Health Tips: ಮಧುಮೇಹಿಗಳು ಪೈಲ್ಸ್‌ನಿಂದ ಬಚಾವ್ ಆಗೋದು ಹೇಗೆ?
ಮಧುಮೇಹ ಖಾಯಿಲೆಗಳ ಗೂಡು. ಮಧುಮೇಹ ಖಾಯಿಲೆ ಅಲ್ಲದೆ ಹೋದ್ರೂ ಅದ್ರಿಂದ ಅನೇಕ ರೋಗ ಬರುತ್ತದೆ. ಮಧುಮೇಹದ ಜೊತೆ ಪೈಲ್ಸ್ ಬಂದ್ರೆ ಅದ್ರಿಂದ ಹಿಂಸೆ ಹೆಚ್ಚು. ಅದಕ್ಕೆ ಕೆಲ ಟಿಪ್ಸ್ ಪಾಲನೆ ಮಾಡ್ಲೇಬೇಕು.
ಮಧುಮೇಹ ಒಂದು ಗಂಭೀರ ಸಮಸ್ಯೆ. ಸೂಕ್ತ ಸಮಯದಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಹೋದಲ್ಲಿ ಅನೇಕ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆ ಕಾಡುತ್ತದೆ. ಮಧುಮೇಹಿಗಳಿಗೆ ಕಾಡುವ ಮತ್ತೊಂದು ರೋಗವೆಂದ್ರೆ ಪೈಲ್ಸ್. ಹೇಳಲಾಗದ, ಅನುಭವಿಸಲು ಸಾಧ್ಯವಿಲ್ಲದ ಸಮಸ್ಯೆ ಇದು. ಮಧುಮೇಹಿಗಳ ಆರೋಗ್ಯ ಸ್ಥಿತಿ ಎಲ್ಲ ಸಂದರ್ಭದಲ್ಲಿ ಒಂದೇ ರೀತಿ ಇರೋದಿಲ್ಲ. ರಕ್ತದಲ್ಲಿನ ಸಕ್ಕರೆ (Sugar) ಮಟ್ಟ ಕೆಲವೊಮ್ಮೆ ಹೆಚ್ಚಾದ್ರೆ ಮತ್ತೆ ಕೆಲವೊಮ್ಮೆ ಕಡಿಮೆ ಆಗುತ್ತದೆ. ಇದ್ರಿಂದಾಗಿ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ರಕ್ತದ ಹರಿವು ದೇಹದಲ್ಲಿ ಸರಿಯಾಗಿ ಆಗುವುದಿಲ್ಲ. ಇದ್ರಿಂದಾಗಿ ಮಧುಮೇಹಿಗೆ ಪೈಲ್ಸ್ (Piles) ಹೆಚ್ಚಾಗಿ ಕಾಡುವ ಸಾಧ್ಯತೆಯಿದೆ.
ಮಲವಿಸರ್ಜನೆ ಜಾಗದಲ್ಲಿ ಊತವಿರುತ್ತದೆ. ಇದ್ರಿಂದ ಮಲವಿಸರ್ಜನೆ ವೇಳೆ ವಿಪರೀತ ನೋವು, ರಕ್ತಸ್ರಾವ ಶುರುವಾಗುತ್ತದೆ. ಮಧುಮೇಹಿಗಳಿಗೆ ಪೈಲ್ಸ್ ಕಾಡಿದಾಗ ಏನು ಮಾಡ್ಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ರೋಗಿಗಳು ವೈದ್ಯ (Doctor) ರ ಬಳಿ ಹೋಗ್ಬೇಕೆ ಅಥವಾ ಮನೆ ಮದ್ದು ಮಾಡ್ಬೇಕೆ ಎನ್ನುವ ಬಗ್ಗೆ ನಾವು ನಿಮಗೆ ಮಾಹಿತಿ ನೀಡ್ತೇವೆ.
