ಪ್ರತಿ ದಿನ ವ್ಯಾಯಾಮ ಮಾಡ್ಬೇಕು, ದೇಹವನ್ನು ದಣಿಸಬೇಕು. ಬೆವರಿನ ರೂಪದಲ್ಲಿ ಕೊಳಕು ದೇಹದಿಂದ ಹೊರಗೆ ಹೋಗ್ಬೇಕು ಎಲ್ಲ ಸರಿ. ಆದ್ರೆ ಯಾವುದು ಅತಿಯಾದ್ರೂ ಕಷ್ಟವೆ. ಇದಕ್ಕೆ ವ್ಯಾಯಾಮವೂ ಹೊರತಾಗಿಲ್ಲ. ಮತ್ತಷ್ಟು ಫಿಟ್ ಆಗಿರಬಹುದು ಅಂತಾ ಮಿತಿಮೀರಿ ವ್ಯಾಯಾಮ ಮಾಡೋ ಮುನ್ನ ಇದನ್ನು ಓದಿ. 

ಇತ್ತೀಚೆಗೆ ದೇಹದ ಫಿಟ್ ನೆಸ್ ಕಾಯ್ದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಧ್ಯೇಯವಾಗಿದೆ ಎಂದರೆ ಸುಳ್ಳಲ್ಲ. ಫಿಟ್ ಆಗಿರಬೇಕೆನ್ನುವ ಆಸೆಯಲ್ಲಿ ಬಹುತೇಕ ಮಂದಿ ವ್ಯಾಯಾಮ, ಓಡುವುದು, ಏರೋಬಿಕ್ಸ್ ಇನ್ನೂ ಮುಂತಾದ ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನು ದಪ್ಪಗಿರುವವರಂತೂ ತೆಳ್ಳಗಾಗಬೇಕೆಂದು ಅನೇಕ ರೀತಿಯ ಔಷಧಗಳನ್ನು ಕೂಡ ತೆಗೆದುಕೊಳ್ಳುತ್ತಾರೆ.

ದೇಹದ ಫಿಟ್ನೆಸ್ (Fitness) ಕಾಯ್ದುಕೊಳ್ಳಬೇಕೆನ್ನುವ ಒಂದೇ ಗುರಿಯಿಟ್ಟುಕೊಂಡು ತಮ್ಮ ಶಕ್ತಿಗೂ ಮೀರಿ ವ್ಯಾಯಾಮ (Exercise) ಮಾಡುವುದು, ಭಾರವನ್ನು ಎತ್ತುವುದು, ಓಡುವುದು ಮುಂತಾದವನ್ನು ಮಾಡಿದರೆ ಅದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ (Health) ಎರಡೂ ಹಾಳಾಗುತ್ತದೆ. ಮಿತಿಮೀರಿದ ವ್ಯಾಯಾಮದಿಂದಲೇ ಪ್ರಾಣ ಕಳೆದುಕೊಂಡ ಘಟನೆಗಳು ಕೂಡ ಸಾಕಷ್ಟಿವೆ. ನಿರ್ದಿಷ್ಟ ಸಮಯ ಹಾಗೂ ನಿರ್ದಿಷ್ಟ ವ್ಯಾಯಾಮದಿಂದ ಮಾತ್ರ ಉತ್ತಮ ಫಲಿತಾಂಶ ಸಾಧ್ಯ. ಇಲ್ಲವಾದರೆ ಶರೀರ ಇದರಿಂದ ಹಾನಿಗೊಳಗಾಗುವುದು ಖಂಡಿತ ಎಂದು ತಜ್ಞ (Specialist) ರು ಹೇಳಿದ್ದಾರೆ.

ಜಾದೂ ಮಾಡಿದ ಕಾರ್-ಟಿ ಸೆಲ್ ಸ್ವದೇಶಿ ಕ್ಯಾನ್ಸರ್ ಚಿಕಿತ್ಸಾ ಪದ್ಧತಿ: ಮೂವರು ಗುಣಮುಖ, ದರವೂ ಅಗ್ಗ

ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು? : ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಮೂಳೆಗಳು, ಕೀಳುಗಳು ಬಲವಾಗುತ್ತವೆ. ಮಿತವಾದ ವ್ಯಾಯಾಮ ಅಸ್ಥಿರಂಧ್ರತೆಯನ್ನು ತಡೆಯುತ್ತದೆ. ಇದರಿಂದಾಗಿ ಮೂಳೆಗಳು ಮುರಿಯುವ ಅಥವಾ ಬಿರುಕು ಬಿಡುವ ಸಾಧ್ಯತೆ ಕಡಿಮೆ ಇರುತ್ತದೆ. ಆದರೆ ನಾವು ಮಿತಿಮೀರಿದ ವ್ಯಾಯಾಮ ಮಾಡುವದರಿಂದ ಮೂಳೆಗಳು ಕ್ಷೀಣಗೊಳ್ಳಬಹುದು ಹಾಗೂ ಆರೋಗ್ಯಕ್ಕೆ ಬಾಧೆ ಉಂಟುಮಾಡಬಹುದು. 

