ಲೈಫ್‌ಸ್ಟೈಲ್‌ ಬದಲಾವಣೆ ಕಾರಣಕ್ಕೆ ಈ ತಲೆಮಾರಿನ ಹೆಣ್ಮಕ್ಕಳನ್ನು ತೀವ್ರವಾಗಿ ಕಾಡ್ತಿರೋದು ಪಿಸಿಓಎಸ್‌ ಅರ್ಥಾತ್‌ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌. ಈ ಸಮಸ್ಯೆ ಬಂದ ಕೂಡಲೇ ತೂಕ ಏರಲಾರಂಭಿಸುತ್ತದೆ. ಏನೇನೋ ಸಮಸ್ಯೆಗಳೆಲ್ಲ ಧುತ್ತನೆ ಆವರಿಸಿಬಿಡುತ್ತವೆ. ಹುಡುಗಿಯರನ್ನು ಯಾಮಾರಿಸೋ ಈ ಸಮಸ್ಯೆಯನ್ನೇ ಪಾಸಿಟಿವ್‌ ಆಗಿ ತಗೊಂಡ ಯುವತಿಯೊಬ್ಬಳ ಕತೆ ಇಲ್ಲಿದೆ.

ನನಗೆ ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ಕಾಣಿಸಿಕೊಂಡಾಗ 16 ವರ್ಷ. ನನ್ನ ಹಾರ್ಮೋನ್‌ಗಳೆಲ್ಲ ತಿಕ್ಕಲು ಹತ್ತಿಸಿಕೊಂಡ ಥರ ಆಡಲು ಶುರು ಮಾಡಿದವು. ಪರಿಣಾಮ ತೂಕ ಏರುತ್ತಾ ಹೋಯ್ತು. ಯಾವ ಪರಿ ಅಂದರೆ ತಿಂಗಳೊಳಗೇ 5 ಕೆಜಿಯಷ್ಟುತೂಕ ಜಾಸ್ತಿಯಾಗುತ್ತಿತ್ತು. ನನ್ನ ಟೀನ್‌ ದಿನಗಳು ಕೊಂಚ ಗಾಬರಿ, ಇದನ್ನ ಮಣಿಸಿಯೇ ಸಿದ್ಧ ಎಂಬ ಚಾಲೆಂಜ್‌ನಲ್ಲಿ ಕಳೆದವು.

PCOD ಸಮಸ್ಯೆ ಇದ್ರೆ ಮಕ್ಕಳಾಗಲ್ವಾ?

ಸ್ಪೋಟ್ಸ್‌ರ್‍ನಲ್ಲಿ ತೊಡಗಿಸಿಕೊಂಡಿದ್ದರಿಂದ, ಟೈಮ್‌ ಇದ್ದಾಗಲೆಲ್ಲ ಆಟ ಆಡುತ್ತಿದ್ದದ್ದರಿಂದ ನನಗೆ ಫಿಟ್‌ನೆಸ್‌, ಎಕ್ಸರ್‌ಸೈಸ್‌ ಕಷ್ಟವಾಗಲಿಲ್ಲ. ಕಷ್ಟವಾದದ್ದು ಡಯೆಟ್‌. ನಾನು ಫುಡೀ. ತಿನ್ನೋದು ಅಂದ್ರೆ ಪ್ರಾಣ. ಜಂಕ್‌ಫುಡ್‌ ಪ್ರೇಮಿಯೂ ಹೌದು. ಆದರೆ ಪಿಸಿಒಎಸ್‌ ಕಾರಣಕ್ಕೆ ಅದಕ್ಕೆಲ್ಲ ಬ್ರೇಕ್‌ ಹಾಕಲೇ ಬೇಕಿತ್ತು. ಆದರೆ ಚಾಕೊಲೇಟ್‌ ತಿನ್ನೋದನ್ನು ಮಾತ್ರ ನಿಲ್ಲಿಸಲಿಕ್ಕಾಗಲಿಲ್ಲ. ಆದರೆ ಹಿಂದಿಗಿಂತ ಕಡಿಮೆ ಚಾಕ್ಲೇಟ್‌ ತಿನ್ನಲಾರಂಭಿಸಿದೆ. ಸಂಪೂರ್ಣ ಆರೋಗ್ಯಕರ ಡಯೆಟ್‌ಗೆ ಬದಲಾಗಲು ಸಾಕಷ್ಟುಸಮಯ ಹಿಡಿಯಿತು. ಎಷ್ಟೆಲ್ಲ ಕಷ್ಟಪಟ್ಟರೂ ದೇಹದ ತೂಕ ತಗ್ಗುತ್ತಿರಲಿಲ್ಲ. ನಾನು ಇನ್ನಷ್ಟು, ಮತ್ತಷ್ಟುಎಫರ್ಟ್‌ ಹಾಕಬೇಕಿತ್ತು. ನಾನು ಫಿಟ್‌ನೆಸ್‌ಅನ್ನು ಇನ್ನಷ್ಟುತೀವ್ರಗೊಳಿಸಲು ನಿರ್ಧರಿಸಿದೆ.

