ಕೇರಳ ಈಗ ನಿಫಾ ಮುಕ್ತ; 4 ಸೋಂಕಿತರೂ ಗುಣಮುಖ
2018ರ ಬಳಿಕ ಕೇರಳದಲ್ಲಿ ಮತ್ತೆ ನಿಫಾ ವೈರಸ್ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆರೋಗ್ಯ ತಂಡದ ಸದಸ್ಯರೂ ಸೇರಿ ಹಲವರು ಸೋಂಕಿಗೆ ತುತ್ತಾಗಿದ್ದರು. ಸದ್ಯ 4 ಸೋಂಕಿತರಿಗೆ ನಿಫಾ ನೆಗೆಟಿವ್ ಬಂದಿದ್ದು, ಕೇರಳ ನಿಫಾ ಮುಕ್ತ ಎಂದು ಗುರುತಿಸಿಕೊಂಡಿದೆ.
ಕೋಝಿಕ್ಕೋಡ್: ಕೇರಳದಲ್ಲಿ ಇಬ್ಬರನ್ನು ಬಲಿಪಡೆದಿದ್ದ ನಿಫಾ ಸಾಂಕ್ರಾಮಿಕ ಮತ್ತೆ ದೇಶವನ್ನು ಆತಂಕಕ್ಕೀಡು ಮಾಡಿದ್ದ ಬೆನ್ನಲ್ಲೇ ಕೇರಳದ ನಾಲ್ವರೂ ನಿಪಾ ಸೋಂಕಿತರು ಗುಣಮುಖರಾಗಿರುವ ಸಮಾಧಾನಕರ ಸಂಗತಿ ಹೊರಬಿದ್ದಿದೆ. ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ಬಾಲಕ ಸೇರಿದಂತೆ ನಾಲ್ವರಿಗೆ ಎರಡೆರಡು ಬಾರಿ ಪರೀಕ್ಷಿಸಲಾಗಿದ್ದು ಸೋಂಕು ನೆಗೆಟಿವ್ ವರದಿಯಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ತಿಳಿಸಿದ್ದಾರೆ. ಆದರೆ ಸೋಂಕು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದರಲ್ಲಿ ನಿರ್ಲಕ್ಷ್ಯ ಬೇಡ ಎಂದು ಸಲಹೆ ನೀಡಿದ್ದಾರೆ.
ಕಲ್ಲಿಕೋಟೆಯಲ್ಲಿ ಒಟ್ಟು 6 ಮಂದಿಗೆ ಸೋಂಕು ತಗುಲಿದ್ದು ಈ ಪೈಕಿ ಇಬ್ಬರು ಸಾವನ್ನಪ್ಪಿದ್ದರು ಹಾಗೂ ಉಳಿದ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಮುನ್ನೆಚ್ಚರಿಕೆ ವಹಿಸಿದ್ದ ಕೇರಳ ಸರ್ಕಾರ ಮತ್ತು ಜಿಲ್ಲಾಡಳಿತ ಸೆ.16ರಿಂದ ಜಿಲ್ಲೆಯ ಎಲ್ಲಾ ಸಂಸ್ಥೆಗಳನ್ನು ಬಂದ್ ಮಾಡಿದ್ದವು. ಅಲ್ಲದೇ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿತ್ತು.
ನಿಫಾ ವೈರಸ್ ಕೋವಿಡ್-19ಗಿಂತ ಅಪಾಯಕಾರಿ: ಐಸಿಎಂಆರ್ ಎಚ್ಚರಿಕೆ
ಕೇರಳದಲ್ಲಿನ ನಿಫಾ ವೈರಸ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು
- 2018 ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಹರಡಿರುವ ಬಗ್ಗೆ ವರದಿಯಾಗಿತ್ತು. ಆ ಬಳಿಕ 2021ರಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ನಿಫಾ ವೈರಸ್ ಪ್ರಸಾರದ ಬಗ್ಗೆ ವರದಿಯಾಗಿತ್ತು.
- ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ನಿಪಾ ವೈರಸ್ ಸೋಂಕು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದ್ದು, ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಜನರ ನಡುವೆ ಹರಡಬಹುದು ಮತ್ತು ಬಾವಲಿಗಳಿಂದ ಉಂಟಾಗುತ್ತದೆ. ವೈರಸ್ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಮಾರಕವಾಗಿದೆ. ಈ ವೈರಸ್ ಹಂದಿಗಳಂತಹ ಪ್ರಾಣಿಗಳಲ್ಲಿ ತೀವ್ರವಾದ ರೋಗವನ್ನು ಉಂಟುಮಾಡಬಹುದು, ಇದರ ಪರಿಣಾಮವಾಗಿ ರೈತರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
- ನಿಫಾ ವೈರಸ್ ಏಷ್ಯಾದಲ್ಲಿ ತಿಳಿದಿರುವ ಕೆಲವೇ ಸಾಂಕ್ರಾಮಿಕಗಳಿಗೆ ಕಾರಣವಾಗಿದ್ದರೂ, ಇದು ವ್ಯಾಪಕ ಶ್ರೇಣಿಯ ಪ್ರಾಣಿಗಳಿಗೆ ಸೋಂಕು ತರುತ್ತದೆ ಮತ್ತು ಜನರಲ್ಲಿ ತೀವ್ರವಾದ ಕಾಯಿಲೆ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಕೇರಳದಲ್ಲಿ ಆತಂಕ ಮೂಡಿಸಿದ ನಿಫಾ; ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ
- ವೈರಸ್ ಸೋಂಕಿಗೆ ಒಳಗಾದವರು ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್ನಂತಹ ತೀವ್ರ ಸಮಸ್ಯೆಗಳನ್ನು ಎದುರಿಸಬಹುದು. ನಿಫಾ ವೈರಸ್‌ನ ಲಕ್ಷಣಗಳು ಕೋವಿಡ್-19 ನಂತೆಯೇ ಇರುತ್ತವೆ - ಕೆಮ್ಮು, ನೋಯುತ್ತಿರುವ ಗಂಟಲು, ತಲೆತಿರುಗುವಿಕೆ, ಅರೆನಿದ್ರಾವಸ್ಥೆ, ಸ್ನಾಯು ನೋವು, ಸುಸ್ತು, ಎನ್ಸೆಫಾಲಿಟಿಸ್ (ಮೆದುಳಿನ ಊತ), ತಲೆನೋವು, ಕುತ್ತಿಗೆ ಬಿಗಿಯಾಗುವುದು, ಬೆಳಕಿನ ಸೂಕ್ಷ್ಮತೆಗಳು ಉಂಟಾಗುತ್ತದೆ.
- ವೈರಸ್‌ಗೆ ಯಾವುದೇ ನಿರ್ಣಾಯಕ ಚಿಕಿತ್ಸೆ ಲಭ್ಯವಿಲ್ಲದಿದ್ದರೂ, ನೆಲದ ಮೇಲೆ ಬಿದ್ದ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಹಂದಿಗಳಿಗೆ ಆಹಾರ ನೀಡುವುದನ್ನು ತಪ್ಪಿಸುವುದು ಮತ್ತು ಬಾವಲಿಗಳನ್ನು ದೂರವಿಡುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.