ಪರಿಸರದಲ್ಲಿರುವ ಸದ್ದುಗಳು ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಬೆಳಗಿನ ಸಮಯದಲ್ಲಿ ಹಕ್ಕಿಗಳ ಚಿಲಿಪಿಲಿ ಸದ್ದು, ಮರದ ಎಲೆಗಳು ಅಲುಗಾಡುವ ಶಬ್ದ, ಮಳೆಯ ನಿನಾದ ಇಂತಹ ಹಲವಾರು ಸದ್ದುಗಳು ನಮ್ಮ ಮನದ ಖಿನ್ನತೆಯನ್ನು ಹೊರದೂಡಲು ಸಹಾಯಕ.
ಬೆಳಗ್ಗೆ ಎದ್ದಾಕ್ಷಣ ಹಕ್ಕಿಗಳ (Birds) ಚಿಲಿಪಿಲಿ (Chirping) ಸದ್ದು ಕಿವಿಯ ಮೇಲೆ ಬಿದ್ದರೆ ಮನಸ್ಸಿಗೆ ಅದೇನೋ ಆಹ್ಲಾದವಾಗುತ್ತದೆ. ಹಕ್ಕಿಗಳ ಸದ್ದು ಮಾತ್ರವಲ್ಲ, ಪರಿಸರದಲ್ಲಿನ ಯಾವುದೇ ನೈಸರ್ಗಿಕ (Nature) ಸದ್ದುಗಳು ಮಾನವ ಮನಸ್ಸನ್ನು ಅರಳಿಸುತ್ತವೆ. ಮಳೆ (Rain) ಬರುವುದಕ್ಕೂ ಮುನ್ನಿನ ಜೀರುಂಡೆಗಳ ಜೀರಿಡುವ ಸದ್ದು, ಗಾಳಿ (Wind) ಬೀಸುವ ಸದ್ದು, ದೂರದಿಂದೆಲ್ಲೋ ಕೇಳಿಸುವ ಕಾಡುಪ್ರಾಣಿಯೊಂದರ ಕೂಗು, ಅಷ್ಟೇ ಏಕೆ? ಮರಗಳ ಎಲೆಗಳ ಅಲುಗಾಟವೂ ಇಡೀ ವಾತಾವರಣಕ್ಕೊಂದು ಗಾಂಭೀರ್ಯ ಹಾಗೂ ಸೌಂದರ್ಯ ನೀಡುತ್ತಿರುತ್ತವೆ. ಈ ಪ್ರಕೃತಿಯ ಆಗುಹೋಗುಗಳಿಂದ ನಮ್ಮ ಮನಸ್ಸಿನಲ್ಲಿ ಕವಿದಿರುವ ಖಿನ್ನತೆ (Depression) ದೂರವಾಗುತ್ತದೆ.
ಪ್ರಕೃತಿಯ ಸಾನ್ನಿಧ್ಯದಲ್ಲಿ ಮನಸ್ಸಿನ ಬೇಗೆಗಳು ಕಡಿಮೆಯಾಗುತ್ತವೆ ಎನ್ನುವುದು ಇತ್ತೀಚಿನ ಹಲವಾರು ಸಂಶೋಧನೆಗಳಿಂದ ತಿಳಿದುಬಂದಿರುವ ವಿಚಾರ. ಹಾಗೆಯೇ ಪ್ರಾಕೃತಿಕವಾದ ಹಲವಾರು ಸದ್ದುಗಳಿಂದಲೂ ಮನುಷ್ಯನ ಖಿನ್ನತೆಗೆ ಪರಿಹಾರ ದೊರೆಯುತ್ತದೆ. ಬಿಬಿಸಿ ಚಾನೆಲ್ (BBC Channel) ತನ್ನ ಫಾರೆಸ್ಟ್ 404 ಎನ್ನುವ ಸರಣಿಗಾಗಿ ಅಧ್ಯಯನ (Study) ನಡೆಸಿದ್ದ ಸಮಯದಲ್ಲಿ ಇದು ತಿಳಿದುಬಂದಿದೆ.
ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ 7 ಸಾವಿರಕ್ಕೂ ಅಧಿಕ ಮಂದಿ ಹಕ್ಕಿಗಳ ಕಲರವದಿಂದ ಒತ್ತಡ (Stress) ಹಾಗೂ ಮನಸ್ಸಿನ ಸುಸ್ತು (Fatigue) ನಿವಾರಣೆ ಆಗಿರುವುದಾಗಿ ಹೇಳಿದ್ದಾರೆ. ಫಾರೆಸ್ಟ್ 404 ಸರಣಿಯು “ಕಾಡುಗಳಿಲ್ಲದ ಪ್ರಪಂಚ’ದ ಕುರಿತಾಗಿ ಮಾಡಿರುವ ಕಾರ್ಯಕ್ರಮವಾಗಿದೆ.
ನಿಸರ್ಗದ ಶಬ್ದಗಳಿಂದ ಮನಸ್ಸಿಗೆ ಉಲ್ಲಾಸ (Happy)
ಎಕ್ಸಟರ್ (Exeter) ವಿಶ್ವವಿದ್ಯಾಲಯದ (University) ಪ್ರಮುಖ ಸಂಶೋಧಕ ಅಲೆಕ್ಸ್ ಸ್ಮಾಲಿ (Alex Smalley) ಎನ್ನುವವರು ಈ ಕುರಿತು ತುಂಬ ಚೆನ್ನಾಗಿ ವಿವರಣೆ ನೀಡುತ್ತಾರೆ. ಅವರ ಪ್ರಕಾರ, ಕೊರೋನಾ ಸಾಂಕ್ರಾಮಿಕದ ಮೊದಲ ಲಾಕ್ ಡೌನ್ ಅವಧಿಯಲ್ಲಿ ಜನರು ತಮ್ಮ ಸುತ್ತಲೂ ಇರುವ ನೈಸರ್ಗಿಕ ಸದ್ದುಗಳ ಕಡೆಗೆ ಹೆಚ್ಚಾಗಿ ಗಮನ ನೀಡಿದರು. ಅವುಗಳನ್ನು ಕೇಳಿಸಿಕೊಳ್ಳಲು ಆರಂಭಿಸಿದರು. ಪ್ರಪಂಚವೆಲ್ಲ ಸ್ತಬ್ಧವಾಗಿದ್ದಾಗ ನಿಸರ್ಗವೊಂದೇ ಅನೇಕರ ಪಾಲಿಗೆ ಕೌತುಕದ ವಸ್ತುವಾಯಿತು. ಆಗ ಅಲ್ಲಿನ ಆಗುಹೋಗುಗಳನ್ನು ಆಸಕ್ತಿಯಿಂದ ಗಮನಿಸಿದರು. ಈ ಅನುಭವವೇ ಜನರನ್ನು ಒತ್ತಡದಿಂದ ಮುಕ್ತರನ್ನಾಗಿ ಮಾಡಿತು. ನಿಸರ್ಗವನ್ನು ಗಮನಿಸುವ, ಅಲ್ಲಿನ ಶಬ್ದಗಳಿಗೆ ಕಿವಿಗೊಡುವ ಅಭ್ಯಾಸದಿಂದ ಮಾನಸಿಕ ಆರೋಗ್ಯ ಹಾಗೂ ಸಂವಾದನಾತ್ಮಕ ವರ್ತನೆಗೆ ಭಾರೀ ಅನುಕೂಲವಾಗಿದೆ.
“ನಿಸರ್ಗದಲ್ಲಿರುವ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರೂ ಕಾಡಿನ ಸಹಜ ಜಗತ್ತಿನ ಅನುಭವಗಳನ್ನು ತಮ್ಮದಾಗಿಸಿಕೊಳ್ಳಬೇಕು. ಭವಿಷ್ಯದಲ್ಲಿ ಈ ಅನುಭವಗಳನ್ನು ಥೆರಪಿ ರೂಪದಲ್ಲಿಯೂ ನೀಡಬಹುದಾಗಿದೆ’ ಎನ್ನುತ್ತಾರೆ ಅಲೆಕ್ಸ್.
ಇದನ್ನೂ ಓದಿ: Health Care : ನೈಟ್ ಶಿಫ್ಟ್ ಮಾಡಿದ್ರೂ ಹೆಲ್ತ್ ಹಾಳಾಗ್ಬಾರ್ದಾ?
