ಆದಿತ್ಯ-ಎಲ್1 ಉಡಾವಣೆಯಾದ ದಿನವೇ ಇಸ್ರೋ ಮುಖ್ಯಸ್ಥ ಸೋಮನಾಥ್‌ಗೆ ಕ್ಯಾನ್ಸರ್ ದೃಢ
ಭಾರತದ ಆದಿತ್ಯ-ಎಲ್1 ಮಿಷನ್ ಬಾಹ್ಯಾಕಾಶಕ್ಕೆ ಉಡಾವಣೆಯಾದ ದಿನದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಸ್ವತಃ ಸೋಮನಾಥ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ 2023ರ ಸೆ.2ರಂದು ಭಾರತ ಉಡಾವಣೆ ಮಾಡಿದ ಆದಿತ್ಯ ಎಲ್-1 ನೌಕೆ ಯಶಸ್ವಿಯಾಗಿ ಕಕ್ಷೆ ಸೇರಿದಾಗ ಇಡೀ ದೇಶವೇ ಸಂಭ್ರಮಪಡುತ್ತಿದ್ದರೆ, ಆ ಉಡಾವಣೆಯ ರೂವಾರಿಗಳಲ್ಲೊಬ್ಬರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್.ಸೋಮನಾಥ್‌ಗೆ ಆಘಾತಕ್ಕೆ ಒಳಗಾಗಿದ್ದರು. ಏಕೆಂದರೆ, ‘ನಿಮಗೆ ಕ್ಯಾನ್ಸರ್ ಇದೆ’ ಎಂಬ ವರದಿ ಅವರ ಕೈ ಸೇರಿತ್ತು ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಈ ವಿಷಯವನ್ನು ಮಲಯಾಳಂ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಸ್ವತಃ ಸೋಮನಾಥ್ ಅವರೇ ಹೇಳಿಕೊಂಡಿದ್ದಾರೆ. ಬಳಿಕ ಆಸ್ಪತ್ರೆಗೆ ದೌಡಾಯಿಸಿದ್ದು, ಹೊಟ್ಟೆಯಲ್ಲಿದ್ದ ಕ್ಯಾನ್ಸರ್ ಕೋಶವನ್ನು ತೆಗೆಸಿದ್ದು, 4 ದಿನ ಆಸ್ಪತ್ರೆಯಲ್ಲಿದ್ದು 5ನೇ ದಿನದಿಂದಲೇ ಇಸ್ರೋ ಕೆಲಸ ಆರಂಭಿಸಿದ್ದು ಸೇರಿ ಎಲ್ಲವನ್ನೂ ಅವರು ಹೇಳಿದ್ದಾರೆ.
ಬೆಂಗಳೂರು: ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಗೌರವ ಡಾಕ್ಟರೇಟ್ ಪ್ರದಾನ
ಸೋಮನಾಥ್‌ಗೆ ಏನಾಯಿತು?:
‘ಚಂದ್ರಯಾನ-3 ಉಡಾವಣೆ ಸಂದರ್ಭದಲ್ಲೇ ನನಗೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಆ ವೇಳೆ ನನಗೇನೂ ಗೊತ್ತಾಗಲಿಲ್ಲ. ಆದಿತ್ಯ ಎಲ್-1 ಉಡಾವಣೆ ದಿನವೇ ಕ್ಯಾನ್ಸರ್ ಇರುವ ವಿಷಯ ತಿಳಿಯಿತು. ಅದು ನನಗಷ್ಟೇ ಅಲ್ಲ ನನ್ನ ಕುಟುಂಬ ಹಾಗೂ ಸಹೋದ್ಯೋಗಿಗಳಿಗೂ ಆಘಾತಕಾರಿಯಾಗಿತ್ತು’ ಎಂದು ಸೋಮನಾಥ್ ತಿಳಿಸಿದ್ದಾರೆ.
‘2023ರ ಸೆ.2ರಂದು ಆದಿತ್ಯ-1 ಉಡಾವಣೆಯಾದ ವೇಳೆ ನಾನು ಸ್ಕ್ಯಾನಿಂಗ್‌ಗೆ ಒಳಗಾದೆ. ಹೊಟ್ಟೆಯಲ್ಲಿ ಕ್ಯಾನ್ಸರ್ ಗಡ್ಡೆ ಪತ್ತೆಯಾಯಿತು. ಚೆನ್ನೈಗೆ ಹೋಗಿ ಮತ್ತಷ್ಟು ಸ್ಕ್ಯಾನ್ ಮಾಡಿಸಿದೆ. ವಂಶವಾಹಿ ರೋಗ ದೃಢವಾಯಿತು. ಬಳಿಕ ವೃತ್ತಿಪರ ಸವಾಲುಗಳ ಜತೆ ಆರೋಗ್ಯ ಸವಾಲನ್ನೂ ಎದುರಿಸುವಂತಾಯಿತು. ಸರ್ಜರಿ ಮಾಡಿಸಿಕೊಂಡು, ಕೀಮೋಥೆರಪಿಗೆ ಒಳಗಾದೆ. ರೋಗ ವಾಸಿಯಾಗುವ ಬಗ್ಗೆ ಅನಿಶ್ಚಿತತೆ ಇತ್ತು. ನಾಲ್ಕು ದಿನ ಆಸ್ಪತ್ರೆಯಲ್ಲಿದ್ದೆ. ಐದನೇ ದಿನ ಇಸ್ರೋಗೆ ತೆರಳಿಗೆ ಕೆಲಸ ಆರಂಭಿಸಿದೆ. ಈಗ ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದೇನೆ. ಉದರ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖವಾಗಿದ್ದೇನೆ. ಪೂರ್ನ ಪ್ರಮಾಣದಲ್ಲಿ ಕರ್ತವ್ಯ ಪುನಾರಂಭಿಸಿದ್ದೇನೆ’ ಎಂದು ಸೋಮನಾಥ್ ವಿವರಿಸಿದ್ದಾರೆ.
