Dengue Fever : ರಾಜ್ಯದಲ್ಲೀಗ 5000 ಡೆಂಘಿ ಕೇಸ್!
- ರಾಜ್ಯದಲ್ಲಿ ಡೆಂಘಿ ಕೇಸ್ ಹೆಚ್ಚಳ
- ಕೊರೋನಾ ನಂತರ ಇನ್ನೊಂದು ವೈರಸ್‌ನ ಅಬ್ಬರ
- ಈ ತಿಂಗಳಲ್ಲೇ 4 ಮಂದಿ ಸಾವು
- ವಿವಿಧ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳ
ಬೆಂಗಳೂರು (ಆ.23) : ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಒಟ್ಟಾರೆ ಪ್ರಕರಣಗಳು ಐದು ಸಾವಿರ ಗಡಿದಾಟಿವೆ. ಜತೆಗೆ ಸಾವು ಕೂಡಾ ವರದಿಯಾಗಿದ್ದು, ಆಗಸ್ಟ್‌ನಲ್ಲೇ ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮಳೆ ನಿರಂತರವಾಗಿ ಬರುತ್ತಿದ್ದು, ಡೆಂಘಿ ಜ್ವರ(Dengue fever)ವು ಏರುಗತಿ ಪಡೆದುಕೊಂಡಿದೆ. ಜುಲೈ ಅಂತ್ಯದಲ್ಲಿ ಡೆಂಘಿ ಪ್ರಕರಣ(Dengue Case)ಗಳು ನಾಲ್ಕು ಸಾವಿರ ಆಸುಪಾಸಿನಲ್ಲಿದ್ದವು. ಪ್ರಸಕ್ತ ತಿಂಗಳ 22 ದಿನಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿಯಲ್ಲಿ ದೃಢಪಟ್ಟಿದೆ. ಈ ಮೂಲಕ ರಾಜ್ಯದ ಒಟ್ಟಾರೆ ಡೆಂಘಿ ಪ್ರಕರಣಗಳು 5,023ಕ್ಕೆ ಹೆಚ್ಚಳವಾಗಿವೆ. ಒಟ್ಟಾರೆ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1102 ಪತ್ತೆಯಾಗಿವೆ. ಇನ್ನು ಜುಲೈ ಅಂತ್ಯದವರೆಗೂ ರಾಜ್ಯದಲ್ಲಿ ಡೆಂಘಿ ಸಾವು ಶೂನ್ಯವಿತ್ತು. ಪ್ರಸಕ್ತ ತಿಂಗಳು ಹೆಚ್ಚಾಗಿದ್ದು, ಉಡುಪಿಯಲ್ಲಿ 2, ಚಿಕ್ಕಬಳ್ಳಾಪುರ, ವಿಜಯಪುರದಲ್ಲಿ ತಲಾ ಒಬ್ಬರು 1 ಸಾವಿಗೀಡಾಗಿದ್ದಾರೆ.
ನಿರ್ಲಕ್ಷ್ಯಕ್ಕೆ ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ ಡೆಂಗ್ಯೂ ದುಪ್ಪಟ್ಟು!
ಇನ್ನು ಬೆಂಗಳೂರು ನಗರ(Bengaluru City)ದಲ್ಲಿ ಜುಲೈನಲ್ಲಿ 351 ಇದ್ದ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದ್ದು ಗುರುವಾರ 1,058ಕ್ಕೆ ತಲುಪಿದೆ. ನಗರದ ಆಸ್ಪತ್ರೆಗಳಲ್ಲಿ ನಿತ್ಯ ಸುಮಾರು 20ಕ್ಕೂ ಹೆಚ್ಚು ಶಂಕಿತ ಡೆಂಘಿ ಪ್ರಕರಣಗಳು ವರದಿಯಾಗುತ್ತಿದ್ದು, ಅವುಗಳಲ್ಲಿ 4-5 ಮಂದಿ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
100ಕ್ಕಿಂತ ಹೆಚ್ಚು ಡೆಂಘಿ ಪ್ರಕರಣಗಳಿರುವ ಜಿಲ್ಲೆಗಳು:
ಬೆಂಗಳೂರು ನಗರ (ಬಿಬಿಎಂಪಿ ಸೇರಿ) 1102, ಮೈಸೂರು 459, ಉಡುಪಿ 418 , ದಕ್ಷಿಣ ಕನ್ನಡ 224, ಚಿತ್ರದುರ್ಗ 213, ಶಿವಮೊಗ್ಗ 199, ಹಾಸನ 180, ಬೆಳಗಾವಿ 161, ವಿಜಯಪುರ 160, ಮಂಡ್ಯ 155, ದಾವಣಗೆರೆ 143, ಚಿಕ್ಕಬಳ್ಳಾಪುರ 139 , ಕಲಬುರಗಿ 146, ಚಾಮರಾಜನಗರ 120, ಧಾರವಾಡ 119, ಕೋಲಾರ 118, ಕೊಪ್ಪಳ 115, ಚಿಕ್ಕಮಗಳೂರು 108, ಬಳ್ಳಾರಿ 108.
Dengue fever ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಡೆಂಘೀ ಕಾಟ ಹೆಚ್ಚಳ!
ಡೆಂಘಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಯತ್ನ: ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ನಗರಾಡಳಿತ, ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಈ ಕುರಿತು ಸುತ್ತೋಲೆ ಹೊರಡಿಸಿರುವ ಆರೋಗ್ಯ ಇಲಾಖೆಯು, ‘ಸಮರ್ಪಕ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮತ್ತು ನಿರ್ವಹಣೆ, ನಿರುಪಯುಕ್ತ ಹಾಗೂ ಘನತ್ಯಾಜ್ಯಗಳ ಶೀಘ್ರ ವಿಲೇವಾರಿ ಹಾಗೂ ನಿರ್ವಹಣೆ, ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಮತ್ತು ನಿರ್ಮೂಲನಾ ಕಾರ್ಯಕ್ರಮ, ತುರ್ತು ಸಂದರ್ಭದಲ್ಲಿ ಅನುಮೋದಿತ ರಾಸಾಯನಿಕವನ್ನು ಬಳಸಿ ಒಳಾಂಗಣ ಧೂಮೀಕರಣ, ಸೊಳ್ಳೆ ಕಡಿತದಿಂದ ಪಾರಾಗಲು ಸುರಕ್ಷಿತ ವಿಧಾನ ಅನುಕರಣೆ ಕೈಗೊಳ್ಳುವಂತೆ’ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.