ಧ್ಯಾನ ಎಂಬುದು ದೇಹ, ಮನಸ್ಸು ಹಾಗೂ ಆತ್ಮವನ್ನು ಒಂದುಗೂಡಿಸುವ ಮಾಧ್ಯಮವಷ್ಟೇ ಅಲ್ಲ, ಆರೋಗ್ಯಕಾರಿಯಾಗಿಡುವ ಅಭ್ಯಾಸ ಕೂಡಾ. ಪ್ರತಿ ದಿನ ಧ್ಯಾನ ಮಾಡುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಹಲವಾರು ಲಾಭಗಳಿವೆ. ಧ್ಯಾನ ಮಮನಸ್ಸನ್ನು ಪ್ರಶಾಂತಗೊಳಿಸಿ ಒತ್ತಡಮುಕ್ತವಾಗಿಸುತ್ತದೆ. ಏಕಾಗ್ರತೆ ಹೆಚ್ಚಿಸಿ ಗುರಿಯತ್ತ ಗಮನ ಹರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಚಿತ್ತ ಸ್ವಾಸ್ಥ್ಯವಿದ್ದರೆ ಹಲವಾರು ಕಾಯಿಲೆಗಳಿಂದ ದೂರವಿರಬಹುದು. ಆದರೆ, ಧ್ಯಾನದಿಂದ ಸೌಂದರ್ಯಕ್ಕೆ ಎಷ್ಟೊಂದು ಲಾಭಗಳಿವೆ ಎಂಬ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. 

ಧ್ಯಾನದಿಂದ ಸೌಂದರ್ಯಕ್ಕೆ ಏನೇನೆಲ್ಲ ಲಾಭಗಳಿವೆ ಇಲ್ಲಿವೆ ನೋಡಿ...

ಬರೀ ನಕಾರಾತ್ಮಕ ಯೋಚನೆಗಳೇ ಬರುತ್ತಾ? ಅವುಗಳನ್ನು ದೂರ ಇಡೋಕೆ ಹೀಗ್ ಮಾಡಿ

ತ್ವಚೆಯ ಆರೋಗ್ಯ

ಚರ್ಮವು ದೇಹದ ಅತಿ ದೊಡ್ಡ ಅಂಗ. ನೀವು ತಿನ್ನುವುದು, ನಿದ್ರಿಸಿವುದು, ನಿಮ್ಮ ಚಟುವಟಿಕೆಗಳು ಸೇರಿದಂತೆ ನೀವೇನೇ ಮಾಡಿದರೂ ಅದರ ಪರಿಣಾಮ ತ್ವಚೆಯ ಮೇಲಾಗುತ್ತದೆ. ಅಂತೆಯೇ ಧ್ಯಾನದ ಪರಿಣಾಮ ಕೂಡಾ. ಪ್ರತಿ ದಿನ ಧ್ಯಾನ ಮಾಡುವುದರಿಂದ ನಿಮ್ಮ ಟಿಶ್ಯೂಗಳು ಹಾಗೂ ಇಥರೆ ಅಂಗಗಳಿಗೆ ಪ್ರಾಣ ದೊರೆಯುತ್ತದೆ. ಇದು ಜಡಕೋಶಗಳನ್ನು ರಿಪೇರ್ ಮಾಡುತ್ತದೆ. ಇದರಿಂದ ಚರ್ಮ ಸುಕ್ಕಾಗುವುದಿಲ್ಲ. ವಯಸ್ಸಾಗುವಿಕೆ ನಿಧಾನವಾಗಿ, ಚರ್ಮ ಆರೋಗ್ಯಕರವಾಗಿರುತ್ತದೆ. 