ಹೃದಯಾಘಾತ -ಪಾರ್ಶ್ವವಾಯು ಲಕ್ಷಣಗಳೇನು? ಮಾಹಿತಿ ನೀಡಿದ WHO

ಅಮೆರಿಕ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ, ವಯಸ್ಕರಿಗೆ ಒಂದು ವಾರಕ್ಕೆ 150 ರಿಂದ 300 ನಿಮಿಷಗಳ ಮಧ್ಯಮ ದೈಹಿಕ ವ್ಯಾಯಾಮದ ಅವಶ್ಯಕತೆ ಇರುತ್ತದೆ ಎಂದು ಹೇಳಿದೆ. ಇನ್ನು ಏರೋಬಿಕ್ಸ್ ನಂತಹ ತೀವ್ರವಾದ ವ್ಯಾಯಾಮ ಮಾಡುವವರು ವಾರಕ್ಕೆ 75 ರಿಂದ 150 ನಿಮಿಷಗಳ ಕಾಲ ವ್ಯಾಯಾಮ ಮಾಡಬಹುದು ಎಂದು ಹೇಳಿದೆ.

ವ್ಯಾಯಾಮ ಅತಿಯಾಗೋದು ಯಾವಾಗ? : 

ಅತಿಯಾದ ತರಬೇತಿ : ನಿರಂತರವಾಗಿ ವ್ಯಾಯಾಮದ ತರಬೇತಿ ನೀಡುವುದರಿಂದ ದೇಹಕ್ಕೆ ಸಾಕಷ್ಟು ವಿಶ್ರಾಂತಿ, ಪೋಷಣೆ ಅಥವಾ ನಿದ್ರೆ ಸಿಗುವುದಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ವ್ಯಾಯಾಮದಿಂದ ದೇಹದಲ್ಲಿ ಖುಷಿಯ ಹಾರ್ಮೋನ್ ಎಂದೇ ಹೇಳಲಾಗುವ ಡೋಪಮೈನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಅದೇ ವ್ಯಾಯಾಮ ವಿಪರೀತವಾದರೆ ಒತ್ತಡ, ಆತಂಕ, ನಿರಂತರ ಮೂಡ್ ಸ್ವಿಂಗ್ ಮತ್ತು ಉದ್ವೇಗ ಉಂಟಾಗಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ.

ಕಂಪಲ್ಸಿವ್ ವ್ಯಾಯಾಮ : ಕೆಲವೊಮ್ಮೆ ಉಳಿದ ವ್ಯಸನಗಳಂತೆಯೇ ವ್ಯಾಯಾಮ ಕೂಡ ಒಂದು ವ್ಯಸನವಾಗುತ್ತದೆ. ಇದನ್ನು ಕಂಪಲ್ಸಿವ್ ವ್ಯಾಯಾಮ ಎಂದು ಕರೆಯುತ್ತಾರೆ. ದೇಹವನ್ನು ಫಿಟ್ ಆಗಿರಿಸಿಕೊಳ್ಳಬೇಕು, ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎನ್ನುವ ಗೀಳು ಚಟವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯಕ್ಕೆ ಸಾಕಷ್ಟು ತೊಂದರೆಯಾಗುತ್ತದೆ.

ಇವು ಕೂಡ ನಿಮ್ಮ ಮಿತಿಮೀರಿದ ವ್ಯಾಯಾಮದ ಲಕ್ಷಣಗಳಾಗಿವೆ : ನಮ್ಮ ಶಕ್ತಿಗೂ ಮೀರಿ ನಾವು ವ್ಯಾಯಾಮ ಮಾಡಿದಾಗ ಅಥವಾ ಭಾರವನ್ನು ಎತ್ತಿದಾಗ ಸ್ನಾಯುಗಳಲ್ಲಿ ನೋವು, ರೋಗನಿರೋಧಕ ಶಕ್ತಿಯ ಕೊರತೆ, ಹೆಚ್ಚು ನೋವುಗಳಾಗುವುದು, ನಿರಂತರ ಆಯಾಸ, ಬೇಗ ಸುಸ್ತಾಗುವುದು, ಹೃದಯ ಬಡಿತದಲ್ಲಿ ಹೆಚ್ಚಳ, ಬೆನ್ನು ನೋವು, ಖಿನ್ನತೆ ಮುಂತಾದ ಲಕ್ಷಣಗಳು ಕಂಡುಬರುತ್ತದೆ.

ಅತಿಯಾದ ವ್ಯಾಯಾಮ ಮತ್ತು ದೇಹದ ಸಮತೋಲನ ಕಾಪಾಡುವ ಕೆಲವು ವಿಧಾನಗಳು : ದೇಹ ಸಮತೋಲನವನ್ನು ಕಾಪಾಡಿಕೊಳ್ಳಲು ಆಹಾರ, ವ್ಯಾಯಾಮ, ಹವಾಮಾನ ಎಲ್ಲವೂ ಮುಖ್ಯವಾಗಿರುತ್ತದೆ. ನಾವು ಸಮತೋಲಿತ ಆಹಾರವನ್ನು ಸೇವಿಸಬೇಕು, ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳಬೇಕು. ದೇಹಕ್ಕೆ ಎಷ್ಟು ಅವಶ್ಯಕವೋ ಅಷ್ಟು ನಿದ್ರೆ, ವಿಶ್ರಾಂತಿ ನೀಡಬೇಕು. ಅತಿಯಾದ ತಾಪಮಾನದಲ್ಲಿ ಕೂಡ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಕು.