Health Tips: ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ?
ನೀವೂ ವರ್ಕೌಟ್ (Workout) ಮಾಡ್ತೀರಾ ? ಬೆಳಗ್ಗೇ ಎದ್ದು ವ್ಯಾಯಾಮ (Exercise) ಮಾಡಿ ಬಂದ್ ಬಿಟ್ರೆ ಮತ್ತೇನ್ ಪ್ರಾಬ್ಲಂ ಇಲ್ಲ ಅಂದ್ಕೊಂಡಿದ್ದೀರಾ ? ಹಾಗಿದ್ರೆ ಇಲ್ಲೇ ನೀವು ತಪ್ಪು ಮಾಡಿರೋದು. ವರ್ಕೌಟ್ ಮಾಡೋವಾಗ ಎಷ್ಟು ನೀರು ಕುಡೀಬೇಕು ಅನ್ನೋದನ್ನು ಮೊದಲು ತಿಳ್ಕೊಳ್ಳಿ.
ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರು ಕುಡಿಯುವುದು ಅತೀ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ದಿನಕ್ಕೆ ಕಡಿಮೆಯಿಂದರೂ ಎರಡು ಲೀಟರ್ ನೀರು (Water) ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಹಾಗೆಯೇ ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಸಹ ನೀರು ಕುಡಿಯುವದು ಸಹ ಅಗತ್ಯವಾಗಿದೆ. ಯಾವ ಸಂದರ್ಭದಲ್ಲಿ ಎಷ್ಟು ನೀರು ಕುಡಿಯಬೇಕು ಎಂಬ ವಿಚಾರ ಬಂದಾಗ ಎಲ್ಲರಲ್ಲೂ ಪ್ರಶ್ನೆ ಮೂಡಬಹುದು. ಅದರಲ್ಲೂ ಮುಖ್ಯವಾಗಿ ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ.
ಈಗಂತೂ ವರ್ಕೌಟ್ ಮಾಡದವರೇ ಇಲ್ಲ. ಕುಳಿತು ಮಾಡುವ ಕೆಲಸ, ಒತ್ತಡದ ಜೀವನಶೈಲಿಯಿಂದ ತೂಕ ಹೆಚ್ಚಳವೆಂಬುದು ಸಾರ್ವತ್ರಿಕ ಸಮಸ್ಯೆಯಾಗಿಬಿಟ್ಟಿದೆ. ಹೀಗಾಗಿ ಎಲ್ಲರೂ ಜಿಮ್ (Gym), ಯೋಗ, ಧ್ಯಾನ ಎಂದು ಹಲವು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಷ್ಟಪಟ್ಟು ವರ್ಕೌಟ್ ಮಾಡೋದೇನೋ ಸರಿ. ಆದರೆ, ಅದನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಮಾತ್ರ ಪ್ರಯೋಜನ ಸಿಗಲು ಸಾಧ್ಯ. ಹೀಗಾಗಿ ವರ್ಕೌಟ್ (Workout) ಮಾಡುವಾಗ ಎಷ್ಟು ನೀರು ಕುಡಿಯಬಹುದು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
Easy Exercise: ಬಾತ್ ಟವೆಲ್ ಬಳಸಿಯೂ ವ್ಯಾಯಾಮ ಮಾಡ್ಬೋದು
ವ್ಯಾಯಾಮ ಮಾಡುವುದರಿಂದ ದೇಹ ಹೆಚ್ಚು ಬೆವರುತ್ತದೆ
ಜಿಮ್, ವ್ಯಾಯಾಮ, ಜಾಗಿಂಗ್ ಮಾಡುವರರ ದೇಹ (Body)ಕ್ಕೆ ಇತರರ ದೇಹಕ್ಕಿಂತ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಯಾಕೆಂದರೆ ವ್ಯಾಯಾಮ ಮಾಡುವುದರಿಂದ ದೇಹ ಹೆಚ್ಚು ಬೆವರುತ್ತದೆ. ಇದರಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಶರೀರದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಹೀಗಾಗಿ ವರ್ಕೌಟ್ ಮಾಡುವಾಗ ಯಾವಾಗಲೂ ನೀರು ಕುಡಿಯುವುದನ್ನು ನಿರ್ಲಕ್ಷಿಸಬಾರದು. ಈ ರೀತಿ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ವರ್ಕೌಟ್ ಮಾಡಲು ಸಾಧ್ಯವಾಗದೆ ಸುಸ್ತಾಗುವ ಸಮಸ್ಯೆ ಕಾಣಿಸಿಕೊಳ್ಳಬಹುದು.
ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ದೇಹದಿಂದ ಶೇ.90ರಷ್ಟು ನೀರು ಹೊರ ಹಾಕಿದಂತಾಗುತ್ತದೆ. ಹೀಗಾಗಿ ದೇಹಕ್ಕೆ ನಿರಂತರವಾಗಿ ನೀರಿನ ಪೂರೈಕೆಯನ್ನು ಮಾಡುತ್ತಿರಬೇಕಾಗುತ್ತದೆ. ವರ್ಕೌಟ್ ಮಾಡುವಾಗ ನೀರು ಕುಡಿಯುವ ಪ್ರಮಾಣ ದೈಹಿಕ ಮತ್ತು ಮಾನಸಿಕ ಕಾರ್ಯಕ್ಷಮತೆ ಎರಡರ ಮೇಲೂ ಪರಿಣಾಮ ಬೀರುತ್ತದೆ. PubMed.govನಲ್ಲಿ ಪ್ರಕಟವಾದ ಲೇಖನದ ಪ್ರಕಾರ ಹೆಚ್ಚು ನೀರು ಕುಡಿಯವುದು ಅಥವಾ ಕಡಿಮೆ ನೀರು ಕುಡಿಯುವುದು ಎರಡೂ ಸಹ ದೇಹದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಈ ರೀತಿಯ ವರ್ಕೌಟ್ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆಯಿದೆ.
Exercise Tips: ದಿನಕ್ಕೆ ಜಸ್ಟ್ ಮೂರು ಸೆಕೆಂಡ್ ವ್ಯಾಯಾಮ ಮಾಡಿದರೂ ಸಾಕು !
ವರ್ಕೌಟ್ ಮಾಡುವ ಮೊದಲು, ನಂತರ ಎಷ್ಟು ನೀರು ಕುಡಿಯಬೇಕು ?
ವರ್ಕೌಟ್ ಮಾಡುವಾಗ ನೀವು ನೀರು ಕುಡಿಯುವುದರ ಬಗ್ಗೆ ಗಮನ ಹರಿಸದೇ ಇದ್ದಾಗ ದಣಿವು, ತಲೆತಿರುಗುವಿಕೆ, ಬಾಯಿ ತುಟಿ ಒಣಗುವುದು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಮೇರಿಕನ್ ಕೌನ್ಸಿಲ್ ಆನ್ ಎಕ್ಸರ್ಸೈಸ್ ಶಿಫಾರಸು ಮಾಡುವ ಪ್ರಕಾರ, ವರ್ಕೌಟ್ ಮಾಡುವ 2ರಿಂದ 3 ಗಂಟೆಗಳ ಮೊದಲು 500ರಿಂದ 600 ಮಿ.ಲೀ ನೀರು ಕುಡಿಯಬೇಕು. ವರ್ಕೌಟ್ ಮಾಡುವ 20ರಿಂದ 30 ನಿಮಿಷ ಮೊದಲು 230 ಮಿ.ಲೀನೀರು ಕುಡಿಯಬೇಕು. ವರ್ಕೌಟ್ ಮಾಡುವ 10ರಿಂದ 20 ನಿಮಿಷಗಳ ಮೊದಲು 300 ಮಿ.ಲೀ, ವ್ಯಾಯಾಮ ಮಾಡುವಾಗ 300 ml,ವ್ಯಾಯಾಮದ ನಂತರ 230 ಮಿ.ಲೀ ನೀರು ಕುಡಿಯಬೇಕಾಗುತ್ತದೆ.
ಇವು ವ್ಯಾಯಾಮ (Exercise) ಮಾಡುವವರಿಗೆ ಸೂಚಿಸುವ ಸಾಮಾನ್ಯ ಮಾಪನವಾಗಿದೆ. ಇದಲ್ಲದೆಯೂ ನೀರು ಕುಡಿಯುವ ಪ್ರಮಾಣ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನವಾಗಿರುತ್ತದೆ. ದೇಹದ ತೂಕ, ಹೊರಾಂಗಣ ತಾಪಮಾನ. ಎಷ್ಟು ವ್ಯಾಯಾಮ ಮಾಡುತ್ತೀರಿ ಎಂಬುದಕ್ಕೆ ಅನುಗುಣವಾಗಿ ನೀರನ್ನು ಕುಡಿಯಬೇಕಾಗುತ್ತದೆ. ನೀರು ಕುಡಿಯುವ ಬದಲು ಜ್ಯೂಸ್, ಮಜ್ಜಿಗೆಯಂಥಾ ದ್ರವ ಪದಾರ್ಥವನ್ನು ಸಹ ಸೇವಿಸಬಹುದು. ಗೊತ್ತಾಯ್ತಲ್ಲ, ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡೀಬೇಕು ಅಂತ. ಇನ್ಮುಂದೆನಾದ್ರೂ ವ್ಯಾಯಾಮ ಮಾಡುವಾಗ ಈ ವಿಚಾರ ಗಮನದಲ್ಲಿರಲಿ.