ಮಧುಮೇಹ ಇರುವವರಲ್ಲಿ ಪೈಲ್ಸ್‌ನ ಲಕ್ಷಣ : ಮಧುಮೇಹಿಗಳಿಗೆ ಪೈಲ್ಸ್ ಲಕ್ಷಣ ಸಾಮಾನ್ಯರಿಗೆ ಕಾಡುವ ಪೈಲ್ಸ್ ಲಕ್ಷಣದಂತೆ ಇರುತ್ತದೆ. ಗುದನಾಳದಿಂದ ರಕ್ತಸ್ರಾವ, ತುರಿಕ, ಮಲ ವಿಸರ್ಜನೆ ಮಾಡುವಾಗ ತೀವ್ರವಾದ ನೋವು ಕಾಡುತ್ತದೆ. ಕೆಲ ಜನರಿಗೆ ಪೈಲ್ಸ್‌ನ ಪರಿಣಾಮವಾಗಿ ಗುದದ್ವಾರದಿಂದ ಲೋಳೆಯ ವಿಸರ್ಜನೆ ಆಗುವುದಿದೆ.
ಹಾರ್ಟ್ ಅಟ್ಯಾಕ್ ಪ್ರಮಾಣ ಕಳೆದ 10 ವರ್ಷಗಳಲ್ಲಿ ಶೇ.22 ಹೆಚ್ಚಳ: ಡಾ. ಸಿ.ಎನ್. ಮಂಜುನಾಥ್
ಪೈಲ್ಸ್ ನಿಂದ ಬಳಲುವ ಮಧುಮೇಹಿಗಳು ಏನು ಮಾಡ್ಬೇಕು? : ಫೈಬರ್ ಆಹಾರ ಹೆಚ್ಚು ಸೇವನೆ ಮಾಡಿ : ಮಧುಮೇಹ ಹೊಂದಿರುವ ಜನರು ಪೈಲ್ಸ್ ನಿಂದ ಮುಕ್ತಿ ಪಡೆಯಬೇಕು ಎಂದಾದ್ರೆ ಹೆಚ್ಚಿನ ಫೈಬರ್ ಆಹಾರವನ್ನು ಡಯಟ್ ನಲ್ಲಿ ಸೇರಿಸಬೇಕು. ಮಧುಮೇಹಿಗೆ ಮಾತ್ರವಲ್ಲ ಸಾಮಾನ್ಯ ವ್ಯಕ್ತಿಗೂ ಪೈಲ್ಸ್ ಕಡಿಮೆ ಆಗ್ಬೇಕೆಂದ್ರೆ ಆತ ಫೈಬರ್ ಭರಿತ ಆಹಾರ ತೆಗೆದುಕೊಳ್ಳಬೇಕು. ಸಾಕಷ್ಟು ನಾರಿನಂಶವಿರುವ ಆಹಾರವನ್ನು ಸೇವಿಸಬೇಕು. ಇದರಿಂದ ಕರುಳಿನ ಚಲನೆ ಸರಾಗವಾಗಿ ಆಗುತ್ತದೆ. ಮಲ ಮೃದುಗೊಳ್ಳುತ್ತದೆ. ನೋವು ಕಡಿಮೆ ಆಗುತ್ತದೆ.
