Health Tips in Kannada: ಪ್ರತಿದಿನ ಮೊಸರು ಸೇವಿಸಿ, ಉತ್ತಮ ಆರೋಗ್ಯ ಪಡೆಯಿರಿ.
ದಿನ ನಿತ್ಯ ಮೊಸರು ಸೇವಿಸುವುದರಿಂದ ಹಲವು ಸಮಸ್ಯೆಯಿಂದ ದೂರವಿರಬಹುದು. ಮೊಸರಿನಲ್ಲಿ ರಾಸಾಯನಿಕ ಪದಾರ್ಥಗಳಿದ್ದು, ಹಾಗಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಸಿಗಲಿದೆ.
ಪ್ರತಿದಿನ ಮೊಸರು ಸೇವನೆಯಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಯಾಕಂದ್ರೆ ಅದರಲ್ಲಿ ಕ್ಯಾಲ್ಸಿಯಂ, ವಿಟಮಿನ್, ಕ್ಯಾಲೊರಿ ಹಾಗೂ ಪ್ರೋಟೀನ್‍ಗಳು ಇವೆ. ಇವು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತವೆ. ಮೊಸರು ಒಂದು ಡೈರಿ ಉತ್ಪನ್ನವಾಗಿದೆ. ಇದು ಕ್ಯಾಲ್ಸಿಯಂ, ವಿಟಮಿನ್ ಬಿ -2, ವಿಟಮಿನ್ ಬಿ -12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್’ನಂತ ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಮೊಸರಿನ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೇ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ತಲೆಹೊಟ್ಟು ಸೇರಿ ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡ ಕಂಟ್ರೋಲ್ ಮಾಡುತ್ತೆ:
ಮೊಸರು ಅಧಿಕ ರಕ್ತದೊತ್ತಡವನ್ನು (Blood Pressure) ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಮೊಸರಿನಲ್ಲಿರುವ ಪೊಟ್ಯಾಷಿಯಮ್ ಮತ್ತು ಮೆಗ್ನೀಷಿಯಮ್’ಗಳೊಂದಿಗೆ ವಿಶೇಷ ಪ್ರೋಟೀನ್’ಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಮೊಸರನ್ನು (Curd) ಸೇವಿಸುವುದರಿಂದ ರಕ್ತದೊತ್ತಡವನ್ನು ಕಾಪಾಡಿಕೊಂಡು ಆರೋಗ್ಯಕರ ಹೃದಯವನ್ನು ಪಡೆಯಬಹುದು. ಸಂಶೋಧನೆಯ ಪ್ರಕಾರ, ಹೆಚ್ಚು ಮೊಸರನ್ನು ಸೇವಿಸುವ ಜನರು, ಇತರರಿಗಿಂತ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಶೇ. 31ರಷ್ಟು ಕಡಿಮೆ ಎಂದು ಹೇಳಿದೆ.
ಮೊಸರಿನಿಂದ ಮೂಳೆಗಳ ಆರೋಗ್ಯ ವೃದ್ಧಿ:
ಮೊಸರಿನಲ್ಲಿ ಕ್ಯಾಲ್ಸಿಯಂ ಅಂಶಗಳು ಆಧಿಕವಾಗಿದ್ದು, ಇದು ಮೂಳೆಗಳ (Bones) ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಮೊಸರನ್ನು ದಿನನಿತ್ಯ ಸೇವನೆ ಮಾಡುವುದರಿಂದ ದೇಹಕ್ಕೆ ಅಧಿಕ ಪ್ರಮಾಣದಲ್ಲಿ ಖನಿಜ ಕ್ಯಾಲ್ಸಿಯಂ ಸಿಗುತ್ತದೆ. ಒಂದು ಕಪ್ ಮೊಸರು ಸುಮಾರು 275 ಮಿ.ಗ್ರಾಂ ಕ್ಯಾಲ್ಸಿಯಂ (Calcium) ಅನ್ನು ಹೊಂದಿರುತ್ತದೆ. ಕ್ಯಾಲ್ಸಿಯಂನ ದೈನಂದಿನ ಡೋಸ್ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆ ಮೂಳೆಗಳನ್ನು ಬಲಪಡಿಸುತ್ತದೆ. ಅದಲ್ಲದೆ ಮೊಸರಿನಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳ ಪ್ರಮಾಣ ಕಡಿಮೆ ಇದೆ. ಹೀಗಾಗಿ, ನಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಮೃದುತ್ವ ತ್ವಚೆಗಾಗಿ ಗಟ್ಟಿ ಮೊಸರು:
ಮೊಸರು ಸೇವನೆಯಿಂದ ತ್ವಚೆಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ದಿನನಿತ್ಯ ಮೊಸರು(Curd) ಸೇವನೆಯಿಂದ ಒಣ ಚರ್ಮವು (Dry Skin) ಮೃದತ್ವವನ್ನು ಪಡೆದುಕೊಳ್ಳುತ್ತದೆ. ಜಠರದ ಸಮಸ್ಯೆಗಳಿಂದಾಗಿ ಬಹಳಷ್ಟು ಜನರು ಮೊಡವೆಗಳಿಂದ ಬಳಲುತ್ತಿದ್ದಾರೆ. ಅಂತವರು ಮೊಸರನ್ನು ಬಳಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮೊಸರು ಕರುಳಿನ ಆರೋಗ್ಯವನ್ನು ಕಾಡುತ್ತದೆ. ಅದಲ್ಲದೆ ಮೊಸರು ಆರೋಗ್ಯಕರ ಚರ್ಮಕ್ಕೆ ಕಾರಣವಾಗಿದ್ದು, ಫೇಸ್ ಪ್ಯಾಕ್’ಗಳಿಗೆ (Face pack) ಅತ್ಯುತ್ತಮವಾದ ಸೌಂದರ್ಯವರ್ಧಕ ಅಂಶವಾಗಿದೆ. ಏಕೆಂದರೆ ಇದು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು ಅದು ಎಕ್ಸ್ಫೋಲಿಯೇಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಕಲೆಗಳನ್ನು ಗುಣಪಡಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಮದ್ದು:
ಮೊಸರು (Curd) ದೇಹದಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುತ್ತದೆ . ಇದು ಖನಿಜಗಳು ಮತ್ತು ವಿಟಮಿನ್ಗಳು ಸೇರಿದಂತೆ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿವೆ. ಹಾಗೇ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತವೆ ಮತ್ತು ನಿಮ್ಮ ಕರುಳು (Intestine)
ಮತ್ತು ಕರುಳಿನ ಪ್ರದೇಶವನ್ನು ರಕ್ಷಿಸುತ್ತವೆ. ಸುಮಾರು 200 ಗ್ರಾಂ ಮೊಸರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳಿಗೆ ಸಮ. ಮೊಸರಿನಲ್ಲಿನ ಪ್ರೋಬಯಾಟಿಕ್ಗಳು ದೇಹವನ್ನು ವಿವಿಧ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಮತ್ತು ಆರೋಗ್ಯವಾಗಿರಿಸಲು ಸಹಾಯಮಾಡುತ್ತದೆ. ಹೀಗಾಗಿ, ಹೆಚ್ಚಿದ ರೋಗನಿರೋಧಕ ಶಕ್ತಿಯು ಸಾಮಾನ್ಯ ಶೀತ, ಜ್ವರ ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಆಹಾರಕ್ಕೆ ಕಪ್ಪು ಉಪ್ಪು ಸೇರಿಸಿದರೆ ಬೇಗ ತೂಕ ಇಳಿಸ್ಕೋಬೋದು
ಜೀರ್ಣಕ್ರಿಯೆಗೆ ಸಹಾಯಕಾರಿ:
ಮೊಸರು (Curd) ಉತ್ತಮ ಪ್ರೋಬಯಾಟಿಕ್ ಆಗಿದ್ದು ಉರಿಯೂತದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಹೊಟ್ಟೆ ಕೆಟ್ಟಾಗ ಚಿಕಿತ್ಸೆಯ ಮಾರ್ಗವಾಗಿ ಮೊಸರನ್ನು ಬಳಸಬಹುದು. ಇದು ಆಮ್ಲದ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ಅಜೀರ್ಣ (indigestion) ಮತ್ತು ಹೊಟ್ಟೆಯ ಕಿರಿಕಿರಿಯನ್ನು ಗುಣಪಡಿಸುತ್ತದೆ. ಹಾಗೇ ಹೊಟ್ಟೆ ಉಬ್ಬುವುದು, ಕೆರಳಿಸುವ ಕರುಳಿನ ಸಹಲಕ್ಷಣಗಳು, ಭೇದಿ, ಮಲಬದ್ಧತೆ, ಜಠರಗರುಳಿನ ಅಸ್ವಸ್ಥತೆಗಳು ಮತ್ತು ಅತಿಸಾರದಂತಹ ಪರಿಸ್ಥಿತಿಗಳನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಕಹಿ ಬೇವಿನಲಿ ಅಡಗಿದೆ ಸದ್ಗುಣ, ಹಲವು ಸಮಸ್ಯೆಗೆ ಹೇಳಿ ಗುಡ್ ಬೈ
ಒಟ್ಟಾರೆ ಹೇಳುವುದಾದರೆ ಮೊಸರು ಸೇವನೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದಾಗಿದ್ದು, ಹೆಚ್ಚಿನ ಪ್ರೋಟೀನ್, ಖನಿಜಗಳು ನಮ್ಮ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.