Asianet Suvarna News Asianet Suvarna News

Over Exercising Effect: ಜಿಮ್ ವರ್ಕೌಟ್ ಅತಿ ಬೇಡ, ಪುರುಷತ್ವವೇ ಹೋಗ್ಬೋದು!

ದೇಹವನ್ನು ಹುರಿಗೊಳಿಸಿಕೊಳ್ಳಲು ಜಿಮ್ ಗೆ ಹೋಗುವುದು, ಬೆವರು ಹರಿಸಿ ವರ್ಕೌಟ್ ಮಾಡುವುದೆಂದರೆ ಯುವಕರಿಗೆ ಅದೇನೋ ಕ್ರೇಜ್. ಬೆವರು ಹರಿಸುವುದು ಒಳ್ಳೆಯದೇ ಆದರೂ ಅತಿಯಾಗಿ ಜಿಮ್ ನಲ್ಲಿ ವರ್ಕೌಟ್ ಮಾಡುವುದರಿಂದ ಸಂತಾನಹೀನತೆಯ ಸಮಸ್ಯೆಯೂ ಮುಂದೆ ಕಾಡಬಹುದು.

Heavy work out in gym may result in losing manhood
Author
Bangalore, First Published Dec 19, 2021, 11:16 AM IST

ನಮ್ಮಲ್ಲಿ ಒಂದು ಗಾದೆ ಮಾತಿದೆ. ಅತಿಯಾದರೆ ಅಮೃತವೂ ವಿಷ ಎಂದು. ಜಿಮ್ ವರ್ಕೌಟ್ ವಿಚಾರದಲ್ಲೂ ಇದು ಸತ್ಯ. ದೈಹಿಕ ಚಟುವಟಿಕೆ ಮಾಡುವುದರಿಂದ ಸಾಕಷ್ಟು ಉತ್ತಮ ಪರಿಣಾಮಗಳು ದೊರೆಯುತ್ತವೆ. ದೇಹಕ್ಕೆ ಅತ್ಯಂತ ಚೈತನ್ಯವೂ ಸಿಗುತ್ತದೆ. ಮಾನಸಿಕವಾಗಿಯೂ ಅಷ್ಟೇ ಸದೃಢತೆ ದೊರೆಯುತ್ತದೆ. ಆದರೆ, ಹೆಚ್ಚು ವರ್ಕೌಟ್ ಮಾಡುವುದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು ಎನ್ನುವ ಕಡೆಗೆ ಗಮನವಿರಲಿ.

ಇತ್ತೀಚೆಗಂತೂ ದೇಹ ಬೆಳೆಸಿಕೊಳ್ಳಲು ಜಿಮ್ ಗೆ ಹೋಗಿ ಕಸರತ್ತು ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಬೆಳಗಾದರೆ, ಜಿಮ್ ಗಳು ಭರ್ತಿಯಾಗಿರುತ್ತದೆ. ಬೆಳಗಿನ ಸ್ಲಾಟ್ ಸಿಗುವುದಿಲ್ಲ. ಅಷ್ಟರಮಟ್ಟಿಗೆ ಎಲ್ಲ ಜಿಮ್ ಗಳೂ ಭರ್ತಿ. ಹೆಚ್ಚಿನ ವರ್ಕೌಟ್ ಮಾಡುವುದಕ್ಕೆ ದೇಹಕ್ಕೆ ಶಕ್ತಿ ಬೇಕು ತಾನೇ? ಅದಕ್ಕಾಗಿ, ದಿನಕ್ಕಿಷ್ಟು ಎಂದು ಲೆಕ್ಕವಿಟ್ಟು ಮೊಟ್ಟೆ ಸೇವನೆ ಮಾಡುವುದು, ಮಾಂಸಖಂಡಗಳನ್ನು ಬಲಪಡಿಸಲು ಸ್ಟಿರಾಯ್ಡ್ ಸೇವಿಸುವುದು, ಜಿಮ್ ಗಳಲ್ಲಿ ನೀಡುವ ಶಕ್ತಿವರ್ಧಕ ಜ್ಯೂಸ್ ಕುಡಿಯುವುದು ಇವೆಲ್ಲ ಸಾಮಾನ್ಯ. ಇವು ನಿಧಾನವಾಗಿ ದೇಹಕ್ಕೆ ತೊಂದರೆ ಒಡ್ಡುತ್ತವೆ ಎನ್ನುವುದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದುಬಂದಿದೆ.

ನಮ್ಮಲ್ಲಿ ಜನಪ್ರಿಯವಾಗಿರುವ ಹಲವು ರೀತಿಯ ಯೋಗಾಸನಗಳನ್ನು ಗಂಟೆಗಟ್ಟಲೆ ಮಾಡುವವರಿದ್ದಾರೆ. ಯೋಗವು ನಿಧಾನವಾಗಿ ಮಾಡುವ ಪ್ರಕ್ರಿಯೆಯಾಗಿದ್ದರಿಂದ ನಿಧಾನವಾಗಿಯೇ ದೇಹವನ್ನು ಬಾಗಿಸುತ್ತದೆ, ಪಳಗಿಸುತ್ತದೆ. ಆದರೂ ಎಲ್ಲ ಆಸನಗಳನ್ನು ಎಲ್ಲರೂ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಜಿಮ್ ವರ್ಕೌಟ್ ಹಾಗಲ್ಲ. ಅಲ್ಲಿಯೂ ಹಲವಾರು ವಿಧಗಳಿರುತ್ತವೆ ಎನ್ನುವುದು ಸತ್ಯ. ಆದರೂ ಅತಿಯಾದ ವರ್ಕೌಟ್ ಗೆ ಯುವಕರು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅತಿಯಾಗಿ ವರ್ಕೌಟ್ ಮಾಡುವುದು, ಅತಿಯಾಗಿ ಬೆವರಿಳಿಸುವುದು, ದೇಹಕ್ಕೆ ಶಕ್ತಿ ಬೇಕೆಂದು ಪಾನೀಯಗಳನ್ನು ಸೇವಿಸುವುದು ಚಟವಾಗಿಯೂ ಮಾರ್ಪಟ್ಟಿದೆ. ಪುರುಷರಲ್ಲಿ ಈ ಚಟ ಮುಂದೊಂದು ದಿನ ಬಂಜೆತನಕ್ಕೆ ಕಾರಣವಾಗಬಹುದು. ಆರೋಗ್ಯಕ್ಕೆ ಅಪಾಯಕಾರಿ ಪರಿಣಮಿಸಬಹುದು.

Best Winter Soups: ತೂಕ ಇಳಿಸಿಕೊಳ್ಳಬಹುದು ಟ್ರೈ ಮಾಡಿ

ಯಾವಾಗ ಎಚ್ಚರಿಕೆ ತೆಗೆದುಕೊಳ್ಳಬೇಕು ಗೊತ್ತೇ?

ವ್ಯಾಯಾಮ ಮಾಡಿದಾಗ ದೇಹಕ್ಕೆ ಸ್ವಲ್ಪ ನೋವಾಗುತ್ತದೆ. ಆದರೆ, ಈ ನೋವು ಸಹ ಹಿತವೆನಿಸುತ್ತಿರುತ್ತದೆ. ಆದರೆ, ದೇಹಕ್ಕೆ ವೇದನೆ ಅತಿಯಾದರೆ ಅದು ಹಿತವೆನಿಸುವುದಿಲ್ಲ. ಬದಲಿಗೆ ಮೈಕೈ ನೋವು, ಬೆನ್ನು, ಸೊಂಟ ನೋವು, ದೇಹದ ಒಂದೇ ಪಾರ್ಶ್ವದಲ್ಲಿ ಅತೀವ ನೋವು ಉಂಟಾಗಬಹುದು. ಈ ನೋವು ಎಂದಿಗೂ ಕಡಿಮೆಯಾಗುವುದೇ ಇಲ್ಲ. ನೋವನ್ನು ಮೀರಲೆಂದು ಸ್ಟಿರಾಯ್ಡ್ ಗಳ ಸೇವನೆ ಶುರುವಾಗುವುದು ಆ ಹಂತದಲ್ಲಿಯೇ. ಆಗ ಎಚ್ಚೆತ್ತುಕೊಳ್ಳಬೇಕು. ಅಲ್ಲದೆ, ಒಂದೇ ಬಗೆಯ ದೈಹಿಕ ಕಸರತ್ತು ಮಾಡುವುದು ಎಂದಿಗೂ ಸಲ್ಲದು. ಓಡುತ್ತಲೇ ಇರುವುದು, ಸೈಕ್ಲಿಂಗ್ ಮಾಡುತ್ತಲೇ ಇರುವುದು ಸೇರಿದಂತೆ, ಮೈಕೈ ಬಗ್ಗಿಸುವ, ತಿರುಗಿಸುವ ವ್ಯಾಯಾಮಗಳನ್ನಷ್ಟೇ ಮಾಡುತ್ತಿರಬಾರದು. ಎದೆಯ ಭಾಗ ಹಿಗ್ಗಿಸಿಕೊಳ್ಳಲೆಂದು ತೀವ್ರ ಶ್ರಮ ಹಾಕುವುದು ಒಳ್ಳೆಯದಲ್ಲ. ಇದರಿಂದ ಮಾಂಸಖಂಡಗಳು ಬಲಹೀನವಾಗುತ್ತದೆ ಹಾಗೂ ಉಳಿದ ಭಾಗದ ಮಾಂಸಖಂಡಗಳು ನಿರ್ಲಕ್ಷ್ಯಕ್ಕೆ ತುತ್ತಾಗುತ್ತದೆ.

Cancer Treatment : ಪ್ರಾರಂಭಿಕ ಎಚ್ಚರದಿಂದ ಕ್ಯಾನ್ಸರ್‌ ಗುಣಪಡಿಸಲು ಸಾಧ್ಯ

ಸಿಕ್ಸ್ ಪ್ಯಾಕ್ ಕ್ರೇಜ್ ಮಿರಲು ಹುಡುಗರಿಗೆ ಕಷ್ಟ. ಏಕೆಂದರೆ, ಮೆಚ್ಚಿನ ಹೀರೋ ಥರ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲೇಬೇಕೆಂದು ಹಠ ಹೊತ್ತವರಿದ್ದಾರೆ. ಅಥವಾ ಸಿಕ್ಸ್ ಪ್ಯಾಕೇ ದೈಹಿಕ ಸದೃಢತೆಯ ಮಾನದಂಡ ಎಂದು ಅಂದುಕೊಂಡವರೂ ಇದ್ದಾರೆ. ಇದಕ್ಕಾಗಿ ಪ್ರೊಟೀನ್ ಭರಿತ ಪಾನೀಯಗಳು, ಸ್ಟಿರಾಯ್ಡ್ ಗಳನ್ನು ಬಹಳಷ್ಟು ಜಿಮ್ ಗಳಲ್ಲಿ ನೀಡಲಾಗುತ್ತದೆ. ಇವು ತಕ್ಷಣಕ್ಕೆ ಹಿತ ನೀಡುತ್ತವೆಯಾದರೂ ನಿಧಾನವಾಗಿ ದೇಹದಲ್ಲಿ ಬಹಳಷ್ಟು ಬದಲಾವಣೆ ತರುತ್ತದೆ. ಹಾರ್ಮೋನ್ ವ್ಯತ್ಯಾಸವನ್ನು ಉಂಟುಮಾಡುತ್ತವೆ. ಹಾರ್ಮೋನ್ ವ್ಯತ್ಯಾಸವಾದಾಗ ಕ್ರಮೇಣ ವೀರ್ಯಾಣುಗಳ ಕೊರತೆಯೂ ಉಂಟಾಗಬಹುದು.

ಪ್ರತಿದಿನ ತಾಸಿಗೂ ಹೆಚ್ಚು ಸಮಯ ಜಿಮ್ ವರ್ಕೌಟ್ ಮಾಡುವುದು, ಉಸಿರು ತೆಗೆದುಕೊಳ್ಳಲು ಕಷ್ಟವಾಗುವಷ್ಟು ವ್ಯಾಯಾಮ ಮಾಡುವುದು ಯಾವತ್ತೂ ಸರಿಯಲ್ಲ. ದೇಹದ ಎತ್ತರಕ್ಕೆ ತಕ್ಕಂತೆ ಸಾಮಾನ್ಯ ತೂಕ ಇರುವವರಿಗೆ ವಾರಕ್ಕೆ ಐದು ಗಂಟೆಗಳ ಕಾಲದ ವ್ಯಾಯಾಮ ಸಾಕು.

ಹಾರ್ಮೋನ್ ವ್ಯತ್ಯಾಸವಾದರೆ ಆರೋಗ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಏಕಾಗ್ರತೆಯ ಕೊರತೆ ಉಂಟಾಗಬಹುದು, ಖಿನ್ನತೆ, ಕಿರಿಕಿರಿ, ಗೊಂದಲ ಹೆಚ್ಚಬಹುದು. ನಿದ್ರಾಹೀನತೆ ಉಂಟಾಗಬಹುದು.  ಕಬ್ಬಿಣದ ಕೊರತೆಯಿಂದ ಅನೀಮಿಯಾ ಸಮಸ್ಯೆ ತಲೆದೋರಬಹುದು. ಮೂಳೆಗಳ ಸಾಂದ್ರತೆ ಕಡಿಮೆಯಾಗಬಹುದು, ಇವೆಲ್ಲ ಸಮಸ್ಯೆಯಾಗಬಾರದೆಂದೇ ಜಿಮ್ ಗಳಲ್ಲಿ ಶಕ್ತಿವರ್ಧಕ ಪಾನೀಯ ಹಾಗೂ ಸ್ಟಿರಾಯ್ಡ್ ಗಳನ್ನು ನೀಡಲಾಗುತ್ತದೆ. ಆದರೆ, ದೀರ್ಘಕಾಲದಲ್ಲಿ ಇದರ ಸೇವನೆ ಒಳ್ಳೆಯದಲ್ಲ.

 

Follow Us:
Download App:
  • android
  • ios