ಚಿಕ್ಕಬಳ್ಳಾಪುರ(ಏ.12): ಎಪಿಎಂಸಿ ಮಾರುಕಟ್ಟೆಸೇರಿದಂತೆ ಹಲವು ಪ್ರದೇಶಗಳಲ್ಲಿ ಕೊರೋನಾ ಸೋಂಕು ನಿವಾರಕ ಸುರಂಗ ಮಾರ್ಗ ಬಳಕೆ ದಿನೇದಿನೇ ಹೆಚ್ಚಾಗುತ್ತಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಪೊಲೀಸ್‌ ಠಾಣೆಯಲ್ಲಿಯೂ ಇಂತಹ ಸಾವಯವ ಸೋಂಕು ನಿವಾರಕ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಇಂಥ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದ್ದು, ಈ ಸುರಂಗ ಮಾರ್ಗದಲ್ಲಿ ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣ ಬಳಸಲಾಗುತ್ತಿದೆ. ರಾಸಾಯನಿಕಗಳನ್ನು ಬಳಸಿ ಸೋಂಕು ನಿವಾರಿಸುವ ಪ್ರಯತ್ನದಲ್ಲಿ ಈವರೆಗೆ ಸಫಲತೆ ಕಂಡಿದ್ದ ಅಧಿಕಾರಿಗಳು ಇದೀಗ ಸಾವಯವ ದ್ರಾವಣ ಬಳಸುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ಕೊರೊನಾ ಕುತ್ತಿಗೆಗೆ ಬಂದ್ರೂ ಭಾನುವಾರದ ಬಾಡೂಟ ಬೇಕಂತೆ ಇವರಿಗೆ!

ಡಾ. ಕಾರ್ತಿಕ್‌ ನಾರಾಯಣ್‌ ಎಂಬುವರು ಸೋಂಕು ಪೀಡಿತ ಗೌರಿಬಿದನೂರಿನಲ್ಲಿ ಈಗಾಗಲೇ ಸುರಂಗ ಮಾರ್ಗವನ್ನು ನಿರ್ಮಿಸಿದ್ದು, ಇದೀಗ ನಗರ ಠಾಣೆ ಪಿಎಎಸ್‌ಐ ಮನವಿ ಮೇರೆಗೆ ಠಾಣೆಯಲ್ಲಿಯೂ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಠಾಣೆಗೆ ಬರುವ ಸಾರ್ವಜನಿಕರ ಜೊತೆಗೆ ಪೊಲೀಸ್‌ ಸಿಬ್ಬಂದಿಗೂ ಇದು ಸಹಕಾರಿಯಾಗಲಿದೆ.

ಪ್ರೇಮ ವಿವಾಹ: ಮಗುವನ್ನು ಕೊಂದು ಮಹಿಳೆ ಆತ್ಮಹತ್ಯೆ

ನಗರ ಪೊಲೀಸ್‌ ಠಾಣೆಯಲ್ಲಿ ನಿರ್ಮಿಸಿರುವ ಸಾವಯವ ಸೋಂಕು ನಿವಾರಕ ಸುರಂಗ ಮಾರ್ಗದ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ಕುಮಾರ್‌ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊರೋನಾ ಸೋಂಕು ನಿವಾರಣೆಗಾಗಿ ಕೈಗೊಂಡಿರುವ ಕ್ರಮವನ್ನು ಪ್ರಶಂಸಿಸಿದ್ದಾರೆ.