ವೈಫಲ್ಯ ಭೀತಿಯೇ ಯಶಸ್ಸಿಗೆ ಕಾರಣ: ಇಸ್ರೋ ಅಧ್ಯಕ್ಷ ಸೋಮನಾಥ್ ಮುಕ್ತ ಮಾತು
ಏನಿದು ಉದರ ಕ್ಯಾನ್ಸರ್?
- ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್ ಅನ್ನು ಗ್ಯಾಸ್ಟ್ರಿಕ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಉದರದ ಒಳಪದರಗಳಲ್ಲಿ ಕ್ಯಾನ್ಸರ್ ಕೋಶಗಳು ನಿಧಾನವಾಗಿ ಬೆಳೆಯಲು ಶುರುವಾಗುತ್ತದೆ.
- ಆರಂಭಿಕ ಹಂತದಲ್ಲಿ ರೋಗ ಲಕ್ಷಣಗಳು ಪತ್ತೆಯಾಗುವುದು ಕಷ್ಟ. ಆದ್ದರಿಂದ ಮೊದಲ ಸ್ಟೇಜಲ್ಲೇ ಈ ಕ್ಯಾನ್ಸರ್ ಪತ್ತೆಯಾಗುವುದು ಕಷ್ಟ ಸಾಧ್ಯ.
- ಕಪ್ಪು ಮಲ, ವಾಕರಿಕೆ, ಅಜೀರ್ಣ, ರಕ್ತದ ವಾಂತಿ, ಸುಸ್ತು, ಆಹಾರ ತಿನ್ನುವುದೇ ಕಷ್ಟವಾಗುವುದು, ಹೊಟ್ಟೆ ನೋವು ಈ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳು.
- ಅನುವಂಶೀಯವಾಗಿ ಕಾಣಿಸಿಕೊಳ್ಳುವ ಈ ಕ್ಯಾನ್ಸರ್, ಕಲ್ಲಿದ್ದಲು, ಲೋಹ (Material), ರಬ್ಬರ್ (Rubber) ವಸ್ತುಗಳಿಗೆ ಹೆಚ್ಚು ಒಡ್ಡಿಕೊಳ್ಳುವವರಲ್ಲಿ ಕಾಣಿಸಿಕೊಳ್ಳುತ್ತದೆ.
- ಕಿಮೋಥೆರಪಿ (Chemotherapy), ಎಂಡೋಸ್ಕೋಪಿ (Endoscopy), ಗ್ಯಾಸ್ಟಕ್ಟೋಮಿ ಸೇರಿ ಹಲವು ಚಿಕಿತ್ಸಾ ವಿಧಾನಗಳು ಈ ಕ್ಯಾನ್ಸರ್‌ಗೆ ಹೆಚ್ಚು ಪರಿಣಾಮಕಾರಿ.
ಕ್ಯಾನ್ಸರ್ ಚಿಕಿತ್ಸೆಯ 5 ದಿನಗಳ ಬಳಿಕ ಕೆಲಸಕ್ಕೆ ಮರಳಿದೆ
ಕ್ಯಾನ್ಸರ್ ಪತ್ತೆಯಾದಾಗ ಫ್ಯಾಮಿಲಿ, ಸಹೋದ್ಯೋಗಿಗಳು ಸೇರಿ ಒಮ್ಮೆ ವಿಚಲಿತರಾಗಿದ್ದು ಹೌದು. ಅದರಲ್ಲಿಯೂ ಇಸ್ರೋದ ಪ್ರಮುಖ ಯೋಜನೆಯಲ್ಲಿ ತೊಡಗಿದ್ದು. ಎರಡೂ ಚಾಲೆಂಜ್ ನಿಭಾಯಿಸುವುದು ಕಷ್ಟವಾಯಿತು. ಆದರೆ, ಚಿಕಿತ್ಸೆ ನಂತರ ತಕ್ಷಣವೇ ಚೇತರಿಸಿಕೊಂಡು ಕೆಲಸಕ್ಕೆ ಮರಳಿದೆ. ಆಗಾಗ್ಗೆ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದು ಕ್ಯಾನ್ಸರ್‌ನಿಂದ ಗೆದ್ದಿದ್ದೇನೆ.
-ಎಸ್.ಸೋಮನಾಥ್, ಇಸ್ರೋ ಅಧ್ಯಕ್ಷ