ಸ್ಯಾನಿಟೈಸರ್ ಬಳಕೆ ಹೇಗಿರಬೇಕು? ಬೇಕಾಬಿಟ್ಟಿ ಸ್ಯಾನಿಟೈಸರ್ ಬಳಸೋದು ಡೇಂಜರ್!
ಕೊರೋನಾ ಶುರುವಾದಾಗಿನಿಂದ ಸ್ಯಾನಿಟೈಸರ್ ಇಲ್ಲದಿರುವ ಮನೆ, ಆಫೀಸ್‌ಗಳೇ ಇಲ್ಲವೇನೋ. ಚಿಕ್ಕ ಚಿಕ್ಕ ಮಕ್ಕಳೂ ಕ್ಷಣಕ್ಕೊಮ್ಮೆ ಸ್ಯಾನಿಟೈಸರ್ ಹಾಕ್ಕೊಂಡು ಕೈ ಉಜ್ಜಿಕೊಳ್ಳೋದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಸ್ಯಾನಿಟೈಸರ್‌ಅನ್ನು ಈ ಥರ ಬಳಸುವ ಅಗತ್ಯ ಇದೆಯಾ, ಇದರ ಬಳಕೆ ಎಷ್ಟಿರಬೇಕು ಎಂಬ ಬಗ್ಗೆ ದೈಹಿಕ ತಜ್ಞ ಡಾ.ರವಿಕುಮಾರ್ ಟಿ ಅವರು ನೀಡಿದ ಮಾಹಿತಿ ಇಲ್ಲಿದೆ.
* ನಾವೀಗ ಬಳಕೆ ಮಾಡುವ ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಶೇ.60 ರಿಂದ ಶೇ.70ರಷ್ಟುಮಾತ್ರ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳನ್ನು ನಾಶ ಮಾಡಬಲ್ಲದು.
* ಇದರಲ್ಲಿ ಆಲ್ಕೋಹಾಲ್ ಅಂಶ ಅಧಿಕವಾಗಿರುತ್ತದೆ. ಕೈ ತೊಳೆಯಲು ಸೋಪು ಮತ್ತು ನೀರು ಇಲ್ಲದಿದ್ದಾಗ ಮಾತ್ರ ಇದನ್ನು ಬಳಸಬೇಕು.
ಪೊಲೀಸ್ ಠಾಣೆಗೂ ಸೋಂಕು ನಿವಾರಕ ಸುರಂಗ
* ಪ್ರಯಾಣ ಮಾಡುವಾಗ ಅಥವಾ ಸಿಂಕ್‌ವರೆಗೆ ನಡೆದು ಹೋಗಲು ಸಾಧ್ಯವಾಗದಿದ್ದ ಅನಾರೋಗ್ಯ ಸಮಸ್ಯೆಗಳಿದ್ದರೆ ಅನಿವಾರ್ಯವಾಗಿ ಸ್ಯಾನಿಟೈಸರ್ ಬಳಸಬಹುದು.
* ಸ್ಯಾನಿಟೈಸರ್‌ಅನ್ನು ಕೈಗೆ ಹಾಕಿಕೊಂಡು ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈಗಳನ್ನು ಉಜ್ಜಬೇಕು. ಇಲ್ಲವಾದರೆ ಆಲ್ಕೊಹಾಲ್ ಅಂಶ ಕೈಯಲ್ಲೇ ಉಳಿದು ಅಪಾಯವಾಗಬಹುದು.
* ಮುಖ್ಯವಾಗಿ ಈ ಸ್ಯಾನಿಟೈಸರ್ ಹಚ್ಚಿ ಸರಿಯಾಗಿ ಕೈಗಳನ್ನು ಉಜ್ಜಿಕೊಳ್ಳದೇ 15 ನಿಮಿಷಕ್ಕೆಲ್ಲ ಕೈ ತೊಳೆಯದೇ ಊಟ ಮಾಡಿದರೆ ಇದು ಅಪಾಯಕಾರಿ.
* ಊಟ ಮಾಡುವ ಮೊದಲು ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳಲೇ ಬೇಡಿ. ಇದು ಅಪಾಯಕಾರಿ. ಮುಖ್ಯವಾಗಿ ಮಕ್ಕಳು ಈ ರೀತಿ ಮಾಡದಂತೆ ನೋಡಿಕೊಳ್ಳಿ.
* ಮಕ್ಕಳಿಗೆ ಸಾಧ್ಯವಾದಷ್ಟುಸ್ಯಾನಿಟೈಸರ್ ಬಳಕೆ ಕಡಿಮೆ ಮಾಡುವುದು ಉತ್ತಮ. ಅವರು ಚೆನ್ನಾಗಿ ಕೈಗಳನ್ನು ಉಜ್ಜದೇ ಕೈ ಬಾಯಿಗೆ ಹಾಕುವ, ಆ ಕೈಯಲ್ಲೇ ಏನನ್ನಾದರೂ ತಿನ್ನುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಕರ.
KSRTCಯಿಂದ ವಿನೂತನ ಐಡಿಯಾ, ಗುಜರಿ ಬಸ್ಗಳಿಗೆ ಹೊಸ ರೂಪ!
* ಕೆಲವೊಮ್ಮೆ ಮಕ್ಕಳ ಕೈಗೆ ಎಟಕುವಂತೆ ಸ್ಯಾನಿಟೈಸರ್ ಇಟ್ಟುಕೊಂಡಿದ್ದರೆ ಅವರದನ್ನು ಕುಡಿದುಬಿಡುವ ಅಪಾಯವಿದೆ. ಒಂದು ವೇಳೆ ಹಾಗೇನಾದರೂ ಆದರೆ ತಕ್ಷಣ ವೈದ್ಯರಲ್ಲಿ ಕರೆದೊಯ್ಯಿರಿ. ಮನೆಯಲ್ಲಿ ಯಾವ ಚಿಕಿತ್ಸೆಯೂ ಬೇಡ. ಸ್ವಲ್ಪ ನೀರು ಕುಡಿಸಬಹುದಷ್ಟೇ. ವೈದ್ಯರ ಬಳಿ ಹೋಗುವಾಗ ಮಗು ಕುಡಿದ ಸ್ಯಾನಿಟೈಸರ್ ಬಾಟಲ್‌ಅನ್ನು ತಪ್ಪದೇ ಕೊಂಡೊಯ್ಯಿರಿ.
* ಮಕ್ಕಳು ಅಥವಾ ದೊಡ್ಡವರ ಹೊಟ್ಟೆಗೆ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್ ಹೋದರೆ ವಾಂತಿ, ಹೊಟ್ಟೆನೋವು ಕಾಣಿಸಬಹುದು. ಆಲ್ಕೊಹಾಲ್ ಪಾಯಿಸನಿಂಗ್ ಆದರೆ ಮಗು ಪ್ರಜ್ಞಾಹೀನ ಸ್ಥಿತಿಗೆ ಹೋಗಬಹುದು. ಇದು ಬಹಳ ಅಪಾಯಕಾರಿ.
* ಮನೆಯಲ್ಲಿ ಸೋಪು, ನೀರಿನ ಲಭ್ಯತೆ ಇದ್ದೂ ಸ್ಯಾನಿಟೈಸರ್ ಪದೇ ಪದೇ ಬಳಸೋದರಿಂದ ಕೈಗಳು ಒರಟಾಗಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲರ್ಜಿ ಆಗಬಹುದು. ಸ್ಯಾನಿಟೈಸರ್ ಹಚ್ಚಿರುವ ಕೈಯಲ್ಲಿ ಕಣ್ಣು, ಮುಖ ಮುಟ್ಟಿದರೂ ಸಮಸ್ಯೆಯಾಗುತ್ತದೆ.
* ಅನಿವಾರ್ಯ ಸಂದರ್ಭ ಸ್ಯಾನಿಟೈಸರ್ ಬಳಸಲೇ ಬೇಕಾದಾಗ ಆಗಾಗ ಕೈಗೆ ಮಾಯಿಶ್ಚರೈಸರ್ ಹಚ್ಚುತ್ತಿರಿ. ಆಗ ಚರ್ಮ ಒರಟಾಗಲ್ಲ. ಅಲರ್ಜಿ ಆಗಲ್ಲ.
* ಕಣ್ಣಿಗೆ, ಮುಖಕ್ಕೆ ಏನಾದರೂ ಸ್ಯಾನಿಟೈಸರ್ ಬಿದ್ದರೆ ಕೂಡಲೇ ಶುದ್ಧ ನೀರಲ್ಲಿ ತೊಳೆಯಿರಿ. ಮಕ್ಕಳಲ್ಲಿ ಮತ್ತೇನಾದರೂ ಸಮಸ್ಯೆಯಾದರೆ ಡಾಕ್ಟರ್ ಹತ್ರ ಕರೆದೊಯ್ಯಬೇಕು.