Mental Health: ಈ ಕೆಲ ಅಭ್ಯಾಸ ಬಿಡದೇ ಇದ್ರೆ ನೀವೂ ಮಾನಸಿಕ ರೋಗಿ ಆಗ್ತೀರಿ, ಜೋಕೆ
ಮಾನಸಿಕ ಸ್ವಾಸ್ಥ್ಯಕ್ಕೆ ಏನು ಬೇಕೋ ಅದನ್ನು ಮಾಡದೆ ದಿನದಿನವೂ ವಿಷವರ್ತುಲದಲ್ಲಿ ಕುಗ್ಗುತ್ತೇವೆ. ಕೆಲವು ಅಭ್ಯಾಸಗಳನ್ನು ಬಿಡದೇ ಹೋದರೆ ಮುಂದೊಂದು ದಿನ ನಾವೆಲ್ಲರೂ ಖಿನ್ನತೆಯ ಅನುಭವಕ್ಕೆ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ.
ಗೊತ್ತಿಲ್ಲದೆಯೇ ಕೆಲವು ಅಭ್ಯಾಸಗಳು ನಮಗೆ ರೂಢಿಯಾಗುತ್ತವೆ. ಕೆಟ್ಟದ್ದೆಂದು ಗೊತ್ತಿದ್ದರೂ ಅಭ್ಯಾಸಬಲದಿಂದ ಅವುಗಳನ್ನು ಮಾಡುತ್ತಿರುತ್ತೇವೆ. ಕೊನೆಗೆ ಅವು ನಮ್ಮ ಚಟವಾಗಿ ಬದಲಾಗುತ್ತವೆ. ಗುಟ್ಕಾ ಅಗಿಯುವುದು, ಧೂಮಪಾನ, ಮದ್ಯಪಾನ ಎಲ್ಲವೂ ಈ ಸಾಲಿಗೆ ಸೇರುವಂತಹ ಚಟಗಳು. ಇವುಗಳಿಂದ ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕ ಹಾನಿಯೂ ಗ್ಯಾರೆಂಟಿ. ಬರೀ ಇವುಗಳೊಂದೇ ಅಲ್ಲ, ಇಂತಹ ಹಲವಾರು ಅಭ್ಯಾಸಗಳು ನಮ್ಮ ಮಾನಸಿಕ ಸ್ವಾಸ್ಥ್ಯ ಕೆಡಿಸಬಲ್ಲವು. ವರ್ಷದಿಂದ ವರ್ಷಕ್ಕೆ ಜನರಲ್ಲಿ ಖಿನ್ನತೆ ಸೇರಿದಂತೆ ಮಾನಸಿಕ ರೋಗಗಳು ಹೆಚ್ಚುತ್ತಿವೆ ಎನ್ನುವ ವರದಿಯನ್ನು ನಾವೆಲ್ಲರೂ ಕೇಳಿದ್ದೇವೆ. ಇದಕ್ಕೆ ಇಂದಿನ ಸಮಾಜದ ಮನಸ್ಥಿತಿ, ಕುಟುಂಬ ವ್ಯವಸ್ಥೆ, ನಮ್ಮ ಪರಿಸ್ಥಿತಿ ಎಲ್ಲವೂ ಕಾರಣವಿರಬಹುದು. ಆದರೆ, ಇವೆಲ್ಲದರೊಂದಿಗೆ ನಮ್ಮ ಜೀವನಶೈಲಿ ಹಾಗೂ ಅಭ್ಯಾಸಗಳೂ ಬಹುದೊಡ್ಡ ಕೊಡುಗೆ ನೀಡುತ್ತವೆ. ಇವುಗಳಿಂದ ಮಾನಸಿಕ ನೆಮ್ಮದಿಯೂ ಹಾಳು, ಆರೋಗ್ಯವೂ ಹಾಳು. ಹೃದಯ ರೋಗಗಳು, ದೈಹಿಕ ಸಮಸ್ಯೆಗಳು ಕಾಡುತ್ತವೆ. ಅಂತಹ ಕೆಲವು ಅಭ್ಯಾಸಗಳು ನಿಮಗೂ ಇದ್ದರೆ ಅವುಗಳನ್ನು ಕೈ ಬಿಡುವುದು ಇಂದಿನ ಅಗತ್ಯ.