ತಜ್ಞರ ಸಲಹೆ ಪಡೆದು ಕೆಟೊ ಡಯೆಟ್‌ ಶುರು ಮಾಡಿದೆ. ಈಗ ಅಗತ್ಯಕ್ಕಿಂತ ಒಂದಗುಳೂ ಹೆಚ್ಚು ಆಹಾರ ನನ್ನ ದೇಹದೊಳಕ್ಕೆ ಹೋಗುತ್ತಿರಲಿಲ್ಲ. ಇದು ಬಹಳ ಕಷ್ಟವಾಯ್ತು. ಎಲ್ಲಾ ಟೈಮ್‌ನಲ್ಲೂ ಆಯಾಸ, ತಲೆನೋವು.. ಯಾಕೋ ಇದು ನನ್ನ ಕೈಯಲ್ಲಿ ಆಗಲ್ಲ ಅಂತ ಡಾಕ್ಟರ್‌ಗೆ ಹೇಳಿದೆ. ಡಯೆಟ್‌ನಲ್ಲಿ ಸಣ್ಣ ಚೀಟ್‌ ಮಾಡಲು ಅವರು ಐಡಿಯಾ ಕೊಟ್ರು. ‘ನೀನು ದಿನಕ್ಕೊಂದು ಸ್ಟ್ರಾಬೆರಿ ತಿನ್ನಬಹುದು.’ ತಲೆ ಕೆಟ್ಟು ಹೋಯ್ತು. ಬೇರೆ ದಾರಿ ಇರಲಿಲ್ಲ.

ಆದರೆ ಈ ಕೆಟೊ ಡಯೆಟ್‌ನಿಂದ ನನ್ನ ಹಾರ್ಮೋನ್‌ ಲೆವೆಲ್‌ ನಿಧಾನಕ್ಕೆ ಕಂಟ್ರೋಲ್‌ಗೆ ಬರಲಾರಂಭಿಸಿತು. ಜೊತೆಗೆ ತೂಕ ಏರಿದಷ್ಟೇ ವೇಗವಾಗಿ ಇಳಿಯಲಾರಂಭಿಸಿತು. ಈ ಡಯೆಟ್‌ ಮುಗಿದ ಬಳಿಕ ನಿಧಾನಕ್ಕೆ ಆರೋಗ್ಯಕರ ಆಹಾರ ಪದ್ಧತಿಗೆ ಹೊಂದಿಕೊಂಡೆ.

ನನ್ನ ಎಕ್ಸರ್‌ಸೈಸ್‌ ಹೆಚ್ಚುತ್ತಾ ಹೋಯ್ತು. ದಿನ ಬಿಟ್ಟು ದಿನ ರನ ಮಾಡುತ್ತಿದ್ದೆ. ಸ್ಟೆ್ರಂಥ್‌ ಟ್ರೈನಿಂಗ್‌ ತಗೊಳ್ತಿದ್ದೆ. ಇದರಲ್ಲಿ ಎಷ್ಟುತನ್ಮಯಳಾಗಿದ್ದೆ ಅಂದ್ರೆ ಒಮ್ಮೆ ಸಣ್ಣ ಬ್ರೇಕ್‌ ಸಹ ತೆಗೆದುಕೊಳ್ಳದೇ 2 ಕಿಮೀ ಓಡಿದೆ. ನನಗೇ ಅದನ್ನು ನಂಬಲಾಗಲಿಲ್ಲ.

ಪಿಸಿಒಡಿ ಸಮಸ್ಯೆ ಮನೆಮದ್ದಿನಿಂದ ವಾಸಿಯಾಗುತ್ತಾ? ...

ದಿನದಿಂದ ದಿನಕ್ಕೆ ನನ್ನ ಫಿಟ್‌ನೆಸ್‌ ಗೋಲ್‌ ಮತ್ತಷ್ಟುವಿಸ್ತಾರವಾಗುತ್ತಾ ಹೋಯ್ತು. ನಾನು ಹಿಂದಿಗಿಂತಲೂ ಹೆಚ್ಚು ಹೆಲ್ದಿ ಹುಡುಗಿಯಾಗಿ ಬದಲಾದೆ. ಸೋಮಾರಿತನ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಇಡೀ ದಿನ ಮಾಡೋ ಪ್ರತೀ ಕೆಲಸದ ಮೇಲೂ ಕಂಪ್ಲೀಟ್‌ ಫೋಕಸ್‌ ಇರುತ್ತಿತ್ತು. ಕಳೆದ ಎರಡು ವರ್ಷಗಳ ಹಿಂದೆ ಮತ್ತೆ ನನ್ನ ತೂಕ ನಿಧಾನಕ್ಕೆ ಏರಲಾರಂಭಿಸಿತು. ಈಗ ಮೊದಲಿನ ಗಾಬರಿ ಇರಲಿಲ್ಲ. ನನ್ನ ಆಹಾರದ ಮೂಲಕವೇ ನಾನದನ್ನು ನಿಯಂತ್ರಿಸಿದೆ.

ಇದರ ಮುಂದುವರಿದ ಭಾಗವಾಗಿ ಮ್ಯಾರಥಾನ್‌ಗಳಲ್ಲಿ ಪಾಲ್ಗೊಳ್ಳಲಾರಂಭಿಸಿದೆ. ಪಿಸಿಒಎಸ್‌ ಸಮಸ್ಯೆಯನ್ನು ಮೀರಿ ನಾನು ಹೆಲ್ದಿಯಾಗುತ್ತಾ ಹೋದೆ. ಬಹುಶಃ ಪಿಸಿಓಎಸ್‌ ಬರದಿದ್ದರೆ ನಾನು ಖಂಡಿತಾ ಇಷ್ಟುಆರೋಗ್ಯಕರ ಜೀವನ ನಡೆಸುತ್ತಿರಲಿಲ್ಲ ಅನಿಸುತ್ತೆ. ಈಗ ಹೆಲ್ದಿಯಾಗಿರೋದೇ ನನ್ನ ಲೈಫ್‌ಸ್ಟೈಲ್‌ ಆಗಿದೆ.

(ಫಿಟ್‌ನೆಸ್‌ ಕುತೂಹಲಿ ಝಲಕ್‌ ಮೋದಿ ಅವರು ಇಂಗ್ಲೀಷ್‌ ದೈನಿಕವೊಂದಕ್ಕೆ ಹಂಚಿಕೊಂಡ ಅನುಭವದ ಸಾರ)