Asianet Suvarna News Asianet Suvarna News

ಜಾದೂ ಮಾಡಿದ ಕಾರ್-ಟಿ ಸೆಲ್ ಸ್ವದೇಶಿ ಕ್ಯಾನ್ಸರ್ ಚಿಕಿತ್ಸಾ ಪದ್ಧತಿ: ಮೂವರು ಗುಣಮುಖ, ದರವೂ ಅಗ್ಗ

ಕ್ಯಾನ್ಸರ್ ಚಿಕಿತ್ಸೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 'ಕಾರ್-ಟಿ ಸೆಲ್ ಥೆರಪಿ'ಗೆ ಒಳಗಾದ 15 ರೋಗಿಗಳ ಪೈಕಿ ಮೂವರಲ್ಲಿ ಕ್ಯಾನ್ಸರ್‌ ಸಂಪೂರ್ಣ ವಾಗಿ ಗುಣಮುಖವಾಗಿರುವ ಕ್ರಾಂತಿ ಕಾರಕ ಸಂಗತಿ ಬೆಳಕಿಗೆ ಬಂದಿದೆ.

Three Cancer patients cured by CAR-T cell therapy Indeginious Cancer Treatment did magic cost also cheap akb
Author
First Published Feb 8, 2024, 8:42 AM IST

ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 'ಕಾರ್-ಟಿ ಸೆಲ್ ಥೆರಪಿ'ಗೆ ಒಳಗಾದ 15 ರೋಗಿಗಳ ಪೈಕಿ ಮೂವರಲ್ಲಿ ಕ್ಯಾನ್ಸರ್‌ ಸಂಪೂರ್ಣ ವಾಗಿ ಗುಣಮುಖವಾಗಿರುವ ಕ್ರಾಂತಿ ಕಾರಕ ಸಂಗತಿ ಬೆಳಕಿಗೆ ಬಂದಿದೆ. ಇಮ್ಯುನೋ ಆ್ಯಕ್ಟ್ ಎಂಬ ಕಂಪನಿ, ಐಐಟಿ ಬಾಂಬೆ ಹಾಗೂ ಟಾಟಾ ಮೆಮೋರಿಯಲ್ ಆಸತ್ರೆಗಳು ಸೇರಿ ಈ ಚಿಕಿತ್ಸೆಯನ್ನು ರೂಪಿಸಿವೆ. ಇದನ್ನು ದೇಶದಲ್ಲಿ 15 ಮಂದಿಗೆ ನೀಡಲಾಗಿದೆ. ಆ ಪೈಕಿ ಮೂವರಲ್ಲಿ ಕ್ಯಾನ್ಸರ್ ಗುಣಮುಖವಾಗಿದೆ. ಉಳಿದವರ ಚಿಕಿತ್ಸಾ ವರದಿಗಾಗಿ ಕಾಯಲಾಗುತ್ತಿದೆ. ಈ ಚಿಕಿತ್ಸೆಗೆ ವಿದೇಶದಲ್ಲಿ 3ರಿಂದ 4 ಕೋಟಿ ರು. ವೆಚ್ಚವಾಗಲಿದ್ದು, 40 ಲಕ್ಷ ರು.ಗೆ ಭಾರತದಲ್ಲಿ ಈ ಚಿಕಿತ್ಸೆ ದೊರೆಯಲಿದೆ.

ಸೇನೆಯಲ್ಲಿ ವೈದ್ಯರಾಗಿದ್ದ ಡಾ| ಕರ್ನಲ್ ವಿ. ಕೆ. ಗುಪ್ತಾ (64) ಎಂಬುವರು ಕೂಡ ಈ ಚಿಕಿತ್ಸೆಗೆ ಒಳಗಾಗಿದ್ದಾರೆ. ಸಾವಿಗೆ ದಿನಗಣನೆ ಎಣಿಸುತ್ತಿದ್ದ ಅವರು ಸಂಪೂರ್ಣ ಗುಣಮುಖರಾಗಿದ್ದು, ಕಾರ್-ಟಿ ಥೆರಪಿಯಿಂದ ಗುಣಮುಖರಾದ ದೇಶದ ಮೊದಲ ಕ್ಯಾನ್ಸ‌ರ್ ರೋಗಿ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಚಿಕಿತ್ಸೆ ಪಡೆದ ಎರಡೇ ವಾರದಲ್ಲಿ ತಮ್ಮ ದೇಹದಲ್ಲಿನ ಕ್ಯಾನ್ಸರ್ ಕೋಶಗಳು ಇಳಿಮುಖವಾಗಿವೆ ಎಂದು ಹೇಳಿಕೊಂಡಿದ್ದಾರೆ ಅವರು.

