Holi 2022: ಬಣ್ಣದ ಜೊತೆ ಆಟ ಗರ್ಭಿಣಿಯರಿಗೆ ಎಷ್ಟು ಸೇಫ್?
ಹೋಳಿ ಅಂದ್ಮೇಲೆ ಎಲ್ಲರೂ ಬೀದಿಗಿಳಿಯುತ್ತಾರೆ. ಇಬ್ಬರು ಮೂವರಾಗ್ತಾರೆ, ಮೂವರು ಹತ್ತಾಗ್ತಾರೆ. ಹೋಳಿ ದ್ವೇಷ ಮರೆಯಿಸಿ ಪ್ರೀತಿ ಹಂಚುವ ಹಬ್ಬ. ಆದ್ರೆ ಈ ಹಬ್ಬದಲ್ಲಿ ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸುವ ಅಗತ್ಯವಿರುತ್ತದೆ.
ರಂಗುರಂಗಿನ ಹೋಳಿ (Holi) ಹಬ್ಬ (Festival)ದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಇಂದು ಕಾಮ ದಹನ ನಡೆಯಲಿದೆ. ಮಾರ್ಚ್ 18ರಂದು ಬಣ್ಣದೋಕುಳಿ ನಡೆಯಲಿದೆ. ಇದಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹೋಳಿ ಆಚರಿಸುವ ಸಡಗರದಲ್ಲಿದ್ದಾರೆ. ಎಲ್ಲರೂ ಬಣ್ಣದಲ್ಲಿ ಮಿಂದೇಳುವಾಗ ಗರ್ಭಿಣಿ (Pregnant) ಯರಿಗೂ ಹೋಳಿ ಆಡುವ ಆಸೆಯಾಗುವುದು ಸಾಮಾನ್ಯ. ಆದ್ರೆ ಗರ್ಭಿಣಿಯರು ಹೋಳಿ ಆಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದುರಾಗುತ್ತದೆ. ಹೋಳಿ ಸಂದರ್ಭದಲ್ಲಿ ಸಾಕಷ್ಟು ದೈಹಿಕ ಓಡಾಟವಿರುತ್ತದೆ. ಇದ್ರಿಂದ ದೈಹಿಕವಾಗಿ ಸಕ್ರಿಯವಾಗಿರುತ್ತಾರೆ. ಆದ್ರೆ ಹಬ್ಬದಲ್ಲಿ ಜನಸಂದಣಿಯಿರುತ್ತದೆ. ಬಣ್ಣಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಜಂಕ್ ಫುಡ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಲಾಗುತ್ತದೆ. ಹಾಗಾಗಿ ಗರ್ಭಿಣಿಯಾದವರು ಎಚ್ಚರಿಕೆ ವಹಿಸಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ಅದು ಮಗು ಹಾಗೂ ತಾಯಿ ಮೇಲೆ ಪರಿಣಾಮ ಬೀರುತ್ತದೆ. ಹೋಳಿ ಸಂದರ್ಭದಲ್ಲಿ ಗರ್ಭಿಣಿಯರು ಏನೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು ಗೊತ್ತಾ?
ಹೋಳಿ ಆಡುವ ಮುನ್ನ ಗರ್ಭಿಣಿಯರಿಗೆ ತಿಳಿದಿರಲಿ ಈ ವಿಷಯ
ಮೊದಲ ಮತ್ತು ಮೂರನೇ ತ್ರೈಮಾಸಿಕದಲ್ಲಿ ಗರ್ಭಿಣಿಯರು ಎಚ್ಚರಿಕೆಯಿಂದ ಹೋಳಿ ಆಡಬೇಕು. ವಿಪರೀತ ಓಡುವುದು ಮತ್ತು ಜನಸಂದಣಿಯಲ್ಲಿ ಹೋಗುವುದು ಒಳ್ಳೆಯದಲ್ಲ. ಮನೆಯ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ಪರಸ್ಪರ ಬಣ್ಣ ಬಳಿದು ಸರಳವಾಗಿ ಹಬ್ಬ ಆಚರಿಸುವುದು ಒಳ್ಳೆಯದು. ಮೊದಲ ತ್ರೈಮಾಸಿಕದಲ್ಲಿ ಅತಿಯಾದ ಓಟವು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೋಳಿ ದಿನದಂದು ಎಣ್ಣೆ ಅಥವಾ ಯಾವುದೇ ಮಾಯಿಶ್ಚರೈಸರ್ ಅನ್ನು ಚರ್ಮಕ್ಕೆ ಹಚ್ಚಿ. ಆಗ ಚರ್ಮಕ್ಕೆ ಅಂಟಿಕೊಂಡ ಬಣ್ಣವನ್ನು ಸ್ವಚ್ಛಗೊಳಿಸುವುದು ಸುಲಭ. ಇದ್ರಿಂದ ಹಾನಿಕಾರಕ ರಾಸಾಯನಿಕಗಳು ಚರ್ಮದ ಮೂಲಕ ದೇಹವನ್ನು ಸೇರುವುದಿಲ್ಲ.
AIR POLLUTION: ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಖಿನ್ನತೆ !