• ಫೋನ್ ದಾಸರಾಗುವುದು (Mobile Addiction)
ಮೊಬೈಲ್ ಚಟ ಮನುಷ್ಯನನ್ನು ಅದೆಷ್ಟು ಹಾಳು ಮಾಡುತ್ತಿದೆ ಎಂದರೆ ಊಹಿಸಲು ಸಾಧ್ಯವಿಲ್ಲ. ಮೊಬೈಲ್ ನಿಂದಾಗಿ ಮಾನವ ಸೋಮಾರಿ (Lazy)ಯಾಗಿದ್ದಾನೆ. ಬೆಳಗ್ಗೆ ಎದ್ದಾಕ್ಷಣ ನಿಮಗೆ ಎಲ್ಲಕ್ಕಿಂತ ಮೊದಲು ಫೋನ್ ಚೆಕ್ (Check) ಮಾಡಬೇಕೆಂದು ಅನ್ನಿಸುತ್ತದೆಯೇ? ಹಾಗಾದರೆ ಅದು ಎಚ್ಚೆತ್ತುಕೊಳ್ಳುವ ಸಮಯ. ಸ್ಮಾರ್ಟ್ ಫೋನಿನ ಅಧಿಕ ಬಳಕೆ (Over Use) ಹಾಗೂ ಸಾಮಾಜಿಕ ಜಾಲತಾಣಗಳ (Social Media) ಅತಿಯಾದ ಅವಲಂಬನೆಯಿಂದ ಖಿನ್ನತೆ ಉಂಟಾಗುವುದು ಈಗಾಗಲೇ ಸಾಬೀತಾಗಿದೆ. ಇದಕ್ಕೆ ಪರಿಹಾರವೆಂದರೆ ಫೋನ್ ನಿಂದ ದೂರವಿರುವುದು. ಮೊದಮೊದಲು ಕಷ್ಟವಾಗಬಹುದು. ಮೊಬೈಲ್ ನೋಡುವ ಆಸೆ ಉಂಟಾಗದಿರುವಂತೆ ಯಾವುದಾದರೊಂದು ಉತ್ತಮ ಹವ್ಯಾಸ (Habit) ರೂಢಿಸಿಕೊಳ್ಳಿ. ಚಿಕ್ಕದ್ದಾದರೂ ಸರಿ, ಏನಾದರೂ ದುಡಿಮೆ ಮಾಡಿ.
World Mental Health Day: ಮಾನಸಿಕ ಚಿಕಿತ್ಸೆ ಪಡೆಯಲು ಹಿಂಜರಿಕೆ ಏಕೆ..?
• ಕಡಿಮೆ ನಿದ್ರೆ (Sleep)
ನೀವು ಪ್ರತಿ ದಿನ ಸರಿಯಾಗಿ ನಿದ್ರೆ ಮಾಡುತ್ತೀರಾ? ತಡರಾತ್ರಿಯವರೆಗೂ ಮೊಬೈಲ್ ನೋಡುತ್ತೀರಾ? ಪ್ರತಿದಿನ ಕನಿಷ್ಠ ಏಳರಿಂದ ಎಂಟು ಗಂಟೆ ನಿದ್ರೆ ಮಾಡುತ್ತೀರಾ? ಇಲ್ಲವೆಂದಾದರೆ ಕ್ರಮೇಣ ನಿಮ್ಮ ಮಾನಸಿಕ ಆರೋಗ್ಯ (Mental Health) ಹದಗೆಡುವುದು ಗ್ಯಾರೆಂಟಿ. ರಾತ್ರಿ ನಿದ್ರೆ ಇಲ್ಲದಿರುವಾಗ ಬೆಳಗ್ಗೆ, ಮಧ್ಯಾಹ್ನದ ಸಮಯದಲ್ಲಿ ಕಿರುನಿದ್ರೆ ಮಾಡುವ ಅಭ್ಯಾಸ ಇರುತ್ತದೆ. ಇದು ಸಹ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿದ್ರೆ ಕಡಿಮೆಯಾದರೆ ಸುಸ್ತು (Fatigue), ಕಿರಿಕಿರಿ (Irritation), ಏಕಾಗ್ರತೆ (Concentration) ಕಡಿಮೆ ಆಗುವ ಸಮಸ್ಯೆ ಎದುರಿಸಬೇಕಾಗುತ್ತದೆ. ಆರೋಗ್ಯ ಚೆನ್ನಾಗಿರಬೇಕೆಂದರೆ ಉತ್ತಮ ದಿನಚರಿ (Lifestyle) ರೂಢಿಸಿಕೊಳ್ಳಿ.
• ಸಹಾಯ (Help) ಕೇಳದಿರುವುದು
ನಿಮಗೆ ಜನರೊಂದಿಗೆ (People) ಸೇರಿ ಕೆಲಸ ಮಾಡಲು ಕಷ್ಟವಾಗುತ್ತದೆಯೇ? ನೀವು ಅವರಿಗಿಂತ ಉತ್ತಮ ಸ್ಥಾನದಲ್ಲಿ ಇರುವವರೆಂದು ಅನಿಸುತ್ತದೆಯೇ? ಅಥವಾ ಅವರ ಸಹಕಾರ ಬೇಡವೆಂದು ಅನಿಸುತ್ತದೆಯೇ? ಯಾರಲ್ಲೂ ಸಹಾಯ ಕೇಳದಿರುವುದು ಭಾರೀ ಅನಾಹುತಕ್ಕೆ ಕಾರಣವಾಗಬಹುದು. ಜನರನ್ನು ನಿರ್ಲಕ್ಷಿಸುವುದು, ಅವರೊಂದಿಗೆ ಬೆರೆಯದಿರುವುದರಿಂದ ಜೀವನದಲ್ಲಿ ಏಕಾಂಗಿಯಾಗಿ ಸಂಘರ್ಷ (Fight) ಮಾಡುವಂತೆ ಆಗುತ್ತದೆ. ನಿಮ್ಮದೂ ಇದೇ ಗುಣವಾಗಿದ್ದರೆ ನಿಧಾನವಾಗಿ ಬದಲಿಸಿಕೊಳ್ಳಿ. ಮನುಷ್ಯನಿಗೆ ಜನರ ಸಂಪರ್ಕ ಬೇಕೇ ಬೇಕು.
ಸ್ಟ್ರೆಸ್ ಅಂತ ಅಲ್ಕೋಹಾಲ್ ಕುಡಿದ್ರೆ ಮಾನಸಿಕ ಆರೋಗ್ಯ ಕೈ ಕೊಡುತ್ತೆ
• ಸೂಕ್ತ ಭಂಗಿಯಲ್ಲಿ ಕುಳಿತುಕೊಳ್ಳದಿರುವುದು (Do not Sit Properly)
ಸೂಕ್ತ ಭಂಗಿಯಲ್ಲಿ ಕುಳಿತುಕೊಳ್ಳದಿರುವುದಕ್ಕೂ ಮಾನಸಿಕ ಸಮಸ್ಯೆಗೂ ಕಾರಣವೇನೆಂದು ಅಚ್ಚರಿಯಾಗಬಹುದು. ಇಂದಿನ ದಿನದಲ್ಲಿ ಬಹಳಷ್ಟು ಜನ ಕುಳಿತುಕೊಂಡೇ ಕೆಲಸ ಮಾಡುವ ದಿನಚರಿ ಹೊಂದಿದ್ದಾರೆ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೆ ಇದ್ದಾಗ ಕತ್ತು, ಬೆನ್ನು, ಭುಜ, ಕೈಕಾಲುಗಳ ನೋವು (Pain) ಕಾಡುತ್ತದೆ. ದೀರ್ಘ ಸಮಯ ದೇಹದಲ್ಲಿ ನೋವಿದ್ದರೆ ಖಿನ್ನತೆ (Depression) ಆರಂಭವಾಗುತ್ತದೆ.
• ಹೋಲಿಕೆ (Compare) ಮಾಡಿಕೊಳ್ಳುವುದು
ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಸಂಸಾರಗಳೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಂಡು ಕುಗ್ಗುವುದರಿಂದ ಬಹಳ ಬೇಗ ಖಿನ್ನತೆ ಆರಂಭವಾಗುತ್ತದೆ. ಹಾಗೂ ಜೀವನದಲ್ಲಿ ಎಲ್ಲ ವಿಚಾರಗಳಿಗೂ ನಕಾರಾತ್ಮಕ (Negative) ಧೋರಣೆ ತಳೆಯುವುದು ಹಾನಿಕರ. ನಕಾರಾತ್ಮಕ ಧೋರಣೆ ಹೊಂದುವುದರಿಂದ ಜೀವನದಲ್ಲಿ ನೀವು ಏಕಾಂಗಿಯಾಗುತ್ತೀರಿ. ಚಿಂತೆ, ಆತಂಕದಿಂದ ಮುಕ್ತಿ ಹೊಂದಬೇಕು ಎಂದಾದರೆ ಆಶಾಭಾವನೆ (Positive) ಹೊಂದಬೇಕು.