ಅಯ್ಯೋ, ಇವ್ರಿಗೆ ಮೆದುಳಿಗೆ ಪೆಟ್ಟು ಬಿದ್ದಿದ್ದು ಒಳ್ಳೆದೇ ಆಯ್ತು
ಆಗೋದೆಲ್ಲ ಒಳ್ಳೇದಕ್ಕೆ ಅಂತಾರಲ್ಲ... ಅದು ಈ ವ್ಯಕ್ತಿಗಳ ವಿಷಯದಲ್ಲಿ ಖಂಡಿತಾ ನಿಜವೇ. ತಲೆಗೆ ಪೆಟ್ಟು ಬಿದ್ದು, ಮೆದುಳಿಗೆ ಹಾನಿಯಾಗಿದ್ರಿಂದ ಇವ್ರಿಗೇನಾಯ್ತು ಗೊತ್ತಾ? ಹೊಸದೊಂದು ಸಾಮರ್ಥ್ಯ ಕಲಿಕೆಯೇ ಇಲ್ಲದೆ ಕರಗತವಾಯ್ತು!
ಈ ಸಿಂಡ್ರೋಮ್ ಬಗ್ಗೆ ಓದಿದ್ರೆ, ಬಹುಷಃ ನಮ್ಮ ಮೆದುಳಲ್ಲಿ ಎಲ್ಲ ಪ್ರೋಗ್ರಾಮಿಂಗ್ ಮುಂಚೆಯೇ ಆಗಿರುತ್ತದೆ ಆದರೆ ಆ್ಯಕ್ಟಿವೇಟ್ ಆಗಿರುವುದಿಲ್ಲವೇನೋ ಅನಿಸುತ್ತೆ. ಕೆಲವೊಮ್ಮೆ ಇದನ್ನು ಆ್ಯಕ್ಟಿವೇಟ್ ಮಾಡುವ ಸ್ವಿಚ್ ಎಂದರೆ ತಲೆಗೆ ಪೆಟ್ಟು ಬೀಳುವುದು, ಯಾವುದಾದರೂ ಅತಿಯಾದ ಶಾಕ್‌ಗೆ ಒಳಗಾಗುವುದು! ಹೌದು, ಸರಿಯಾಗಿಯೇ ಓದಿದ್ರಿ. ಅಕ್ವೈರ್ಡ್ ಸ್ಯಾವೆಂಟ್ ಸಿಂಡ್ರೋಮ್ ಎಂಬುದು ಶಾಪ ಎಂದುಕೊಂಡಿದ್ದರ ನಡುವೆ ದೊರಕುವ ವರ.
ಹಲವಾರು ಚಲನಚಿತ್ರಗಳಲ್ಲಿ ನೋಡಿದ್ದೇವೆ- ತಲೆಗೆ ಪೆಟ್ಟು ಬಿದ್ದು ಎಲ್ಲ ಮರೆತು ಹೋಗುವುದು, ಮತ್ತೊಮ್ಮೆ ಪೆಟ್ಟು ಬಿದ್ದಾಗ ಎಲ್ಲ ನೆನಪಿಗೆ ಬರುವುದು. ಇದೊಂತೂ ಸಿಲ್ಲಿ ಎಂದು ನಕ್ಕಿದ್ದೇವೆ. ಆದರೆ, ಅಕ್ವೈರ್ಡ್ ಸ್ಯಾವೆಂಟ್ ಸಿಂಡ್ರೋಮ್‌ನಲ್ಲಿ ಹೀಗೆ ಕೂಡಾ ಆಗಲು ಸಾಧ್ಯವಿದೆ.
ಕೊರೋನಾ ವೈರಸ್‌ಗೆ ಸಿಕ್ತು ಔಷಧಿ!: 48 ಗಂಟೆಯಲ್ಲಿ ರೋಗಿ ಗುಣಮುಖ?...
ಈ ಸಿಂಡ್ರೋಮ್ ಕುರಿತ ನೈಜ ಉದಾಹರಣೆಗಳನ್ನು ನೋಡಿದ್ರೆ ನಮ್ಮ ಮೆದುಳು ಎಂಥ ಅದ್ಬುತವಾದ ಅಂಗ ಎಂಬುದು ಮತ್ತೊಮ್ಮೆ ಅರಿವಾಗುತ್ತದೆ. ಹೌದು, ಈ ಕೆಳಗಿನವರು ಮೆದುಳಿಗೆ ಪೆಟ್ಟು, ಸ್ಟ್ರೋಕ್, ಡಿಮೆನ್ಷಿಯಾ ಸೇರಿದಂತೆ ಹಲವಾರು ರೀತಿಯ ಟ್ರೋಮಾಕ್ಕೆ ಒಳಗಾದರೂ, ಅದರ ಬದಲಿಗೆ ಹೊಸತಾದ ವಿಶೇಷ ಕೌಶಲ್ಯ ಪಡೆದು ಅಚ್ಚರಿ ಮೂಡಿಸಿದ್ದಾರೆ. ಇದು ಅಪರೂಪವಾದರೂ ಅಸಂಗತವಂತೂ ಅಲ್ಲ ಎಂದು ಸಾಬೀತುಪಡಿಸಿದ್ದಾರೆ.
ಓರ್ಲಾಂಡೋ ಸೆರೆಲ್
ಅಕ್ವೈರ್ಡ್ ಸ್ಯಾವೆಂಟ್ ಸಿಂಡ್ರೋಮ್ ಹೊಂದಿ ದೊಡ್ಡ ಸುದ್ದಿಯಾದ ಕೇಸ್ ಓರ್ಲಾಂಡೋನದು. 10 ವರ್ಷದ ಸೆರೆಲ್ ಆಟವಾಡುವಾಗ ಬೇಸ್‌ಬಾಲ್ ಬಂದು ಆತನಿಗೆ ಹೊಡೆದಿದೆ. ಕೆಳಗೆ ಬಿದ್ದರೂ ಎದ್ದು ಮತ್ತೆ ಆಟ ಮುಂದುವರಿಸಿದ. ಆದರೆ, ತದ ನಂತರದ ಕೆಲ ಸಮಯ ತಲೆನೋವು ಆತನನ್ನು ಬಾಧಿಸಿತು. ದಿನಗಳೆದಂತೆ ತಲೆನೋವು ನಿಂತಿತು. ಅಷ್ಟರಲ್ಲಿ ಆತನಿಗೆ ಯಾವುದೇ ವರ್ಷದ ಯಾವುದೇ ತಾರೀಖಿನ ದಿನವನ್ನು ಹೆಸರಿಸಬಲ್ಲ ಸಾಮರ್ಥ್ಯ ಗಳಿಸಿದ್ದು ಅವನ ಗಮನಕ್ಕೆ ಬಂತು. ಅಷ್ಟೇ ಅಲ್ಲ, ಅಪಘಾತದ ಬಳಿಕದ ಯಾವ ವರ್ಷದ ಯಾವ ದಿನ ಬೇಕಾದರೂ ಕೇಳಿ, ಅವತ್ತು ಹವಾಮಾನ ಏನಿತ್ತು, ತಾನು ಎಲ್ಲಿದ್ದೆ, ಏನು ಮಾಡುತ್ತಿದ್ದೆ ಎಲ್ಲವನ್ನೂ ಆತ ಶೇ.100ಕ್ಕೆ 100ರಷ್ಟು ನಿಖರವಾಗಿ ಹೇಳಬಲ್ಲವನಾಗಿದ್ದ.