ಗರ್ಭಾವಸ್ಥೆಯಲ್ಲಿ ಯಾವ ಬಣ್ಣ ಉತ್ತಮ: ಗರ್ಭಿಣಿಯರಿಗೆ ಮಾತ್ರವಲ್ಲ, ಎಲ್ಲರಿಗೂ ನೈಸರ್ಗಿಕ ಬಣ್ಣ ಬಹಳ ಒಳ್ಳೆಯದು. ಯಾವುದೇ ಕಾರಣಕ್ಕೂ ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ಬಣ್ಣವನ್ನು ಬಳಸಬಾರದು. ನೈಸರ್ಗಿಕ ಬಣ್ಣಗಳನ್ನು ವಿವಿಧ ಸಾವಯವ ಪದಾರ್ಥಗಳು, ಗಿಡಮೂಲಿಕೆಗಳು ಅಥವಾ ತರಕಾರಿ ಬಣ್ಣಗಳಿಂದ ತಯಾರಿಸಲಾಗುತ್ತದೆ. ಇವು ದೇಹಕ್ಕೆ ಸುರಕ್ಷಿತ. ಹಾನಿಕಾರಕ ರಾಸಾಯನಿಕಗಳಿರುವ ಬಣ್ಣಗಳು ಗರ್ಭಿಣಿಗೆ ಹಾಗೂ ಹೊಟ್ಟೆಯಲ್ಲಿರುವ ಮಗುವಿಗೆ ಹಾನಿ ಮಾಡುತ್ತವೆ. ಗರ್ಭಾವಸ್ಥೆಯಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಅಲ್ಲದೆ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಗರ್ಭಿಣಿಯರು ಅಪ್ಪಿತಪ್ಪಿಯೂ ರಾಸಾಯನಿಕ ಬಣ್ಣವನ್ನು ಬಳಸಬಾರದು.
ಬಣ್ಣಗಳಲ್ಲಿರುವ ಪಾದರಸವು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ನವಜಾತ ಶಿಶುವಿನ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಅಂಗವೈಕಲ್ಯವನ್ನುಂಟು ಮಾಡುವ ಸಾಧ್ಯತೆಯಿರುತ್ತದೆ. ಲೀಡ್ ಆಕ್ಸೈಡ್ ಗರ್ಭಪಾತ, ಕಡಿಮೆ ತೂಕದ ಜನನ ಮತ್ತು ಅಕಾಲಿಕ ಜನನಕ್ಕೆ ಕಾರಣವಾಗುವ ಸಾಧ್ಯತೆಯಿರುತ್ತದೆ.
ಈ ವಿಚಿತ್ರ Diabetes ಲಕ್ಷಣಗಳನ್ನು ನಿರ್ಲಕ್ಷಿಸಿದ್ರೆ ಅಪಾಯ ತಪ್ಪಿದ್ದಲ್ಲ
ಮಕ್ಕಳನ್ನು ಬಣ್ಣದಿಂದ ದೂರವಿಡಿ : ಮಗು 6 ತಿಂಗಳಿಗಿಂತ ಕಡಿಮೆ ವಯಸ್ಸಿನದ್ದಾಗಿದ್ದರೆ ಯಾವುದೇ ಕಾರಣಕ್ಕೂ ಅದಕ್ಕೆ ಬಣ್ಣ ಹಚ್ಚಬೇಡಿ, ಮಗುವಿನ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಮಗುವಿನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುತ್ತದೆ. ಹಾಗಾಗಿ ಮಗುವಿಗೆ ಬಣ್ಣ ಹಚ್ಚಿದಲ್ಲಿ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಬಣ್ಣದ ಬದಲು ನೀವು ಶ್ರೀಗಂಧವನ್ನು ತೇಯ್ದು ಹಚ್ಚಬಹುದು.
ಹೋಳಿ ಬಣ್ಣಗಳಲ್ಲಿ ಮರ್ಕ್ಯುರಿ ಸಲ್ಫೈಟ್, ಲೆಡ್ ಆಕ್ಸೈಡ್, ಕಾಪರ್ ಸಲ್ಫೇಟ್, ಕ್ರೋಮಿಯಂ ಅಯೋಡೈಡ್, ಅಲ್ಯೂಮಿನಿಯಂ ಬ್ರೋಮೈಡ್, ನಿಕಲ್, ಸತು, ಕಬ್ಬಿಣ, ಮೈಕಾ, ಆಕ್ಸಿಡೀಕರಿಸಿದ ಲೋಹಗಳು ಸೇರಿದಂತೆ ಅನೇಕ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕ ಬಣ್ಣಗಳು ದೀರ್ಘಕಾಲದವರೆಗೆ ಚರ್ಮದ ಮೇಲೆ ಇರುತ್ತದೆ. ಅನೇಕ ದಿನಗಳವರೆಗೆ ಚರ್ಮಕ್ಕೆ ಇವು ಅಂಟಿಕೊಂಡಿರುತ್ತವೆ. ಇದು ತುರಿಕೆ,ಉರಿ,ಅಲರ್ಜಿ,ಮೊಡವೆ ಸೇರಿದಂತೆ ಕೆಲ ಸಮಸ್ಯೆಯನ್ನುಂಟು ಮಾಡುತ್ತದೆ. ಕೆಲವೊಮ್ಮೆ ಚರ್ಮದ ಕ್ಯಾನ್ಸರ್, ಚರ್ಮರೋಗ,ಜ್ವರ,ಅಸ್ತಮಾಕ್ಕೂ ಕಾರಣವಾಗುತ್ತದೆ.