ಕೋವಿಡ್ ಲಸಿಕೆ ಬಳಿಕ ರಕ್ತದೊತ್ತಡ ಏರಿಕೆ ಸಹಜವೇ? ತಜ್ಞರು ಏನ್ ಹೇಳ್ತಾರೆ?
ಕೋವಿಡ್ ಲಸಿಕೆ ಪಡೆದ ಬಳಿಕ ಕೆಲವು ಅಡ್ಡಪರಿಣಾಮಗಳು ಕಾಣಿಸಿಕೊಳ್ಳೋದು ಸಹಜ.ಒಂದೆರಡು ದಿನಗಳಲ್ಲಿ ಇದು ಸರಿಯಾಗುತ್ತದೆ.ಆದ್ರೆ ಈಗ ಈ ಅಡ್ಡಪರಿಣಾಮಗಳ ಸಾಲಿಗೆ ಹೊಸ ಲಕ್ಷಣವೊಂದು ಸೇರ್ಪಡೆಯಾಗಿದೆ.ಅದೇ ಅಧಿಕ ರಕ್ತದೊತ್ತಡ.
ಕೋವಿಡ್ ಲಸಿಕೆ ತೆಗೆದುಕೊಳ್ಳುತ್ತಿರೋರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪ್ರಾರಂಭದಲ್ಲಿಲಸಿಕೆ ಬಗ್ಗೆಯಿದ್ದ ಭಯ ಕ್ರಮೇಣ ಕಡಿಮೆಯಾಗಿದೆ. ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಜ್ವರ, ಮೈ-ಕೈ ನೋವು, ತಲೆನೋವು, ಸುಸ್ತು ಮುಂತಾದ ಸಣ್ಣಪುಟ್ಟ ಅಡ್ಡಪರಿಣಾಮ ಸಾಮಾನ್ಯ. ಇತ್ತೀಚೆಗೆ ಕೋವಿಡ್ ಲಸಿಕೆ ತೆಗೆದುಕೊಂಡ ಬಳಿಕ ಕೆಲವರಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದಿರೋದು ವರದಿಯಾಗಿದೆ.
ರಕ್ತದೊತ್ತಡ ಏರಿಕೆ ಸಹಜವೇ?
ಲಸಿಕೆ ಪಡೆದ ಕೆಲವು ನಿಮಿಷಗಳಲ್ಲಿ ಹಲವು ಜನರಲ್ಲಿ ಅಧಿಕ ರಕ್ತದೊತ್ತಡ ಕಂಡುಬಂದಿರೋ ಬಗ್ಗೆ ಸ್ವಿಜರ್ಲ್ಯಾಂಡ್‌ನಲ್ಲಿ ಸರಣಿ ವರದಿಗಳಾಗಿವೆ. ಭಾರತದಲ್ಲಿ ಕೂಡ ಅನೇಕರು ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ರಕ್ತದೊತ್ತಡದಲ್ಲಿಏರಿಕೆಯಾಗಿರೋ ಬಗ್ಗೆ ಹೇಳಿಕೊಂಡಿದ್ದಾರೆ. ಆದ್ರೆ ಕೆಲವೇ ಕೆಲವು ಮಂದಿಯಲ್ಲಿ ಮಾತ್ರ ಈ ಅಡ್ಡಪರಿಣಾಮ ಕಂಡುಬಂದಿದೆ. ಸ್ವಿಜರ್ಲ್ಯಾಂಡ್‌ನಲ್ಲಿ ಕೂಡ ಸಣ್ಣ ಪ್ರಮಾಣದ ಜನರಲ್ಲಿ ಎಂಆರ್‌ಎನ್‌ಎ ವ್ಯಾಕ್ಸಿನ್ ಪಡೆದ ಕೆಲವು ನಿಮಿಷಗಳ ಬಳಿಕ ರಕ್ತದೊತ್ತಡದಲ್ಲಿಏರಿಕೆಯಾಗಿರೋದು ಪತ್ತೆಯಾಗಿದೆ. ವರದಿಯಾದ ಪ್ರಕರಣಗಳಲ್ಲಿ ಬಹುತೇಕ ರೋಗಿಗಳು ಪುರುಷರಾಗಿದ್ದು, 7೦ ವರ್ಷ ಮೇಲ್ಪಟ್ಟವರಾಗಿದ್ದಾರೆ. ಅಲ್ಲದೆ, 9ರಲ್ಲಿ 8 ರೋಗಿಗಳು ಈ ಮೊದಲೇ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರೋರು. ಭಾರತದಲ್ಲಿ ನಡೆದ ಅನೇಕ ಅಧ್ಯಯನಗಳಲ್ಲಿಕೂಡ ಕೋವಿಶೀಲ್ಡ್ ಅಥವಾ ಕೊವ್ಯಾಕ್ಸಿನ್ ತೆಗೆದುಕೊಂಡ ಬಳಿಕ ರಕ್ತದೊತ್ತಡದಲ್ಲಿ ಹೆಚ್ಚಳವಾಗಿರೋದು ಪತ್ತೆಯಾಗಿದೆ.
ನೀರು ಕುಡಿಯಲು ಕಣಿ ಕೇಳಿ; ಯಾವ ಸಂದರ್ಭದಲ್ಲಿ ನೀರು ಕುಡೀಬೇಕು?
ಲಸಿಕೆ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆಯೇ?
ಇಲ್ಲಿಯ ತನಕ ಕೋವಿಡ್ ಲಸಿಕೆಗಳಿಂದ ಉಂಟಾಗೋ ಅಡ್ಡಪರಿಣಾಮಗಳ ಪಟ್ಟಿಯಲ್ಲಿ ವೈದ್ಯಕೀಯ ತಜ್ಞರು ರಕ್ತದೊತ್ತಡದಲ್ಲಿ ಹೆಚ್ಚಳ ಅಥವಾ ಬದಲಾವಣೆಯಾಗೋ ಬಗ್ಗೆ ಎಲ್ಲಿಯೂ ಪ್ರಸ್ತಾಪಿಸಿಲ್ಲ. ಅಲ್ಲದೆ, ಕೋವಿಡ್ ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಅಥವಾ ಸುರಕ್ಷತೆಗೆ ಸಂಬಂಧಿಸಿ ನಡೆದ ಅಧ್ಯಯನಗಳಲ್ಲಿಕೂಡ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದ್ರೆ ಕೋವಿಡ್ ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಕಾಣಿಸಿಕೊಳ್ಳಬಹುದಾದ ವಿಚಿತ್ರ ಅಡ್ಡಪರಿಣಾಮಗಳಲ್ಲಿ ಅಧಿಕ ರಕ್ತದೊತ್ತಡ ಕೂಡ ಒಂದಾಗಿದೆ ಎಂಬುದನ್ನು ಪ್ರಸಕ್ತ ಲಭ್ಯವಿರೋ ದಾಖಲೆಗಳು ಸಾಬೀತುಪಡಿಸಿವೆ. ಅಧಿಕ ರಕ್ತದೊತ್ತಡ ಉಂಟಾದವರಲ್ಲಿ ತಲೆನೋವು, ಎದೆನೋವು, ಉದ್ವೇಗ ಹಾಗೂ ಬೆವರುವುದು ಕಂಡುಬಂದಿದೆ. ಈ ಎಲ್ಲ ಲಕ್ಷಣಗಳು ರಕ್ತದೊತ್ತಡದಲ್ಲಿ ಏರಿಕೆಯಾಗಿರೋದ್ರ ಸೂಚನೆ.
ಕೊರೋನಾದಿಂದ ದೂರವಿರಲು ಗ್ರೀನ್ ಟೀ ಸೇವನೆ ಸಹಕಾರಿ
ಒತ್ತಡವೇ ಕಾರಣ
ಇದನ್ನು ವಿರಳ ಅಡ್ಡಪರಿಣಾಮ ಎಂದು ಪರಿಗಣಿಸಲಾಗಿದೆಯಾದ್ರೂ, ಇದು ವ್ಯಾಕ್ಸಿನ್ ಅಡ್ಡಪರಿಣಾಮದ ಲಕ್ಷಣವಲ್ಲ, ಬದಲಿಗೆ ವ್ಯಾಕ್ಸಿನ್‌ಗೆ ಸಂಬಂಧಿಸಿದ ಒತ್ತಡದ ಕಾರಣದಿಂದ ಉಂಟಾಗಿರಬಹುದು ಎಂಬುದು ತಜ್ಞರ ಅಭಿಪ್ರಾಯ. ರಕ್ತದೊತ್ತಡ ಮಟ್ಟ ಹೆಚ್ಚಲು ಇನ್ನೊಂದು ಕಾರಣವೂ ಪುಷ್ಟಿ ನೀಡುತ್ತಿದೆ. ಅದೇ ʼವೈಟ್ ಕೋಟ್ ಇಫೆಕ್ಟ್ʼ. ಅಂದ್ರೆ ಕೆಲವರಿಗೆ ಆಸ್ಪತ್ರೆ, ವೈದ್ಯರು, ನರ್ಸ್, ಇಂಜೆಕ್ಷನ್ ಎಂದ್ರೆ ಅವ್ಯಕ್ತ ಭಯ. ಈ ಭಯದ ಕಾರಣಕ್ಕೆ ಇಂಥವರು ಆಸ್ಪತ್ರೆ ಅಥವಾ ವೈದ್ಯರ ಬಳಿಯಿರೋವಾಗ ಬಿಪಿ ಚೆಕ್ ಮಾಡಿದ್ರೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿರುತ್ತದೆ. ಅದೇ ಬೇರೆ ಸ್ಥಳದಲ್ಲಿ ಚೆಕ್ ಮಾಡಿದ್ರೆ ಸಾಮಾನ್ಯ ಮಟ್ಟದಲ್ಲಿಯೇ ಇರುತ್ತದೆ. ಇನ್ನು ಹೃದಯ ಸಂಬಂಧಿ ಸಮಸ್ಯೆ, ವೃದ್ಧರು ಹಾಗೂ ಇತರ ಕಾಯಿಲೆಗಳನ್ನು ಹೊಂದಿರೋರಲ್ಲಿ ರಕ್ತದೊತ್ತಡ ಏರಿಕೆಯಾಗೋ ಸಾಧ್ಯತೆ ಹೆಚ್ಚಿರುತ್ತದೆ.