ಡೆರೆಕ್ ಅಮಾಟೋ
ಅಕ್ವೈರ್ಡ್ ಸ್ಯಾವೆಂಟ್ ಸಿಂಡ್ರೋಮ್‌ನಿಂದ ಮತ್ತೆ ಕೆಲವರು ಕಲಾಸಾಮರ್ಥ್ಯ ಪಡೆದದ್ದೂ ಇದೆ. ಅದಕ್ಕೊಂದು ಉದಾಹರಣೆ ಡೆರೆಕ್ ಅಮಾಟೋ. ಈತನೂ ಆಟವಾಡುವಾಗ ಆಯ ತಪ್ಪಿ ತಲೆಯನ್ನು ಸಿಮೆಂಟ್ ನೆಲಕ್ಕೆ ಗುದ್ದಿಸಿಕೊಂಡ. ಇದರಿಂದಾಗಿ ಒಂದು ಕಿವಿ ಕೇಳಿಸುವುದು ನಿಂತಿತು. ನೆನಪಿನ ಶಕ್ತಿ ಹೋಯಿತು ಜೊತೆಗೆ ತಲೆನೋವೂ ಎಡೆಬಿಡದೆ ಕಾಡಲಾರಂಭಿಸಿತು. ಆದರೆ, ಎಂದೂ ಪಿಯಾನೋ ನುಡಿಸದಿದ್ದ ಅಮಾಟೋಗೆ ಪಿಯಾನೋ ನುಡಿಸುವ ಕಲೆ ಸ್ವತಃ ಸಿದ್ದಿಸಿತ್ತು. ಹೌದು, ಯಾವುದೇ ತರಬೇತಿ ಇಲ್ಲದೆ ಆತ ಕ್ಲಿಷ್ಟಕರ ಟ್ಯೂನ್‌ಗಳನ್ನು ಕೂಡಾ ಲೀಲಾಜಾಲವಾಗಿ ನುಡಿಸಲಾರಂಭಿಸಿದ್ದ. ತನ್ನ ಫ್ರೆಂಡ್‌ನ ಸ್ಟುಡಿಯೋದಲ್ಲಿದ್ದ ಪಿಯಾನೋ ನೋಡಿದ ಆತ 6 ಗಂಟೆಗಳ ಕಾಲ ನಿರಂತರವಾಗಿ ಅದನ್ನು ನುಡಿಸಿ ಎಲ್ಲರನ್ನೂ ಅಚ್ಚರಿಗೆ ನೂಕಿದ್ದ.
ಖಾಲಿ ಹೊಟ್ಟೆಯಲ್ಲಿ ನಿರ್ಧಾರ ತೆಗೆದುಕೊಂಡರೆ ಎಡವಟ್ಟಾಗಬಹುದು!
ಅಲೋಂಜೋ ಕ್ಲೆಮನ್ಸ್
ಈತ ಮಗುವಾಗಿದ್ದಾಗಲೇ ಮೆದುಳಿಗೆ ಪೆಟ್ಟು ಬಿದ್ದಿತು. ಇದರಿಂದಾಗಿ ಆತ ಯೋಚಿಸುವ, ಕಲಿಯುವ, ಸಂವಹನ ನಡೆಸುವ ವಿಧಾನಗಳೆಲ್ಲವೂ ಬದಲಾದವು. ಇದ್ದಕ್ಕಿದ್ದಂತೆ ಆತ ಯಾವುದೇ ತರಬೇತಿ ಇಲ್ಲದೆ ಜೀವಿಗಳ ದೊಡ್ಡ ದೊಡ್ಡ ಕೆತ್ತನೆಯನ್ನು ಆರಂಭಿಸಿದ. ರೈನ್ ಮ್ಯಾನ್ ಚಿತ್ರದಿಂದಾಗಿ ಸ್ಯಾವೆಂಟ್ ಸಿಂಡ್ರೋಮ್ ಬಗ್ಗೆ ಜನರಿಗೆ ಕುತೂಹಲ ಹೆಚ್ಚಿದಂತೆ ಕ್ಲೆಮನ್ಸ್‌ನ ಇಂಟರ್‌ವ್ಯೂ ಡಿಸ್ಕವರಿ ಚಾನೆಲ್‌ನಲ್ಲಿ ಬಂತು. ಈ ಖ್ಯಾತಿ ಆತನ ಕಲಾಕೃತಿಗಳು ಹೆಸರು ಮಾಡಲು ಸಹಾಯ ಮಾಡಿತು. ಇಂದು ಕ್ಲೆಮನ್ಸ್‌ನ ಕಲಾಕೃತಿಗಳು ಜಗತ್ತಿನ ಪ್ರಮುಖ ಗ್ಯಾಲರಿಗಳಲ್ಲಿ ಜನಾಕರ್ಷಣೆಯ ಕೇಂದ್ರಬಿಂದುಗಳಾಗಿವೆ.
