KSRTCಯಿಂದ ವಿನೂತನ ಐಡಿಯಾ, ಗುಜರಿ ಬಸ್ಗಳಿಗೆ ಹೊಸ ರೂಪ!
ಸೋಂಕು ನಿವಾರಣೆಗೆ ಮೊಬೈಲ್ ಸ್ಯಾನಿಟೈಸರ್ ಬಸ್| ಕೆಎಸ್ಆರ್ಟಿಸಿಯಿಂದ ವಿನೂತನ ಐಡಿಯಾ, ಗುಜರಿ ಬಸ್ಗಳಿಗೆ ಹೊಸ ರೂಪ, ಸಾರಿಗೆ ಸಂಜೀವಿನಿ ಹೆಸರು| ಬಸ್ ಒಳಗೆ ಬಂದರೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ, ಬೆಂಗಳೂರಿನಲ್ಲಿ ಚಾಲನೆ, ಶೀಘ್ರ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲೂ ಸ್ಥಾಪನೆ
ಬೆಂಗಳೂರು(ಏ.12): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಿದರೆ, ರಾಜ್ಯದ ಉಪ ಮುಖ್ಯಮಂತ್ರಿಯೂ ಆದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಸ್ಕ್ರಾಪ್ ಆಗಬೇಕಿದ್ದ ಸಾರಿಗೆ ಸಂಸ್ಥೆಯ ಗುಜರಿ ಬಸ್‌ಗಳನ್ನು ಸಂಚಾರಿ ಸ್ಯಾನಿಟೈಸರ್ ಆಗಿ ಪರಿವರ್ತಿಸಿದ್ದಾರೆ!
ಸವದಿ ಅವರ ಒತ್ತಾಸೆ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಇಂತಹ ವಿನೂತನ ಯೋಜನೆ ರೂಪಿಸಿದ್ದು, ಸೇವೆ ಸಲ್ಲಿಸಿ ಗುಜರಿಗೆ ಸೇರಬೇಕಾದ ಪುರಾತನ ಬಸ್‌ಗಳನ್ನು ಸಂಚಾರಿ ಸ್ಯಾನಿಟೈಸರ್‌ಗಳಾಗಿ ಪರಿವರ್ತಿಸಿದ್ದು, ಇದಕ್ಕೆ ‘ಸಾರಿಗೆ ಸಂಜೀವಿನಿ’ ಎಂದು ನಾಮಕರಣ ಮಾಡಿದೆ.
ರಾಜ್ಯದ ಎಲ್ಲಾ ವಿಭಾಗಗಳಲ್ಲಿ KSRTCಯಿಂದ ‘ಸ್ಯಾನಿಟೈಸರ್ ಬಸ್’!
ಬೆಂಗಳೂರಿನ ಶಾಂತಿನಗರ ನಿಗಮದ ಕೇಂದ್ರೀಯ ವಿಭಾಗದ ಡಿಪೋ ಎರಡರಲ್ಲಿ ಸಿದ್ಧಗೊಂಡಿರುವ ಮೊದಲ ಸ್ಯಾನಿಟೈಸರ್ ಬಸ್‌ಗೆ ಶನಿವಾರ ಚಾಲನೆ ನೀಡಲಾಗಿದ್ದು, ಇಂತಹ ಬಸ್‌ಗಳು ಶೀಘ್ರವೇ ನಾಡಿನ ಎಲ್ಲಾ ಬಸ್ ಬಸ್ ನಿಲ್ದಾಣಗಳಲ್ಲಿ ಕಾಣಿಸಿಕೊಳ್ಳಲಿವೆ ಎಂದು ಲಕ್ಷ್ಮಣ್ ಸವದಿ ತಿಳಿಸಿದರು.
ಬಳಕೆ ಹೇಗೆ?:
ಪ್ರಸ್ತುತ ಲಾಕ್‌ಡೌನ್ ಜಾರಿಯಾಗಿ ವಾಹನ ಹಾಗೂ ಪ್ರಯಾಣಿಕರ ಸಂಚಾರ ಸ್ಥಗಿತವಾಗಿರುವುದರಿಂದ ಈ ಬಸ್ ಬೆಂಗಳೂರು ನಗರದಲ್ಲಿ ಅಗತ್ಯ ಹಾಗೂ ತುರ್ತು ಸೇವೆಯಲ್ಲಿ ತೊಡಗಿರುವ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರ ಬಳಕೆಗಾಗಿ ಸಂಚರಿಸಲಿದೆ. ಅಂದರೆ, ಈ ಸಿಬ್ಬಂದಿ ಇರುವ ಜಾಗಕ್ಕೆ ಬಸ್ ಹೋಗಲಿದ್ದು, ಸಿಬ್ಬಂದಿ ಈ ಬಸ್‌ನ ಮುಂಭಾಗ ಹತ್ತಿ ಹಿಂಬಾಗಿಲಿಂದ ಇಳಿಯಲಿದ್ದಾರೆ. ಈ ವೇಳೆ ರಾಸಾಯನಿಕ ಸೋಂಕು ನಿವಾರಕ ದ್ರಾವಣ ದೇಹಕ್ಕೆ ಸಿಂಪಡಣೆಯಾಗಲಿದೆ. ಇದರಿಂದ ದೇಹದ ಮೇಲೆ ವೈರಸ್ ಇದ್ದರೆ ಅದರಿಂದ ಮುಕ್ತರಾಗಬಹುದು. ಈಗಾಗಲೇ ನಿಗಮದ ವ್ಯಾಪ್ತಿಯ 17 ವಿಭಾಗಗಳ 84 ಡಿಪೋಗಳಲ್ಲಿ ಗುಜರಿ ಬಸ್‌ಗಳನ್ನು ಸ್ಯಾನಿಟೈಸರ್ ಬಸ್‌ಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಈ ಬಸ್‌ಗಳು ಎಲ್ಲ ಜಿಲ್ಲೆಗಳ ಡಿಪೋ, ಪ್ರಮುಖ ಬಸ್ ನಿಲ್ದಾಣಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಳಕೆಗೆ ಲಭ್ಯವಾಗಲಿವೆ.
20 ಸಾವಿರ ರು. ವೆಚ್ಚ:
ಕೆಎಸ್‌ಆರ್‌ಟಿಸಿಯು ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಗುಜರಿಗೆ ಹಾಕುತ್ತದೆ. ಅಂದರೆ, 10 ಲಕ್ಷ ಕಿ.ಮೀ. ಸಂಚಾರ ಪೂರ್ಣಗೊಳಿಸಿದ ಅಥವಾ 10-12 ವರ್ಷ ಪೂರೈಸಿದ ಬಸ್‌ಗಳನ್ನು ಸೇವೆಯಿಂದ ಹಿಂಪಡೆದು ಗುಜರಿಗೆ ಹಾಕಲಾಗುತ್ತದೆ. ಈ ಎರಡು ಮಾನದಂಡದ ನಡುವೆಯೂ ಇನ್ನೂ ಸಂಚರಿಸುವ ಸುಸ್ಥಿತಿಯಲ್ಲಿ ಇದ್ದರೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಈ ಬಸ್‌ಗಳನ್ನು ಕೊರೋನಾ ಮಹಾಮಾರಿಯ ನಿಯಂತ್ರಣಕ್ಕಾಗಿ ಸಂಚಾರಿ ಸಂಜೀವಿನಿಯಾಗಿ ಪರಿವರ್ತಿಸಲಾಗುವುದು ಎಂದು ಸವದಿ ಹೇಳಿದರು.
ಭಾರತ್ ಲಾಕ್‌ಡೌನ್: ತುರ್ತು ಸೇವೆಗೆ ಬಸ್ ಓಡಿಸಿದ KSRTC
ಈ ಬಸ್‌ಗಳನ್ನು ಕೇವಲ 20 ಸಾವಿರ ವೆಚ್ಚದಲ್ಲಿ ಸಂಚಾರಿ ಸ್ಯಾನಿಟೈಸರ್ ಬಸ್‌ಗಳಾಗಿ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ಪ್ರಸ್ತುತ ನಗರದಲ್ಲಿ ಅಗತ್ಯ ಹಾಗೂ ತುರ್ತು ಸೇವೆಯಲ್ಲಿ ಇರುವ ಸಿಬ್ಬಂದಿಗೆ ಈ ಮೊಬೈಲ… ಸ್ಯಾನಿಟೈಜಸ ಉಪಯೋಗಕ್ಕೆ ಬರಲಿದೆ. ಕ್ರಮೇಣ ರಾಜ್ಯದ ಮುಖ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳು, ಮಾರುಕಟ್ಟೆಗಳು ಸೇರಿದಂತೆ ಹೆಚ್ಚು ಜನದಟ್ಟಣೆ ಇರುವ ಸ್ಥಳಗಳಲ್ಲಿ ಜನ ಈ ಸ್ಯಾನಿಟೈಜರ್ ಬಸ್‌ಗಳ ಮೂಲಕ ಜನರು ಹಾದು ಹೋಗುವ ವ್ಯವಸ್ಥೆ ಮಾಡುವುದಾಗಿ ಅವರು ಹೇಳಿದರು.
ನಿಗಮದ ಡಿಪೋದ ಮೆಕ್ಯಾನಿಕ್‌ಗಳ ತಂಡ ನಮ್ಮಲ್ಲೇ ಲಭ್ಯವಿರುವ ಗುಜರಿ ಬಸ್ ಬಳಸಿಕೊಂಡು ಮೊಬೈಲ… ಸ್ಯಾನಿಟೈಸರ್ ಬಸ್‌ಗಳಾಗಿ ಪರಿವರ್ತಿಸಿದೆ. ಪ್ರಸ್ತುತ ಪೈಲೆಟ್ ಪ್ರಾಜೆಕ್ಟ್ ಆಗಿ ಒಂದು ಸ್ಯಾನಿಟೈಜರ್ ಬಸ್ ಸಿದ್ಧಪಡಿಸಲಾಗಿದೆ. ಒಮ್ಮೆ ಈ ಬಸ್ ಒಳ ಪ್ರವೇಶಿಸಿ ಆಚೆ ಬಂದರೆ ಸೋಂಕು ತಡೆಯಬಹುದು. ಶೀಘ್ರದಲ್ಲೇ ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಈ ಸಂಚಾರಿ ಸಂಜೀವಿನಿಗಳು ಕಾರ್ಯ ನಿರ್ವಹಿಸಲಿವೆ.
- ಲಕ್ಷ್ಮಣ ಸವದಿ, ಸಾರಿಗೆ ಸಚಿವ