ವ್ಯಾಕ್ಸಿನ್ ಪಡೆಯಲು ಭಯಬೇಡ
ಪ್ರಸ್ತುತ ರಕ್ತದೊತ್ತಡದಲ್ಲಿ ಏರಿಕೆಯಾಗೋದನ್ನು ಕೋವಿಡ್ ವ್ಯಾಕ್ಸಿನ್ ಅಡ್ಡಪರಿಣಾಮ ಎಂಬುದನ್ನು ತಜ್ಞರು ಒಪ್ಪಿಕೊಂಡಿಲ್ಲ. ಅಲ್ಲದೆ, ಇದು ಬೆರಳೆಣಿಕೆಯಷ್ಟು ಮಂದಿಯಲ್ಲಿ ಮಾತ್ರ ಪತ್ತೆಯಾಗಿದೆ. ಹೀಗಾಗಿ ರಕ್ತದೊತ್ತಡದಲ್ಲಿ ಏರುಪೇರಾಗುತ್ತದೆ ಎಂಬುದನ್ನೇ ಆಧಾರವಾಗಿಟ್ಟುಕೊಂಡು ಲಸಿಕೆ ಪಡೆಯೋದನ್ನು ಮುಂದೆ ಹಾಕಬೇಡಿ. ಇದ್ರಿಂದ ಕೊರೋನಾ ಸೋಂಕು ತಗಲುವ ಅಪಾಯ ಹೆಚ್ಚಿದೆ. ಹೃದಯ ಸಂಬಂಧಿ ಕಾಯಿಲೆಯಿರೋರು ಕೂಡ ವ್ಯಾಕ್ಸಿನ್ ಪಡೆದುಕೊಳ್ಳೋದು ಸುರಕ್ಷಿತ. ಇದ್ರಿಂದ ಯಾವುದೇ ತೊಂದರೆಯಾಗೋದಿಲ್ಲ ಎಂದು ವೈದ್ಯಕೀಯ ತಜ್ಞರೇ ತಿಳಿಸಿದ್ದಾರೆ. ಹೀಗಾಗಿ ಭಯ ಬೇಡ. ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ರಕ್ತದೊತ್ತಡ ಹೆಚ್ಚಾಗೋದು ಅಪರೂಪದ ಪ್ರಕರಣವಾಗಿದ್ದು,ಸೂಕ್ತ ಚಿಕಿತ್ಸೆ ಮೂಲಕ ಸರಿಪಡಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆದ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ.
ಮೆಟ್ಟಿಲೇರುವಾಗ ಉಸಿರುಗಟ್ಟಿದಂತಾಗುತ್ತಿದೆಯೇ?
ಹೃದ್ರೋಗಿಗಳು ಏನ್ ಮಾಡ್ಬೇಕು?
ಹೃದಯ ಸಮಸ್ಯೆ ಹೊಂದಿರೋರು ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ ಎಂಬ ಕಾರಣಕ್ಕೆ ಔಷಧ ತೆಗೆದುಕೊಳ್ಳೋದನ್ನು ನಿಲ್ಲಿಸಬಾರದು. ವ್ಯಾಕ್ಸಿನ್ ಅಡ್ಡಪರಿಣಾಮಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ.ಇದ್ರಿಂದ ನಂತರ ಭಯಬೀಳೋ ಪ್ರಸಂಗ ಎದುರಾಗೋದಿಲ್ಲ.ವ್ಯಾಕ್ಸಿನ್ ಪಡೆಯೋ ಮುನ್ನ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.