ಗರ್ಭಕಂಠದ ಕ್ಯಾನ್ಸರ್‌ ತಡೆ ಲಸಿಕೆಗೆ ಕೇಂದ್ರದ ಒತ್ತು: ಒಂದು ಡೋಸ್ ಲಸಿಕೆ ಎಷ್ಟು ದುಬಾರಿ?

ಆದರೆ ಈ ಚಿಕಿತ್ಸೆ ಪಡೆದು ಗುಣಮುಖರಾಗಿರುವ ರೋಗಿಗಳು ಜೀವನ ಪರ್ಯಂತ ಕ್ಯಾನ್ಸರ್ ಗೆದ್ದಿದ್ದಾರೆ ಎಂದು ಈಗಲೇ ಹೇಳಲಾಗದು. ಆದರೆ ಸದ್ಯಕ್ಕೆ ನಡೆಸಿದ ಎಲ್ಲ ಪರೀಕ್ಷೆಗಳಲ್ಲೂ ರೋಗಿಗಳ ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಪತ್ತೆಯಾಗಿಲ್ಲ. ಇದರ ಯಶಸ್ಸಿನ ಪ್ರಮಾಣವನ್ನು ತಿಳಿಯಲು ಎರಡು ವರ್ಷಗಳು ಬೇಕಾಗುತ್ತವೆ ಎಂದು ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ರೋಗನಿರೋಧಕ ವ್ಯವಸ್ಥೆಯಲ್ಲಿರುವ ಜೀವ ಕೋಶಗಳಲ್ಲಿ ಸೃಷ್ಟಿಯಾಗುವ ಕ್ಯಾನ್ಸರ್ ಅರ್ಥಾತ್ ಬಿ-ಸೆಲ್ ಕ್ಯಾನ್ಸರ್‌ಗಳಿಗೆ ಈ ಸ್ವದೇಶಿ ಚಿಕಿತ್ಸೆ ಉಪಯೋಗವಾಗುತ್ತದೆ. ಕಾರ್-ಟಿ ಸೆಲ್ ಥೆರಪಿಯ ವಾಣಿಜ್ಯ ಬಳಕೆಗೆ 2023 ಅಕ್ಟೋಬರ್ ನಲ್ಲಷ್ಟೇ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಅನುಮೋದನೆ ನೀಡಿದೆ. ಈಗಾಗಲೇ 10 ನಗರಗಳ 30 ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಲಭ್ಯವಿದೆ.

ಗಂಗಾ ಸ್ನಾನದಿಂದ ಕ್ಯಾನ್ಸರ್‌ ಗುಣವಾಗುತ್ತೆ ಎಂದು 5 ವರ್ಷದ ಹುಡುಗನನ್ನು ನೀರಿನಲ್ಲಿ ಮುಳುಗಿಸಿದ ಪೋಷಕರು! ಬಾಲಕ ಮೃತ

ಚಿಕಿತ್ಸೆ ಪ್ರಕ್ರಿಯೆ ಹೇಗೆ?

ಕ್ಯಾನ್ಸ‌ರ್ ರೋಗಿಯ ಬಿಳಿ ರಕ್ತಕಣಗಳನ್ನು ಯಂತ್ರದಿಂದ ಹೊರತೆಗೆದು ಸಂಸ್ಕರಣೆ ಮಾಡಲಾಗುತ್ತದೆ. ಕ್ಯಾನ್ಸ‌ರ್ ಕೋಶಗಳನ್ನು ಗುರುತಿಸಿ, ನಾಶಗೊಳಿಸುವಂತೆ ಅದರ ವಂಶವಾಹಿಯಲ್ಲಿ ಬದಲಾವಣೆ ಮಾಡಲಾಗುತ್ತದೆ. ಬಳಿಕ ಅದನ್ನು ರೋಗಿಗೆ ರಕ್ತನಾಳದಿಂದ ನೀಡಲಾಗುತ್ತದೆ. ಇದಕ್ಕೂ ಮುನ್ನ ರೋಗಿಯನ್ನು ಕೀಮೋಥೆರಪಿಗೆ ಒಳಪಡಿಸಲಾಗುತ್ತದೆ. ವಂಶವಾಹಿ ಮಾರ್ಪಡಿಸಲಾಗದ ರಕ್ತ ಕಣಗಳು ಕ್ಯಾನ್ಸರ್ ಕೋಶಗಳನ್ನು ಹುಡುಕಿ ನಾಶಪಡಿಸುತ್ತವೆ.

Follow Us:
Download App:
  • android
  • ios