ಆರೋಗ್ಯ ಬಹಳ ಮುಖ್ಯ. ಹಣ, ಆಸ್ತಿ, ಕೆಲಸ ಹೀಗೆ ನಾನಾ ಕಾರಣಕ್ಕೆ ನಮ್ಮ ಆರೋಗ್ಯವನ್ನೇ ನಾವು ನಿರ್ಲಕ್ಷ್ಯ ಮಾಡ್ತೇವೆ. ಅದ್ರಲ್ಲೂ ಪುರುಷರು ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಕಡಿಮೆ. ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯವೂ ಮುಖ್ಯ ಎಂಬುದು ಪುರುಷರ ಅರಿವಿಗೆ ಬರಬೇಕು.  

ವಯಸ್ಸು (Age) ನಿಲ್ಲೋದಿಲ್ಲ. ಹಾಗೆ ಆರೋಗ್ಯ (Health) ಕೂಡ ಒಂದೇ ರೀತಿ ಇರೋದಿಲ್ಲ. ವಯಸ್ಸು ಹೆಚ್ಚಾಗ್ತಿದ್ದಂತೆ ದೇಹ (Body) ದಲ್ಲಿ ಅನೇಕ ಬದಲಾವಣೆಗಳಾಗ್ತವೆ. ಸಾಮಾನ್ಯವಾಗಿ ಮಹಿಳೆಯರ ಆರೋಗ್ಯದ ಬಗ್ಗೆ ನಾವೆಲ್ಲ ಹೆಚ್ಚು ಕಾಳಜಿ ವಹಿಸ್ತೇವೆ. 30 ವರ್ಷದ ನಂತ್ರ ಯಾವೆಲ್ಲ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತವೆ ಹಾಗೆ ಯಾವೆಲ್ಲ ವಿಧಾನದ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಿಕೊಂಡು, ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದನ್ನು ನಾವು ಪದೇ ಪದೇ ಹೇಳ್ತಿರುತ್ತೇವೆ. ಆದ್ರೆ ಪುರುಷರ ಆರೋಗ್ಯವನ್ನು ನಿರ್ಲಕ್ಷ್ಯಿಸುವುದೇ ಹೆಚ್ಚು. ಸಣ್ಣಪುಟ್ಟ ಸಮಸ್ಯೆ ಕಾಡಿದ್ರೆ ಪುರುಷರು ಅದನ್ನು ಹೇಳಿಕೊಳ್ಳುವುದಿಲ್ಲ. ಸಮಸ್ಯೆ ದೊಡ್ಡದಾದ್ಮೇಲೆಯೇ ಕುಟುಂಬಸ್ಥರಿಗೆ ಸತ್ಯ ಗೊತ್ತಾಗುತ್ತದೆ. ಪುರುಷರು ಕೂಡ ವಯಸ್ಸು ಹೆಚ್ಚಾಗ್ತಿದ್ದಂತೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. 40 ವರ್ಷಗಳ ನಂತರ ದೇಹದಲ್ಲಿ ಅನೇಕ ಹಾರ್ಮೋನ್ (hormone ) ಬದಲಾವಣೆಗಳು ಶುರುವಾಗುತ್ತವೆ. ಇದು ಆಗಾಗ್ಗೆ ತೂಕ ಹೆಚ್ಚಾಗಲು ಕಾರಣವಾಗುತ್ತದೆ ಮತ್ತು ಹೊಟ್ಟೆ ಹಾಗೂ ಸೊಂಟದ ಸುತ್ತಲೂ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ. ಇದು ಅನೇಕ ರೋಗಗಳ ಅಪಾಯವನ್ನು ಸೃಷ್ಟಿಸುತ್ತದೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದೆ ಹೋದಲ್ಲಿ ಜೀವ ಕಳೆದುಕೊಳ್ಳುವ ಅಪಾಯವಿರುತ್ತದೆ. 40 ವರ್ಷ ದಾಟುತ್ತಿದ್ದಂತೆ ಪುರುಷರಲ್ಲಿ ಕಾಡುವ ಸಮಸ್ಯೆ ಏನು ? ಹಾಗೆ ಯಾವಾಗ ಪುರುಷರು ವೈದ್ಯರ ಬಳಿ ಹೋಗ್ಬೇಕೆಂಬುದನ್ನು ನಾವು ಹೇಳ್ತೇವೆ.

40 ವರ್ಷದ ನಂತ್ರ ಪುರುಷರನ್ನು ಕಾಡುತ್ತೆ ಈ ಸಮಸ್ಯೆ : 