ಹೆಚ್ಚು ಸಮಯ ಕುಳಿತುಕೊಳ್ಬೇಡಿ : ಒಂದೇ ಜಾಗದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳೋದು ಸಾಮಾನ್ಯ ಜನರಿಗೂ ಒಳ್ಳೆಯದಲ್ಲ. ಮಧುಮೇಹಿಗಳಿಗೆ ಇದು ತುಂಬಾ ಅಪಾಯ. ಪೈಲ್ಸ್ ಇದ್ದು, ಮಧುಮೇಹವೂ ಇದ್ರೆ ಒಂದೇ ಕಡೆ ಕುಳಿತಾಗ ನೋವು ಹೆಚ್ಚಾಗಬಹುದು. ಗಾಯವಿದ್ದರೆ ನೋವು ಹೆಚ್ಚಾಗಬಹುದು. ಶೌಚಾಲಯದಲ್ಲಿ ಹೆಚ್ಚು ಹೊತ್ತು ಕುಳಿತ್ರೂ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಐಸ್ ಬಳಸಿ : ಮಧುಮೇಹಿಗಳಿಗೆ ಪೈಲ್ಸ್ ನಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕು. ನೋವು ಸಹ ದೀರ್ಘಕಾಲ ಕಾಡುತ್ತದೆ. ಈ ಸಮಯದಲ್ಲಿ ಮಧುಮೇಹಿಗಳು ನೋವಿನಿಂದ ಮುಕ್ತಿಪಡೆಯಲು ಐಸ್ ಬಳಸಬೇಕು. ಐಸ್ ಅನ್ನು ಅನ್ವಯಿಸುವುದರಿಂದ ಊತವನ್ನು ಕಡಿಮೆ ಮಾಡಬಹುದು. ನೋವು ಕೂಡ ಸ್ವಲ್ಪಮಟ್ಟಿಗೆ ಕಡಿಮೆ ಆಗುತ್ತದೆ.
ಬೆಚ್ಚಗಿನ ನೀರು ಬಳಕೆ ಮಾಡಿ : ಮಧುಮೇಹಿಗಳು ಪೈಲ್ಸ್ ನಿಂದ ನೆಮ್ಮದಿ ಪಡೆಯಲು ಬೆಚ್ಚಗಿನ ನೀರನ್ನು ಬಳಸಬೇಕು. ಬೆಚ್ಚಗಿನ ನೀರನ್ನು ಟಬ್ ಗೆ ಹಾಕಿ ಅದ್ರಲ್ಲಿ ಕುಳಿತುಕೊಳ್ಳಬೇಕು. ಇದಕ್ಕೆ ಸ್ವಲ್ಪ ಎಪ್ಸಮ್ ಉಪ್ಪನ್ನು ಸೇರಿಸಬಹುದು. ಎಪ್ಸಮ್ ಉಪ್ಪಿನ ರಾಸಾಯನಿಕ ಹೆಸರು ಹೈಡ್ರೀಕರಿಸಿದ ಮೆಗ್ನೀಸಿಯಮ್ ಸಲ್ಫೇಟ್ ಆಗಿದೆ. ಈ ಉಪ್ಪು ಪೊಟ್ಯಾಸಿಯಮ್ ಮತ್ತು ಸಲ್ಫೇಟ್‌ನಂತಹ ಅನೇಕ ಉಪಯುಕ್ತ ಅಂಶಗಳನ್ನು ಒಳಗೊಂಡಿದೆ. ಬೆಚ್ಚಗಿನ ನೀರಿಗೆ ಈ ಉಪ್ಪು ಬೆರೆಸಿ ಕುಳಿತ್ರೆ ನೋವು ಸ್ವಲ್ಪ ಕಡಿಮೆ ಆಗುತ್ತದೆ.
ಮನೆ ಮದ್ದು ಫಲ ನೀಡದೆ ಹೋದ್ರೆ ವೈದ್ಯರ ಭೇಟಿ : ಈ ಎಲ್ಲ ಮನೆ ಮದ್ದನ್ನು ನೀವು ಮಾಡಿಯೂ ಪ್ರಯೋಜನ ಶೂನ್ಯ ಎನ್ನಿಸಿದ್ರೆ ಅಥವಾ ನೋವು ವಿಪರೀತವಾಗಿದ್ದು, ರಕ್ತ ಹೆಚ್ಚಿನ ಪ್ರಮಾಣದಲ್ಲಿ ಹೋಗ್ತಿದ್ದರೆ ವೈದ್ಯರನ್ನು ಭೇಟಿಯಾಗಿ.