ಆ್ಯಂಥೋನಿ ಸಿಸೋರಿಯಾ
25 ವರ್ಷಗಳ ಹಿಂದೆ, 42 ವರ್ಷದವನಿದ್ದ ಆ್ಯಂಥೋನಿ ಸಿಸೋರಿಯಾಗೆ ಸಿಡಿಲು ಬಡಿದಿತ್ತು. ಆಗ ಸರ್ಜನ್ ಆಗಿದ್ದ ಆ್ಯಂಥೋನಿಗೆ ಕೆಲ ಕಾಯಿಲೆಗಳ ಹೆಸರುಗಳು ಮರೆತು ಹೋದದ್ದು, ಸಣ್ಣ ಪುಟ್ಟ ನೆನಪಿನ ದೋಷಗಳು ಬಿಟ್ಟರೆ ಆತ ಮತ್ತೆಲ್ಲ ನಾರ್ಮಲ್ ಆಗಿದ್ದ. ಆದರೆ, ಕೆಲ ವರ್ಷಗಳ ಬಳಿಕ ಸಡನ್ ಆಗಿ ಆತನಿಗೆ ಪಿಯಾನೋ ಮ್ಯೂಸಿಕ್ ಕೇಳುವ ಹಂಬಲ ಹೆಚ್ಚುತ್ತಾ ಸಾಗಿತು. ಎಂದೂ ಪಿಯಾನೋ ಕ್ಲಾಸಿಕಲ್ ಮ್ಯೂಸಿಕ್ ಕೇಳಲು ಇಚ್ಚಿಸದಿದ್ದ ಆತನಿಗೆ ಸಂಗೀತ ಸಡನ್ ಆಗಿ ಒಲಿದುಬಂದಿತ್ತು. ಇದರಿಂದ ಆತ ಸಂಗೀತ ಕಲಿಯಲು ಪ್ರಾರಂಭಿಸಿದ. ಆದರೆ ಕ್ಲಾಸಿಕಲ್ ಟ್ಯೂನ್ಸ್ ಆತನ ತಲೆಗೆ ಹೋಗಲಿಲ್ಲ. ಏಕೆಂದರೆ ಅವನ ತಲೆಯಲ್ಲಿ ಬೇರೆಯದೇ ಹಾಡುಗಳು ಪ್ಲೇ ಆಗುತ್ತಿದ್ದವು. ನಿಧಾನವಾಗಿ ಆತನಿಗೆ ಅವೆಲ್ಲ ತಾನೇ ಸ್ವತಃ ರಚಿಸುತ್ತಿರುವ ಸಂಪೂರ್ಣ ಹಾಡುಗಳೆಂಬುದು ಅರಿವಾಯಿತು.
ಜೇಸನ್ ಪ್ಯಾಜೆಟ್
ಅಕ್ವೈರ್ಡ್ ಸ್ಯಾವೆಂಟ್ ಸಿಂಡ್ರೋಮ್ ಹೊಂದಿದ ಹಲವರಿಗೆ ಕಲೆ ಅಥವಾ ಸಂಗೀತ ಒಲಿದಿದ್ದರೆ, ಜೇಸನ್‌ಗೆ ಗಣಿತದ ಸಾಮರ್ಥ್ಯ ಒಲಿದುಬಂತು. 2002ರಲ್ಲಿ ಬಾರ್ ಒಂದರ ಹೊರಗೆ ನಡೆದ ಗಲಾಟೆಯಲ್ಲಿ ಆತ ಹೆದರಿ ಪೋಸ್ಟ್ ಟ್ರಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್‌ಗೆ ಒಳಗಾದ. ಅಲ್ಲೀವರೆಗೂ ಫರ್ನಿಚರ್ ಮಾರಾಟಗಾರನಾಗಿದ್ದ ಜೇಸನ್ ಸಡನ್ ಆಗಿ ಗಣಿತಶಾಸ್ತ್ರದಲ್ಲಿ ಜೀನಿಯಸ್ ಆದ. ಕ್ಲಿಷ್ಟಕರ ಗಣಿತ ಹಾಗೂ ಭೌತಶಾಸ್ತ್ರದ ವಿಷಯಗಳನ್ನು ಕಣ್ಮುಂದೆ ತಂದುಕೊಳ್ಳಬಲ್ಲ ಸಾಮರ್ಥ್ಯ ಆತನಿಗೆ ಬಂದಿತ್ತು.
ವಿಷಯ ವಿದ್ವತ್ತಿನದ್ದು: ಭಾರತದಲ್ಲೇ ಚಿಕ್ಕ ಮೆದುಳು ಭಾರತೀಯರದ್ದು