ಹೆಚ್ಚಾಗುವ ಒತ್ತಡ : ವರ್ಷ 40 ದಾಟುತ್ತಿದ್ದಂತೆ ಜವಾಬ್ದಾರಿ ಹೆಚ್ಚಾಗುತ್ತದೆ. ಮಕ್ಕಳ ಶಿಕ್ಷಣ, ಮನೆ, ಕಚೇರಿ ಕೆಲಸ ಹೀಗೆ ಎಲ್ಲವನ್ನೂ ಪುರುಷನಾದವನು ನಿಭಾಯಿಸಬೇಕಾಗುತ್ತದೆ. ಒಂದೇ ಬಾರಿ ಎಲ್ಲ ಜವಾಬ್ದಾರಿ ಮೈಮೇಲೆ ಬೀಳುವುದ್ರಿಂದ ಒತ್ತಡ ಹೆಚ್ಚಾಗುತ್ತದೆ. ಒತ್ತಡದಿಂದ ಅನೇಕ ಸಮಸ್ಯೆ ಕಾಡಲು ಶುರುವಾಗುತ್ತದೆ. ಒತ್ತಡ ಹೆಚ್ಚಾದಾಗ ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಇದು ಅಧಿಕ ರಕ್ತದೊತ್ತಡ ಮತ್ತು ಬೊಜ್ಜುಗೆ ಕಾರಣವಾಗುತ್ತದೆ. ಒತ್ತಡದಿಂದ ಹೊರ ಬರುವುದು ಬಹಳ ಮುಖ್ಯ. ಟೆನ್ಷನ್ ಇಲ್ಲದೆ ಕೆಲಸ ಮಾಡಬೇಕೆಂದ್ರೆ ಧ್ಯಾನ ಮಾಡಬೇಕಾಗುತ್ತದೆ. ಪ್ರತಿ ದಿನ ಧ್ಯಾನ ಮಾಡಿ, ಮನಸ್ಸನ್ನು ಶಾಂತಗೊಳಿಸಬೇಕು. ಒತ್ತಡ ಹೆಚ್ಚಾಗ್ತಿದೆ, ನಿಯಂತ್ರಣ ಸಾಧ್ಯವಿಲ್ಲ ಎನ್ನುವವರು ವೈದ್ಯರ ಸಲಹೆ ಪಡೆಯುವುದು ಒಳಿತು.

ಗಂಟೆಗಟ್ಟಲೆ ಕೂತ್ಕೊಂಡು ಕೆಲಸ ಮಾಡ್ತಿದ್ರೆ ಹೃದಯ ಜೋಪಾನ, ಹಾರ್ಟ್‌ಅಟ್ಯಾಕ್‌ ಸಾಧ್ಯತೆ ಹೆಚ್ಚಂತೆ !

ಹಾರ್ಮೋನ್ ಅಸಮತೋಲನ : 40 ವರ್ಷಗಳ ನಂತರ, ಪುರುಷರ ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಸ್ರವಿಸುವಿಕೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ಆದ್ರೆ ಕೇವಲ ಹಾರ್ಮೋನ್ ಏರುಪೇರಿನಿಂದ ಮಾತ್ರವಲ್ಲ,ಹೊಟ್ಟೆಯ ಕೊಬ್ಬು ಹೆಚ್ಚಾಗಲು ಅನಾರೋಗ್ಯಕರ ಆಹಾರ ಮತ್ತು ಬಿಡುವಿಲ್ಲದ ಜೀವನಶೈಲಿಯೂ ಕಾರಣವಾಗುತ್ತದೆ. ವರ್ಷ 40 ಆಗ್ತಿದ್ದಂತೆ ಆಹಾರದಲ್ಲಿ ಹಿಡಿತ ಸಾಧಿಸಬೇಕು. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡ್ಬೇಕು. ಹಾಗೆ ಪೌಷ್ಠಿಕಾಂಶಗಳ ಸೇವನೆಗೆ ಇಂಪಾರ್ಟೆನ್ಸ್ ನೀಡ್ಬೇಕು.

ಕಡಿಮೆಯಾಗುವ ದೈಹಿಕ ಚಟುವಟಿಕೆ : ವಯಸ್ಸಾದಂತೆ, ಪುರುಷರ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ಕೆಲಸದಲ್ಲಿ ಬ್ಯುಸಿಯಿರುವ ಪುರುಷರು ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸುತ್ತಾರೆ. ಜಿಮ್‌ನಲ್ಲಿ ವ್ಯಾಯಾಮ ಅಥವಾ ಇತರ ವರ್ಕೌಟ್‌ಗಳಿಗೆ ಸಮಯ ಸಿಗುವುದಿಲ್ಲ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ಕಚೇರಿಯಲ್ಲಿ ಕುಳಿತೇ ಕೆಲಸ ಮಾಡುವವರು, ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳದೆ ಇದ್ದಾಗ ಒಂದಿಷ್ಟು ರೋಗಗಳು ಇವರನ್ನು ಮುತ್ತಿಕೊಳ್ತವೆ.

Covid Fourth Wave: ಸೋಂಕಿನಿಂದ ಪಾರಾಗಲು ಸ್ಟಿರಾಯ್ಡ್‌ ಬಳಕೆ ನೆರವಾಗುತ್ತಾ ?

ಚಯಾಪಚಯದಲ್ಲಿ ಏರುಪೇರು : 40 ವರ್ಷ ದಾಟಿದ ನಂತರ, ಚಯಾಪಚಯದ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಕ್ಯಾಲೊರಿ ಬರ್ನ್ ಆಗುವ ಪ್ರಮಾಣ ಕಡಿಮೆಯಾಗುತ್ತದೆ. ಇದು ನಿಮ್ಮ ತೂಕದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೊಟ್ಟೆ ಸೇರಿದಂತೆ ದೇಹದ ಭಾಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ.