ಉಪ್ಪಿಗಿಂತ ರುಚಿಯಿಲ್ಲ ಎಂಬುದು ಸರ್ವಕಾಲಿಕ ಸತ್ಯ. ಆದರೆ, ಅತಿಯಾದರೆ ಅಮೃತವೂ ವಿಷಯೆಂಬಂತೆ ಉಪ್ಪು ಹೆಚ್ಚಾದರೆ ಅಡುಗೆ ರುಚಿ ಕೆಡುವ ಜೊತೆಗೆ ಆರೋಗ್ಯಕ್ಕೂ ಹಾನಿ. ಉಪ್ಪನ್ನು ಕಡಿಮೆ ಬಳಸುವಂತೆ ವೈದ್ಯರೇನೋ ಸಲಹೆ ನೀಡುತ್ತಾರೆ,ಆದರೆ ಅದನ್ನು ಪಾಲಿಸುವುದು ಮಾತ್ರ ತುಂಬಾ ಕಷ್ಟದ ಕೆಲಸ.ಅದರಲ್ಲೂ ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಉಪ್ಪು ದೊಡ್ಡ ಶತ್ರು. ಅಷ್ಟೇ ಅಲ್ಲ, ಅತಿಯಾದ ಉಪ್ಪಿನ ಸೇವನೆಯಿಂದ ಹೃದಯ ಹಾಗೂ ರಕ್ತನಾಳಗಳ ಮೇಲೆ ಒತ್ತಡ ಹೆಚ್ಚುತ್ತದೆ. ಮೂತ್ರಕೋಶದಲ್ಲಿ ಕಲ್ಲು, ತಲೆನೋವು,ಶರೀರದಲ್ಲಿ ಬಾವುಗಳು ಹಾಗೂ ತೂಕ ಹೆಚ್ಚಳದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವೆಲ್ಲ ಗೊತ್ತಿದ್ದರೂ ಉಪ್ಪಿನ ಸೇವನೆಯನ್ನು ಕಡಿತಗೊಳಿಸುವುದು ತುಂಬಾ ಕಷ್ಟದ ಕೆಲಸವೇ ಸರಿ. ಡೈನಿಂಗ್ ಟೇಬಲ್ ಮೇಲಿರುವ ಉಪ್ಪಿನ ಡಬ್ಬ ಕಣ್ಣಿಗೆ ಬಿದ್ದರೆ ಸಾಕು, ಎಲ್ಲದಕ್ಕೂ ಉಪ್ಪು ಸೇರಿಸಿಕೊಂಡು ಬಾಯಿ ರುಚಿ ತೀರಿಸಿಕೊಳ್ಳುವ ಚಪಲ. ಹಾಗಿದ್ರೆ ಉಪ್ಪಿನ ಪ್ರಮಾಣವನ್ನು ತಗ್ಗಿಸುವುದು ಹೇಗೆ? ಈ ಕೆಳಗಿನ ಸರಳ ಟಿಪ್ಸ್ ಪಾಲಿಸುವ ಮೂಲಕ ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬಹುದು.

ಸೆಕೆಂಡ್‌ ಹ್ಯಾಂಡ್‌ ಡ್ರಿಂಕಿಂಗ್‌ ಎಷ್ಟು ಅಪಾಯ ನಿಮಗೆ ಗೊತ್ತಾ?

ಡೈನಿಂಗ್ ಟೇಬಲ್ ಮೇಲೆ ಉಪ್ಪಿನ ಡಬ್ಬಿ ಇಡಬೇಡಿ: ಉಪ್ಪು ಕಡಿಮೆ ತಿನ್ನಬೇಕು ಎಂಬ ಶಪಥವನ್ನು ಹಾಳು ಮಾಡುವುದೇ ಡೈನಿಂಗ್ ಟೇಬಲ್ ಮೇಲಿರುವ ಉಪ್ಪಿನ ಡಬ್ಬ. ಸಾಂಬಾರಿಗೆ ಬೇಕಂತಲೇ ಉಪ್ಪು ಕಡಿಮೆ ಹಾಕಿರುತ್ತೇವೆ. ಆದರೆ, ಊಟ ಮಾಡುವಾಗ ಬಾಯಿಗೆ ಸಪ್ಪೆ ಅನ್ನಿಸುತ್ತದೆ. ತಕ್ಷಣ ಕಣ್ಣು ಅಲ್ಲೇ ಇರುವ ಉಪ್ಪಿನ ಡಬ್ಬದ ಮೇಲೆ ಬೀಳುತ್ತದೆ. ನಾವು ಕೈಗೊಂಡ ಶಪಥ ಮರೆತು ಎಷ್ಟು ಬೇಕೋ ಅಷ್ಟು ಉಪ್ಪನ್ನು ತಟ್ಟೆಗೆ ಸುರಿದುಕೊಳ್ಳುತ್ತೇವೆ. ಇಂಥ ಅಭ್ಯಾಸಕ್ಕೆ ಬ್ರೇಕ್ ಹಾಕಬೇಕು ಅಂದ್ರೆ ಉಪ್ಪಿನ ಡಬ್ಬವನ್ನು ಊಟದ ಟೇಬಲ್ ಮೇಲೆ ಇಡಲೇಬಾರದು. ಇದದರಿಂದ ಉಪ್ಪು ಬೇಕೆನಿಸಿದರೂ ಇನ್ನೊಮ್ಮೆ ಎದ್ದು ಒಳಗೆ ಹೋಗಬೇಕಲ್ಲ ಎಂಬ ಭಾವನೆಯಿಂದಾದರೂ ಸುಮ್ಮನೆ ತಿನ್ನುತ್ತೇವೆ.

ಪ್ಯಾಕಡ್ ಫುಡ್ ತಿನ್ನುವ ಮುನ್ನ ಲೇಬಲ್ ಓದಿ: ಚಿಪ್ಸ್, ಲೇಸ್ ಸೇರಿದಂತೆ ಉಪ್ಪು ಉಪ್ಪಾಗಿ ನಾಲಗೆಗೆ ರುಚಿ ನೀಡುವ ತಿನಿಸುಗಳನ್ನು ತಿನ್ನುವ ಮುನ್ನ ಆ ಪ್ಯಾಕೇಟ್ ಮೇಲೆ ನಮೂದಿಸಿರುವ ಉಪ್ಪಿನ ಪ್ರಮಾಣ ಎಷ್ಟು ಎಂಬುದನ್ನು ಪರಿಶೀಲಿಸಿ. ದಿನಕ್ಕೆ ನಾವು ಸೇವಿಸುವ ಉಪ್ಪಿನ ಪ್ರಮಾಣ 2,300 ಎಂಜಿ ಅಥವಾ ಅದಕ್ಕಿಂತ ಕಡಿಮೆಯಿರಬೇಕು.‘ನೋ ಆಡೆಡ್ ಸಾಲ್ಟ್’ ಎಂದು ಬರೆದಿರುವ ಫುಡ್‍ಗಳ ಸಂಸ್ಕರಣೆ ಸಂದರ್ಭದಲ್ಲಿ ಉಪ್ಪು ಬಳಸಿರುವುದಿಲ್ಲ. ಹಾಗಂತ ಇದರಲ್ಲಿ ಉಪ್ಪೇ ಇರುವುದಿಲ್ಲ ಎಂದು ಕೂಡ ಹೇಳಲಾಗದು.ಆದಕಾರಣ ಪ್ಯಾಕೆಟ್‍ನಲ್ಲಿರುವ ತಿನಿಸುಗಳನ್ನು ತಿನ್ನುವ ಮುನ್ನ ಅದರಲ್ಲಿ ಉಪ್ಪಿನ ಪ್ರಮಾಣ ಎಷ್ಟಿದೆ ಎಂಬುದನ್ನು ಚೆಕ್ ಮಾಡಿದ ಬಳಿಕವೇ ಸೇವಿಸಿ.

ದಿಂಬು ಬದಲಾಯಿಸುವ ಟೈಮ್ ಆಯ್ತಾ?

ಮಸಾಲೆಗಳನ್ನು ಬಳಸಿ: ಕೆಲವರು ಆಹಾರದ ರುಚಿ ಹೆಚ್ಚಿಸಲು ಉಪ್ಪಿನ ಬದಲು ಮಸಾಲ ಸಾಮಗ್ರಿಗಳನ್ನು ಬಳಸುತ್ತಾರೆ. ಕಾಳುಮೆಣಸಿನ ಪೌಡರ್ ಹಾಗೂ ಚಿಲ್ಲಿ ಫ್ಲಾಕ್ಸ್ ಅನ್ನು ಸದಾ ಡೈನಿಂಗ್ ಟೇಬಲ್ ಮೇಲಿಟ್ಟಿರಿ. ಊಟ ಮಾಡುವಾಗ ಯಾವುದಾದರೂ ತಿನಿಸಿಗೆ ಉಪ್ಪು ಕಡಿಮೆ ಅನ್ನಿಸಿದರೆ ಇವುಗಳನ್ನು ಹಾಕಿಕೊಂಡು ತಿನ್ನಿ.ಇನ್ನು ಅಡುಗೆ ಮಾಡುವಾಗ ಯಾವುದಾದರೂ ಖಾದ್ಯಕ್ಕೆ ಸ್ವಲ್ಪ ಉಪ್ಪು ಕಡಿಮೆಯಾಗಿದೆ ಅಂದೆನಿಸಿದರೆ ಈರುಳ್ಳಿ ಪೌಡರ್, ಬೆಳ್ಳುಳ್ಳಿ ಪೌಡರ್, ಕಾಳುಮೆಣಸು, ಜೀರಿಗೆ, ಶುಂಠಿ, ಕೊತ್ತಂಬರಿ ಮೊದಲಾದ ಮಸಾಲ ಪದಾರ್ಥಗಳನ್ನು ಉಪ್ಪಿಗೆ ಪರ್ಯಾಯವಾಗಿ ಬಳಸಬಹುದು. ಆಹಾರದಲ್ಲಿ ಉಪ್ಪನ್ನು ನಿಯಂತ್ರಿಸಲು ಕೆಲವು ರಾಷ್ಟ್ರಗಳಲ್ಲಿ ಮಸಾಲ ಪದಾರ್ಥಗಳನ್ನು ಬಳಸುತ್ತಾರೆ. 

ಹರ್ಬ್ ಸಾಲ್ಟ್ ಉಪಯೋಗಿಸಿ: ಮಾರುಕಟ್ಟೆಯಲ್ಲಿ ನಾನಾ ವಿಧದ ಹರ್ಬ್ ಸಾಲ್ಟ್‍ಗಳು ಲಭ್ಯವಿದ್ದು, ಅವುಗಳನ್ನು ಉಪ್ಪಿಗೆ ಪರ್ಯಾಯವಾಗಿ ಬಳಸಬಹುದು. ಕೊತ್ತಂಬರಿ, ಪುದೀನಾ, ಓಮಾ, ಓಮಾದ ಹಸಿರು ಎಲೆಗಳನ್ನು ಬಳಸಿ ಇದನ್ನು ಮಾಡಬಹುದು. ಎಳ್ಳಿನಿಂದಲೂ ಹರ್ಬ್ ಸಾಲ್ಟ್ ಸಿದ್ಧಪಡಿಸಬಹುದು.1;5 ರ ಅಳತೆಯಲ್ಲಿ ಉಪ್ಪು ಮತ್ತು ಹುರಿದ ಎಳ್ಳನ್ನು ಮಿಶ್ರಣ ಮಾಡುವ ಮೂಲಕ ಹರ್ಬ್ ಸಾಲ್ಟ್ ಸಿದ್ಧಪಡಿಸಬಹುದು. ಜಪಾನ್‍ನಲ್ಲಿ ಈ ಹರ್ಬ್ ಸಾಲ್ಟ್ಗೆ ತುಂಬಾ ಬೇಡಿಕೆಯಿದೆ. 

ಅಯ್ಯೋ, ಇವ್ರಿಗೆ ಮೆದುಳಿಗೆ ಪೆಟ್ಟು ಬಿದ್ದಿದ್ದು ಒಳ್ಳೆದೇ ಆಯ್ತು

ಮನೆಯಲ್ಲಿ ಸಿದ್ಧಪಡಿಸಿದ ಆಹಾರಕ್ಕೆ ಆದ್ಯತೆ ನೀಡಿ: ಹೋಟೆಲ್ ಅಥವಾ ಹೊರಗಡೆಯ ಆಹಾರ ಸೇವನೆಯನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಉಪ್ಪಿನ ಸೇವನೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿದೆ.ಮನೆಯಲ್ಲಿ ಶುಚಿ ಹಾಗೂ ರುಚಿಯಾದ ಆಹಾರ ಸಿದ್ಧಪಡಿಸಿ ತಿನ್ನಿ. ಹಾಗೆಯೇ ಅಡುಗೆ ಮಾಡುವಾಗ ಉಪ್ಪನ್ನು ಕಡಿಮೆ ಬಳಸಲು ಮರೆಯಬೇಡಿ. 

ಸಂಸ್ಕರಿಸಿದ ಆಹಾರಕ್ಕೆ ನೋ ಅನ್ನಿ: ಆದಷ್ಟು ತಾಜಾ ತರಕಾರಿಗಳು, ಹಣ್ಣುಗಳು ಹಾಗೂ ಮಾಂಸಕ್ಕೆ ಆದ್ಯತೆ ನೀಡಿ. ಸಂಸ್ಕರಿಸಿದ ಮಾಂಸ, ತರಕಾರಿಗಳನ್ನು ಸಾಧ್ಯವಾದಷ್ಟು ದೂರವಿಡಿ.