ಒಂದು ವೇಳೆ ಬಹು ಪರದೆಯ ಮಾಸ್ಕ್‌ ಲಭ್ಯವಿಲ್ಲದಿದ್ದರೆ ಏಕ ಪರದೆಯ ಮಾಸ್ಕ್‌ ಬಳಸಬಹುದು. ಆದರೆ ಮಾಸ್ಕ್‌ ಧರಿಸದೇ ಇರಬೇಡಿ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಈ ಹಿಂದೆ ಮಾಸ್ಕ್‌ನ ಬದಿಗಳಿಂದ ಯಾವ ರೀತಿ ಎಂಜಲ ಹನಿಗಳು ವಾತಾವರಣ ಸೇರುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆದಿತ್ತು. ಆದರೆ ಮಾಸ್ಕ್‌ ಹೇಗೆ ಎಂಜಲ ಹನಿಯನ್ನು ವಿಭಜಿಸಿ ಸಣ್ಣ ಹನಿಗಳನ್ನಾಗಿಸಿ ವಾತಾವರಣಕ್ಕೆ ಸೇರಲು ಅವಕಾಶ ಮಾಡಿಕೊಡುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆದಿರಲಿಲ್ಲ ಎಂದು ಐಐಎಸ್ಸಿಯ ವಿಜ್ಞಾನಿ ಸಪ್ತರ್ಷಿ ಬಸು ಹೇಳುತ್ತಾರೆ.