ನೀರ ಅಲೆ, ಮಳೆಯ ಶಬ್ದ
ಸಮುದ್ರದ ಅಲೆಗಳು (Wave) ಹಾಗೂ ಮಳೆಯ ಲಯದ ಸದ್ದುಗಳನ್ನು ಕೇಳಿಸುವ ಮೂಲಕ ಮನಸ್ಸಿನ ಉದ್ವೇಗವನ್ನು ಶಾಂತಗೊಳಿಸುವ ಥೆರಪಿ ಈಗಾಗಲೇ ಪ್ರಚಲಿತದಲ್ಲಿದೆ. ಮಕ್ಕಳನ್ನು ಮಲಗಿಸುವಾಗಲೂ ಮಳೆಯ ಸದ್ದನ್ನು ಕೇಳಿಸುವ ಪರಿಪಾಠ ಹಲವೆಡೆ ಇದೆ. ಮಳೆಯ ಶಬ್ದದಿಂದ ಗಾಢವಾಗಿ ನಿದ್ರೆ ಬರುವುದು ಸಾಬೀತಾಗಿದೆ.
ಯಾವಾಗಲಾದರೂ ನಿಮ್ಮ ಅನುಭವಕ್ಕೂ ಬಂದಿರಬಹುದು. ನಿಸರ್ಗದ ಮಡಿಲಲ್ಲಿದ್ದಾಗ ನಿಮ್ಮ ಮನಸ್ಸು ಖುಷಿಯಾಗಿರುವ ಹಾಗೂ ಮನ ತುಂಬಿಕೊಂಡಿರುವ ಭಾವನೆಗಳು ನಿಮ್ಮಲ್ಲಿರುತ್ತವೆ.
ಇದನ್ನೂ ಓದಿ: Health Disease : ಪುರುಷರಿಗೆ ಹೆಚ್ಚು ಖತರ್ನಾಕ್ ಬೇಸಿಗೆ…ರಾತ್ರಿ ಹೋಗ್ಬಹುದು ಪ್ರಾಣ..!
ಮನೋರೋಗ ಚಿಕಿತ್ಸಕರ ಪ್ರಕಾರ, ಪ್ರಕೃತಿಯ ಸಾಂಗತ್ಯದಲ್ಲಿ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ನಿಸರ್ಗಕ್ಕೆ ಹತ್ತಿರವಾಗಿ ಬದುಕಿದಾಗ ಅಥವಾ ಕೆಲವು ಸಮಯವನ್ನಾದರೂ ಕಳೆಯುವುದರಿಂದ ಮನಸ್ಸು ಶಾಂತವಾಗಿರುತ್ತದೆ, ಕಲ್ಪನಾ ಶಕ್ತಿ ಅಗಾಧವಾಗಿ ಬೆಳೆಯುತ್ತದೆ. ಹೀಗಾಗಿ, ನಗರಗಳಲ್ಲೇ ಆದರೂ ಮನೆಯಿಂದ ಹೊರಗೆ ಮಕ್ಕಳು ಆಟವಾಡಬೇಕು ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ, ಆಗ ಸ್ವಲ್ಪವಾದರೂ ಸುತ್ತಲಿನ ಪರಿಸರದ ಬಗ್ಗೆ ಗಮನ ಹೋಗುತ್ತದೆ. ಸಾಮಾನ್ಯವಾಗಿ ನಗರಗಳಲ್ಲೂ ಮರಗಳು, ಹಕ್ಕಿಗಳು, ಅವುಗಳ ಹಾರಾಟ, ಕೆಲವು ಶಬ್ದಗಳಾದರೂ ಇದ್ದೇ ಇರುತ್ತವೆ. ತೀರ ಟ್ರಾಫಿಕ್ ಕಿರಿಕಿರಿಯೊಂದಿಲ್ಲದಿದ್ದರೆ ಅವುಗಳನ್ನು ಆಸ್ವಾದಿಸಲು ಯಾವುದೇ ಸಮಸ್ಯೆ ಇರುವುದಿಲ್ಲ.