ಮೊಡವೆಕಲೆಗಳು ಮಂಗಮಾಯ

ಧ್ಯಾನದಿಂದ ಒತ್ತಡ ಕಡಿಮೆಯಾಗುತ್ತದೆ ಎಂಬುದು ಬಹಳಷ್ಟು ಅಧ್ಯಯನಗಳಿಂದ ತಿಳಿದುಬಂದಿದೆ. ಸಾಮಾನ್ಯವಾಗಿ ತ್ವಚೆಯು ನಾವು ಹೇಳದ ಭಾವನೆಗಳನ್ನೆಲ್ಲ ವ್ಯಕ್ತಪಡಿಸಬಲ್ಲದು. ನಾಚಿಕೆಯಾದಾಗ ಕೆನ್ನೆ ಕೆಂಪಾಗುತ್ತದೆ, ರಾತ್ರಿಯಿಡೀ ಚಿಂತಿತರಾಗಿದ್ದರೆ ಬೆಳಗ್ಗೆ ಮುಖ ಹೆಚ್ಚು ವಯಸ್ಸಾದಂತೆ ಕಾಣಿಸುತ್ತದೆ, ನಿದ್ರೆ ಚೆನ್ನಾಗಾಗಿದ್ದರೆ ತ್ವಚೆ ಹೊಳೆಯುತ್ತದೆ. ಅಂತೆಯೇ ಒತ್ತಡವಿದ್ದಾಗ ಮುಖದಲ್ಲಿ ಮೊಡವೆ, ಕಲೆ, ಎಕ್ಸಿಮಾ ಸೇರಿದಂತೆ ಇತರೆ ಗುಳ್ಳೆಗಳು ಏಳುತ್ತವೆ. ಆದರೆ ನೀವು ಧ್ಯಾನ ಮಾಡುತ್ತಿದ್ದರೆ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ತಗ್ಗಿದಾಗ ತನ್ನಿಂತಾನೆ ಮುಖದ ಕಲೆಗಳು ಮಾಯವಾಗುತ್ತವೆ. ಇನ್ನು ಚರ್ಮದ ಹೊರಗಿನ ಲೇಯರ್ ಸ್ಟ್ರೆಸ್‌ನಲ್ಲಿದ್ದಾಗ ಕಳಾಹೀನವಾಗುತ್ತದೆ. ಆದರೆ, ಸ್ಟ್ರೆಸ್ ದೂರವಾದಾಗ ಈ ಚರ್ಮ ಕಳೆಯಿಂದ ಕೂಡುತ್ತದೆ. 

ನಡೆದಾಡುತ್ತಲೇ ಧ್ಯಾನ- ನಡೀತಾ ನಡೀತಾ ಪಡ್ಕೊಳಿ ಸಮಾಧಾನ!

ಚರ್ಮಕ್ಕೆ ತಾಜಾತನ

ಧ್ಯಾನ ಮಾಡುವಾಗ ಉಸಿರಾಟ ಪ್ರಕ್ರಿಯೆ ಹದವಾಗಿದ್ದು ಇದು ಚರ್ಮಕ್ಕೆ ಅಗತ್ಯವಿರುವ ಆಕ್ಸಿಜನ್ ಸರಿಯಾಗಿ ಒದಗುವಂತೆ ನೋಡಿಕೊಳ್ಳುತ್ತದೆ. ಧ್ಯಾನದಿಂದಾಗಿ ದೇಹದ ಎಲ್ಲ ಭಾಗಗಳಿಗೆ ರಕ್ತ ಸಂಚಲನವಾಗಿ ಆಕ್ಸಿಜನ್ ದೊರಕುತ್ತದೆ. ಹಾಗಾಗಿ, ಚರ್ಮಕ್ಕೆ ಅಗತ್ಯವಿದ್ದ ಪೋಷಕಸತ್ವಗಳು ದೊರೆತು ಅದನ್ನು ತಾಜಾ ಆಗಿರಿಸುತ್ತದೆ. ಇನ್ನು ಧ್ಯಾನವು ತಲಲೆನೋವು. ನಿದ್ರಾಹೀನತೆ, ಟೆನ್ಷನ್, ಮೈಕೈ ನೋವನ್ನು ದೂರವಿರಿಸುತ್ತದೆ. ಇದೆಲ್ಲದರ ಪರಿಣಾಮ ನೀವು ಹೆಚ್ಚು ಯಂಗ್ ಆಗಿರುವುದನ್ನು ಫೀಲ್ ಮಾಡುವಿರಲ್ಲದೆ ನೋಡಲು ಕೂಡಾ ಯಂಗ್ ಕಾಣುವಿರಿ. 

ಶಾಂತತೆ

ಪ್ರತಿದಿನ ಧ್ಯಾನ ಮಾಡುವವರ ಮನಸ್ಸು ತಿಳಿಗೊಳದಂತೆ ಶಾಂತವಾಗಿರುತ್ತದೆ. ಮನಸ್ಸು ಶಾಂತವಾಗಿದ್ದರೆ ಅದು ಮುಖದಲ್ಲಿ ಪ್ರತಿಫಲಿಸುತ್ತದೆ. ಪ್ರಶಾಂತ ಮುಖ ಸೌಂದರ್ಯದ ಪ್ರತಿರೂಪವಲ್ಲವೇ? ಇಷ್ಟೊಂದು ಬ್ಯುಸಿ ಬದುಕಿನ ನಡುವೆ ಶಾಂತ ಮನಸ್ಥಿತಿಯಲ್ಲಿರುವವರು ಹೆಚ್ಚು ಸುಂದರವಾಗಿ ಕಾಣುತ್ತಾರೆ. 

ಮೆನಿಕ್ಯೂರ್ ಜೊತೆ ಮೆಡಿಟೇಶನ್; ಈಗ ಸಲೂನ್‌ ಕೂಡಾ ಧ್ಯಾನ ತಾಣ!

ಆತ್ಮವಿಶ್ವಾಸ

ಧ್ಯಾನ ಅಭ್ಯಾಸ ಮಾಡಿದದವರಲ್ಲಿ ಸಂತೋಷ, ಆರೋಗ್ಯ ಸದಾ ಇರುತ್ತದೆ. ಒಳಗಿನ ಸಂತೋಷ ಹೊರಗೆ ವ್ಯಕ್ತವಾದಾಗ ಚರ್ಮ ಹೊಳೆಯುತ್ತದೆ. ಸಂತೋಷವಾಗಿರುವವರೆಲ್ಲರೂ ಸುಂದರವಾಗಿ ಕಾಣುತ್ತಾರೆ. ಅದೇ ಸದಾ ಖಿನ್ನತೆಯಲ್ಲಿರುವ ವ್ಯಕ್ತಿ ಎಷ್ಟೇ ಸುಂದರವಾಗಿದ್ದರೂ ಒಣಗಿದ ಕೆರೆಯಂತೆ ಅವರ ಸೌಂದರ್ಯದಲ್ಲಿ ಚಾರ್ಮ್ ಇರುವುದಿಲ್ಲ. ಸಂತೋಷ, ನೆಮ್ಮದಿ ಇದ್ದಾಗ ಆತ್ಮವಿಶ್ವಾಸವೂ ಹೆಚ್ಚಾಗಿರುತ್ತದೆ. ಆತ್ಮವಿಶ್ವಾಸ ನೀವು ಮುಖಕ್ಕೆ ತೊಡಿಸಬಲ್ಲ ಬಹು ದೊಡ್ಡ ಮೇಕಪ್. 

ಆರೋಗ್ಯಕರ ತೂಕ

ಪ್ರತಿ ದಿನ ಧ್ಯಾನ ಮಾಡುವವರು ಆರೋಗ್ಯಕರ ತೂಕವನ್ನು ಹೊಂದಿರುತ್ತಾರೆ. ಏಕೆಂದರೆ ಸ್ಟ್ರೆಸ್ ಹೆಚ್ಚಾದಾಗ ಬೇಕಾಬಿಟ್ಟಿ ತಿನ್ನುವುದೂ ಹೆಚ್ಚು, ಬಿಪಿ, ಶುಗರ್, ಬೊಜ್ಜಿನ ಸಮಸ್ಯೆಗಳೂ ಹೆಚ್ಚು. ಏಕೆಂದರೆ ಸ್ಟ್ರೆಸ್ ಹೆಚ್ಚಾದಾಗ ದೇಹದಲ್ಲಿ ಕಾರ್ಟಿಸಾಲ್ ಹಾರ್ಮೋನ್ ಹೆಚ್ಚು ಉತ್ಪಾದನೆಯಾಗುತ್ತದೆ. ಈ ಹಾರ್ಮೋನ್ ಹೆಚ್ಚಾದರೆ ತೂಕ ಹೆಚ್ಚುತ್ತದೆ. ಆದರೆ, ಧ್ಯಾನದಿಂದ ದೇಹದಲ್ಲಿ ಕಾರ್ಟಿಸಾಲ್ ಪ್ರಮಾಣ ಇಳಿಕೆಯಾಗುತ್ತದೆ. ಹಾಗಾಗಿ, ದೇಹತೂಕ ಎತ್ತರಕ್ಕೆ ಸರಿಯಾಗಿರುತ್ತದೆ.